ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 2
ಜಾನ್ ರಸ್ಕಿನ್ನನನ್ನು ಓದಿದ ಗಾಂಧೀಜಿ ’ಸರ್ವೋದಯ’ ಎಂಬ ಶಬ್ದವನ್ನು ಟಂಕಿಸಿದರು. ಇಲ್ಲಿ ಕೆಲವರ ವಿಕಾಸ ಭರ್ಜರಿಯಾಗಿಯೇ ಆಗಿದೆ. ಇನ್ನು ಕೆಲವರದು ಪರವಾಗಿಲ್ಲ. ಮತ್ತೆ ಕೆಲವರದು ವಿಕಾಸ ಬಿಡಿ, ತಳಪಾಯದಲ್ಲಿ ನಿಲ್ಲಲೂ ಆಗಿಲ್ಲ. ಅವರನ್ನು ಎಲ್ಲ ದೃಷ್ಟಿಯಿಂದಲೂ ಮೇಲೆತ್ತಬೇಕಾಗಿದೆ.
ಎದ್ದು ನಿಲ್ಲಲಾಗದವರು ಎದ್ದುನಿಂತರೆ ಸಾಕು, ಎಲ್ಲರೂ ಎದ್ದು ನಿಂತಂತೆ. ಎಲ್ಲರೂ ಎದ್ದುನಿಂತರೆ ಸಾಕು, ಅಲ್ಲಿಂದ ಮುಂಬರಿಯಬೇಕಾದ ಅಗತ್ಯವಿಲ್ಲ. ಎಲ್ಲರೂ ಮುಂಬರಿದರೆ ಪ್ರಕೃತಿ ಬರಡಾದಾಳು, ಬಡಕಳಾದಾಳು, ಬಡವಾದಾಳು. ಪ್ರಕೃತಿ ನಮಗಾಗಿ ಅಲ್ಲ, ಪ್ರಕೃತಿಗಾಗಿ ಉಳಿಯಬೇಕು. ಕನಿಷ್ಠಪಕ್ಷ ನಮಗಾಗಿಯಂತೂ ಉಳಿಯಲೇಬೇಕು. ಹಾಗೆ ಉಳಿಯಬೇಕಾದ ಪ್ರಕೃತಿಯ ಮಕ್ಕಳು ಬಡವರಾಗಿಯೇ ಉಳಿಯಬೇಕು. ತನ್ನ ಶ್ರೀಮಂತಮಕ್ಕಳನ್ನು ಹೊತ್ತುಕೊಳ್ಳುವ ಸಾಮರ್ಥ್ಯ ಪ್ರಕೃತಿಗೆ ಇಲ್ಲ.
ಹಾಗಾಗಿ ಎದ್ದುನಿಲ್ಲಲಾಗದವರು ಎದ್ದುನಿಂತರೆ ಸಾಕು ಎಂಬ ನಿರ್ಣಯಾತ್ಮಕ ಹೊಳಹನ್ನು ಸರ್ವೋದಯ ಶಬ್ದ ನೀಡುತ್ತದೆ. ದಾರಿದ್ರ್ಯಪೂರ್ಣ ಸರಳಬದುಕನ್ನು ಬದುಕಬಲ್ಲವರಿಗೆ ಹೊಳೆಯಬಹುದಾದ ಸಂಗತಿಯಿದು.
ಇಂಥ ಸಾರ್ವಕಾಲಿಕ ವಿಚಾರದ ಮುಂದೆ ಸಹ್ಯ ಅಭಿವೃದ್ಧಿ, ಸಂತುಲಿತ ಅಭಿವೃದ್ಧಿ ಇತ್ಯಾದಿ ವಾದಪದಪುಂಜಗಳು ಬಿದ್ದುಹೋಗುತ್ತವೆ.
ಗಾಂಧಿವಿಚಾರದಲ್ಲಿ ಅಭಿವೃದ್ಧಿಯ ಸೊಲ್ಲಿಲ್ಲ. ಬರಿಯ ಶಬ್ದದಲ್ಲೇ ಜಾಲಾಡುವುದಾದರೆ ಅವರನ್ನು ಅಭಿವೃದ್ಧಿವಿರೋಧಿಗಳೆಂದು, ಪ್ರಗತಿವಿರೋಧಿಗಳೆಂದು ಕರೆಯಬಹುದು. ನೋಡಿ, ಹಾಗೆ ಕರೆಯಬಹುದಾದ ಪ್ರಗತಿಪರರು ಗಾಂಧಿವಿಚಾರವನ್ನು ಕೈಬಿಟ್ಟು ಗಾಂಧಿಯನ್ನಷ್ಟೆ ಗಟ್ಟಿಯಾಗಿ ಹಿಡಕೊಂಡು ತಮ್ಮನ್ನು ಗಾಂಧಿವಾದಿಗಳೆಂದು ಕರೆದುಕೊಂಡು ನಿಜಭಾರತೀಯ ವಿಚಾರವನ್ನು ಪ್ರತಿಪಾದಿಸುವವರನ್ನು ಪ್ರಗತಿವಿರೋಧಿಗಳೆಂದು ಜರೆಯುತ್ತಿದ್ದಾರೆ.
ಎಂಥ ವಿರೋಧಾಭಾಸ! ಪ್ರಗತಿಪರ ಎಂಬ ಗುರುತಿಸುವಿಕೆಯೇ ಗಾಂಧಿ ವಿರೋಧಿಯಾದುದು. ಮತ್ತು ಪ್ರಗತಿವಿರೋಧಿಯೆಂಬ ನಿಂದೆ ಕೂಡಾ ಗಾಂಧಿ ವಿರೋಧಿಯೇ. ಗಾಂಧೀಜಿ ’ಅಂತ್ಯೋದಯ’ ಎಂಬ ಶಬ್ದವನ್ನೂ ಟಂಕಿಸಿದರು.
ಆರ್ಥಿಕವಾಗಿ ಎದ್ದು ನಿಲ್ಲಲಾಗದವರು ಸಾಮಾಜಿಕವಾಗಿಯೂ ಎದ್ದುನಿಲ್ಲಲಾಗದ ಒಂದು ಕೊನೆಯಲ್ಲಿದ್ದಾರೆ. ಅಂತ್ಯಜರೆನಿಸಿಕೊಂಡಿದ್ದಾರೆ. ಅಂಥವರು ಎದ್ದುನಿಲ್ಲಬೇಕಾಗಿದೆ.
ಎದ್ದುನಿಲ್ಲಲಾಗದವರು ಎದ್ದುನಿಲ್ಲಬೇಕಾದರೆ ಪ್ರಗತಿಯ ಮತ್ತೊಂದು ಕೊನೆಯಲ್ಲಿರುವವರು ತಮ್ಮ ಪ್ರಗತಿಯ ಹಂಬಲವನ್ನು ಬಿಟ್ಟುಕೊಟ್ಟು ತಾವು ಗಳಿಸಿದ್ದನ್ನು ನೀಡಬೇಕಾದವರಿಗೆ ನೀಡಿ ಸಹಕರಿಸಬೇಕು. ಈ ಸಹಕಾರವು ಕರ್ತವ್ಯವೇ ವಿನಾ ಸಹಾಯವಲ್ಲ! ದಾನವೇ ವಿನಾ ಬಿಟ್ಟಿಕೊಡುವಿಕೆಯಲ್ಲ!
ಆಗ ಸಾಧಿತವಾಗುವುದು ಸರ್ವೋದಯ. ಎಲ್ಲರ ಉದಯ. ಎಲ್ಲರೂ ಎದ್ದುನಿಲ್ಲಬಲ್ಲ ಸ್ಥಿತಿ. ಎಲ್ಲರೂ ಎದ್ದನಿಂತರೆ ಮಾತ್ರ ಸಾಕು ಎಂಬ ಸ್ಥಿತಿ. ’ಪ್ರಗತಿವಿರೋಧಿ’ ಸ್ಥಿತಿ!
ಗಾಂಧೀಜಿ ಬಂಡವಾಳಶಾಹಿ ವಿರೊಧಿ ಹೇಗೋ ಹಾಗೇ ಸಾಮ್ಯವಾದದ ವಿರೋಧಿಯೂ ಆಗಿದ್ದರು.
ಅದು ಹೇಗೆಂದರೆ;
ಶ್ರೀಮಂತರನ್ನು ದೋಚಿ ಅವರ ಸಂಪತ್ತನ್ನು ಬಡವರಿಗೆ ಹಂಚುವುದಕ್ಕೆ ತನ್ನ ಪ್ರಬಲ ವಿರೋಧವಿದೆಯೆಂದಿದ್ದ ಅವರು, ಇಲ್ಲದವರಿಗೆ ಕೊಡಬೇಕಾದ ಕರ್ತವ್ಯವನ್ನು ಶ್ರೀಮಂತರಿಗೆ ಮನಗಾಣಿಸಿ ಸಮಾಜದ ವಿಶ್ವಸ್ತರಂತೆ ಅವರು ಬದುಕು ನಡೆಸುವುದನ್ನು ಪ್ರೇರೇಪಿಸಬೇಕು ಎಂದಿದ್ದರು.
ಶ್ರೀಮಂತರನ್ನು ಬಲಾತ್ಕಾರದಿಂದ ಬಡವರಾಗಿಸಿ, ಬಡವರನ್ನು ಅಕ್ರಮವಾಗಿ ಶ್ರೀಮಂತರಾಗಿಸುವ ಕಮ್ಯುನಿಸಮ್ಮಿನ ದಾರಿಗೂ ಗಾಂಧೀಜಿ ವಿರೋಧವಿದ್ದರು; ಶ್ರೀಮಂತರನ್ನು ಶ್ರೀಮಂತರನ್ನಾಗಿಯೇ ಮತ್ತಷ್ಟು ಬೆಳೆಸಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಶೋಷಿಸುವ ಬಂಡವಾಳಶಾಹೀ ದುರ್ನೀತಿಗೂ ವಿರೋಧವಿದ್ದರು.
ಈ ಎರಡೂ ವಾದಗಳಲ್ಲಿ ಸಂಪತ್ತಿನ ಅಭಾವ-ಪ್ರಭಾವಗಳ ಕುರಿತ ಚಿಂತೆ, ಎಚ್ಚರಿಕೆಗಳಿವೆ. ಏನಕೇನ ಪ್ರಕಾರೇಣ ಸಂಪತ್ತನ್ನು ಹೊಂದಬೇಕೆಂಬ ಒತ್ತಾಯವಿದೆ. ಮನುಷ್ಯನ ವ್ಯಕ್ತಿಗತ ದುರಾಶೆಯನ್ನು ಪೂರೈಸಿಕೊಳ್ಳುವುದನ್ನೇ ಎರಡೂ ವಾದಗಳು ಸಮರ್ಥಿಸುತ್ತವೆ. ಇದನ್ನು ಸಾಧಿಸಿಕೊಳ್ಳುವಲ್ಲಿ ಮನುಷ್ಯ-ಮನುಷ್ಯ ಸಾಮರಸ್ಯ, ಪ್ರಕೃತಿ-ಮನುಷ್ಯ ಸಾಮರಸ್ಯ, ಪ್ರಕೃತಿಯ ಉಳಿವು ಇತ್ಯಾದಿ ಯಾವುದೇ ಚಿಂತನೆಗಳು ಕೆಲಸಮಾಡಿದಂತಿಲ್ಲ.
ಗಾಂಧೀಜಿ ಇವೆರಡಕ್ಕೂ ತದ್ವಿರುದ್ಧ ದಿಕ್ಕಿನಲ್ಲಿ ನಿಂತಿದ್ದಾರೆ. ಮತ್ತು ಅವರದು ವಿಶುದ್ಧ ಭಾರತೀಯ ಚಿಂತನದಿಶೆ.
ನಿಜಕ್ಕಾದರೆ, ಶುದ್ಧ ಅಭಾರತೀಯ ಚಿಂತನಶಾಲೆಯವರು ಗಾಂಧೀಜಿಯನ್ನು ತಮ್ಮ ಗೂಡಿಗೆ ಹೋಗಿಸಿಕೊಳ್ಳುವ ಪ್ರಯತ್ನಮಾಡುವುದನ್ನು ನೋಡಬೇಕಾಗಿ ಬಂದುದೇ ಈ ಜಗತ್ತಿನ ಒಂದು ದುರಂತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.