ನಾಡಿನ ಸಮಸ್ತ ಜನತೆಗೆ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಇಂತಹಾ ಮಹನೀಯರುಗಳ ಜನ್ಮ ದಿನಗಳು ಕೇವಲ ಶುಭಾಶಯಗಳನ್ನು ತಿಳಿಸುವ ಅಥವಾ ಅವರ ವಿಚಾರಗಳ ಬಗ್ಗೆ ಭಾಷಣ ಮಾಡುವ ದಿನವಾಗಿ ಬಿಡಬಾರದು. ಏಕೆಂದರೆ ಒಬ್ಬ ವ್ಯಕ್ತಿಯ ಆಶಯಗಳು ಅಥವಾ ಅವರ ತತ್ವಗಳು ಶತಮಾನಗಳ ಕಾಲ ಆಚರಣೆಯಾದಾಗ ಮಾತ್ರ ಅದು ಪೀಳಿಗೆಯಿಂದ ಪೀಳಿಗೆಗೆ ಪಸರಿಸಿ ಆ ವ್ಯಕ್ತಿಯ ಹೆಸರುಳಿಸಬಲ್ಲದೇ ಹೊರತೂ ಅವರ ಹೆಸರು ಹೇಳುವುದರಿಂದ, ಭಾಷಣ ಮಾಡುವುದರಿಂದ ಅಥವಾ ಅಲ್ಲಲ್ಲಿ ಅವರ ಪುತ್ಥಳಿಗಳನ್ನು ನಿಲ್ಲಿಸುವುದರಿಂದ ಮಾತ್ರ ಅವರನ್ನು ನಮ್ಮಿಂದ ಮುಂದಿನ ಪೀಳಿಗೆಗೆ ಸಮರ್ಥವಾಗಿ ತಲುಪಿಸಲಾಗದು.
ಹಾಗಾದರೆ ಯಾರು ಅವರ ತತ್ವ, ಆದರ್ಶಗಳನ್ನು ಅತ್ಯಂತ ಕಾಳಜಿಯಿಂದ ಆಚರಿಸುತ್ತಿದ್ದಾರೆ ? ಯಾರು ಅವರ ಆಶಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ?ಗಾಂಧೀಜಿ, ಶಾಸ್ತ್ರೀಜಿ ಮುಂತಾದವರ ತತ್ವಾದರ್ಶಗಳನ್ನು ಉಳಿಸಿಕೊಳ್ಳಲು ನಾವು ಯಾರೊಂದಿಗೆ ಹೆಜ್ಜೆ ಹಾಕಬೇಕು?
ಹೌದು. ಆ ಮಹನೀಯರನ್ನು ಅನುಸರಿಸಬೇಕು ಎಂದುಕೊಳ್ಳುವಾಗ ಇವು ಮೊತ್ತ ಮೊದಲು ನಮ್ಮ ಮನಸ್ಸಿನಲ್ಲಿ ಮೂಡಬಹುದಾದ ಕೆಲವು ಅತ್ಯಂತ ಜಟಿಲ ಪ್ರಶ್ನೆಗಳು. ಆದರೆ ಆ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನಮ್ಮೊಳಗೇ ಒಂದಷ್ಟು ಆರೋಗ್ಯಪೂರ್ಣ ಚರ್ಚೆಗಳು ನಡೆಯಲೇ ಬೇಕು. ಈ ದೇಶದ ಕುರಿತು ಗಾಂಧೀಜಿಯ ಆಶಯಗಳೇನಿತ್ತು ಎನ್ನುವುದನ್ನು ನಾವು ಮತ್ತೊಮ್ಮೆ ಅರ್ಥೈಸಿಕೊಳ್ಳಬೇಕು. ಶಾಸ್ತ್ರೀಜಿಯ ಕಲ್ಪನೆಯ ಭಾರತ ಹೇಗಿತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಮೊದಲನೆಯದಾಗಿ ನಾವು ಅವರುಗಳ ಸಿದ್ದಾಂತಗಳನ್ನು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಬಳಸಬೇಕೇ ಹೊರತು ಅಧಿಕಾರದ ಚುಕ್ಕಾಣಿ ಹಿಡಿಯಲು ಅಲ್ಲ ಎನ್ನುವ ಸ್ಪಷ್ಟ ಅಭಿಪ್ರಾಯ ಹೊಂದಿರುವ ನಾಯಕರನ್ನು ಗುರುತಿಸಬೇಕು. ಹಾಗೆ ನಾವು ಗುರುತಿಸಿದ ಆ ನಾಯಕರು ತಮ್ಮ ಕಾರ್ಯಗಳಲ್ಲಿ ಹೇಗೆ ಆ ಮಹನೀಯರ ಆಶಯಗಳನ್ನು ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಬಹುಶಃ ಆಗ ನಮಗೆ ನಿಜಕ್ಕೂ ನಾವು ಯಾರನ್ನು ಅನುಸರಿಸಬೇಕು ಎನ್ನುವ ಸ್ಪಷ್ಟ ಚಿತ್ರಣ ಸಿಕ್ಕಂತಾಗುತ್ತದೆ.
ಭಾರತ ಒಂದು ಸ್ವಚ್ಛ ರಾಷ್ಟ್ರವಾಗಬೇಕು, ವಿಶ್ವಕ್ಕೆ ಮಾದರಿ ರಾಷ್ಟ್ರವಾಗಬೇಕು ಎನ್ನುವ ಗಾಂಧೀಜಿಯವರು ಕಂಡಿದ್ದ ಹಲವು ಕನಸುಗಳು ಸ್ವಾತಂತ್ರ್ಯಾನಂತರ ಹಲವಾರು ವರ್ಷಗಳವರೆಗೂ ನನಸಾಗಿರಲಿಲ್ಲ. ಅವರ ಮಹದಾಸೆಯಾಗಿದ್ದ ಖಾದಿ ಬಳಕೆಯ ಪ್ರಮಾಣ ಕುಂಟುತ್ತಾ ಸಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರೋತ್ಸಾಹ ಹಾಗೂ ಖಾದಿಯ ಬಳಕೆಯನ್ನು ಉತ್ತೇಜಿಸಬೇಕೆನ್ನುವ ಅವರ ಬದ್ಧತೆಯಿಂದಾಗಿ ಇದೀಗ ಖಾದಿ ಎನ್ನುವುದು ದೇಶದ ಯುವ ಜನತೆಯ ಹೆಗ್ಗುರುತಿನಂತಾಗಿದೆ. ನೇರ ಹಾಗೂ ಪರೋಕ್ಷವಾಗಿ ಖಾದಿ ಉದ್ಯಮ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಕೇವಲ ನಾಲ್ಕೇ ವರ್ಷಗಳಲ್ಲಿ ಖಾದಿ ಬಳಕೆ ಹಲವಾರು ಪಟ್ಟು ಹೆಚ್ಚಳ ಕಂಡಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಇನ್ನೊಂದು ಪ್ರಮುಖ ಆಶಯವೆಂದರೆ ಅದು ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು. ಆದರೆ ದೇಶದ ಜನತೆಗೆ ಸ್ವಚ್ಛತೆಯ ಬಗೆಗಿನ ಅರಿವು ಮೂಡಿಸುವಲ್ಲಿ ಯಾವುದೇ ಸರ್ಕಾರಗಳೂ ಇದುವರೆಗೂ ಗಂಭೀರ ಪ್ರಯತ್ನ ನಡೆಸಿದ್ದಿಲ್ಲ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಗಾಂಧಿ ಜಯಂತಿಯಂದು ಪ್ರಾರಂಭಿಸಿದ ಸ್ವಚ್ಛ ಭಾರತ್ ಅಭಿಯಾನ ಇದುವರೆಗಿನ ಎಲ್ಲಾ ಅಭಿಯಾನಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿರುವುದಲ್ಲದೆ ದೇಶದ ಎಲ್ಲಾ ಮಹಾ ನಗರಗಳು, ನಗರಗಳು, ಪಟ್ಟಣಗಳು ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಲು ಪರಸ್ಪರ ಸ್ಪರ್ಧೆಗೆ ಬಿದ್ದಿವೆ. ಇದೀಗ ದೇಶದ ಯಾವುದೇ ಮೂಲೆಯಲ್ಲಿ ನಾವು ಒಂದು ಸಣ್ಣ ಚಾಕಲೇಟ್ ಕವರ್ ಎಸೆಯಬೇಕೆಂದರೂ ಆಚೀಚೆ ನೋಡಬೇಕಾಗಿದೆ. ಅಲ್ಲೇ ಪಕ್ಕದಲ್ಲಿರುವ ಮೂರು ವರ್ಷದ ಚಿಕ್ಕ ಮಗು ಬೇಕಾದರೂ ನಮ್ಮ ಕಡೆ ಕೈ ತೋರಿಸಿ “ಅಂಕಲ್, ಸ್ವಚ್ಛ ಭಾರತ್” ಎಂದು ಕೂಗಿ ಹೇಳಿಬಿಟ್ಟೀತೇನೋ ಎನ್ನುವ ಭಯ!
ಮೋದಿಯವರ ಆಡಳಿತಾವಧಿಯಲ್ಲೇ ಮಹಾತ್ಮಾ ಗಾಂಧಿಯವರ ಕಣ್ಣಿನಿಂದ ಸ್ವಚ್ಛ ಭಾರತವನ್ನು ನೋಡಬಯಸುವ ಗಾಂಧೀ ಕನ್ನಡಕವಿರುವ ನೋಟುಗಳೂ ಮುದ್ರಣಗೊಂಡಿವೆ. 150ನೇ ವರ್ಷದ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡುವ ಜತೆಗೆ ಗಾಂಧೀಜಿ ಅವರ ಕನಸನ್ನು ನನಸು ಮಾಡುವ ಉದ್ದೇಶದಿಂದ ದೇಶದಾದ್ಯಂತ ನಡೆಯುವ “ಸ್ವಚ್ಛತಾ ಹೀ ಸೇವಾ (ಸ್ವಚ್ಛತೆಯೇ ಸೇವೆ)” ಎಂಬ ಆಂದೋಲನ ಈಗಾಗಲೇ ದೇಶದ ಮೂಲೆ ಮೂಲೆಯಲ್ಲೂ ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಗಾಂಧಿ ಜಯಂತಿಯೆಂದರೆ ಕೇವಲ ಅವರ ಫೋಟೋಗಳನ್ನು ಪೂಜೆ ಮಾಡುವುದಾಗಲೀ, ಅವರ ಪುತ್ಥಳಿಗಳಿಗೆ ಹಾರ ಹಾಕುವುದಷ್ಟೇ ಆಗಲೀ ಆಗಿ ಉಳಿದಿಲ್ಲ. ಅಂದು ಅವರು ಕಂಡ ಕನಸನ್ನು ನನಸಾಗಿಸುವ ಕಾರ್ಯವನ್ನೂ ಕೂಡಾ ಸಾಗರೋಪಾದಿಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಸೇರುವ ಜನರು ಮಾಡುತ್ತಿದ್ದಾರೆ.
ಇದೇ ದಿನ ನಮ್ಮ ದೇಶದ ಇನ್ನೊಬ್ಬ ಶ್ರೇಷ್ಠ ವ್ಯಕ್ತಿಯ ಜನ್ಮ ದಿನವೂ ಹೌದು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ೯ ವರ್ಷಗಳ ಕಾಲ ಸೆರೆ ಮನೆ ವಾಸ ಅನುಭವಿಸಿದ ಲಾಲ್ ಬಹಾಹದ್ದೂರ್ ಶಾಸ್ತ್ರಿ ಅವರು ಜನಿಸಿದ್ದು ಕೂಡಾ ಅಕ್ಟೊಬರ್ 2 ರಂದೇ. ಪ್ರಾಮಾಣಿಕತೆಯೇ ಮೈವೆತ್ತಂತಿದ್ದ ಅವರು ಭಾರತದ ಪ್ರಧಾನಿಯಾಗಿ ಸಾಧಿಸಿದ ವಿಕ್ರಮಗಳು ಎಂದೆಂದಿಗೂ ನಮಗೆ ಆದರ್ಶವಾಗಬೇಕು.
ಅವರ “ಜೈ ಜವಾನ್ ಜೈ ಕಿಸಾನ್” ಘೋಷಣೆಯು ಈ ದೇಶದ ಸೇನೆ ಹಾಗೂ ಈ ದೇಶದ ರೈತರಿಗೆ ಅಪಾರ ನೈತಿಕ ಬೆಂಬಲವನ್ನು ಒದಗಿಸಿತು. ಅದೇ ಘೋಷಣೆಯು ಪಾಕಿಸ್ತಾನದೊಂದಿಗಿನ ಯುದ್ಧದ ಗೆಲುವಿಗೂ ಪ್ರೇರಣೆಯಾಯಿತು. ಇಷ್ಟು ವರ್ಷಗಳ ನಂತರ ಇದೀಗ ಮತ್ತೆ ಜೈ ಜವಾನ್ ಜೈ ಕಿಸಾನ್ ಎನ್ನುವ ಘೋಷಣೆಯ ಫಲಗಳು ಈ ದೇಶದ ಸೇನೆಗೆ ಮತ್ತು ಈ ದೇಶದ ರೈತರಿಗೆ ಒದಗಿಬರುತ್ತಿವೆ. ಇದೀಗ ಸೇನೆಯು ಹಲವಾರು ವಿಚಾರಗಳಲ್ಲಿ ತನ್ನದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಸೈನಿಕರ ಬಗ್ಗೆ ಜನಸಾಮಾನ್ಯರಲ್ಲಿ ಗೌರವ ಭಾವನೆ ಇಮ್ಮಡಿಗೊಂಡಿದೆ. ಹಲವಾರು ವರ್ಷಗಳಿಂದ ಕಾಡುತ್ತಿದ್ದ ರಸಗೊಬ್ಬರ ಸಮಸ್ಯೆ ಬಹುತೇಕ ಪರಿಹಾರವಾಗಿದೆ. ಪ್ರಧಾನಮಂತ್ರಿ ಫಸಲು ಬೀಮಾ (ವಿಮಾ) ಯೋಜನೆಯ ಮೂಲಕ ರೈತರು ಅನುಭವಿಸುತ್ತಿದ್ದ ನಷ್ಟದ ಪ್ರಮಾಣ ತಗ್ಗುತ್ತಿದೆ. ಇವೆಲ್ಲವೂ ಶಾಸ್ತ್ರೀಜಿಯವರ ಆಶಯದ ಫಲ.
ಶಾಸ್ತ್ರೀಜಿಯವರ ಇನ್ನೊಂದು ಅತ್ಯಂತ ಮಹತ್ವದ ಕರೆಯೆಂದರೆ ದೇಶದ ಸಂಕಷ್ಟ ನಿವಾರಣೆಗಾಗಿ ವಾರದಲ್ಲಿ ಒಂದು ದಿನ ಊಟವನ್ನು ಬಿಡಲು ದೇಶದ ಜನತೆಗೆ ಮನವಿ ಮಾಡಿದ್ದು. ಕೇವಲ ಅಷ್ಟೇ ಅಲ್ಲ,ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿ ಆದರ್ಶ ಮೆರೆದವರು ಶಾಸ್ತ್ರೀಜಿ. ಶಾಸ್ತ್ರೀಜಿಯವರ ನಂತರದಲ್ಲಿ ಒಬ್ಬ ನಾಯಕನ ಕರೆಗೆ ಓಗೊಟ್ಟು ದೇಶದ ಕೋಟ್ಯಂತರ ಜನ ತಮ್ಮ ಸೌಲಭ್ಯಗಳನ್ನು ತ್ಯಜಿಸಿ ಅದನ್ನು ದೇಶಕ್ಕೆ ಮರಳಿಸಿದ್ದಾರೆಂದರೆ ನನ್ನ ಪ್ರಕಾರ ಅದು ಬಹುಶಃ ಎಲ್.ಪಿ.ಜಿ.ಗ್ಯಾಸ್ ಸಬ್ಸಿಡಿಯ ವಿಚಾರದಲ್ಲಿ ಮಾತ್ರ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬದ ಕೋಟ್ಯಂತರ ಮಹಿಳೆಯರಿಗೆ ಎಲ್.ಪಿ.ಜಿ ಸಂಪರ್ಕ ಒದಗಿಸಲು ಇದರಿಂದ ಸಾಧ್ಯವಾಯಿತು.
ಇದೆಲ್ಲವನ್ನೂ ಯಾರನ್ನೋ ಮೆಚ್ಚಿಸಲೋ ಅಥವಾ ಇನ್ಯಾರನ್ನೋ ಟೀಕಿಸಲೋ ನಾನಿಲ್ಲಿ ಹೇಳುತ್ತಿಲ್ಲ. ಬದಲಿಗೆ ಆ ಮಹನೀಯರ ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಯವರೆಗೆ ತಲುಪಿಸಲು ಏನು ಮಾಡಬೇಕು ಮತ್ತು ನಾವು ಯಾರನ್ನು ಅನುಸರಿಸಬೇಕು ಎನ್ನುವ ಚರ್ಚೆಯೊಂದನ್ನು ಹುಟ್ಟು ಹಾಕುವ ದೃಷ್ಟಿಯಿಂದಷ್ಟೇ ಹೇಳುತ್ತಿದ್ದೇನೆ.
ಅಂತಿಮವಾಗಿ ಎಲ್ಲವನ್ನೂ ಪರಾಮರ್ಶಿಸಿ ಯಾವುದು ನಿಜವಾದ ಗಾಂಧಿ ಮಾರ್ಗ, ಶಾಸ್ತ್ರೀಜಿಯವರು ಹಾಕಿಕೊಟ್ಟ ನಿಜವಾದ ಆದರ್ಶಗಳನ್ನು ಅನುಸರಿಸುತ್ತಿರುವವರು ಯಾರು, ನಾವು ಯಾರನ್ನು ಅನುಸರಿಸಬೇಕು, ಯಾರನ್ನು ತಿರಸ್ಕರಿಸಬೇಕು ಎನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ನಮ್ಮ ಮತ್ತು ನಿಮ್ಮ ಕೈಯಲ್ಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.