ತಿರುವನಂತಪುರಂ: ಸುರಿದ ಮಹಾಮಳೆ ಕೇರಳವನ್ನು ಅಕ್ಷರಶಃ ತತ್ತರಿಸಿ ಹೋಗುವಂತೆ ಮಾಡಿದೆ, ಮನೆ ಮಠ ಕಳೆದುಕೊಂಡ ಅನೇಕ ಮಂದಿಯ ಬದುಕು ಈಗ ಬೀದಿಗೆ ಬಿದ್ದಿದೆ. ಸರ್ಕಾರ, ಜನರು ನೀಡುವ ನೆರವೇ ಅವರಿಗೀಗ ಬದುಕಲು ಇರುವ ಆಸರೆಯಾಗಿದೆ.
ಪ್ರಕೃತಿ ಮುನಿದರೆ ತೃಣ ಸಮಾನನಾದ ಮನುಸ್ಯನಿಗೆ ಅದನ್ನು ಎದುರಿಸಲು ಸಾಧ್ಯವಿಲ್ಲ ಎಂಬುದು ಕೇರಳದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನೋಡ ನೋಡುತ್ತಿದ್ದಂತೆ ಮನುಷ್ಯ ನಿರ್ಮಿತವೆಲ್ಲವೂ ಕೊಚ್ಚಿ ಹೋಗಿವೆ. ಜನರು ಅತಂತ್ರರಾಗಿದ್ದಾರೆ.
ಕೇರಳಿಗರ ಈ ಸಂಕಷ್ಟಕ್ಕೆ ಹವಲಾರು ಮಂದಿ ಸ್ಪಂದನೆ ನೀಡಿದ್ದಾರೆ. ಅದರಲ್ಲಿ ಕೆಲವರು ನಾನಾ ಕಾರಣಕ್ಕಾಗಿ ಹೆಚ್ಚು ಗಮನವನ್ನು ಸೆಳೆದಿದ್ದಾರೆ.
ಇತ್ತೀಚಿಗಷ್ಟೇ ನಿಫಾ ವೈರಸ್ಗೆ ಬಲಿಯಾದ ನರ್ಸ್ ಲಿನಿ ಪುತ್ತುಸ್ಸೆರಿಯವರ ಪತಿ ಸಜೀಸ್ ಕೇರಳ ನೆರೆ ಸಂತ್ರಸ್ಥರಿಗಾಗಿ ತಮ್ಮ ಮೊತ್ತ ಮೊದಲ ವೇತನವನ್ನು ದಾನ ಮಾಡಿದ್ದಾರೆ. ಪತ್ನಿಯ ಮರಣದ ಬಳಿಕ ಅವರಿಗೆ ಕ್ಲರ್ಕ್ ಆಗಿ ಆರೋಗ್ಯ ಸಂಸ್ಥೆಯಲ್ಲಿ ಸರ್ಕಾರಿ ಉದ್ಯೋಗವನ್ನು ನೀಡಲಾಗಿತ್ತು. ಅದರ ಮೊದಲ ವೇತನವನ್ನು ಸಂತ್ರಸ್ಥರಿಗೆ ನೀಡಿ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳ ಸಿಎಂ ವಿಪತ್ತು ಪರಿಹಾರ ನಿಧಿಗೆ ರೂ.2 ಕೋಟಿಗಳನ್ನು ದಾನ ಮಾಡಿದೆ. ಅಲ್ಲದೇ ಕೇರಳದಲ್ಲಿ ಬ್ಯಾಂಕಿಂಗ್ ಸೇವೆಗೆ ಶುಲ್ಕ ವಿಧಿಸದಿರಲು ನಿರ್ಧರಿಸಿದೆ.
‘ದೇಶಾಭಿಮಾನಿ’ ಪತ್ರಿಕೆಯ ಎಡಿಟರ್ ಮನೋಜ್ ಎಂಬುವವರು, ತಮ್ಮ ಮಗಳ ನಿಶ್ಚಿತಾರ್ಥವನ್ನು ರದ್ದುಗೊಳಿಸಿ ಅದರ ಹಣವನ್ನು ನೆರೆ ಪೀಡಿತರಿಗೆ ಒದಗಿಸಿದ್ದಾರೆ.
ಇನ್ನು ಮರ್ಸಿಡಿಸ್ ಬೆಂಝ್ನ ಭಾರತೀಯ ಘಟಕ ಕೇರಳ ಸಿಎಂ ಪರಿಹಾರ ನಿಧಿಗೆ ರೂ.30 ಲಕ್ಷ ನೆರವು ನೀಡಿದೆ.
ದೆಹಲಿ ಸರ್ಕಾರ 10 ಕೋಟಿ ರೂಪಾಯಿ, ಕರ್ನಾಟಕ ಸರ್ಕಾರ ರೂ.10 ಕೋಟಿಗಳನ್ನು ಕೇರಳಕ್ಕೆ ನೀಡಿದೆ.
ನಟರಾದ ಕಮಲ್ ಹಾಸನ್, ಪ್ರಭಾಸ್, ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಇತರರು ತಮ್ಮಿಂದಾದಷ್ಟು ಹಣಕಾಸು ನೆರವನ್ನು ಕೇರಳಕ್ಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.