ಹೇಳಬೇಕೆಂದರೆ, ಇವತ್ತಿನ ಸ್ಥಿತಿ ಅವತ್ತೂ ಇತ್ತು! 2013 ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೇಳ ಹೆಸರಿಲ್ಲದಂತೆ ಸೋತು ಹೋಗಿತ್ತು! ಒಂದಷ್ಟು ಅತಿಯಾದ ಆತ್ಮವಿಶ್ವಾಸ ಅವತ್ತು ಬಿಜೆಪಿಯ ಜಯದ ಮಗ್ಗುಲು ಮಗಚುವಂತೆ ಮಾಡಿತ್ತು! ಕಾರ್ಯಕರ್ತರಿಗೆ ದಿಗ್ಭ್ರಮೆ! ನಿಸ್ವಾರ್ಥತೆಯಿಂದ ಕೆಲಸ ಮಾಡಿದ್ದು ಭಾರತವೊಂದು ಅಭಿವೃದ್ಧಿ ಹೊಂದಲೆಂಬಷ್ಟೇ ಆಶಯವೆಂಬಂತೆ!
ದುರಾದೃಷ್ಟ ಬಿಡಿ! ಅವತ್ತೂ ಇದೇ ಸ್ಥಿತಿಯೇ! ಆದರೆ ಅಧಿಕಾರದ ಚುಕ್ಕಾಣಿಯನ್ನು 2013 ರಲ್ಲಿ ಕಾಂಗ್ರೆಸ್ ಹಿಡಿದಿದ್ದೇ, ಬಿಜಪಿಯ ಒಂದಷ್ಟು ಮುತ್ಸದ್ದಿಗಳು 2014 ರ ಲೋಕಸಭಾ ಚುನಾವಣೆಯ ಪ್ರಸ್ತಾಪ ನೀಡಿದರು! ಮತ್ತೆ ಕಾರ್ಯಕರ್ತರಿಗೆ ತಲೆ ತುಂಬಾ ಕೆಲಸ! ಯಶಸ್ಸು ವಿಧಾನ ಸಭಾ ಚುನಾವಣೆಯಲ್ಲಾಗದಿದ್ದರೇನಂತೆ?! ಲೋಕಸಭಾ ಚುನಾವಣೆ ಕಾದಿದೆ ಎಂಬುದೊಂದು ಅರಿವು ಸದ್ದಿಲ್ಲದೇ ಆವರಿಸತೊಡಗಿತು! ಅನುಭವಿಸಿದ ಸೋಲಿಗೆ ಪ್ರತೀಕಾರ ಸಿದ್ಧವಾಯಿತು! ಎಲ್ಲೆಲ್ಲೂ ಮತ್ತೆ ಕೂಗೊಂದು ಕೇಳಿಸತೊಡಗಿತು! “ಬನ್ನಿ, ಮತ್ತೆ ಕೆಲಸ ಮಾಡೋಣ”!
ಕೇಂದ್ರದಲ್ಲಿ ಸತತ ಹತ್ತು ವರುಷಗಳ ಕಾಲ ಕುಂತು ಇನ್ನೇನು ಭಾರತದ ಆರ್ಥಿಕ ಪರಿಸ್ಥಿತಿ ಮಕಾಡೆ ಮಲಗುತ್ತದೆ ಎನ್ನುವಷ್ಟರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ನ ಮುಖ್ಯಮಂತ್ರಿಯಾಗಿ ಸದ್ದು ಮಾಡಿದ್ದ ಶ್ರೀ ನರೇಂದ್ರ ಮೋದಿ ಆಯ್ಕೆಯಾದರು! ಕೇಂದ್ರದಲ್ಲಿ ಆಡಳಿತ ಪಕ್ಷ ನಡುಗಿ ಹೋಯಿತು! ಇತ್ತ ಕರ್ನಾಟಕದಲ್ಲೂ! ಯಾಕೆ ಗೊತ್ತಾ?! ಅದೆಲ್ಲಿಂದಲೋ ಒಂದಷ್ಟು ತರುಣ ಗುಂಪು ಸೇರಿತು! ತಲೆಯೊಳಗೆ ಮಿಂಚಿನ ಸಂಚಾರ! ಮೋದಿಯನ್ನು ಪ್ರಧಾನಿಯಾಗಿಸಲೇ ಬೇಕು ಎಂದು ಕಂಕಣ ಕಟ್ಟಿದ ಗುಂಪೊಂದು ಸಂಘಟನೆ ಕಟ್ಟಿತು! ಹಾಗೋ ಹೀಗೋ ಉದ್ಘಾಟನೆಯೂ ನಡೆದೇ ಹೋಯಿತು! ಮೋದಿಯ ಹೆಸರಿನಲ್ಲಿ ಪ್ರಚಾರ ನಡೆಯಿತು! ನೋಡ ನೋಡುತ್ತಲೇ ಲಕ್ಷಗಟ್ಟಲೇ ಸೇರಿದ ಯುವಕರ ಪಡೆಯೊಂದರ ಸಕಾರ್ಯವೊಂದು ದೇಶದ ಗಮನ ಸೆಳೆಯಿತು! ನೋಡುತ್ತಿದ್ದಂತೆ ಚುನಾವಣೆ! ಮೋದಿ ಭರ್ಜರಿಯಾಗಿ ಜಯಗಳಿಸಿದರು! ಇತ್ತ ಕರ್ನಾಟಕದಲ್ಲಿ ಅದೇ ಗುಂಪು ಹಬ್ಬವನ್ನಾಚರಿಸಿತು! ಹೌದು! “ನಮೋ ಬ್ರಿಗೇಡ್”! ಸದ್ದಿಲ್ಲದೇ ಕಾರ್ಯ ಸಾಧಿಸಿತ್ತು!
ಈ ನಮೋ ಬ್ರಿಗೇಡ್ ಹೆಸರಿನಲ್ಲಿ ನಡೆದ ಬದಲಾವಣೆಗಳಿದೆಯಲ್ಲ?! ಅವತ್ತಿನ ಮಟ್ಟಿಗೆ ಅದೊಂದು ಕ್ರಾಂತಿ! ಕೇಂದ್ರದಲ್ಲೂ, ರಾಜ್ಯದಲ್ಲಿಯೂ ಅಧಿಕಾರ ನಡೆಸುತ್ತಿದ್ದ ಹಿಂದೂ-ವಿರೋಧಿ ಮತ್ತು ಮೋದಿ ವಿರೋಧಿ ಸರಕಾರಕ್ಕೆ ಸೆಡ್ಡು ಹೊಡೆದದ್ದು ಇತಿಹಾಸವೇ ಬಿಡಿ! ಅದಕ್ಕೆ ತಕ್ಕನಾಗಿ ಅತ್ತ ಪ್ರಧಾನಿ ಮೋದಿ, ತಾನೊಬ್ಬ ಪ್ರಧಾನ ಸೇವಕ ಎಂದು ಪ್ರಮಾಣ ವಚನ ಸ್ವೀಕರಿಸಿಯಾಗಿತ್ತು! ದೇಶಕ್ಕೇನು ಬೇಕು ಎಂದು ಅವತ್ತು ನಿರ್ಧರಿಸಿದ್ದು ಯುವಕರ ತಂಡ ಎನ್ನುವುದು ಎಷ್ಟು ಸತ್ಯವೋ, ಕಳೆದ ನಾಲ್ಕು ವರ್ಷದಲ್ಲಿ ಮೂಗು ಮುರಿಯುತ್ತಿದ್ದ ವಿದೇಶಿಗರೆಲ್ಲ ಭಾರತವನ್ನು ನೋಡಿ ಉದ್ಗರಿಸಲು ಪ್ರಾರಂಭ ಮಾಡಿದ್ದೂ ಅಷ್ಟೇ ಸತ್ಯ! ಒಮ್ಮೆ ಯೋಚಿಸಿ! ಪ್ರಸ್ತುತ ಸ್ಥಿತಿಗೆ ಭಾರತಕ್ಕೆ ಎಂತಹ ಜನನಾಯಕ ಬೇಕಿದೆ! ಹಾ! ಮೋದಿ!
ಪ್ರಧಾನಿ ಮೋದಿ ಭಾರತದ ಯುವ ಶಕ್ತಿಗಳ ಟ್ರೆಂಡಾಗಿ ಹೋಗಿದ್ದು ಸುಖಾಸುಮ್ಮನೇ ಎಂದುಕೊಂಡಿರಾ?! ಖಂಡಿತಾ ಅಲ್ಲ! ಒಬ್ಬ ಯುವಕನಿಗೆ ಸ್ವತಃ ತಾನೊಬ್ಬ ರಹದಾರಿಯಾಗಿ ಹೋದ ಮೋದಿಯನ್ನು ಮನಃಪೂರ್ವಕವಾಗಿ ಹೊಗಳುವುದೂ ಅತಿಶಯೋಕ್ತಿಯಲ್ಲ! ಯಾಕೆಂದರೆ, ಕಳೆದ ನಾಲ್ಕು ವರ್ಷದಲ್ಲಿ ಮೋದಿ ಭಾರತಕ್ಕೆ ನೀಡಿದ ರೋಮಾಂಚನಗಳವು! ಕಾಶ್ಮೀರದಲ್ಲಿ ಮೊನ್ನೆಯಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತು! ಕಾಶ್ಮೀರ್ ಭಾರತ್ ಕಾ ನಹೀ ಎಂದವರು ಈಗ ಕೆಮ್ಮುವ ಹಾಗಿಲ್ಲವಾಯ್ತು! ಹಿಂದಿನ ವರ್ಷ ನಡೆದ ಡಿಮಾನಿಟೈಸೇಷನ್ ಮತ್ತು ಜಿಎಸ್ ಟಿ ಯಂತೂ ಬಿಡಿ! ಭಾರತದ ಇತಿಹಾಸದಲ್ಲೊಂದು ಅದ್ಭುತ ಇತಿಹಾಸ ಸೃಷ್ಟಿಸಿತು! ಉಳ್ಳವರು ಬಾಯಿ ಬಡಿದುಕೊಂಡರೇ ವಿನಃ ಸಾಮಾನ್ಯನೊಬ್ಬ ಮೋದಿಯ ಪರ ನಿಂತ! ಕೇವಲ ಇಷ್ಟೇ ಅಲ್ಲ! ಕಳೆದ ನಾಲ್ಕು ವರ್ಷಗಳಲ್ಲಿ 70 ರ ಆಸುಪಾಸಿನಲ್ಲಿರುವ ಮೋದಿಯೊಬ್ಬರು 8000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ, ಆರು ಹೊಸದಾದ ಭಾರತೀಯ ವೈದ್ಯಕೀಯ ಸಂಸ್ಥೆಗಳನ್ನು ದೇಶಾದ್ಯಂತ ಸ್ಥಾಪಿಸಿ, ಹೊಸದಾದ ಸಬ್ ಮರೀನ್ ಗಳನ್ನು ನೌಕಾಸೇನೆಗೆ ನೀಡಿ, Make in India ದ ಭಾಗವೇನೋ ಎಂಬಂತೆ ತೇಜಸ್ ಎಂಬ ಯುದ್ಧ ವಿಮಾನವನ್ನು ನಿರ್ಮಿಸಿ, ಧನುಷ್ ಎಂಬ ವಿಸ್ಮಯಕಾರಿ ತೋಪನ್ನು ರಕ್ಷಣಾ ಪಡೆಗಳಿಗೆ ನೀಡಿ, ನಿವೃತ್ತ ಸೇನಾನಿಗಳಿಗೆ One Rank- One pension ಮೂಲಕ ಗೌರವ ಸಲ್ಲಿಸಿ, ಶತ್ರು ರಾಷ್ಟ್ರಗಳಿಗೆ ಸರ್ಜಿಕಲ್ ಸ್ಟ್ರೈಕ್ ನ ಪಾಠ ಹೇಳಿ, ಭಾರತದ ಸೇನೆಯನ್ನು ಬಲಗೊಳಿಸಿ, ಬರೋಬ್ಬರಿ 65 ದೇಶಗಳ ಜೊತೆ ರಾಜಕೀಯ ಸ್ನೇಹ ಬೆಳೆಸಿ, ದೇಶದ ಜಿಡಿಪಿಯನ್ನು 7.5% ಗೇರಿಸಿ, ತ್ರಿವಳಿ ತಲಾಕ್ ನಂತಹ ಅನಿಷ್ಟ ಪದ್ಧತಿಗೆ ಅಂತ್ಯ ಹಾಡಿ, 2004-2014 ರ ವರೆಗೆ ನಡೆದ ಭ್ರಷ್ಟಾಚಾರ ಬಯಲಿಗೆಳೆದು, ಹೊಸ ಹೊಸ ಕಾನೂನು ರೂಪಿಸಿದ್ದು ಮೋದಿ ಸರಕಾರವೇ!!
ಇನ್ನೂ ಕರಾರುವಕ್ಕಾಗಿ ಹೇಳಬೇಕೆಂದರೆ, ಉಜಾಲ ಯೋಜನೆಯಡಿ 30,06,79,125 LED ಬಲ್ಬ್ಗಳನ್ನು ವಿತರಿಸಲಾಯ್ತು! ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ ಮೊತ್ತ ರೂ.38,76,93,00,00,000. ಪ್ರಧಾನಮಂತ್ರಿಗಳ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ 5,34,75,000 ದಷ್ಟು ಜನ ದಾಖಲಾದರು! ಇಂದ್ರಧನುಷ್ ಯೋಜನೆಯಡಿ 3,15,00,000 ಮಕ್ಕಳು ಲಸಿಕೆ ಪಡೆದರು! ಸ್ವಚ್ಛ ಭಾರತ ಅಭಿಯಾನದಡಿ 7,75,32,371 ಶೌಚಾಲಯಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಯಿತು! ಪ್ರಧಾನ ಮಂತ್ರಿ (ಗ್ರಾಮ ಸಡಕ್ ಯೋಜನೆಯಡಿ 5,52,319ಕಿ.ಮೀ ರಸ್ತೆ) ನಿರ್ಮಿಸಲಾಯಿತು! ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,00,00,000 ಮನೆಗಳನ್ನು ನಿರ್ಮಿಸಲಾಯಿತು! ಉಜ್ವಲ ಯೋಜನೆಯಡಿ ಉಚಿತವಾಗಿ LPG ಸಂಪರ್ಕ ಪಡೆದ ಮನೆಗಳು ಬರೋಬ್ಬರಿ 3,98,77,723! (ಮುದ್ರ ಯೋಜನೆಯಡಿ 12,84,07,440 ಜನ ಸಾಲ ಪಡೆದರು!) ಬಯಲು ಶೌಚಾಲಯದಿಂದ 3,67,259 ದಷ್ಟು ಹಳ್ಳಿಗಳು ಮುಕ್ತವಾಗಿ ಹೋದವು! ಸೌಭಾಗ್ಯ ಯೋಜನೆಯಡಿ ಕಳೆದ ಅಕ್ಟೋಬರ್ ನಳೊಳಗಾಗಿ 62,43,094 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು! ಸುರಕ್ಷಾ ಯೋಜನೆಯಡಿ 13,53,41,000 ದಷ್ಟು ಪ್ರಜೆಗಳು ದಾಖಲಾಗಿದ್ದರು! ಜನಧನ್ ಯೋಜನೆಯ ಒಟ್ಟು ಫಲಾನುಭವಿಗಳು 31,60,00,000 ! ಜೀವನ್ ಪ್ರಮಾಣ ಯೋಜನೆ ಫಲಾನುಭವಿಯಲ್ಲಿ 16,90,00,000 ದಷ್ಟು ಜನ ಪಿಂಚಣಿ ಪಡೆದರು! 13,45,46,471 ದಷ್ಟು ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯ್ತು! ಉಫ್!!
ಅದ್ಭುತವೆಂದರೆ ಅದೇ ನೋಡಿ! ದೇಶದಲ್ಲಿರುವ ಜನರಲ್ಲಿ 41% ರಷ್ಟು 21 ವರ್ಷಗಳಿಗಿಂತ ಕಡಿಮೆ ವಯಸ್ಸು ಹೊಂದಿರುವವರು! ಅಂದರೆ, ದೇಶದ ಅರ್ಧದಷ್ಟು ತುಂಬಿರುವುದು ಯುವ ಶಕ್ತಿ! ಯುವ ಶಕ್ತಿಗೆ ಸ್ಫೂರ್ತಿಯಾಗಿರುವುದು ಮತ್ತದೇ ಮೋದಿ! ಕರ್ನಾಟಕದ ಕೊಪ್ಪಳದ ದಾನಪುರದ ಮಲ್ಲಮ್ಮಳೆಂಬ ತರುಣಿ ಊರಿಗೆ ಶೌಚಾಲಯ ವಿಲ್ಲದಿದ್ದರೆ ಉಪವಾಸ ಮಾಡುತ್ತೇನೆಂದ ಪರಿಣಾಮ ಊರು ಶೌಚಾಲಯ ಕಾಣುವಂತಾಯಿತು! ಮೋದಿಯೇ ಸ್ಫೂರ್ತಿ ಎಂದಳಾಕೆ! ಇತ್ತ ಸ್ವತಃ ಮೋದಿ ಸ್ವಚ್ಛತಾ ಅಭಿಯಾನಕ್ಕಾಗಿ ರಸ್ತೆಗಿಳಿದರು! ಯುವಕರ ಹಿಂಡು ಭಾರತಾದ್ಯಂತ ಸ್ವಚ್ಛ ಅಭಿಯಾನ ನಡೆಸಿತು! ಮೋದಿ ‘ಯೋಗ’ ಎನ್ನುತ್ತಲೇ, ರಾಷ್ಟ್ರೀಯ ಯೋಗ ದಿನದಂದು ಬಹುತೇಕ ಯಾವುದೇ ವಯಸ್ಸಿನ ಭೇದವಿಲ್ಲದೇ ಯೋಗ ಪ್ರಾರಂಭಿಸಿದರು! ಮೋದಿ ಡಿಜಿಟಲ್ ಇಂಡಿಯಾ ಎಂದರು! ಯುವಕರು ಡಿಜಿಟಲ್ ಬದುಕಿಗೆ ನಾಂದಿ ಹಾಡಿದರು! ಮೋದಿ ಸ್ಟಾರ್ಟಪ್ ಇಂಡಿಯಾ ಎಂದರು! ಯುವಕರು ತಲೆ ಓಡಿಸಿದರು! ಕಂಪೆನಿ ಕಟ್ಟಿದರು! ಅದೆಲ್ಲ ಬಿಡಿ! ಅಂತರಾಷ್ಟ್ರೀಯ ಸಮೀಕ್ಷಾ ಸಂಸ್ಥೆಗಳು ಭಾರತದ ಪರವಾಗಿ ತಾಸುಗಟ್ಟಲೇ ಚರ್ಚಿಸಿದರು! ಭಾರತ ಇನ್ನೊಂದಿಷ್ಟು ವರ್ಷದಲ್ಲಿ ವಿಶ್ವದ ಅಷ್ಟೂ ರಾಷ್ಟ್ರಗಳಿಗಿಂತ ಶ್ರೀಮಂತವಾಗಲಿದೆ ಎಂದರು! ಅಂತರಾಷ್ಟ್ರೀಯ ಕಂಪೆನಿಗಳು ಬಿಲಿಯನ್ನುಗಟ್ಟಲೇ ಭಾರತದಲ್ಲಿ ಹೂಡಿಕೆ ಮಾಡಿದವು! ಯುವಕರಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗ ತೊಡಗಿತು! ಇನ್ನೇನು ಬೇಕು ಸ್ವಾಮಿ?! ಕಳೆದ 70 ವರ್ಷಗಳಲ್ಲಿ ಜನಿವಾರಧಾರಿ ಶಿವಭಕ್ತನ ಪೂರ್ವಜರು ತಮ್ಮಪ್ಪನ ಆಸ್ತಿಯೆಂಬಂತೆ ಭಾರತವನ್ನು ಬೇಕಾ ಬಿಟ್ಟಿ ಅನುಭವಿಸಿ, ಅಭಿವೃದ್ಧಿ ಹೀನವಾಗಿಸಿದ್ದನ್ನು ಮೋದಿ ಐದೇ ವರ್ಷಗಳಲ್ಲಿ ಪರಿಹಾರ ಮಾಡುತ್ತಾರೆಂಬಷ್ಟು ಭರವಸೆ ಮೂಡಿದ್ದು ಮತ್ತದೇ ತರುಣರಲ್ಲಿ! ಅದಕ್ಕೆ ತಕ್ಕನಾಗಿ ಮೋದಿಯೂ ದುಡಿದೇ ದುಡಿದರು! ದಿನದ 18 ಗಂಟೆ! ಯಾವೊಬ್ಬ ಶಕ್ತ ಯುವಕನೂ ದುಡಿಯಲಾಗದಷ್ಟು! ನೆನಪಿಡಿ! ಇನ್ನೂ ಅದೆಷ್ಟೋ ಅಭಿವೃದ್ಧಿ ಕಾರ್ಯಗಳನ್ನು, ಜನ ಸೇವೆಯನ್ನು ಮೋದಿ ಮಾಡಿರುವುದು ಕೇವಲ 48 ತಿಂಗಳುಗಳಲ್ಲಿ!!
ಇದನ್ನು ಹೇಳುತ್ತಿದ್ದ ಹಾಗೇ ಒಂದಷ್ಟು ಜನರು ಹೋ ಎನ್ನುತ್ತಾರೆ! ಮೂಗು ಮುರಿಯುತ್ತಾರೆ! ಅಸಹ್ಯವಾಗುವಷ್ಟು ಅದಾವುದೋ ಗಂಜಿ ಕೇಂದ್ರದ ಎದುರು ಊಳಿಡುತ್ತಾರೆ! ಯಾಕೆ ಹೇಳಿ?! ಭಾರತ ಅಭಿವೃದ್ಧಿಯ ಮಂತ್ರ ಜಪಿಸ ತೊಡಗಿದರೆ, ದೇಶದ ಯುವಕರು ಭ್ರಷ್ಟಾಚಾರ ರಹಿತವಾದ ವ್ಯವಹಾರಕ್ಕೆ ಅಸ್ತು ಎಂದರೆಂದರೆ ತಮಗೆ ಉಳಿಗಾಲವಿಲ್ಲವೆಂಬುದು ಅವರಿಗೂ ಅರಿವಿದೆ! ದೇಶದಲ್ಲಿ ಈಗ ಗಂಜಿಗೂ ಬರ! ಸಾರ್ವತ್ರಿಕವಾಗಿಯೇ ಗುರುತಿಸಿಕೊಂಡು ಮೋದಿ ವಿರೋಧಿ ಪಡೆ ಕಟ್ಟಿರುವ ಗಂಜಿ ಗಿರಾಕಿಗಳು ಈಗ ಸದ್ಯಕ್ಕೆ ಹ್ಯಾಪಿ ಹ್ಯಾಪಿ! ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಹಸಿವು ಹೆಚ್ಚು! ಅವತ್ತು ಮತ್ತೆ ಸಮಾಜವನ್ನು ಅಡ್ಡದಾರಿಗೆಳೆಯುವ ಪ್ರಯತ್ನ! ಮತ್ತೆ ಕೇಂದ್ರದಲ್ಲಿ ಮೋದಿ ಸರಕಾರ ಬರದಂತೆ ತಡೆಯುವ ಅಭಿಯಾನವೊಂದಕ್ಕೆ ಕರ್ನಾಟಕ ಮತ್ತೆ ಕೈ ಜೋಡಿಸಿತೋ, ಕರ್ನಾಟಕ ಇನ್ನೈದು ವರ್ಷಗಳಲ್ಲಿ ಅಪ್ಪ ಮಕ್ಕಳ ಆಸ್ತಿಯಾಗಿ ಮಾರ್ಪಾಟಾಗುತ್ತದೆ! ಅಷ್ಟೇ!
ಈ ಕರಾಳ ಭವಿಷ್ಯವೊಂದು ನಿಜವಾಗಬಾರದೆಂಬ ಒಂದೇ ಕಾರಣಕ್ಕೆ ಈಗ ಮತ್ತದೇ ಯುವಕರು ಮತ್ತೊಂದು ಕ್ರಾಂತಿಗೆ ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ. ಅದೇ “ನಮೋ ಭಾರತ್”. ಮತ್ತೆ ಕರ್ನಾಟಕದಲ್ಲಿ ಕ್ರಾಂತಿಯಾಗುವ ಹೊಸ ಅಭಿಯಾನ ಇದು. ಜುಲೈ 22 ರಂದು ದಾವಣಗೆರೆಯಲ್ಲಿ ಅದ್ದೂರಿಯಾಗಿ ಸಂಘಟನೆಯ ಚಾಲನೆ ಹಾಗೂ ಉದ್ಘಾಟನಾ ಸಮಾರಂಭ ನಡೆದಿದೆ. ಮತ್ತೆ 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಗೆಲ್ಲಿಸಬೇಕೆಂದು ನವತರುಣರ ಪಡೆ ಕಂಕಣ ಕಟ್ಟಿ ನಿಂತಿದೆ. ಎಲ್ಲಾ ಜಿಲ್ಲೆಗಳಲ್ಲೂ ಸಕ್ರಿಯ ಕಾರ್ಯ ಕಾರ್ಯಕರ್ತರ ಸಮಿತಿ ರಚನೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ಸ್ವಯಂಸೇವಕ ಕಾರ್ಯಕರ್ತರ ಸಭೆಗಳು ನಡೆದಿವೆ. ಯೋಜನೆಗಳು ತಯಾರಾಗಿವೆ. ನಮ್ಮ ಕಾರ್ಯಚಟುವಟಿಕೆಗಳು ಜನ ಮನವನ್ನು ತಲುಪಲು ಸಿದ್ಧವಾಗಿದೆ. ಗುರಿ..! ಒಂದೇ. ಮತ್ತೊಮ್ಮೆ ಮೋದಿಯವರ ಪಟ್ಟಾಭಿಷೇಕ. ದೇಶಕ್ಕೆ ಒಂದು ಸಮರ್ಥ ನಾಯಕತ್ವವನ್ನು ಕಲ್ಪಿಸುವ ಈ ಸಾಮಾಜಿಕ ಜವಾಬ್ದಾರಿಗೆ ಪಕ್ಷದ ಕಾರ್ಯಕರ್ತರಾದಿಯಾಗಿ, ದೇಶಭಕ್ತ ಕನ್ನಡಿಗರು ಅಸಂಖ್ಯವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಿದೆ. ನಮೋ ಭಾರತ್- ಇದು ಮತ್ತದೇ ಕ್ರಾಂತಿ! ಒಂದಷ್ಟು ಬದಲಾವಣೆಗಳ ಜೊತೆ! ಕೆಲಸ ಸಾಕಷ್ಟಿದೆ. ಸಮಯ ಕಡಿಮೆ ಇದೆ. ಬನ್ನಿ ..ಕೈ ಜೋಡಿಸಿ.
– ಸುಶ್ಮಿತಾ ಸಪ್ತರ್ಷಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.