ಮಂಗಳೂರು: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಿ ಸಿದ್ಧತೆ ನಡೆಸಿರುವ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಆರ್ ರಾಜೇಂದ್ರ ಅವರು, ಹಂತ ಹಂತವಾಗಿ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ಪೂರಕ ಯೋಜನೆಗಳನ್ನು ರೂಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಜ್ಞರ ತಂಡವೊಂದನ್ನು ರಚನೆ ಮಾಡಲಾಗಿದೆ. ಜೊತೆಗೆ ʼಮೊಬೈಲ್ ಪರಿವೀಕ್ಷಕʼ ಎಂಬ ಆ್ಯಪ್ ಅನ್ನು ಸಹ ಸಿದ್ಧ ಮಾಡಲಾಗುತ್ತಿದೆ. ಆ ಮೂಲಕ ಅಕ್ರಮ ಮರಳುಗಾರಿಕೆಯ ಜೊತೆಗೆ ಕೆಂಪು ಕಲ್ಲಿನ ಗಣಿಗಾರಿಕೆಗೂ ಬ್ರೇಕ್ ಹಾಕುವುದಕ್ಕೆ ಡಿಸಿ ತಂತ್ರ ರೂಪಿಸುತ್ತಿದ್ದಾರೆ.
ಮೊಬೈಲ್ ಪರಿವೀಕ್ಷಕ ಮೂಲಕ ಜಿಲ್ಲಾಕೇಂದ್ರದಿಂದಲೇ ವ್ಯವಸ್ಥೆಗಳ ಮೇಲೆ ಕಣ್ಣಿಡುವ ನಿಟ್ಟಿನಲ್ಲಿ, ಅಕ್ರಮಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಂಟ್ರೋಲ್ ರೂಂ ಮೂಲಕವೇ ಮರಳುಗಾರಿಕೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳ ಮೇಲೆಯೂ ನಿಗಾ ಇರಿಸುವ ನಿಟ್ಟಿನಲ್ಲಿ ಈ ಆ್ಯಪ್ ಅನ್ನು ತಯಾರು ಮಾಡಲಾಗುತ್ತಿದೆ. ಮರಳುಗಾರಿಕೆಯ ಧಕ್ಕೆಯಲ್ಲಿ ಉತ್ತಮ ದರ್ಜೆಯ ಕೆಮರಾ ಅಳವಡಿಸುವುದು, ಮರಳು ಸಾಗಾಟ ಮಾಡುವ ಲಾರಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಮಾಡುವುದು, ಪ್ರತಿ ನಿತ್ಯ ನದಿಯಿಂದ ಎಷ್ಟು ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ, ಎಷ್ಟು ಲೋಡ್ ಮರಳು ಸಾಗಾಟ ನಡೆಯುತ್ತಿದೆ, ಲಾರಿ ಎಲ್ಲಿಂದ ಎಲ್ಲಿಗೆ ಮರಳು ಸಾಗಾಟ ಮಾಡುತ್ತಿದೆ ಮೊದಲಾದವುಗಳ ಬಗ್ಗೆ ಕಂಟ್ರೋಲ್ ರೂಂ ಮೂಲಕವೇ ಈ ಆ್ಯಪ್ ಮೂಲಕ ನಿಗಾ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರೂ ಸಹ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಮರಳುಗಾರಿಕೆಯ ಬಗ್ಗೆ ನಿಗಾ, ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ಸಿ-ವಿಲೇಜ್ ಮಾದರಿಯಲ್ಲಿ ಅಕ್ರಮ ಮರಳುಗಾರಿಕೆಯ ವಿರುದ್ಧ ಕಾರ್ಯಾಚರಣೆ ನಡೆಯಲಿದೆ. ಜಿಪಿಎಸ್ ಹೊಂದಿರದ ಲಾರಿಗಳಲ್ಲಿ ಮರಳು ಸಾಗಾಟ ನಡೆಯುವುದು ಕಂಡು ಬಂದರೆ ಆ ವಾಹನದ ಸಂಖ್ಯೆ, ಫೊಟೋ ವನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಿದರೆ ಈ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಗಡಿ ದಾಟಿ ಮರಳು ಸಾಗಾಟ ನಡೆಸಿದರೂ ಈ ವ್ಯವಸ್ಥೆಯ ಮೂಲಕ ಪತ್ತೆ ಹಚ್ಚಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾಹಿತಿ ನೀಡಿದವರ ವಿವರಗಳನ್ನು ಬಹಿರಂಗ ಮಾಡಲಾಗುವುದಿಲ್ಲ. ಇಂತಹ ಅಕ್ರಮಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.