ಹುಟ್ಟಿದ್ದು ಮೈಸೂರಿನ ಕಡುಬಡತನದ ಸಂಪ್ರದಾಯಸ್ಥ ಮನೆತನದಲ್ಲಿ. ಸಂಸ್ಕೃತದಲ್ಲಿ ಬಿ. ಎ. ಹಾನರ್ಸ್ ಪದವಿ ಶಿಕ್ಷಣದನಂತರ ಇಡೀ ಜೀವನವನ್ನು ಸಮಾಜಕಾರ್ಯಕ್ಕೆ ಸಮರ್ಪಿಸಿಕೊಂಡ ಸಿರಿವಂತಿಕೆ. ಸಾಮಾಜಿಕ ಕೆಲಸ ಮಾಡುವುದರೊಂದಿಗೆ ಪ್ರತಿದಿನ ಮನೆಯ ಸಂಪ್ರದಾಯದಂತೆ ವೈಯಕ್ತಿಕ ಅನುಷ್ಠಾನ. ಮರಣಾನಂತರ ತನ್ನ ದೇಹವು ಬೂದಿಯಾಗದೆ, ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಉಪಯೋಗವಾಗಲಿ ಎಂದು ಸಂಪ್ರದಾಯ ಮೀರಿ ದೇಹದಾನ. 27 ವರ್ಷಗಳ ಕಾಲ ಕ್ಯಾನ್ಸರ್ ಕಾಯಿಲೆಯ ಒಡನಾಟ. ಆದರೆ ಸಾವಿಗೆ ಅಂಜದೆ, ಕಾಯಿಲೆಯ ನೋವಿಗೆ ನರಳದೆ, ಕ್ಯಾನ್ಸರ್ ಪೀಡಿತರಿಗೆ ಸಾಂತ್ವನ ನೀಡಿ, ನೆಮ್ಮದಿಯ ಬದುಕಿಗೆ ಧೈರ್ಯ ತುಂಬಿದ ಮೃತ್ಯುಂಜಯ. ಅವರ ದೂರದೃಷ್ಟಿಯ ಕಲ್ಪನೆಯ ಅನೇಕ ಪ್ರಕಲ್ಪಗಳು ಯಶಸ್ವಿಯಾಗಿ ಜನಮನ್ನಣೆ ಗಳಿಸಿದರೂ ಅದರ ಪ್ರೇರಕಶಕ್ತಿಯಾಗಿ ಪ್ರಚಾರ, ಪ್ರಸಿದ್ಧಿ ಬಯಸದೆ ಎಲೆಮರೆಯ ಕಾಯಿಯಂತೆ ಮುನ್ನಡೆಸಿದ ಸಾಧನಾಜೀವಿ. ಇಂತಹ ಸಮರ್ಪಿತ ಸಾರ್ಥಕ ಬದುಕಿನ ಮೌನಸಾಧಕರೇ ಸ್ವರ್ಗೀಯ ನ. ಕೃಷ್ಣಪ್ಪನವರು.
ಉಡುಪಿಯವರಿಗಂತೂ, 1969 ಡಿಸೆಂಬರ್ನಲ್ಲಿ ವಿಶ್ವಹಿಂದು ಪರಿಷತ್ನ ಸಮ್ಮೇಳನದಲ್ಲಿ ಅವರ ಪ್ರಮುಖ ಪಾತ್ರ ಚಿರಪರಿಚಿತ. ಸಮ್ಮೇಳನದ ನಿರೀಕ್ಷೆ ಇದ್ದದ್ದು 6 ಸಾವಿರ ಸಂಖ್ಯೆ. ಆದರೆ ಸಮ್ಮೇಳನದ ದಿನ ಸಮೀಪಿಸುತ್ತಿದ್ದಂತೆ ಬಂದ ವರದಿ 15 ಸಾವಿರ, ನಿರೀಕ್ಷೆಯ ಎರಡೂವರೆ ಪಟ್ಟು. ಆಗ ಉಡುಪಿಯ ಒಟ್ಟು ಜನಸಂಖ್ಯೆ 30 ಸಾವಿರದ ಆಸುಪಾಸು, ಊರಿನ ಅರ್ಧ ಜನಸಂಖ್ಯೆಯಷ್ಟು ಜನ ಹೊರಗಿನಿಂದ ಬರುವವರು. ಯೋಚಿಸಿದ ವ್ಯವಸ್ಥೆಗಳೆಲ್ಲ ಕುಸಿದು ಬೀಳುವ ಭೀತಿ. ಹಿಂದಿನ ದಿನ ಧ್ವನಿವರ್ಧಕದಲ್ಲಿ ಊರಿನ ಬೀದಿ ಬೀದಿಗಳಲ್ಲಿ – “ಹೊರಗಿನಿಂದ ಬರುವ ಅತಿಥಿಗಳಿಗೆ ನಿಮ್ಮ ಮನೆಯ ಬಾಗಿಲು ತೆರೆದು ಆತಿಥ್ಯ ನೀಡಿ” ಎಂಬ ವಿನಂತಿ. ಪ್ರತಿ ಮನೆಯವರೂ ವಿನಂತಿಗನುಗುಣವಾಗಿ ಬಂದಂತಹ ಅತಿಥಿಗಳನ್ನು ಬರಮಾಡಿಕೊಂಡರು. ಈ ಅದ್ಭುತ ಕಲ್ಪನೆ, ಅದರ ಯೋಜನೆ, ಕಾರ್ಯಾನುಷ್ಠಾದ ರೂವಾರಿ ನ. ಕೃಷ್ಣಪ್ಪನವರು. ಅತಿಥಿ ದೇವೋ ಭವ ಎಂಬ ನಮ್ಮ ಜೀವನಮೌಲ್ಯ, ಜನಸಾಮಾನ್ರರ ಬಗ್ಗೆ ಅವರಿಗಿದ್ದ ಅಮಿತ ವಿಶ್ವಾಸದ ಕಾರಣದಿಂದಾಗಿಯೇ ಇದರ ಕಲ್ಪನೆ, ಸಾಧನೆ ಸಾಧ್ಯವಾಯಿತು.
ಇಂದಿನ ಶಿಕ್ಷಣ ಪದ್ಧತಿಯ ಕೊರತೆಗಳು, ಇತಿಮಿತಿಗಳ ಬಗ್ಗೆ ವಿಮರ್ಶೆ, ಟೀಕೆ ಬೇಕಾದಷ್ಟು ಕೇಳಿದ್ದೇವೆ. ಆದರೆ ಪ್ರತ್ಯಕ್ಷ ಪರಿಹಾರ? ಹರಿಹರಪುರದಲ್ಲಿ ಹುಡುಗರ ಪ್ರಬೋಧಿನಿ ಗುರುಕುಲ, ವಿಟ್ಲ ಸಮೀಪದ ಮೂರ್ಕಜೆಯಲ್ಲಿ ಹುಡುಗಿಯರ ಮೈತ್ರೇಯಿ ಗುರುಕುಲ ಪ್ರಾಚೀನ ಗುರುಕುಲ ಪದ್ಧತಿ ಮತ್ತು ಆಧುನಿಕ ಶಿಕ್ಷಣಗಳ ಸಮನ್ವಯದ ಯಶಸ್ವೀ ಪ್ರಯೋಗಗಳು. ಇವೆರಡೂ ಗುರುಕುಲಗಳು ಕಳೆದ ಸುಮಾರು 24 ವರ್ಷಗಳಿಂದ ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಚನ್ನೇನಹಳ್ಳಿಯ ವೇದವಿಜ್ಞಾನ ಗುರುಕುಲದಲ್ಲಿ ಉನ್ನತ/ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆ ಇದೆ. ನ. ಕೃಷ್ಣಪ್ಪನವರು 2015ರಲ್ಲಿ ಇಹಲೋಕಯಾತ್ರೆ ಪೂರೈಸುವ ಕೆಲಕಾಲ ಮುಂಚೆ ಶೃಂಗೇರಿಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ವೇದವಿಜ್ಞಾನ ಗುರುಕುಲಕ್ಕೆ ಭೇಟಿನೀಡಿ ಆಶೀರ್ವದಿಸಿದರು, ಈ ಪ್ರಕಲ್ಪಗಳನ್ನು ಹರಸಿದರು. ತೀವ್ರ ಅನಾರೋಗ್ಯದಲ್ಲಿದ್ದರೂ, ನೋವು, ಕಷ್ಟ ಕಡೆಗಣಿಸಿ ಸ್ವತಃ ಭಾಗವಹಿಸಿ ಶ್ರೀಗಳವರಿಂದ ಮಂತ್ರಾಕ್ಷತೆ ಪಡೆದದ್ದು ಅವರಲ್ಲಿ ಧನ್ಯತಾಭಾವ ಮೂಡಿಸಿತ್ತು.
ಭಾರತದ ಬಗ್ಗೆ ಭಕ್ತಿಭಾವ ಪ್ರೇರೇಪಿಸುವ ಮೂರು ಗಂಟೆಗಳ ಅತ್ಯಂತ ಜನಪ್ರಿಯ ಕಾರ್ಯಕ್ರಮ “ಭಾರತದರ್ಶನ”. ಸ್ವರ್ಗೀಯ ವಿದ್ಯಾನಂದ ಶೆಣೈಯವರು ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಭಾರತದರ್ಶನ ಕಾರ್ಯಕ್ರಮಗಳನ್ನು ನಡೆಸಿದವರು. ಭಾರತದರ್ಶನದ ೧೦೦೦ದ ಕಾರ್ಯಕ್ರಮಲ್ಲಿ ನ. ಕೃಷ್ಣಪ್ಪನವರ ಉಪಸ್ಥಿತಿಯಲ್ಲಿ ವಿದ್ಯಾನಂದ ಶೆಣೈಯವರಿಗೆ ಅಭಿನಂದನಾ ಕಾರ್ಯಕ್ರಮ. ಅಭಿನಂದನೆಗೆ ಉತ್ತರಿಸುತ್ತಾ ವಿದ್ಯಾನಂದ ಶೆಣೈಯವರು ಹೇಳಿದ ಕಥೆ ಮಾರ್ಮಿಕವಾಗಿತ್ತು. ದೋಣಿಯಲ್ಲಿ ಹೊಳೆ ದಾಟುವಾಗ ಒಬ್ಬ ಬಾಲಕ ಆಯ ತಪ್ಪಿ ನೀರಿಗೆ ಬಿದ್ದ. ದೋಣಿಯಲ್ಲದ್ದವರಲ್ಲಿ ಒಬ್ಬ ಆ ಹುಡುಗನನ್ನು ರಕ್ಷಿಸಿದ. ಊರಿನವರು ಆತನನ್ನು ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರಿಸಿತ್ತಾ ಆತನೆಂದ – “ನಾನು ಹುಡುಗನನ್ನು ಕಾಪಾಡಿದ್ದೇನೋ ಸರಿ; ಆದರೆ ನನ್ನನ್ನು ದೋಣಿಯಿಂದ ದೂಡಿದ್ದು ಯಾರೆಂದು ತಿಳಿಯಲಿಲ್ಲ”. ವಿದ್ಯಾನಂದ ಶೆಣೈಯವರಲ್ಲ್ಲಿದ್ದ ಅಧ್ಯಯನಶೀಲತೆ, ವಾಕ್ಚಾತುರ್ಯ, ಶ್ರದ್ಧೆ ಇವುಗಳನ್ನು ಗಮನಿಸಿ ಅವರಿಗೆ ಪ್ರೇರಣೆ, ಮಾರ್ಗದರ್ಶನ ನೀಡಿ ಒತ್ತಾಸೆಯಾಗಿ ನಿಂತಿದ್ದವರು ನ. ಕೃಷ್ಣಪ್ಪನವರು. ವಿದ್ಯಾನಂದ ಶೆಣೈಯವರು ಇದರ ಉಲ್ಲೇಖ ಮಾಡುವವರೆಗೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ.
ನಮ್ಮ ಸಾಮಾಜಿಕ ರಚನೆಯ ಅಡಿಪಾಯ ಕೌಟುಂಬಿಕ ವ್ಯವಸ್ಥೆ. ಧರ್ಮಸಂಸ್ಕೃತಿಗಳ ಬುನಾದಿ ಶಿಕ್ಷಣದ ಕೇಂದ್ರವೂ ಮನೆಯೇ. ಕಾಲಾಂತರದಲ್ಲಿ ಈ ವ್ಯವಸ್ಥೆಯಲ್ಲಿ ಶಿಥಿಲತೆಯ ಕಾರಣದಿಂದ ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ. ವಿಕೃತಿಯೇ ಸಂಸ್ಕೃತಿ ಎಂಬ ಪಾಶ್ಚಾತ್ಯ ಅಂಧಾನುಕರಣೆಯ ಗೀಳು ವ್ಯಾಪಕವಾಗುತ್ತಿದೆ. ಸಂಬಂಧಗಳು ಸೂಕ್ಷ್ಮವಾಗುತ್ತಿವೆ. ಗುಣ-ಮೌಲ್ಯಗಳ ಸ್ಥಾನವನ್ನು ಹಣ-ಪ್ರತಿಷ್ಠೆಗಳು ವ್ಯಾಪಿಸುತ್ತಿವೆ. ವೃದ್ಧಾಶ್ರಮ, ವಿವಾಹ ವಿಚ್ಛೇದನಗಳಂತಹ ವಿಪರೀತಗಳು ಸಹಜವೆನ್ನುವ ಸ್ಥಿತಿಯತ್ತ ಸಾಗುತ್ತಿದ್ದೇವೆ. ಈ ವಿಕೃತಿಗಳ ಸಹಜ ಪರಿಹಾರಕ್ಕೆ ನ. ಕೃಷ್ಣಪ್ಪನವರು ಕಂಡುಕೊಂಡ ಸೂತ್ರ ಹಿಂದು ಮನೆ, ಕುಟುಂಬ ಪ್ರಬೋಧನ, ಕುಟುಂಬ ಮಿಲನಗಳು, ದಂಪತಿಗಳ ಸಮಾವೇಶ. ಇದಕ್ಕ ಪೂರಕವಾಗಿ ಸಮಾನ ಮನಸ್ಕರನ್ನು ಸೇರಿಸಿ, ಚರ್ಚಿಸಿ ಸಿದ್ಧಪಡಿಸಿದ ಮಾರ್ಗದರ್ಶಿ ಪುಸ್ತಕ “ಮನೆಯೇ ಮಾಂಗಲ್ಯ”. ಕರ್ನಾಟಕದಲ್ಲಿ ಅವರು ಮಾಡಿದ ಈ ಪ್ರಯೋಗಗಳು ಯಶಸ್ವಿಯಾಗಿ ಇಂದು ದೇಶದಾದ್ಯಂತ ವ್ಯಾಪಿಸುತ್ತಿರುವುದು ಅವರ ದೂರದರ್ಶಿತ್ವಕ್ಕೆ ಹಿಡಿದ ಕೈಗನ್ನಡಿ. ಸಂಸ್ಕೃತದ ಪ್ರಸಾರದ ಬಗ್ಗೆಯೂ ಅವರ ಪ್ರೇರಣೆ ಉಲ್ಲೇಖನೀಯ.
ತೀರ್ಥಹಳ್ಳಿಯ ಪುರುಷೋತ್ತಮರಾಯರ ಸಾವಯವ ಕೃಷಿಯ ಸಾಧನೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ನ. ಕೃಷ್ಣಪ್ಪನವರು. ಅವರು ಹುಟ್ಟುಹಾಕಿದ ಕೃಷಿಪ್ರಯೋಗ ಪರಿವಾರ ಸಾವಯವ ಕೃಷಿಯ ಪ್ರಯೋಗ, ಪ್ರಚಾರಗಳನ್ನು ಮುಂದುವರಿಸುತ್ತಿದೆ. ವೈಚಾರಿಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅಸೀಮಾ ಮಾಸಿಕ ಪತ್ರಿಕೆಗಳು ನ. ಕೃಷ್ಣಪ್ಪನವರ ಕಲ್ಪನೆಯ ಕೂಸುಗಳು.
1982ರ ಹೊತ್ತಿಗೆ ಅನಾರೋಗ್ಯ ಪೀಡಿಸಿದಾಗ ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಕ್ಯಾನ್ಸರ್ ಲಕ್ಷಣಗಳು ಗೋಚರವಾಗಿತ್ತು. ವೈದ್ಯರು ಹೆಚ್ಚೆಂದರೆ 5-6 ವರ್ಷ ಬದುಕಬಹುದು ಎಂದಿದ್ದರು. ಆದರೆ ಕ್ಯಾನ್ಸರ್ ರೋಗದೊಂದಿಗೆ ಸೆಣಸಿ 27 ವರ್ಷ ಬದುಕಿದ್ದು ಅವರ ಆತ್ಮಸ್ಥೈರ್ಯ, ಸಂಕಲ್ಪ ಶಕ್ತಿಗಳಿಂದ. ತಾನು ರೋಗದೊಂದಿಗೆ ಸೆಣಸಿ ಬದುಕಿದ್ದು ಮಾತ್ರವಲ್ಲ, ತನ್ನ ಗಮನಕ್ಕೆ ಬಂದ ಇತರ ಪರಿಚಿತ ಕ್ಯಾನ್ಸರ್ ರೋಗಿಗಳನ್ನು ಭೇಟಿಮಾಡಿ ಅವರಲ್ಲಿ ಧೈರ್ಯ ತುಂಬಿ, ಸಾಂತ್ವನ ಹೇಳಿ, ತಾನು ಪ್ರಯೋಗ ಮಾಡಿದ ಚಿಕಿತ್ಸೆಗಳನ್ನೂ ತಿಳಿಸುತ್ತಿದ್ದ ಕರುಣಾಮೂರ್ತಿ ನ. ಕೃಷ್ಣಪ್ಪನವರು.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಘಕಾರ್ಯಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ನ. ಕೃಷ್ಣಪ್ಪನವರು ಪ್ರಮುಖರು. ಸಂಘ ಮತ್ತು ಸಂಘಪ್ರೇರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಕೃಷ್ಣಪ್ಪನವರು ತಮ್ಮ ಮನೆಯ ಹಿರಿಯರಂತೆ. ಅವರು ನಮ್ಮ ಮನೆಗೆ ತುಂಬಾ ಬೇಕಾದವರು ಎಂಬ ಆತ್ಮೀಯತೆಯ ಅನುಭವ ಎಲ್ಲಾ ಮನೆಗಳವರದ್ದು. ಏನೇ ಸಮಸೆಗಳಿದ್ದರೂ ಕೃಷ್ಣಪ್ಪನವರಲ್ಲಿ ಹೇಳಿಕೊಂಡರೆ ಅದಕ್ಕೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ಅವರೊಂದಿಗೆ ಒಡನಾಡಿದವರಿಗೆ ಇತ್ತು. ಹೇಳಿದ್ದನ್ನು ತಾಳ್ಮೆಯಿಂದ ಕೇಳಿ ಸೂಕ್ತ ಪರಿಹಾರ ಸೂಚಿಸಿ ಅವರನ್ನು ಸಮಾಧಾನಪಡಿಸುವ ಹಿರಿತನದ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದರು. “ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ” ಎಂಬಂತೆ ಸಂಪ್ರದಾಯ ನಿಷ್ಠ ಆಚರಣೆಯವರು, ಆಧುನಿಕತೆಯನ್ನೂ ಸ್ವಾಗತಿಸಿದವರು, ಅವೆರಡರ ಸಮನ್ವಯವನ್ನು ಸಾಧಿಸಿದವರು. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಎಂಬಂತೆ ಕಾರ್ಯಕರ್ತ ಸಹಕಾರಿಗಳನ್ನು ಬೆಳೆಸುವಲ್ಲಿ ಶಿಸ್ತಿನ ಸಿಪಾಯಿಯೂ ಹೌದು, ಪ್ರೀತಿ ಸ್ನೇಹಗಳ ಮೂರ್ತಿಯೂ ಹೌದು. ತಾನು ನಿಮಿತ್ತಮಾತ್ರ ಎಂಬ ಅತ್ಯಂತ ವಿನೀತ ಸಮರ್ಪಣಾ ಭಾವದ ಪ್ರತಿಮೂರ್ತಿ ನ. ಕೃಷ್ಣಪ್ಪನವರು. 83 ವರ್ಷಗಳ (1932-2015) ತಮ್ಮ ಜೀವಿತಾವಧಿಯಲ್ಲಿ, 60 ವರ್ಷಗಳಷ್ಟು ದೀರ್ಘಕಾಲ ಸಮಾಜ ಸಮರ್ಪಿತ ಪ್ರಚಾರಕರಾಗಿ ಬದುಕಿದರು. ಹಂತಹಂತವಾಗಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ದೇಶವ್ಯಾಪಿ ಪ್ರವಾಸಮಾಡಿ ಮಾರ್ಗದಶನ ಮಾಡಿದವರು. ನ. ಕೃಷ್ಣಪ್ಪನವರ ಪ್ರತಿಭೆ, ಕಲ್ಪನೆ, ಕರ್ತೃತ್ವ ಬಹುಮುಖಿ. ತಾನು ಹಿನ್ನೆಲೆಯಲ್ಲಿದ್ದು ಸಹಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರವರ ಯೋಗ್ಯತೆ ಸಾಮರ್ಥೈ ಅಳೆದು ಅದರಲ್ಲೇ ಅವರನ್ನು ತೊಡಗಿಸಿ ಕಾರ್ಯಸಾಧನೆ ಮಾಡುವ ವಿಶಿಷ್ಟ ಜಾಯಮಾನ.
ಅವರ ಜೀವನ ಸಾಮಾಜಿಕ ಕಾರ್ಯಕರ್ತರಿಗೆ, ಸಾಧಕರಿಗೆ ಪ್ರೇರಣಾ ಸ್ರೋತ. ಇದು ಪುಸ್ತಕರೂಪದಲ್ಲಿ ಪ್ರಕಟವಾಗಬೇಕೆಂದು ಎಲ್ಲರ ಇಚ್ಛೆಯಾಗಿತ್ತು. ಶ್ರೀ ಚಂದ್ರಶೇಖರ ಭಂಡಾರಿಯವರು ನ. ಕೃಷ್ಣಪ್ಪನವರ ಗರಡಿಯಲ್ಲಿ ಪಳಗಿದವರು, ಅವರ ಸಹಕಾರಿಗಳು, ಅವರನ್ನು ಹತ್ತಿರದಿಂದ ಕಂಡವರು, ಲೇಖನದಲ್ಲೂ ಸಿದ್ಧಹಸ್ತರು. ಜೀವನದುದ್ದಕ್ಕೂ ನ. ಕೃಷ್ಣಪ್ಪನವರು ತಮ್ಮ ಬಗ್ಗೆ ಹೇಳಿಕೊಂಡದ್ದು ಬಹಳ ಕಡಿಮೆ. ಹಾಗಾಗಿ ಅವರ ಬಗ್ಗೆ ಸಮಗ್ರವಾಗಿ ತಿಳಿಯಲು ನ. ಕೃಷ್ಣಪ್ಪನವರ ಸಹಕಾರಿಗಳು, ಒಡನಾಡಿಗಳು, ಅವರಿಂದ ಪ್ರೇರಣೆ ಪಡೆದವರನ್ನು ಸಂಪರ್ಕಿಸಿ, ಮಾಹಿತಿಗಳನ್ನು ಕಲೆಹಾಕಿ ಶ್ರೀ ಚಂದ್ರಶೇಖರ ಭಂಡಾರಿಯವರು ತಮ್ಮ ಲೇಖನಿಯಿಂದ ಇದೀಗ ಪುಸ್ತಕರೂಪದಲ್ಲಿ ಸಿದ್ಧಪಡಿಸಿದ್ದಾರೆ. ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಅವರ ಜೀವನವನ್ನು ಯಥಾವತ್ ಶಬ್ದರೂಪದಲ್ಲಿ ಹಿಡಿದಿಡುವ ಪ್ರಯತ್ನದ ಫಲವೇ “ನಿರ್ಮಾಲ್ಯ”. ಜೀವನ ಸುಮವನ್ನು ಪರಿಪೂರ್ಣವಾಗಿ ಅರಳಿಸಿ, ತನ್ನೆಲ್ಲವನ್ನೂ ತಾಯಿಭಾರತಿಗೆ ಸಮರ್ಪಿಸಿ, ಧನ್ಯತೆ ಪಡೆದ ನ. ಕೃಷ್ಣಪ್ಪನವರ ಸಾರ್ಥಕ ಬದುಕು ದೇವರ ಅಲಂಕಾರಕ್ಕೆ ದಿನವಿಡೀ ಬಳಕೆಯಾಗಿ ಮರುದಿನ ವಿಸರ್ಜನೆಯಾಗು “ನಿರ್ಮಾಲ್ಯ”ವೇ ಸರಿ. ಇಂದು, 22 ಆಗಸ್ಟ್ 2018, ಬುಧವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಸಂಘನಿಕೇತನದಲ್ಲಿ ಡಾ. ವಿನಯ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಈ ಪುಸ್ತಕದ ಬಿಡುಗಡೆಯಾಗಲಿದೆ. ನ. ಕೃಷ್ಣಪ್ಪನವರ ಅಭಿಮಾನಿಗಳು, ಸಹಕಾರಿಗಳು, ಆಸಕ್ತರು ಒಂದುಗೂಡಿ ಅವರ ಆಶಯವನ್ನು ಮುಂದುವರಿಸಲು ಪ್ರೇರಣೆ ಪಡೆಯಲು ಇದೊಂದು ಸುವರ್ಣಾವಕಾಶ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.