ಮಹಾತ್ಮಾ ಗಾಂಧೀಜಿಯವರ ರಚಾನಾತ್ಮಕ ಕಾರ್ಯಗಳು ಇಂದಿಗೂ ಕ್ರಿಯಾಶೀಲವಾಗಿವೆ ಮತ್ತು ನಿರಂತರವಾಗಿ ಬೆಳವಣಿಗೆ ಕಾಣುತ್ತಿವೆ. ಹಾಗೆಯೇ ಬೆಂಗಳೂರು ಮೂಲದ ಸಂಸ್ಥೆಯೊಂದು ತಮ್ಮದಲ್ಲದ ತಪ್ಪಿಗೆ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಖೈದಿಗಳ ಮಕ್ಕಳಿಗೆ ಸುಂದರ ಜೀವನ ಕಲ್ಪಿಸುತ್ತಿದೆ. ಹಾಗೆಯೇ ಈಶಾನ್ಯ ಭಾರತದ ಕೆಲವು ಕುಗ್ರಾಮಗಳಲ್ಲಿ ಇಂದಿಗೂ ಆರೋಗ್ಯ ಸೇವೆಗಳು ತಲುಪಲಾಗದ ಸ್ಥಳಗಳಲ್ಲಿ “ಆರೋಗ್ಯ ಮಿತ್ರ” ಎಂಬ ಸಂಸ್ಥೆಯು ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ.
ಮಹಾತ್ಮಾ ಗಾಂಧಿಯವರು ಇಂತಹಾ ರಚನಾತ್ಮಕ ಕೆಲಸಗಳನ್ನು “ಸತ್ಯ ಮತ್ತು ಅಹಿಂಸೆಯ ಮೂಲಕ ಸಂಪೂರ್ಣ ಸ್ವರಾಜ್ಯ ಸಾಧಿಸಲು ನಮಗಿರುವ ಒಂದು ಅತ್ಯುತ್ತಮ ಮಾರ್ಗ” ಎಂದು ಕರೆದಿದ್ದಾರೆ. ಯಾವ ರಚನಾತ್ಮಕ ಕಾರ್ಯಗಳ ಬಗ್ಗೆ ಅವರು 1941 ಮತ್ತು 1943 ರ ತಮ್ಮ Constructive Programme ಪುಸ್ತಕದಲ್ಲಿ ಆಶಯ ವ್ಯಕ್ತಪಡಿಸಿದ್ದರೋ, ಅಂತಹಾ ಮಹತ್ತರ ಕಾರ್ಯಗಳನ್ನು ಸ್ವಾತಂತ್ರ್ಯಾನಂತರದಲ್ಲಿ ಭಾರತದ ಮೂಲೆ ಮೂಲೆಗಳಲ್ಲಿ ಎಲೆ ಮರೆಯ ಕಾಯಿಯಂತಿರುವ ಅನೇಕ ಮಹಾನ್ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಳ್ಳುವ ಮೂಲಕ ಗಾಂಧೀ ಬಯಸಿದ ಭಾರತವನ್ನು ನನಸು ಮಾಡಲು ಶ್ರಮಿಸುತ್ತಿದ್ದಾರೆ. ಮಹಾತ್ಮಾ ಗಾಂಧೀ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ Organiser ಪತ್ರಿಕೆಯು ಇಂತಹಾ ಸಣ್ಣ ಸಣ್ಣ ಹೆಜ್ಜೆಗಳ ಮೂಲಕವೇ ದೊಡ್ಡ ಬದಲಾವಣೆಗೆ ಕಾರಣಕರ್ತರಾಗಿರುವ ಕೆಲವು ಬದಲಾವಣೆಯ ಹರಿಕಾರರನ್ನು ದೇಶಕ್ಕೆ ಪರಿಚಯಿಸುವ ಕೆಲಸಕ್ಕೆ ಮುಂದಾಗಿದೆ.
ಸಮಾಜದ ಎಲ್ಲಾ ವಿಭಾಗಗಳೂ ಸಮಾನ ಬೆಳವಣಿಗೆ ಸಾಧಿಸುವ ಮೂಲಕ ಸಮೃದ್ಧ ಮತ್ತು ಆರೋಗ್ಯಪೂರ್ಣ ಭಾರತವನ್ನು ನಿರ್ಮಿಸಲು ಸಾಧ್ಯ ಮತ್ತು ಆ ಮೂಲಕ ಪ್ರತಿಯೊಬ್ಬರೂ ಗೌರವ ಪೂರ್ಣ ಜೀವನವನ್ನು ಅನುಭವಿಸುವಂತಾಗಬೇಕು ಎನ್ನುವುದು ಗಾಂಧೀಜಿಯವರ ಕನಸಾಗಿತ್ತು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನಂತರ, ಅಂದರೆ 1920 ರಲ್ಲೇ ತಮ್ಮ ರಾಷ್ಟ್ರವ್ಯಾಪಿ ಪ್ರವಾಸ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಅಧ್ಯಯನ ನಡೆಸಿ ಅವುಗಳಿಗೆ ಪರಿಹಾರಗಳನ್ನೂ ಸೂಚಿಸಿದ್ದರು.
ಅವರು ನಾಗಪುರದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ನೇಯ್ಗೆ ಮತ್ತು ಕೈ ಮಗ್ಗಗಳ ಪುನರುಜ್ಜೀವನ, ಸಾಕ್ಷರತೆಗಾಗಿ ರಾಷ್ಟ್ರೀಯ ಶಾಲೆಗಳ ಸ್ಥಾಪನೆ, ಅಸ್ಪೃಶ್ಯತೆ ನಿವಾರಣೆ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿ ರಚನಾತ್ಮಕ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದರು.
ಮರಳಿ ಬದುಕು ಕೊಟ್ಟ ಮಹನೀಯರು
ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸಲು ಇಂದು ಬೇಕಾದಷ್ಟು ನಿಸ್ವಾರ್ಥ ಕಾರ್ಯಕರ್ತರು ಈ ಸಮಾಜ ಮತ್ತು ಈ ದೇಶಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅದೇ ರೀತಿ ಬೆಂಗಳೂರು ಮೂಲದ SOCARE Ind ಎನ್ನುವ ಸ್ವಯಂ ಸೇವಾ ಸಂಸ್ಥೆಯು ಸೂಕ್ತ ಆರೈಕೆಯ ಕೊರತೆ ಅನುಭವಿಸುತ್ತಿರುವ ಅಪರಾಧಿಗಳ ಮಕ್ಕಳ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಅವರಿಗೂ ಅರ್ಥಪೂರ್ಣ ಹಾಗೂ ಗೌರವಯುತ ಜೀವನವೊಂದನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ.
ಕಾನೂನು ಅಪರಾಧಿಗಳನ್ನು ಮಾತ್ರ ಶಿಕ್ಷಿಸುತ್ತದೆ. ಆದರೆ ಈ ಸಮಾಜವು ಆ ಅಪರಾಧಿಗಳ ಇಡೀ ಕುಟುಂಬವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ದೂರವಿರಿಸುತ್ತದೆ. ಏನೂ ತಪ್ಪು ಮಾಡಿರದ ಅವರ ಮಕ್ಕಳು ಮತ್ತು ಕುಟುಂಬ ಕನಿಷ್ಠ ಘನತೆಯಿಂದ ಬದುಕುವ ಹಕ್ಕುಗಳನ್ನೂ ಕಳೆದುಕೊಂಡು ಈ ಸಮಾಜದಿಂದ ದೂರವೇ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಬಡತನದ ಬೇಗೆಯಿಂದ ನರಳಬೇಕಾದ ಹಾಗೂ ಎಷ್ಟೋ ಬಾರಿ ಅತ್ಯಂತ ಅಮಾನವೀಯವೆನ್ನಿಸುವ ಪರಿಸ್ಥಿತಿಗಳನ್ನು ಅವರು ಎದುರಿಸಬೇಕಾಗುತ್ತದೆ. ಅಂತಹಾ ಮಕ್ಕಳ ಬಗ್ಗೆ ಕಾಳಜಿ ವಹಿಸದೆ ಸಮಾಜದಿಂದ ದೂರೀಕರಿಸಿಬಿಟ್ಟರೆ ಮುಂದೊಮ್ಮೆ ಅವರೇ ಅಪರಾಧಿಗಳಾಗಿ ಈ ಸಮಾಜಕ್ಕೆ ಕಂಠಕಪ್ರಾಯರಾಗುವ ಸಾಧ್ಯತೆಗಳೂ ಇವೆ.
ಇದೆಲ್ಲವನ್ನೂ ಮನಗಂಡ ಶ್ರೀ ವೆಂಕಟರಾಘವಾಚಾರಿ ಮಣಿ ಅವರು ತಮ್ಮ ದುಡಿಮೆಯ ಉಳಿತಾಯದ ಹಣದಲ್ಲಿ ಖೈದಿಗಳ ಮಕ್ಕಳಿಗೆ ಬದುಕು ಕಲ್ಪಿಸುವ ಮಕ್ಕಳ ಮನೆಯೊಂದನ್ನು ಸ್ಥಾಪಿಸಿದರು. SOCARE Ind ಎನ್ನುವ ಹೆಸರಿನಿಂದ ಪ್ರಾರಂಭವಾದ ಅವರ ಆ ಸ್ವಯಂ ಸೇವಾ ಸಂಸ್ಥೆಯು ತನ್ನ ಮಹತ್ವದ ಈ ಕಾರ್ಯವನ್ನು 1999 ರಲ್ಲಿ ಪ್ರಾರಂಭಿಸಿ ಇಲ್ಲಿಯವರೆಗೂ ಸಾಕಷ್ಟು ಅಂತಹಾ ಮಕ್ಕಳಿಗೆ ಪೋಷಕರ ಪ್ರೀತಿಯನ್ನು ಕೊಡುತ್ತಾ ಆ ಮಕ್ಕಳ ಜೀವನವನ್ನು ಸುಂದರವಾಗಿಸಿದೆ. ಇದೀಗ 70 ಹೆಣ್ಣು ಮಕ್ಕಳೂ ಸೇರಿದಂತೆ 165 ಮಕ್ಕಳು SOCARE Ind ನ ಕಾಳಜಿಯನ್ನು ಅನುಭವಿಸುತ್ತಾ ಸುಂದರ ಭವಿಷ್ಯದತ್ತ ಮುಖ ಮಾಡಿದ್ದಾರೆ. ಅವರು ಪ್ರಾರಂಭಿಸಿದ ಒಂದು ಯೋಜನೆ ಇದೀಗ ಖೈದಿಗಳ ಮಕ್ಕಳ ಹಾಗೂ ಅವರ ಕುಟುಂಬದವರ ಬಾಳಿನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಖೈದಿಗಳ ಮಕ್ಕಳ ಬದುಕಿನಲ್ಲಿ ಇಂಥದ್ದೊಂದು ಪವಾಡ ಸದೃಶ ಬದಲಾವಣೆಗೆ ಕಾರಣಕರ್ತರಾದ ವಿ.ಮಣಿ ಅವರನ್ನು ನಾವಿಂದು ಸ್ಮರಿಸಿಕೊಳ್ಳಲೇಬೇಕು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಣಿ ಅವರು 1999 ರಲ್ಲಿ ನಿವೃತ್ತರಾದ ನಂತರ ತಮ್ಮ ಉಳಿತಾಯದ ಅಷ್ಟೂ ಹಣವನ್ನು (ಸುಮಾರು ಮೂರು ಲಕ್ಷ ರೂ.) ಖರ್ಚು ಮಾಡಿ ಬೆಂಗಳೂರಿನ ರಾಜಾಜಿ ನಗರದಲ್ಲಿ ತಾವು ಕಟ್ಟಿಸಿದ್ದ ‘ದೇಶಿಕ್’ ಎನ್ನುವ ಹೆಸರಿನ ತಮ್ಮ ಸ್ವಂತ ಮನೆಯನ್ನೇ ಖೈದಿಗಳ ಮಕ್ಕಳ ವಸತಿ ನಿಲಯವನ್ನಾಗಿ ಬದಲಾಯಿಸಿಬಿಟ್ಟರು.
ಆದರೆ 2012 ರ ನವೆಂಬರ್ 1 ರಂದು ಶ್ರೀಯುತ ವಿ.ಮಣಿ ಅವರು ತಮ್ಮ ಪ್ರೀತಿಯ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಅದೇ ಮನೆಯಲ್ಲಿಯೇ ಸ್ವರ್ಗಸ್ಥರಾದರು. ಅಂದು ಅಲ್ಲಿ ಕಣ್ಣೀರು ಹಾಕಿದ ಎಷ್ಟೋ ಮಕ್ಕಳು ತಮ್ಮ ಪೋಷಕರು ಮಾಡಿದ ಅಪರಾಧಗಳಿಂದಾಗಿ, ಕೊಲೆಗಳಿಂದಾಗಿ, ದರೋಡೆಗಳಿಂದಾಗಿ ಅನಾಥರಾದವರಾಗಿದ್ದರು. ಅಲ್ಲಿದ್ದ ಎಷ್ಟೋ ಮಕ್ಕಳು ತಮ್ಮ ತಂದೆಯೇ ತಮ್ಮ ತಾಯಿಗೆ ಬೆಂಕಿ ಹಚ್ಚಿ ಕೊಂದಿದ್ದನ್ನು ಕಣ್ಣಾರೆ ಕಂಡವರಾಗಿದ್ದರು. ಎಷ್ಟೋ ಮಕ್ಕಳು ತಮ್ಮ ತಾಯಿಯೇ ತಂದೆಗೆ ವಿಷ ಹಾಕಿದ್ದನ್ನು ಕಂಡವರಾಗಿದ್ದರು. ಮಣಿ ಅವರು ಕರ್ನಾಟಕದ ವಿವಿಧ ಜೈಲುಗಳಲ್ಲಿ ದೀರ್ಘಾವಧಿ ಖೈದಿಗಳಾಗಿ ಕೊಳೆಯುತ್ತಿರುವ ಅಪರಾಧಿಗಳ ಮಕ್ಕಳನ್ನು ಗುರುತಿಸಿ ಅವರನ್ನು ಬೆಂಗಳೂರಿನ ಎರಡು ಕಡೆ ಮತ್ತು ಕಲ್ಬುರ್ಗಿ ನಗರದಲ್ಲಿ ಒಂದು ಕಡೆ ತಾವೇ ಸ್ಥಾಪಿಸಿದ ವಸತಿ ನಿಲಯಗಳಿಗೆ ಕರೆತಂದು ಉಚಿತ ವಸತಿ, ಆಹಾರ, ಬಟ್ಟೆ, ಆರೋಗ್ಯ ಸೇವೆ ಹಾಗೂ ಉಚಿತ ಶಿಕ್ಷಣವನ್ನು ಕಲ್ಪಿಸುವ ಮೂಲಕ ಮಾದರಿಯಾದರು.
ಆರೋಗ್ಯ ಮಿತ್ರರೆಂಬ ನಿಸ್ವಾರ್ಥ ಸೇವಕರು
ಇಂದಿಗೂ ಸರಿಯಾದ ಆರೋಗ್ಯ ಸೇವೆಗಳು ತಲುಪದ ಜನರಲ್ಲಿಗೆ ಆರೋಗ್ಯ ಸೇವೆಗಳನ್ನು ಆರೋಗ್ಯ ಮಿತ್ರ ಕಾರ್ಯಕರ್ತರು ತಲುಪಿಸುತ್ತಿದ್ದಾರೆ. ಅಂತಹಾ ಪ್ರದೇಶಗಳ ಜನರಿಗೆ ಆರೋಗ್ಯ ಮಿತ್ರ ಯೋಜನೆಯು ಒಂದು ವರದಾನವಾಗಿ ಪರಿಣಮಿಸಿದೆ. ಅದರಲ್ಲೂ ಕನಿಷ್ಠ ಪ್ರಥಮ ಚಿಕಿತ್ಸೆಯೂ ಲಭ್ಯವಾಗದಷ್ಟು ಕುಗ್ರಾಮಗಳಲ್ಲಿ ವಾಸಿಸುವ ಈಶಾನ್ಯ ಭಾರತದ ಲಕ್ಷಾಂತರ ಜನರ ಅಮೂಲ್ಯ ಜೀವಗಳನ್ನು ಆರೋಗ್ಯ ಮಿತ್ರ ಯೋಜನೆಯು ಕಾಪಾಡಿದೆ.
ಸ್ವಾತಂತ್ರ್ಯ ದೊರೆತು ಏಳು ದಶಕಗಳೇ ಕಳೆದರೂ ದೇಶ ಇಂದಿಗೂ “ಎಲ್ಲರಿಗೂ ಆರೋಗ್ಯ” ಎನ್ನುವ ಗುರಿಯನ್ನು ಸಂಪೂರ್ಣವಾಗಿ ತಲುಪಲಾಗಿಲ್ಲ. ಇಂದಿಗೂ ದೇಶದ ಕುಗ್ರಾಮಗಳ ಸಾವಿರಾರು ಜನರು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ಪ್ರಾರಂಭಿಸಲ್ಪಟ್ಟ ‘ಆರೋಗ್ಯ ಮಿತ್ರ’ ಎನ್ನುವ ಯೋಜನೆಯು ಇದೀಗ ಇಂದಿಗೂ ಆರೋಗ್ಯ ಸೇವೆಗಳು ಸರಿಯಾಗಿ ತಲುಪುತ್ತಿಲ್ಲದ ಕುಗ್ರಾಮಗಳ ಜನರಿಗೆ, ಅದರಲ್ಲೂ ಪ್ರಮುಖವಾಗಿ ಈಶಾನ್ಯ ಭಾರತದ ಸಂಪರ್ಕ ರಹಿತ ಹಳ್ಳಿಗಳ ಜನರಿಗೆ ಒಂದು ವರದಾನವಾಗಿ ಪರಿಣಮಿಸಿದೆ. ಉತ್ತಮ ತರಬೇತಿ ಹೊಂದಿದ ಕಾರ್ಯಕರ್ತರು ಪ್ರಥಮ ಚಿಕಿತ್ಸೆಯನ್ನು ನೀಡುವುದಷ್ಟೇ ಅಲ್ಲದೆ ಅನಾರೋಗ್ಯಗಳಿಗೆ ತುತ್ತಾಗದಂತೆ ಹೇಗೆ ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಆರೋಗ್ಯಶಿಕ್ಷಣವನ್ನೂ ಅಲ್ಲಿನ ಜನರಿಗೆ ನೀಡುತ್ತಾ ಬಂದಿದ್ದಾರೆ.
ಕೇವಲ ಈಶಾನ್ಯ ಭಾರತದಲ್ಲೇ ಸುಮಾರು 5,500 ಆರೋಗ್ಯ ಮಿತ್ರ ಕಾರ್ಯಕರ್ತರು ಒಂದು ವರ್ಷದಲ್ಲಿ ಸುಮಾರು ಆರು ಲಕ್ಷದಷ್ಟು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬಹುತೇಕ ಅದೇ ಹಳ್ಳಿಗಳಿಗೆ ಸೇರಿದ ಯುವಕ ಯುವತಿಯರುಗಳಿಗೆ ಹೋಮಿಯೋಪತಿ ಚಿಕಿತ್ಸೆಗಳ ತರಬೇತಿ ನೀಡಿ, ಅವರ ತರಬೇತಿ ಮುಗಿದ ನಂತರ 76 ಔಷಧಗಳನ್ನೊಳಗೊಂಡ ಔಷಧ ಪೆಟ್ಟಿಗೆಗಳನ್ನು ಒದಗಿಸಲಾಗುತ್ತಿದೆ. ತರಬೇತಿಯ ನಂತರ ಆ ಯುವಕ ಯುವತಿಯರು ತಮ್ಮದೇ ಹಳ್ಳಿಗಳ ಜನರಿಗೆ ಪ್ರಾಥಮಿಕ ಚಿಕಿತ್ಸೆಗಳನ್ನು ಒದಗಿಸುತ್ತಿದ್ದಾರೆ. ಅತ್ಯಂತ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುವ ಅಥವಾ ಹಿರಿಯ ವೈದ್ಯರುಗಳನ್ನು ಸಂಪರ್ಕಿಸಿ ಸೂಕ್ತ ಔಷಧೋಪಚಾರ ನೀಡುವ ಕೆಲಸವನ್ನೂ ಕೂಡಾ ಆರೋಗ್ಯ ಮಿತ್ರ ಕಾರ್ಯಕರ್ತರು ಮಾಡುತ್ತಿದ್ದಾರೆ. ಎಲ್ಲಾ ಆರೋಗ್ಯ ಮಿತ್ರ ಕಾರ್ಯಕರ್ತರೂ ಪ್ರಮುಖ ವೈದ್ಯರ ಮೇಲ್ವಿಚಾರಣೆಯಲ್ಲೇ ಕೆಲಸ ಮಾಡುತ್ತಾರೆ. ರೋಗಿಗಳು ಯಾವುದೇ ಶುಲ್ಕವನ್ನೂ ಭರಿಸಬೇಕಾಗಿಲ್ಲ ಮತ್ತು ಆರೋಗ್ಯ ಮಿತ್ರ ಕಾರ್ಯಕರ್ತರೂ ಕೂಡಾ ಯಾವುದೇ ಗೌರವ ಧನವನ್ನೂ ನಿರೀಕ್ಷಿಸದೆ ಸ್ವಯಂಪ್ರೇರಣೆಯಿಂದ ಈ ಸಮಾಜಕ್ಕೆ ಏನಾದರೂ ಸೇವೆಯನ್ನು ಸಲ್ಲಿಸಬೇಕೆನ್ನುವ ದೃಷ್ಟಿಯಿಂದಲೇ ಸಂಪೂರ್ಣ ಉಚಿತವಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತವನ್ನು ಒಂದು ಸುಂದರ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿರುವ ಇವರ ನಿಸ್ವಾರ್ಥ ಸೇವೆಗಾಗಿ ಅಭಿನಂದಿಸೋಣ ಮತ್ತು ಅಂತಹಾ ಕೆಲಸಗಳಿಗೆ ನಾವೂ ಕೈ ಜೋಡಿಸುವ ಸಂಕಲ್ಪ ಮಾಡೋಣ.
Source : organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.