ವರ್ಧಿನಿ ಆರ್ಟ್ಸ್ ಸಂಸ್ಥೆಯಿಂದ 1971 ರಲ್ಲಿ ಕನ್ನಡದ ಖ್ಯಾತ ಸಾಹಿತಿಗಳಾದ ಶ್ರೀಮತಿ ತ್ರಿವೇಣಿ ರವರ “ಶರಪಂಜರ” ಕಾದಂಬರಿ ಆಧಾರಿತ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ರವರು ಚಿತ್ರಕಥೆ ಬರೆದು ನಿರ್ದೇಶಿಸಿದ ಒಂದು ಅತ್ಯುತ್ತಮ ಚಲನಚಿತ್ರ. ಮಾನಸಿಕ ಆರೋಗ್ಯ ಕಳೆದುಕೊಂಡವರ ಕುರಿತಂತೆ ಸಮಾಜದ ದೃಷ್ಟಿ ಹೇಗಿದೆ, ಅದು ಹೇಗಿರಬೇಕು ಎಂಬುದರ ಸೂಕ್ಷ್ಮ ತಿಳಿಸುತ್ತದೆ ಈ ಸಿನಿಮಾ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ದ.ರಾ. ಬೇಂದ್ರೆಯವರ “ಉತ್ತರ ಧ್ರುವದಿಂ, ದಕ್ಷಿಣ ಧ್ರುವಕೂ” ಎಂಬ ಕವಿತೆಯನ್ನು ಈ ಚಿತ್ರದಲ್ಲಿ ಗೀತೆಯನ್ನಾಗಿಸಿದ್ದಾರೆ. ಅಲ್ಲದೇ ವಿಜಯ ನಾರಸಿಂಹ ಹಾಗೂ ಕಣಗಾಲ್ ಪ್ರಭಾಕರಶಾಸ್ತ್ರಿ ರವರ ಸಾಹಿತ್ಯವಿದ್ದು, ವಿಜಯಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಗಂಗಾಧರ್, ಕಲ್ಪನಾ, ಅಶ್ವತ್ಥ್, ಲೀಲಾವತಿ, ಶಿವರಾಂ, ಚಿಂದೋಡಿ ಲೀಲಾ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ ಮತ್ತು ಮೈಸೂರು ದೇವದಾಸ್ ರವರು ದನಿಯಾಗಿದ್ದಾರೆ.
1972ರಲ್ಲಿ ಅತ್ಯುತ್ತಮ ಚಿತ್ರವೆಂದು 20ನೆಯ ರಾಷ್ಟ್ರಪ್ರಶಸ್ತಿ ಹಾಗೂ 1970-71ನೇ ಸಾಲಿನಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ (ಕಲ್ಪನಾ), ಅತ್ಯುತ್ತಮ ಚಿತ್ರಕಥೆ (ಪುಟ್ಟಣ್ಣ ಕಣಗಾಲ್) ಎಂಬ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಥೆ:
ಮಡಿಕೇರಿಯ ಕಾನನದ ನಡುವೆ ಅನೇಕ ತಿರುವುಗಳುಳ್ಳ ರಸ್ತೆಯಲ್ಲಿ ಕೆಂಪು ಬಸ್ಸೊಂದು ಬರುವ ದೃಶ್ಯದೊಂದಿಗೆ ಸಿನಿಮಾ ಶುರುವಾಗುತ್ತದೆ. ಸ್ನೇಹಿತರ ಮದುವೆಗಾಗಿ ಅದೇ ಬಸ್ಸಿನಲ್ಲಿ ಕಾವೇರಿ (ಕಲ್ಪನಾ) ಹಾಗೂ ಸತೀಷ (ಗಂಗಾಧರ) ಮಡಿಕೇರಿಗೆ ಬರುತ್ತಾರೆ. ಕಾವೇರಿಯ ಚಂದಕೆ ಗಂಗಾಧರ ಸೋತು ಹೋಗಿರುತ್ತಾನೆ. ಸ್ನೇಹಿತನ ಸಹಾಯದಿಂದ ಆಕೆಯ ಪರಿಚಯ ಮಾಡಿಕೊಂಡು ಆಕೆಗೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಆಕೆಯೂ ಒಪ್ಪುತ್ತಾಳೆ. ನಂತರ ಸತೀಷ ತನ್ನ ತಾಯಿಯ ಹತ್ತಿರ ಮಾತನಾಡಿ, ಕಾವೇರಿಯ ತಂದೆಗೆ ಪತ್ರ ಬರೆಯುತ್ತಾನೆ. ಕಾವೇರಿಯ ತಂದೆ-ತಾಯಿ ಎಲ್ಲರೂ ಒಪ್ಪಿ ಮದುವೆಯನ್ನು ಮಾಡುತ್ತಾರೆ. ಅಲ್ಲಿಂದ ಸುಖಮಯ ಜೀವನ. ಸತೀಷರಾಯರು ಹೊಸ ಮನೆ ಕಟ್ಟುತ್ತಾರೆ. ಹೊಸ ಕಾರನ್ನು ಕೊಳ್ಳುತ್ತಾರೆ. ಒಂದು ಮುದ್ದಾದ ಮಗುವಿಗೆ ಕಾವೇರಿ ತಾಯಿಯೂ ಆಗುತ್ತಾಳೆ. ಎಲ್ಲವೂ ಖುಷಿ ಖುಷಿ. ಹಾಗೇ ಎರಡನೇ ಬಾರಿ ಗರ್ಭವತಿಯಾಗುತ್ತಾಳೆ ಕಾವೇರಿ. ಆ ಸಮಯದಲ್ಲಿ ದೈಹಿಕ ದುರ್ಬಲತೆಯಿಂದ ಬಳಲುವ ಆಕೆ, ವಿವಾಹ ಪೂರ್ವದಲ್ಲಿ ಆಕೆಗಾದ ಲೈಂಗಿಕ ಕಿರುಕುಳದಿಂದಾಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾಳೆ. ಅಂತಹ ಸ್ಥಿತಿಯಲ್ಲಿ, ಆಕೆ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಾಳೆ. ಆಕೆಯ ಮಾನಸಿಕ ಆರೋಗ್ಯ ಸುಧಾರಿಸಲು ಆಕೆಯನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುತ್ತಾರೆ. ಒಂದಷ್ಟು ವರುಷಗಳ ಸತತ ಚಿಕಿತ್ಸೆಯಿಂದ ಆಕೆ ಗುಣಮುಖಳಾಗುತ್ತಾಳೆ. ಮನೆಗೆ ಹಿಂದಿರುಗುತ್ತಾಳೆ. ಆಕೆಯು ಹುಚ್ಚಾಸ್ಪತ್ರೆಯಿಂದ ಬಂದಾಕೆ ಎಂದು ಸಮಾಜವು ಮಾನಸಿಕ ಶೋಷಣೆ ಮಾಡುತ್ತದೆ. ಇದರಿಂದಾಗಿ ಆಕೆ ಬಹಳವಾಗಿ ನೊಂದುಕೊಳ್ಳುತ್ತಾಳೆ. ಈ ಹುಚ್ಚಿನ ಕಾರಣದಿಂದ ಆಕೆಯ ತಂಗಿಯ ಮದುವೆ ಕೂಡ ನಿಂತು ಹೋಗುತ್ತದೆ. ಗಂಡನೂ ಕೂಡ ಪರಸ್ತ್ರೀ ಸಹವಾಸ ಮಾಡಿ, ತನ್ನನ್ನು ನಿರ್ಲಕ್ಷ್ಯ ಮಾಡಿದ ಬಗ್ಗೆ ಆಕೆಗೆ ತಿಳಿಯುತ್ತದೆ. ಮಾನಸಿಕವಾಗಿ ಮತ್ತೆ ಖಿನ್ನಳಾಗುತ್ತಾಳೆ. ಮತ್ತೆ ಆಕೆ ಹುಚ್ಚಾಸ್ಪತ್ರೆಯ ಪಾಲಾಗುತ್ತಾಳೆ. ಹೀಗೆ ಕತೆ ದುರಂತ ಅಂತ್ಯ ಕಾಣುತ್ತದೆ.
ಆಗಿನ ಕಾಲಕ್ಕೆ 10 ಲಕ್ಷಗಳ ಬಜೆಟ್ ನಲ್ಲಿ (ಅತಿ ಹೆಚ್ಚು) ತಯಾರಾದ ಚಿತ್ರ. ಕೊಡಗಿನ ಮದುವೆಯ ಸಂಪ್ರದಾಯಗಳನ್ನು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಈ ಮದುವೆಯ ದೃಶ್ಯವೊಂದರಲ್ಲಿ ಕನ್ನಡದ ಹೆಮ್ಮೆಯ “ಜನರಲ್ ಕಾರ್ಯಪ್ಪ”ನವರು ಕಾಣಿಸಿಕೊಳ್ಳುತ್ತಾರೆ. ಕಾವೇರಿ-ಸತೀಷರ ಮದುವೆಯಲ್ಲಿ ಕಾವೇರಿಯ ತಂದೆ (ಅಶ್ವಥ್), ತನ್ನ ಮಗಳು ಆಕಸ್ಮಾತ್ ಏನಾದರೂ ತಪ್ಪು ಮಾಡಿದರೆ ಕ್ಷಮಿಸಿ, ತಿದ್ದಿ ಎಂದು ಹೇಳುತ್ತಾನೆ. ಈಗಿನ ಕಾಲದಲ್ಲಿ ಅದೆಷ್ಟೋ ಸಂಬಂಧಗಳು ಕ್ಷಮಿಸುವ ಗುಣ ಮರೆತು, ಸಣ್ಣದನ್ನೇ ದೊಡ್ಡದು ಮಾಡಿ, ರಂಪ ಮಾಡಿಕೊಂಡು, ದೂರಾಗಿವೆ. ಗಂಡ-ಹೆಂಡತಿ ನಡುವಿನ ಚಿಕ್ಕಪುಟ್ಟ ಮನಸ್ತಾಪಗಳನ್ನು ಪುಷ್ಟೀಕರಿಸಿ, ದೊಡ್ಡದಾಗುವಂತೆ ಮಾಡಿ, ದೂರಾಗುವಂತೆ ಮಾಡುವ ಗುಣಗಳನ್ನು ಗಂಡಿನ ಮನೆಯವರೋ ಅಥವಾ ಹೆಣ್ಣಿನ ಮನೆಯವರೋ ಬೆಳೆಸಿಕೊಂಡಿವೆ. ಸುಧಾರಿಸಿಕೊಂಡು ಹೋಗಿ ಎನ್ನುವ ಬದಲಾಗಿ, ಉರಿವ ಬೆಂಕಿಗೆ ತುಪ್ಪ ಸುರಿಯುವವರೇ ಹೆಚ್ಚು. ಅಡುಗೆ ಭಟ್ಟನಾಗಿ ಪಾತ್ರ ನಿರ್ವಹಿಸಿರುವ ಶಿವರಾಂ ರವರು ಚಿತ್ರದುದ್ದಕ್ಕೂ ಕಥೆಯನ್ನು ಪೋಷಿಸುತ್ತಾರೆ. ಈ ಸಿನಿಮಾ ನೋಡುವಾಗ, ಕೊನೆಯ ಹತ್ತು ನಿಮಿಷಗಳ ಕಾಲ ಕಲ್ಪನಾ ರವರ ನಟನೆ ನಿಮ್ಮ ಮನಸಿನಲ್ಲಿ ಒಂದಷ್ಟು ದಿನಗಳವರೆಗೆ ಮಾಸದೇ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಕನ್ನಡಿಗರು ಸದಾ ಹೆಮ್ಮೆ ಪಡಬಹುದಾದಂತಹ ಚಿತ್ರ ಇದು.
ಹಾಡುಗಳ ಕುರಿತಂತೆ ಹೇಳಲೇಬೇಕು. “ಉತ್ತರ ಧ್ರುವದಿಂದ, ದಕ್ಷಿಣ ಧ್ರುವಕೂ” ಎಂಬ ದ.ರಾ.ಬೇಂದ್ರೆ ರವರ ಸಾಹಿತ್ಯದ ಗೀತೆ ದಂಪತಿಗಳ ಮಧುಚಂದ್ರದ ಸವಿಯ ಉಣಬಡಿಸುತ್ತದೆ. ಕಚೇರಿಯವರೊಂದಿಗೆ ಪಿಕ್ ನಿಕ್ ಹೋದ ಸಂಧರ್ಭದಲ್ಲಿ ಮೂಡಿಬರುವ “ಬಿಳಿಗಿರಿ ರಂಗಯ್ಯ, ನೀನೇ ಹೇಳಯ್ಯ” ಎಂಬ ಕಣಗಾಲ್ ಪ್ರಭಾಕರ ಶಾಸ್ತ್ರಿ ರವರ ಸಾಹಿತ್ಯದ ಗೀತೆ ಪಿ.ಸುಶೀಲಾರ ಕಂಠದಲ್ಲಿ ಅನುಪನ ಅನುಭವ ನೀಡುತ್ತದೆ. “ಸಂದೇಶ ಮೇಘ ಸಂದೇಶ” ಎಂಬ ವಿಜಯ ನಾರಸಿಂಹ ರವರ ರಚನೆಯ ಗೀತೆಯೂ ಮನಸನ್ನು ಖುಷಿಗೊಳಿಸುತ್ತದೆ. “ಕೊಡಗಿನ ಕಾವೇರಿ” ಎಂಬ ಕಣಗಾಲ್ ಪ್ರಭಾಕರ ಶಾಸ್ತ್ರಿ ರವರ ಸಾಹಿತ್ಯದ ಗೀತೆ ಪಿ.ಬಿ.ಶ್ರೀನಿವಾಸ್ ಹಾಗೂ ಪಿ.ಸುಶೀಲಾ ರವರ ದನಿಯಲ್ಲಿ ಕೊಡಗಿನ ಸೌಂದರ್ಯ ಪರಿಚಯ ಮಾಡಿಸುತ್ತದೆ. “ಬಂಧನ, ಶರಪಂಜರದಲ್ಲಿ ಬಂಧನ” ಎಂಬ ವಿಜಯ ನಾರಾಸಿಂಹರ ಸಾಹಿತ್ಯದ ಗೀತೆ ಮೈಸೂರು ದೇವದಾಸ್ ಹಾಗೂ ಪಿ. ಸುಶೀಲ ರವರ ಕಂಠದಲ್ಲಿ ಮನಸು ಮುಮ್ಮಲ ಮರಗುವಂತೆ ಮಾಡುತ್ತದೆ. ಸೀತೆಯ ನೋವಿಗೆ ತನ್ನ ನೋವನ್ನು ಹೊಂದಿಸಿಕೊಂಡು, ವಿಜಯ ನಾರಸಿಂಹ ರವರ ಸಾಹಿತ್ಯದ “ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ” ಎಂಬ ಗೀತೆ ಪಿ.ಸುಶೀಲಾ ರವರ ದನಿಯಲ್ಲಿ ಕೇಳಿ ಬರುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಗಂಡ-ಹೆಂಡತಿ ನಡುವೆ ಇರಬೇಕಾದ ಅನ್ಯೋನತೆ ಹಾಗೂ ಭಾವುಕ ಸಂಬಂಧಗಳ ಮೌಲ್ಯದ ಕುರಿತು ತಿಳಿಯಲು.
2. ಮಾನಸಿಕ ದೌರ್ಬಲ್ಯ ಇರುವವರ ಜೊತೆ ಸಮಾಜವು ವರ್ತಿಸಬೇಕಾದ ರೀತಿ ಹಾಗೂ ಸಮಾಜದ ಜವಬ್ದಾರಿ ಕುರಿತು ತಿಳಿಯಲು.
3. ಮನಸಿನ ಸೂಕ್ಷ್ಮತೆ ಹಾಗೂ ಮಾನಸಿಕ ನಿಯಂತ್ರಣದ ಅವಶ್ಯಕತೆ ಏನು ಎಂಬುದನ್ನು ತಿಳಿಯಲು.
4. ಹೆಣ್ಣಿನ ಮನಸಿನ ಸೂಕ್ಷ್ಮತೆ ಕುರಿತು ತಿಳಿಯಲು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.