ರಾಫೆಲ್ ಒಪ್ಪಂದ ತುದಿ ಹಿಡಿದುಕೊಂಡು ಅದೊಂದು ದೊಡ್ಡ ಹಗರಣವೆಂದು ಬಿಂಬಿಸಿ ಗೊಬೆಲ್ಸ್ ಹೇಳಿಕೊಟ್ಟ ಸೂತ್ರದ ಪ್ರಕಾರ ದೇಶವಾಸಿಗಳೆದುರು ಮತ್ತೆ ಮತ್ತೆ ಅದನ್ನೇ ಹೇಳಿ ಹೇಳಿ, ಅದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣ ಮುಖ್ಯಸ್ಥರ ಮೂಲಕ ಈ ದೇಶದ ಪ್ರಧಾನಿಯನ್ನು ಕಳ್ಳ ಎಂದು ವಿಕೃತ ರೀತಿಯಲ್ಲಿ ಚಿತ್ರಿಸಿ ಹಂಚುತ್ತಾ ಇರುವವರೊಂದಿಗೆ ನಾನು ತಿಳಿದ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿಚ್ಛಿಸುತ್ತೇನೆ.
ಇಲ್ಲಿ ರಿಲಯನ್ಸ್ ಕಂಪನಿಯ ಬಗ್ಗೆ ತುಸು ಹೆಚ್ಚೇ ಮಾಹಿತಿಯಿದೆ. ಹಾಗೆಂದು ನನಗೆ ಅನಿಲ್ ಅಂಬಾನಿಯೇನೂ ನೆಂಟನಲ್ಲ. ರಿಲಯನ್ಸ್ ನನ್ನ ಉದ್ಯೋಗದಾತ ಕಂಪನಿಯೂ ಅಲ್ಲ. ನಾನಿಲ್ಲಿ ರಿಲಯನ್ಸ್ ಬಗ್ಗೆ ಹೆಚ್ಚು ಹೇಳಲು ಕಾರಣ ಅದೇ ರಿಲಯನ್ಸ್ ಕಂಪನಿ ಮತ್ತು ಅಂಬಾನಿಯ ಹೆಸರನ್ನು ಜೋಡಿಸಿಕೊಂಡು ಮೋದಿಯ ಬಗ್ಗೆ ಅಪ ಪ್ರಚಾರ ಮಾಡುತ್ತಿರುವವರಿಗೆ ನಿಜವಾದ ವಿಚಾರ ತಿಳಿಸುವ ಸಲುವಾಗಿ.
ಹಾಗಾದರೆ ಮೋದಿಯನ್ನು ನೀನೇಕೆ ಸಮರ್ಥಿಸಿಕೊಳ್ಳಬೇಕು ಎಂದು ಕೇಳಿದರೆ ಅದಕ್ಕೆ ನನ್ನ ಉತ್ತರ ಸಿದ್ಧವಿದೆ. ಮೋದಿಗೆ ಸರಿಸಮನಾದ ನಾಯಕನನ್ನು ನೀವೇನಾದರೂ ತೋರಿಸಿದರೆ ಆ ಕ್ಷಣವೇ ಮೋದಿಯನ್ನು ಬಿಟ್ಟು ನೀವು ತೋರಿಸಿದ ನಾಯಕನನ್ನು ಸಮರ್ಥಿಸಿಕೊಳ್ಳಲು ನನ್ನದೇನೂ ಅಭ್ಯಂತರವಿಲ್ಲ. ಏಕೆಂದರೆ ಯಾವುದೋ ಒಂದು ಪಕ್ಷಕ್ಕಿಂತಾ, ಯಾವನೋ ಒಬ್ಬ ವ್ಯಕ್ತಿಗಿಂತಾ ನಮಗೆ ದೇಶವೇ ದೊಡ್ಡದು.
ಇನ್ನೊಂದು ವಿಚಾರವನ್ನೂ ಮೊದಲಿಗೇ ಹೇಳಿಬಿಡುತ್ತೇನೆ.ಇಲ್ಲಿರುವ ಎಲ್ಲಾ ಮಾಹಿತಿಗಳೂ ನೂರಕ್ಕೆ ನೂರು ಸರಿಯಾಗಿವೆ ಎಂದು ನಾನೇನೂ ಹೇಳಲಾರೆ. ಆದರೆ ದಸಾಲ್ಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಅನಿಲ್ ಅಂಬಾನಿಯವರ ರಿಲಯನ್ಸೋ ಅಥವಾ ಮುಖೇಶ್ ಅಂಬಾನಿಯವರ ರಿಲಯನ್ಸೋ ಎನ್ನುವುದೇ ತಿಳಿಯದೆ ಟೀವಿ ಚರ್ಚೆಗಳಲ್ಲಿ ಪಾಲ್ಗೊಂಡು ನಿಮ್ಮನ್ನು ದಾರಿ ತಪ್ಪಿಸಿದ ಮಾಹಿತಿಗಳಿಗಿಂತ ನಾನು ಹಂಚಿಕೊಳ್ಳಲಿರುವ ಈ ಮಾಹಿತಿ ಅದೆಷ್ಟೋ ಪಟ್ಟು ಹೆಚ್ಚು ವಿಶ್ವಾಸಾರ್ಹತೆಯಿಂದ ಕೂಡಿದೆ ಎನ್ನುವುದನ್ನಂತೂ ಅತ್ಯಂತ ವಿಶ್ವಾಸದಿಂದಲೇ ಹೇಳಬಲ್ಲೆ. ದಸಾಲ್ಟ್ ಕಂಪೆನಿಯೊಂದಿಗಿನ ಒಪ್ಪಂದದಂತೆ ನಿಜವಾಗಿಯೂ ರಿಲಯನ್ಸ್ ಕಂಪನಿ ನಿರ್ವಹಿಸಬೇಕಾಗಿರುವ ಕೆಲಸಗಳೇನು ಎಂದು ಕೇಳಿದರೆ ಪಿಳಿ ಪಿಳಿ ಕಣ್ಣು ಬಿಡುವ ಕೆಲ ಪತ್ರಕರ್ತರು ನೀಡುವ ಮಾಹಿತಿಗಳಿಗಿಂತಲೂ ಇದು ಅದೆಷ್ಟೋ ಹೆಚ್ಚು ವಿಶ್ವಾಸಾರ್ಹ ಮಾಹಿತಿಗಳಿಂದ ಕೂಡಿದೆ ಎನ್ನುವುದನ್ನೂ ಘೋಷಿಸಬಲ್ಲೆ. ನಿಜಕ್ಕೂ ಏನು ಈ ಹಗರಣ,ನಿಮ್ಮ ಹೋರಾಟ ಯಾತಕ್ಕಾಗಿ ಎಂದು ಕೇಳಿದರೆ “ದೇಶದಲ್ಲಿ ಇವತ್ತು ಅದು ಇದಾಗ್ತಾ ಇರುದ್ರಿಂದ ಇದು ಅದಾಗ್ತಾ ಉಂಟು,ಅದಕ್ಕಾಗಿ ನಾವು ಇವತ್ತು ಇದಕ್ಕೆ ಅದು ಮಾಡ್ತಾ ಇದ್ದೇವೆ” ಎಂದು ಹೇಳುವ ಹೋರಾಟಗಾರರಿಗಿಂತಾ ಹೆಚ್ಚು ಮಾಹಿತಿ ಈ ಲೇಖನ ನಿಮಗೆ ನೀಡುವುದಂತೂ ಸುಳ್ಳಲ್ಲ.
ಹಾಗಾದರೆ ಇನ್ನೇಕೆ ತಡ?ಆ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಂಡೇ ಬಿಡೋಣ ಬನ್ನಿ.
ಆದರೆ ಅದಕ್ಕೂ ಮುನ್ನ ಇನ್ನೊಂದು ವಿಚಾರ. ಫ್ರೆಂಚ್ ಕಂಪನಿಗಳು ತಮ್ಮ ಭಾರತೀಯ ಪಾಲುದಾರ ಕಂಪನಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯವಿದೆ ಎನ್ನುವ ಸ್ಪಷ್ಟನೆಯನ್ನು ಅಲ್ಲಿನ ವಿದೇಶಾಂಗ ಇಲಾಖೆಯೇ ನೀಡಿದ ಮೇಲೂ ರಿಲಯನ್ಸ್ ಕಂಪನಿಯ ಜೊತೆಯೇ ಏಕೆ ಆ ಕಂಪನಿ ಒಪ್ಪಂದ ಮಾಡಿಕೊಂಡಿತು ಎನ್ನುವ ಬಗ್ಗೆ ಇಲ್ಲಿ ಪುನಃ ಪ್ರಸ್ತಾಪಿಸುವ ಅಗತ್ಯವಿಲ್ಲ. ಇಲ್ಲಿ ವಿರೋಧ ಪಕ್ಷಗಳ ಪ್ರಮುಖ ಆರೋಪವಿರುವುದು ರಿಲಯನ್ಸ್ ಕಂಪನಿಗೆ ಆ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲ ಎನ್ನುವುದು. ಮೊದಲು ಅದರ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ.
ಅಮೆರಿಕಾ ತನ್ನ ಅತ್ಯಾಧುನಿಕ ಯುದ್ಧ ನೌಕೆಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ಗ್ಲೋಬಲ್ ಟೆಂಡರ್ ಒಂದನ್ನು ಆಹ್ವಾನಿಸುತ್ತದೆ. ಅದುವರೆಗೂ ಅದರ ನಿರ್ವಹಣೆಯನ್ನು ಸಿಂಗಪೂರ್ ಮತ್ತು ಜಪಾನಿನ ರಕ್ಷಣಾ ಸಂಸ್ಥೆಗಳು ನಿಭಾಯಿಸುತ್ತಿರುತ್ತವೆ. 7th ಫ್ಲೀಟ್ ಎಂದು ಕರೆಸಿಕೊಳ್ಳುವ ನೂರಕ್ಕೂ ಹೆಚ್ಚು ಯುದ್ಧನೌಕೆಗಳನ್ನು ಹೊಂದಿದ ಹಾಗೂ ಸುಮಾರು 15000 ಕೋಟಿ ರೂ. (2 ಬಿಲಿಯನ್ ಅಮೇರಿಕನ್ ಡಾಲರ್ಗೂ ಹೆಚ್ಚು) ಮೊತ್ತದ ಅವುಗಳ ನಿರ್ವಹಣೆ ಮತ್ತು ದುರಸ್ತಿಯ ಹೊಣೆಯನ್ನು ಯಾವುದೋ ಅನುಭವವಿಲ್ಲದ ಅಥವಾ ಸರಿಯಾದ ಮೂಲಭೂತ ಸೌಲಭ್ಯವಿಲ್ಲದ ಕಂಪನಿಗೆ ಅಮೇರಿಕ ಕೊಡುವ ಸಂಭವವೇ ಇಲ್ಲ.
ಆಗ ಅಂತಹಾ ಒಂದು ಕಾರ್ಯ ನಿರ್ವಹಿಸಲು ಅಮೆರಿಕಾ ನೌಕಾಪಡೆ ಆಯ್ಕೆ ಮಾಡಿಕೊಂಡಿದ್ದು ಯಾವುದೇ ಅನುಭವವಿಲ್ಲ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿರುವ ಇದೇ ಅನಿಲ್ ಅಂಬಾನಿಯವರ ರಿಲಯನ್ಸ್ ಇನ್ಫ್ರಾನಿಯಂತ್ರಿತ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ! ಹಾಗಾದರೆ ಅನಿಲ್ ಅಂಬಾನಿಯ ನಿಯಂತ್ರಿತ ರಿಲಯನ್ಸ್ ಡಿಫೆನ್ಸ್ ಕಂಪನಿಯೊಂದಿಗೆ ಅಮೆರಿಕಾ ನೌಕಾಪಡೆ ಹದಿನೈದು ಸಾವಿರ ಕೋಟಿ ಮೊತ್ತದ ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳುವುದಕ್ಕೂ ಕೂಡಾ ನರೇಂದ್ರ ಮೋದಿಯೇ ಕಾರಣವೇ? ನರೇಂದ್ರ ಮೋದಿ ತನ್ನ ಗೆಳೆಯ ಅನಿಲ್ ಅಂಬಾನಿಯನ್ನು ಬೆಳೆಸುವ ಸಲುವಾಗಿ ಅಮೆರಿಕಾ ಸೇನೆಯ ಮೇಲೆ ಒತ್ತಡ ಹೇರಿದರೆ?
ಕಳೆದ 2017 ರ ಜುಲೈ ತಿಂಗಳಿನಲ್ಲಿ ಅನಿಲ್ ಅಂಬಾನಿಯ ರಿಲಯನ್ಸ್ಇನ್ಫ್ರಾ ಒಡೆತನದ ಅದೇ RDEL (Reliance Defence and Engineering Ltd) ಸಂಸ್ಥೆ ಸಚಿ ಮತ್ತು ಶ್ರುತಿ ಎನ್ನುವ ಹೆಸರಿನ,20000 ಕಿಲೋ ವ್ಯಾಟ್ ಡೀಸಲ್ ಇಂಜಿನ್ ಹೊಂದಿರುವ, ಒಂದೇ ಪ್ರಯಾಣದಲ್ಲಿ 25000 ಕಿ.ಮೀ. ಕ್ರಮಿಸಬಲ್ಲ ಸಾಮರ್ಥ್ಯದ, ಸಂಪೂರ್ಣ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸಲಾದ ತಾನು ನಿರ್ಮಿಸಿದ ಮೊದಲ ಎರಡು ಗಸ್ತು ನೌಕೆಗಳನ್ನು(Naval Offshore Patrol Vessel-NOPV) ಭಾರತೀಯ ನೌಕಾ ಪಡೆಯ ಸೇವೆಗಾಗಿ ಬಿಡುಗಡೆ ಮಾಡಿತು.
ಮತ್ತೆ ನಿಮಗೆ ಮೋದಿ ತನ್ನ ಗೆಳೆಯ ಅನಿಲ್ ಅಂಬಾನಿಯನ್ನು ಬೆಳೆಸಲು ನೌಕಾ ಪಡೆಯ ಆ ಡೀಲ್ ಕೊಡಿಸಿರಬಹುದು ಎಂದು ನೀವಂದುಕೊಂಡಿರಿ ಅಲ್ವಾ? ಆದರೆ ರಿಲಯನ್ಸ್ ಆ ಸೇನಾ ನೌಕೆಗಳನ್ನು ತಯಾರು ಮಾಡಿ, ಪರೀಕ್ಷಿಸಿ ಬಿಡುಗಡೆ ಮಾಡಿದ್ದು 2017 ರಲ್ಲಾದರೂ ರಿಲಯನ್ಸ್ ಅದನ್ನು ತಯಾರಿಸಿ ನೌಕಾ ಪಡೆಗೆ ಪೂರೈಕೆ ಮಾಡುವ ಹಲವು ಸಾವಿರ ಕೋಟಿಗಳ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು 2011ರಲ್ಲಿ! 2011 ರಲ್ಲಿ ಭಾರತದ ಪ್ರಧಾನಮಂತ್ರಿ ಕುರ್ಚಿಯಲ್ಲಿ ಯಾರು ಕುಳಿತಿದ್ದರು ಮತ್ತು ಅವರು ಯಾರ ಸಂಪೂರ್ಣ ನಿಯಂತ್ರಣದಲ್ಲಿದ್ದರು ಎಂದು ತಿಳಿಯಲು ಗೂಗಲ್ ನ ಮೊರೆ ಹೋಗುವ ಅಗತ್ಯವೇನೂ ಇಲ್ಲ ಅಲ್ವಾ?
ತಾವೇ ರಿಲಯನ್ಸ್ ಕಂಪನಿಗೆ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಪರವಾನಗಿ ನೀಡಿ, ಸಾವಿರಾರು ಕೋಟಿ ಮೊತ್ತದ ಸರಬರಾಜು ಒಪ್ಪಂದಗಳನ್ನೂ ಮಾಡಿಕೊಂಡು ಈಗ ರಿಲಯನ್ಸ್ ಕಂಪನಿಗೆ ಅನುಭವವಿಲ್ಲ ಎಂದು ಆರೋಪಿಸುತ್ತಿದ್ದಾರೆಂದರೆ ನಿಜವಾಗಿಯೂ ಅವರಿಗೆ ಅನುಭವವಿಲ್ಲ ಎಂದುಕೊಳ್ಳಬೇಕೋ ಅಥವಾ ರಿಲಯನ್ಸ್ ನಿಂದ ಆ ಪಕ್ಷಕ್ಕೆ ತಲುಪಬೇಕು ಎಂದು ಅಪೇಕ್ಷಿಸಿದ್ದು ತಲುಪಿಲ್ಲ ಎಂದುಕೊಳ್ಳಬೇಕೋ?
ಭಾರತ ಮತ್ತು ಫ್ರಾನ್ಸ್ ಸರ್ಕಾರಗಳು ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದವು. ದಸಾಲ್ಟ್ ಕಂಪೆನಿ ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿನ ಇದುವರೆಗಿನ ಪರಿಣತಿಯನ್ನು ಪರಿಗಣಿಸಿ ಇಲ್ಲಿನ ರಿಲಯನ್ಸ್ ಕಂಪನಿಯ ತನ್ನ ಭಾರತೀಯ ಸಹಭಾಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ವಿರೋಧ ಪಕ್ಷಗಳು ಮೊದಲಿನಿಂದಲೂ ಬಿಂಬಿಸುತ್ತಾ ಬಂದಂತೆ ಅಲ್ಲಿ ಅಂಬಾನಿಯ ಕಂಪನಿಯೊಂದರ ಹೆಸರು ಕೇಳಿಬರುತ್ತಿದ್ದಂತೆಯೇ ಮತ್ತೊಂದು ಚುನಾವಣೆ ಸಮೀಪಿಸಿದರೂ ಮೋದಿ ಸರ್ಕಾರದ ವಿರುದ್ಧ ಆರೋಪಿಸಲು ಯಾವುದೇ ಹಗರಣಗಳೂ ಸಿಗದೇ ಕಂಗಾಲಾಗಿದ್ದ ಪಕ್ಷ ಮುಳುಗುತ್ತಿದ್ದ ವ್ಯಕ್ತಿಗೆ ಹುಲ್ಲು ಕಡ್ಡಿ ಸಿಕ್ಕಷ್ಟೇ ಖುಷಿಪಟ್ಟಿತು.
ಆದರೆ ಸ್ವತಃ ಅನಿಲ್ ಅಂಬಾನಿಯೇ ಏನೂ ಅನುಭವವಿರದಿದ್ದ ಕಾಲದಲ್ಲೂ, ಅಷ್ಟೇನೂ ವಿದ್ಯಾವಂತರಲ್ಲದ ತಮ್ಮ ತಂದೆಯ ಕಾಲದಿಂದಲೂ ನಮ್ಮನ್ನು ಬೆಳೆಸಿದ್ದು ಗಾಂಧೀ ಕುಟುಂಬದವರು, ನಿಮ್ಮ ಋಣ ನಮ್ಮ ಮೇಲಿದೆ ಎನ್ನುವ ಅರ್ಥದ ಪತ್ರವೊಂದನ್ನು ಬರೆದಿದ್ದಾರೆ. ಹೌದು; ನನಗೂ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಒಂದು ಕಾಲದಲ್ಲಿ ಇಡೀ ದೇಶವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡಿದ್ದ ಸರ್ವಾಧಿಕಾರಿ ಇಂದಿರಾ ಗಾಂಧಿಯವರ ಜೊತೆ ಅದೆಷ್ಟು ಸಲುಗೆಯಿಂದಿದ್ದರು ಮತ್ತು ತಮ್ಮ ವಿದ್ಯಾಭ್ಯಾಸವನ್ನೇ ಮುಂದುವರಿಸಲಾಗದೆ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಧೀರೂಬಾಯ್ ಅಂಬಾನಿಯವರು ಆ ಕಾಲದಲ್ಲಿ ಹೇಗೆ ಅಗಾಧವಾದ ಬೆಳವಣಿಗೆ ಕಂಡು ತಮ್ಮ ಕಂಪನಿಯನ್ನು ಬಿಲಿಯನ್ ಡಾಲರ್ ಕಂಪೆನಿಯನ್ನಾಗಿ ಬೆಳೆಸಿದರು ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿಯಿದೆ. ನಾನೂ ಕೂಡಾ ಧೀರೂಬಾಯ್ ಅಂಬಾನಿಯವರು ಇಂದಿರಾ ಗಾಂಧಿಯವರೊಂದಿಗೆ ನಗು ನಗುತ್ತಾ ಓಡಾಡುತ್ತಿರುವ, ಹರಟೆ ಹೊಡೆಯುತ್ತಾ ಊಟ ಮಾಡುತ್ತಿರುವ ಚಿತ್ರಗಳನ್ನು ನೋಡಿದ್ದೇನೆ. ಅಲ್ಲೆಲ್ಲೂ ನನಗೆ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಲಿಲ್ಲ! ಹಾಗಾದರೆ ಅಂಬಾನಿಗಳ ನಿಜವಾದ ಮಿತ್ರರು ಯಾರು? ಅಂಬಾನಿಗಳನ್ನು ನಿಜವಾಗಿಯೂ ಬೆಳೆಸಿದವರು ಯಾರು?
ಇದೇ RDEL ಕೇಂದ್ರ ಸರ್ಕಾರೀ ಸ್ವಾಮ್ಯದ ONGC ಗಾಗಿ ತಾನು ತಯಾರು ಮಾಡಿದ ಮೂರನೇ ಗಸ್ತು ಮತ್ತು ಸಾಗಾಣಿಕಾ ನೌಕೆಯನ್ನು 2013 ರರ ಸೆಪ್ಟೆಂಬರ್ ತಿಂಗಳಿನಲ್ಲಿಹಸ್ತಾಂತರಿಸಿತ್ತು. ಅಷ್ಟೊಂದು ಬೃಹತ್ ಮೊತ್ತದ ನೌಕೆಗಳನ್ನು ತಯಾರಿಸಿ ಅದನ್ನು ಸರ್ಕಾರೀ ಸ್ವಾಮ್ಯದ ಕಂಪನಿಗೆ ಪೂರೈಸುವ ಅವಕಾಶ ಸಿಗಲು ಮೋದಿಯೇ ಕಾರಣ ಅಂದು ನಿಮಗೆ ಅನ್ನಿಸಿತಲ್ಲವೇ? ಹಾಗಾದರೆ 2013 ರಲ್ಲಿ ಹಾಗೂ ಅದಕ್ಕೂ ಹಿಂದೆ ಆ ಒಪ್ಪಂದ ನಡೆದ ಸಮಯದಲ್ಲಿ ಪ್ರಧಾನಿಯ ಖುರ್ಚಿಯಲ್ಲಿ ಯಾರು ಕುಳಿತಿದ್ದರು ಮತ್ತು ಅವರನ್ನು ನಿಯಂತ್ರಿಸುತ್ತಿದ್ದ ಕೈ ಯಾವುದು ಎನ್ನುವುದನ್ನು ಮತ್ತೊಮ್ಮೆ ಗೂಗಲ್ನಲ್ಲಿ ಹುಡುಕಿ ಬನ್ನಿ.ಆಗ ನಿಮ್ಮ ಆಲೋಚನೆಗಳು ಬದಲಾದರೂ ಆಗಬಹುದು.
ಅಮೆರಿಕಾದ ಟೆನ್ನೆಸ್ಸೀ ಸ್ಟೇಟ್ಸ್ ನಲ್ಲಿ ರಿಲಯನ್ಸ್ ಗ್ರೂಪ್ನ “ರಿಲಯನ್ಸ್ ಏರೋಟೆಕ್ ಸರ್ವೀಸಸ್” ಹೆಸರಿನಲ್ಲಿ 1998ರಲ್ಲೇ ಸ್ಥಾಪನೆಯಾದ ಕಂಪನಿಯು ಇಂದಿಗೂ ಆ ವಿಭಾಗದಲ್ಲಿ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳ ಗ್ರಾಹಕರನ್ನು ಹೊಂದಿ ಖ್ಯಾತಿ ಗಳಿಸಿದೆ. ರಿಲಯನ್ಸ್ ಏರೋಸ್ಟ್ರಕ್ಚರ್ ತನ್ನ ಕೆಲಸ ಪ್ರಾರಂಭಿಸಿದ್ದೇ ಫ್ರಾನ್ಸ್ನ 2USAF ಗೆ ಸೇವೆ ನೀಡುವ ಮೂಲಕ. ಏವಿಯೇಷನ್ ತಂತ್ರಜ್ಞಾನದಲ್ಲಿ ಆ ಕಂಪನಿ 2012 ರಲ್ಲೇ (ಅಂದರೆ ಮೋದಿ ಪ್ರಧಾನಿಯಾಗುವುದಕ್ಕೂ ಮೊದಲೇ) ಮುಂಚೂಣಿ ಕಂಪನಿಯಾಗಿ ಗುರುತಿಸಿಕೊಂಡಿತ್ತು. ಅನಿಲ್ ಅಂಬಾನಿಯ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನಿಯಂತ್ರಿತ ರಿಲಯನ್ಸ್ ಏರೋಸ್ಟ್ರಕ್ಚರ್ ಹಾಗೂ ರಿಲಯನ್ಸ್ ಡಿಫೆನ್ಸ್ ಕಂಪನಿಗಳು ಕಮರ್ಷಿಯಲ್ ಅಂಡ್ ಬಿಸಿನೆಸ್ ಏವಿಯೇಷನ್ ಇಂಟೆಗ್ರಾಷನ್ಸ್ & ಮಾಡಿಫಿಕೇಷನ್ಸ್, ಏವಿಯಾನಿಕ್ಸ್ ಅಪ್ಗ್ರೇಡ್ಸ್, ಏರ್ ರ್ಕ್ರಾಫ್ಟ್ ಅಡ್ರೆಸಿಂಗ್ ಅಂಡ್ ರಿಪೋರ್ಟಿಂಗ್ ಸಿಸ್ಟಮ್ (ACARS), ಟೆರ್ರಿಯನ್ ಅವಾಯ್ಡೆನ್ಸ್ ವಾರ್ನಿಂಗ್ ಸಿಸ್ಟಮ್(TAWS) & ಎನ್ಹಾನ್ಸಡ್ ಗ್ರೌಂಡ್ ಪ್ರಾಕ್ಸಿಮಿಟಿ ವಾರ್ನಿಂಗ್ ಸಿಸ್ಟಮ್ (EGPWS), ಟ್ರೋಪೋಸ್ಫೆರಿಕ್ ಏರ್ಬಾರ್ನ್ ಮೆಟರೋಲಾಜಿಕಲ್ ಡೇಟಾ ರಿಪೋರ್ಟಿಂಗ್ (TAMDAR), ಎಮರ್ಜೆನ್ಸಿ ಲೋಕೇಟರ್ (ELT), ವೆದರ್ ರಾಡಾರ್, ಟ್ರಾಫಿಕ್ ಅಲರ್ಟ್ ಅಂಡ್ ಕೊಲಿಷನ್ ಅವಾಯ್ಡೆನ್ಸ್ ಸಿಸ್ಟಮ್ (TCAS), ಎಕ್ಸ್ಟೆಂಡೆಡ್-ರೇಂಜ್ ಟ್ವಿನ್-ಎಂಜಿನ್ ಆಪರೇಷನಲ್ ಪರ್ಫಾರ್ಮೆನ್ಸ್ ಸ್ಟ್ಯಾಂಡರ್ಡ್(ETOPS), ಫೈರ್/ಸ್ಮೋಕ್ ಅಬಾಟ್ಮೆಂಟ್ ಸಿಸ್ಟಮ್, ರೀಜನಲ್ ಏರ್ ಕ್ರಾಫ್ಟ್ ಕಾರ್ಗೋ ಕನ್ವರ್ಷನ್ಸ್, ಆಫ್ಟರ್ ಮಾರ್ಕೆಟ್ ಇನ್ಸ್ಟಲ್ ಆಫ್ ಎಪಿಯೂಸ್, ಡ್ಯಾಶ್-8 ರೂಡರ್ ಐಸೋಲೇಷನ್ ಮೋಡ್, ಆಂಟಿ-ಐಸ್, ಸ್ಟ್ರಕ್ಚರಲ್ ಮಾಡಿಫಿಕೇಷನ್ (ಕಂಪೋಸಿಟ್ & ಶೀಟ್ ಮೆಟಲ್)….. ಹೀಗೆ ಈ ಎಲ್ಲಾ ವಿಭಾಗಗಳಲ್ಲೂ ಅತ್ಯಂತ ಪರಿಣತ ಸಂಸ್ಥೆಯಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿವೆ.
ಫಾರ್ವರ್ಡ್ ಲುಕಿಂಗ್ ಇನ್ಫ್ರಾರೆಡ್ ಇಂಟಿಗ್ರೇಷನ್(FLIR),ಏರ್ ವಾರಿಯರ್ MCCS, SAFIRE II FLIR ಅಪ್ ಗ್ರೇಡ್, APX-118 ಕಾಮನ್ ಟ್ರಾನ್ಸ್ಪಾಂಡರ್, ARC-220 HF ರೇಡಿಯೋ, ಫುಲ್ ಅಥಾರಿಟಿ ಡಿಜಿಟಲ್ ಎಂಜಿನ್ ಕಂಟ್ರೋಲ್ (FADEC),I/R ಸ್ಟ್ರೋಬ್, UH-60 ಹೆಲ್ತ್,ಯೂಸೇಜ್ & ಮಾನಿಟರಿಂಗ್ ಸಿಸ್ಟಮ್(HUMS), ಡೆಸರ್ಟ್ HUMS, ಬ್ಲೂ ಫೋರ್ಸ್ ಟ್ರಾಕರ್(BFT/EDM),MAVIN ಕ್ಯಾಬಿನ್ ಹೀಟ್, ಪೆಗಾಸಸ್ IAS-E, CH-47 ಕಾಮನ್ ಮಿಸೈಲ್ ವಾರ್ನಿಂಗ್ ಸಿಸ್ಟಮ್ (ALE-47),ALE-47 ಕೌಂಟರ್ ಮೆಶರ್ಸ್ ಡಿಸ್ಪೆನ್ಸಿಂಗ್ ಸಿಸ್ಟಮ್….. ಹೀಗೆ ಹಲವಾರು ಸೇವೆಗಳನ್ನು ಈಗಾಗಲೇ ಒದಗಿಸಿ ಅನುಭವವಿದ್ದುದರಿಂದಲೇ ಬಹುಶಃ ತಮ್ಮ ಕಂಪನಿಯ ವಿರುದ್ಧ ಅಪ ಪ್ರಚಾರ ಮಾಡಿದ್ದ ಕಾಂಗ್ರೆಸ್ ಮಾಲೀಕತ್ವದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮೇಲೆ ಐದು ಸಾವಿರ ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಿರಬಹುದು.
ಇಲ್ಲಿ ಇನ್ನೊಂದು ಮುಖ್ಯ ವಿಚಾರ ಹೇಳಲೇಬೇಕು. ಕಾಂಗ್ರೆಸ್ ಪಕ್ಷ ಯಾಕೆ ಈ ವಿಷಯವಾಗಿ ನ್ಯಾಯಾಲಯಕ್ಕೆ ಹೋಗದೆ ಬೀದಿ ಹೋರಾಟಗಳನ್ನೇ ನೆಚ್ಚಿಕೊಂಡಿದೆ ಎಂದರೆ ನ್ಯಾಯಾಲಯದಲ್ಲಿ ಸೋಲಾಗಬಹುದು ಎನ್ನುವ ಕಾರಣವೇ ಇರಬಹುದು.ಆದರೆ ಬೀದಿ ಹೋರಾಟಗಳಿಗೆ ಇವ್ಯಾವ ವಿವರಗಳೂ ಬೇಕಿಲ್ಲ. ಕೇವಲ ಮೋದಿ, ಅಂಬಾನಿ, ವಿಮಾನ, ಭ್ರಷ್ಟಾಚಾರ… ಎನ್ನುವ ಘೋಷಣೆಗಳನ್ನು ಕೂಗಿದರೆ ಸಾಕು!
ಅಷ್ಟೇ ಅಲ್ಲ, ಒಂದೊಮ್ಮೆ ನ್ಯಾಯಾಲಯದಲ್ಲಿ ಈ ವಿಷಯವಾಗಿ ಸೋಲುಂಟಾದರೆ ಆಗ ಐದು ಸಾವಿರ ಕೋಟಿಯ ಮಾನ ನಷ್ಟ ಮೊಕದ್ದಮೆಗೆ ಕೂಡಾ ಬಲ ಬಂದು ಅಷ್ಟೊಂದು ದೊಡ್ಡ ಮೊತ್ತವನ್ನು ಕಕ್ಕಬೇಕಾದರೂ ಆಗಬಹುದು. ಆದ್ದರಿಂದಲೇ ಈ ವಿಚಾರವನ್ನಿಟ್ಟುಕೊಂಡು ಅದನ್ನು ಇದು ಮಾಡಿ ಇದನ್ನ ಅದು ಮಾಡುತ್ತಾ ಅಲ್ಲಿಂದ ಇಲ್ಲಿಯವರೆಗೆ ಇದನ್ನೇ ಅದು ಮಾಡಿ ಇದು ಮಾಡುತ್ತಾ ಕಾಲ ಹರಣ ಮಾಡುತ್ತಾ ಕಾಂಗ್ರೆಸ್ ಪಕ್ಷ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತಿರುವಂತಿದೆ.
ಹಾಂ. ಮೊದಲೇ ಹೇಳಲು ಮರೆತಿದ್ದ ಹಾಗೂ ಬಹುತೇಕ ಪ್ರಮುಖ ಸುದ್ದಿ ಮಾಧ್ಯಮಗಳು ಹೇಳದೇ ಇರುವ ಇನ್ನೊಂದು ವಿಚಾರವನ್ನೂ ನಾನಿಲ್ಲಿ ಹೇಳುತ್ತೇನೆ ಕೇಳಿ.
DPPಯ ಪ್ರಕಾರ ಒಪ್ಪಂದದ 50% ಹಣವನ್ನು ಭಾರತದ ರಕ್ಷಣಾ ವ್ಯವಹಾರಗಳ ಕಂಪೆನಿಗಳಲ್ಲಿ ಹೂಡಿಕೆ ಹಾಗೂ ಕೆಲಸ ಮಾಡಬೇಕು. ಅದರಲ್ಲಿ 30% ಹಣವನ್ನು BEL, DRDO, HAL ನಂತಹಾ ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿಕೆ ಮಾಡಬೇಕಾಗಿದೆ.ಆ ನಿಯಮದಂತೆ ದಸಾಲ್ಟ್ ಕಂಪನಿಯು ಭಾರತದ ಇತರ ಕೆಲವು ಕಂಪೆನಿಗಳೊಂದಿಗೂ ಒಪ್ಪಂದ ಮಾಡಿಕೊಂಡಿದೆ.ಹಾಗೆ ದಸಾಲ್ಟ್ ಕಂಪನಿಯೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಂಡ ಕಂಪೆನಿಗಳಲ್ಲಿ ಗಾಂಧೀ ಕುಟುಂಬದ ಬಹು ಕಾಲದ ಫ್ಯಾಮಿಲಿ ಫ್ರೆಂಡ್ ಹಾಗೂ ಶತಾಯಗತಾಯ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲೇ ಬೇಕೆಂದು ಓಡಾಡುತ್ತಿರುವ ಅವರ ಗಾಡ್ ಫಾದರ್ ಸ್ಯಾಮ್ ಪಿತ್ರೊಡಾ ಅವರದ್ದೆನ್ನಲಾದ SAMTEL ಕೂಡಾ ಒಂದು!
ಹಾಗಾದರೆ ಈ ವಿಚಾರ ಪ್ರಮುಖ ಮಾಧ್ಯಮಗಳ ಕಣ್ಣು ತಪ್ಪಿಸಿದ್ದು ಹೇಗೆ? ಬಹುಶಃ ಮೋದಿ-ಅಂಬಾನಿಯ ವಿಚಾರ ಬಿಟ್ಟು ಈ ವಿಚಾರಗಳನ್ನು ಸುದ್ದಿ ಮಾಡಿದರೆ TRP ದೊರೆಯುವುದಿಲ್ಲವೆನ್ನುವ ಆತಂಕವಿರಬಹುದು ಅಥವಾ ಮಾಧ್ಯಮಗಳ ಮೇಲೆ ಆ ಸುದ್ದಿಗಳನ್ನು ತೋರಿಸದಂತೆ ಯಾವುದೋ ಒತ್ತಡ ಅಥವಾ ಆಮಿಷಗಳು ಇದ್ದರೂ ಇರಬಹುದು.
ರಿಲಯನ್ಸ್ ಕಂಪನಿಯು ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ಸೇವೆಯಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವುದು ತಿಳಿದಿದ್ದೂ, ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಕೆಲಸ ಮಾಡಿರುವುದು ಗೊತ್ತಿದ್ದೂ ಅದನ್ನೊಂದು ಅನನುಭವಿ ಸಂಸ್ಥೆ ಎಂದು ಆರೋಪಿಸಿರುವ ಕಾಂಗ್ರೆಸ್ ಮತ್ತು ಅದರ ಒಡೆತನದ ಪತ್ರಿಕೆಗೆ ಇದೀಗ ತಾನು ಮಾಡಿದ ಆರೋಪವೇ ತಿರುಗುಬಾಣವಾಗಿದೆ.
126 ವಿಮಾನಗಳ ಬದಲಿಗೆ ಕೇವಲ 36 ವಿಮಾನಗಳನ್ನು ಏಕೆ ಖರೀದಿಸಿದ್ದೀರಿ ಎನ್ನುವುದು ಅವರ ಇನ್ನೊಂದು ಆರೋಪ. ಕ್ರಿಸ್ತ ಶಕ 2000 ನೇ ಇಸವಿಯಲ್ಲಿ, ಅಂದರೆ ಸುಮಾರು ಹದಿನೆಂಟು ವರ್ಷಗಳ ಹಿಂದೆ ಬೇಡಿಕೆಯಿಟ್ಟಿದ್ದ ಅಷ್ಟು ವಿಮಾನಗಳಿಗಾಗಿ ಮನಮೋಹನ್ ಸಿಂಗ್ ಅವರ ಆಡಳಿತ ಇರುವಷ್ಟು ದಿನವೂ ಏಕೆ ಕನಿಷ್ಠ ಒಪ್ಪಂದದ ಹಂತಕ್ಕೂ ಬಂದಿರಲಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಆ ಪ್ರಶ್ನೆ ಏಳುವುದೇ ಇಲ್ಲ. ವಾಯು ಸೇನೆಗೆ ತುರ್ತಾಗಿ ಬೇಕಾಗಿರುವ 36 ವಿಮಾನಗಳನ್ನು ಈಗಲಾದರೂ ಖರೀದಿಸುತ್ತಿರುವ ಬಗ್ಗೆ ಅವರು ಹೆಮ್ಮೆಪಡಬೇಕಲ್ಲವೇ?
ತಮ್ಮ ಕಾಲದಲ್ಲಿ ಮಾಡಿಕೊಂಡಿದ್ದ ಒಪ್ಪಂದಕ್ಕಿಂತಾ ಹೆಚ್ಚು ಬೆಲೆಗೆ ಒಪ್ಪಂದ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಯನ್ನೂ ಕಾಂಗ್ರೆಸ್ ಪಕ್ಷ ಸಾರ್ವಜನಿಕರ (ನ್ಯಾಯಾಲಯದ ಮುಂದಲ್ಲ) ಮುಂದಿಡುತ್ತಿದೆ. ಆದರೆ ಈಗಾಗಲೇ ಪ್ರತಿಯೊಬ್ಬರಿಗೂ ಗೊತ್ತಾಗಿರುವಂತೆ ಆ ಒಪ್ಪಂದದಲ್ಲಿ ಎಲ್ಲವೂ ಬೇರೆ ಬೇರೆಯಾಗಿತ್ತು. ಆದರೆ ಈಗಿನ ಒಪ್ಪಂದದ ಪ್ರಕಾರ ಶಸ್ತ್ರಾಸ್ತ್ರಗಳೊಂದಿಗೆ ಸಂಪೂರ್ಣ ಸಿದ್ಧಗೊಂಡ ವಿಮಾನಗಳು ನೇರವಾಗಿ ನಮಗೆ ದೊರೆಯಲಿವೆ. ಶಸ್ತ್ರಾಸ್ತ್ರಗಳು, ಅವುಗಳ ಸಂಪೂರ್ಣ ನಿರ್ವಹಣೆ, ತರಬೇತಿ ವೆಚ್ಚಗಳು ಎಲ್ಲವೂ ಸೇರಿ ಸುಮಾರು 12,600 ಕೋಟಿ ರೂಪಾಯಿಗಳಷ್ಟು ನೇರ ಉಳಿತಾಯವಾಗಲಿದೆ.
ಅಲ್ಲಿಗೆ ಕಾಂಗ್ರೆಸ್ ಪಕ್ಷ ಈ ವಿಚಾರವನ್ನೆತ್ತಿ ಬೀದಿ ಹೋರಾಟ ನಡೆಸುವ ಮೂಲಕ ವಿಮಾನ ಖರೀದಿ ಪ್ರಕ್ರಿಯೆಯನ್ನು ಇನ್ನೂ ಹತ್ತಾರು ವರ್ಷ ನಿಧಾನಗೊಳಿಸುವುದು ಮತ್ತು ವಿಮಾನ ಖರೀದಿಯ ನಂತರದಲ್ಲಿ ಪ್ರತ್ಯೇಕವಾಗಿ ಶಸ್ತ್ರಾಸ್ತ್ರ ಖರೀದಿ, ನಿರ್ವಹಣೆ, ತರಬೇತಿ ಮುಂತಾದವುಗಳಿಂದ ಹಂತ ಹಂತವಾಗಿ ಹಣ ಹೊಡೆಯಬೇಕೆನ್ನುವ ತನ್ನ ಷಡ್ಯಂತ್ರವನ್ನು ಭಾರತೀಯರ ಮುಂದೆ ತಾನೇ ಬಯಲು ಮಾಡಿಕೊಂಡಂತಾಯಿತು.
ಏನೇ ಆಗಲಿ, ಕಾಂಗ್ರೆಸ್ ಇಲ್ಲದ ಹಗರಣದ ಹೆಸರಿನಲ್ಲಿ ಬೀದಿ ಹೋರಾಟಕ್ಕಿಳಿದಿದ್ದು ಒಳ್ಳೆಯದೇ ಆಯಿತು. ದಸಾಲ್ಟ್ ಕಂಪೆನಿಯೊಂದಿಗೆ ಆಫ್ಸೆಟ್ ಒಪ್ಪಂದಕ್ಕಾಗಿ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾಧ್ರಾನ ಬ್ಯುಸಿನೆಸ್ ಪಾರ್ಟ್ನರ್ ಎನ್ನಲಾದ ಸಂಜಯ್ ಭಂಡಾರಿ ಎಂಬ ಉದ್ಯಮಿಯ ಆಫ್ ಸೆಟ್ ಇಂಡಿಯಾ ಸಲ್ಯೂಷನ್ಸ್ ಎಂಬ ಕಂಪೆನಿಯೂ ಪ್ರಯತ್ನಿಸಿತ್ತು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತೆರಿಗೆ ಇಲಾಖೆಯ ದಾಳಿಯ ವೇಳೆ ರಕ್ಷಣಾ ಒಪ್ಪಂದಗಳ ಅತಿರಹಸ್ಯ ಫೈಲುಗಳು ಆತನ ಕಂಪನಿಯಲ್ಲಿ ದೊರೆತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸಿಬಿಐ ತನಿಖೆಗೆ ಹೆದರಿ ಭಾರತ ಬಿಟ್ಟು ಪರಾರಿಯಾಗಿದ್ದಾನೆನ್ನಲಾದ ಆತನ ಕಂಪೆನಿಯೊಂದಿಗಿನ ಒಪ್ಪಂದಕ್ಕೆ ದಸಾಲ್ಟ್ ಆಸಕ್ತಿ ತೋರಿಸದಿರುವುದೇ ಕಾಂಗ್ರೆಸ್ ಪಕ್ಷ ಈ ರೀತಿಯ ವೃಥಾ ಆರೋಪಗಳನ್ನು ಮಾಡುತ್ತಿದೆ ಎನ್ನುವ ಅಭಿಪ್ರಾಯಗಳು ಕೂಡಾ ದಟ್ಟವಾಗುತ್ತಾ ಹೋಗುತ್ತಿವೆ.
ಒಟ್ಟಿನಲ್ಲಿ ಈ ವಿಚಾರವನ್ನು ಕೈ ಬಿಟ್ಟರೂ ಕಷ್ಟ, ಹಿಡಿದುಕೊಂಡರೂ ಕಷ್ಟ ಎನ್ನುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೀಗ ಎದುರಾಗಿದೆ. ಇದರ ನಡುವೆಯೇ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಹಣದಲ್ಲಿ ಕಟ್ಟಿದ ನ್ಯಾಷನಲ್ ಹೆರಾಲ್ಡನ್ನು ನುಂಗಿ ಹಾಕಿದ ವಿಚಾರವಾಗಿ ಯಾವಾಗ ನ್ಯಾಯಾಲಯದಿಂದ ಕರೆ ಬರುವುದೋ ಎನ್ನುವ ಆತಂಕ ಬೇರೆ ಗಾಂಧೀ ಕುಟುಂಬವನ್ನು ಕಾಡುತ್ತಿದೆ.
ಇದೆಲ್ಲದರ ನಡುವೆ HAL ಕಂಪನಿಯಲ್ಲಿ ಟೀ ಶರ್ಟು, ಚಪ್ಪಲಿ ತಯಾರಿಸುವ ಮಾತಾಡುವ ನಮ್ಮ ರಾಹುಲ್ ಗಾಂಧಿಯವರು ತಮಗೆ ನಿಲುಕದ ರಾಫೆಲ್ವರೆಗೆ ಕೈ ಚಾಚಲೇ ಬಾರದಿತ್ತು ಎನ್ನುವುದು ಬೀದಿ ಹೋರಾಟಗಾರರೊಬ್ಬರ ಅನಿಸಿಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.