ರಕ್ಷಾಬಂಧನ ಬಂತು ಅಂದರೆ ಅಣ್ಣ-ತಂಗಿ ಮತ್ತು ಅಕ್ಕ-ತಮ್ಮಂದಿರಿಗೆ ಎಲ್ಲಿಲ್ಲದ ಸಂಭ್ರಮ. ಪ್ರತಿವರ್ಷವೂ ರಕ್ಷಾಬಂಧನಕ್ಕೆ ಚಿಕ್ಕದೋ- ದೊಡ್ಡದೋ ಉಡುಗೊರೆಗಳನ್ನು ಕೊಡುತ್ತಲೇ ಬಂದಿದ್ದೀರಿ. ಆದರೆ ಈ ಬಾರಿಯ ಉಡುಗೊರೆ ಪ್ರವಾಹ ಸಂತ್ರಸ್ಥರಿಗೆ ನೀಡೋಣವೇ ?
ಏನಿದು? ಅಂದ್ರೆ ಇಷ್ಟು ವರ್ಷ ಕೊಟ್ಟ ಗಿಫ್ಟ್ಗಳೆಲ್ಲಾ ಉಪಯೋಗಕ್ಕೆ ಬಾರದ್ದಾಗಿದ್ದವಾ? ಅಂತಾ ಕನಫ್ಯೂಸ್ ಆಗ್ಬೇಡಿ! ಎಲ್ಲರಿಗೂ ಗೊತ್ತಿರುವ ವಿಷಯವೇ, ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಕರ್ನಾಟಕದ ಕೊಡಗು ಮತ್ತು ಕೇರಳ ರಾಜ್ಯದ ಪರಿಸ್ಥಿತಿಯ ಬಗ್ಗೆ ಮುನಿಸಿಕೊಂಡ ಮಳೆರಾಯ ರೊಚ್ಚಿಗೆದ್ದು ಸಾಕಷ್ಟು ಅನಾಹುತ, ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ, ಕಣ್ಮುಂದೆ ಕನಸಿನ ಮನೆಗಳನ್ನು ಕಳೆದುಕೊಂಡ ಅದೆಷ್ಟೋ ಮಂದಿ ಮಮ್ಮಲ ಮರುಗಿದ್ದಾರೆ. ಜಲಪ್ರವಾಹದಲ್ಲಿ ಸಾವಿರಾರು ಮಂದಿ ಕಣ್ಣೆದುರೇ ಕೊಚ್ಚಿ ಹೋಗಿದ್ದಾರೆ! ನೋಡನೋಡುತ್ತಿದ್ದಂತೆ ಗುಡ್ಡ-ಬೆಟ್ಟಗಳು ನೆಲಸಮವಾಗಿವೆ. ವರುಣದೇವ ಕೊಂಚವೂ ರೆಸ್ಟ್ ತೆಗೆದುಕೊಳ್ಳದೆ ಎರಗುತ್ತಿದ್ದಾನೆ… ಮಳೆರಾಯ ಇದೀಗ ಜವರಾಯನಾಗಿ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾನೆ.
ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಅಗತ್ಯ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಅವಶ್ಯಕತೆಯಿದ್ದು, ಸಾಕಷ್ಟು ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸೆಲೆಬ್ರಿಟಿಗಳು, ಜನಸಾಮಾನ್ಯ, ಮುಗ್ಧಮನಸ್ಸಿನ ಮಕ್ಕಳು ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಮನುಷ್ಯನನ್ನು ಕಾಪಾಡುವುದು ಮಾನವೀಯತೆಯ ಹೊರತು ಜಾತಿಗಳಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇ ಮನುಕುಲ… ಜಾತಿ-ಜಾತಿ ಅಂತಾ ಹೊಡೆದಾಡುತ್ತಿದ್ದವರು, ಇಂದು ಯಾವ ಜಾತಿ, ಪಕ್ಷ ಅಂತಾ ಕೇಳುತ್ತಿಲ್ಲ! ಎಲ್ಲರೂ ಒಟ್ಟಾಗಿ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.
ಕುಡಿಯುವ ಹನಿ ನೀರು ಕೂಡಾ ಇಂದು ಮಹತ್ವದ್ದಾಗಿದೆ, ತುತ್ತು ಅನ್ನವು ಹಸಿವನ್ನು ನೀಗಿಸುತ್ತಿದೆ. ಬಟ್ಟೆ, ಬ್ಲಾಂಕೆಟ್, ಮೆಡಿಸಿನ್ಗಳು, ಮಕ್ಕಳಿಗೆ ಮತ್ತು ವೃದ್ಧರಿಗೆ ಡೈಪರ್ಗಳು ಹೀಗೆ ಇಂದು ಯಾವೊಂದು ವಸ್ತುವು ಅಪ್ರಯೋಜಕ ಎನ್ನುವಂತಿಲ್ಲ. ಪ್ರತಿ ಸಣ್ಣ ವಸ್ತುವು ಇಂದು ಬೇರೆಯವರೊಬ್ಬರ ಅವಶ್ಯಕತೆಯನ್ನು ಪೂರೈಸುತ್ತಿದೆ.
ಹೀಗಾಗಿ ಎಲ್ಲ ಸಹೋದರ-ಸಹೋದರಿಯರು ಈ ಬಾರಿಯ ತಮ್ಮ ಉಡುಗೊರೆಯನ್ನು ಪ್ರವಾಹ ಪೀಡಿತ ಪ್ರದೇಶಗಳ ಜನರ ಅವಶ್ಯಕತೆಗಳ ಪೂರೈಕೆಗೆ ಕೊಡಬಹುದಲ್ಲ…ಅಣ್ಣ-ತಮ್ಮಂದಿರು ತಮ್ಮ ಅಕ್ಕ-ತಂಗಿಯರಿಗೆ ಕೊಡುವ ಉಡುಗೊರೆಯ ಹಣವನ್ನು ಅವರ ಹೆಸರಿನಲ್ಲಿಯೇ ಈ ನಿರಾಶ್ರಿತ ಪ್ರದೇಶಗಳಿಗೆ ಕೊಡಲು ಮುಂದಾದರೆ, ಅದೆಷ್ಟೋ ಬದುಕುಳಿದ ಅಣ್ಣ-ತಂಗಿಯರು ಮುಂದಿನ ವರ್ಷ ಸಂಭ್ರಮದಿಂದ ರಕ್ಷಾಬಂಧನವನ್ನು ಆಚರಿಸಬಹುದು!
ನಾವು ಕೊಡುವ ಹತ್ತು ರೂಪಾಯಿ, ಅವರಿಗೆ ಸಹಾಯವಾಗುತ್ತಾ? ಅಂತಾ ನೀವು ಯೋಚಿಸುತ್ತಿದ್ದೀರೇ, ಖಂಡಿತಾ ನೀವು ಕೊಡುವ ಒಂದು ರೂಪಾಯಿ ಸಹ ಅಲ್ಲಿಯ ಒಬ್ಬರ ಹಸಿವು ನೀಗಿಸಬಹುದು! ದಯವಿಟ್ಟು ಈ ಬಾರಿ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸಿ, ಅಪಾಯದಲ್ಲಿರುವ ಜನರಿಗೆ ಅರ್ಪಿಸಿ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.