ಕರಾವಳಿ ತೀರದ ಕೆಲವು ಮನೆಗಳಲ್ಲೀಗ ‘ಚೂಡಿ’ ಸಂಭ್ರಮ. ಗೌಡ ಸಾರಸ್ವತ ಬ್ರಾಹ್ಮಣ, ಮರಾಠಿ ಬ್ರಾಹ್ಮಣರು ಹಾಗೂ ಕೇರಳದ ಕೊಂಕಣಿ ಭಾಷಿಕ ಪ್ರದೇಶಗಳ ಮುತ್ತೈದೆಯರಿಂದ ‘ಚೂಡಿ’ ಹಬ್ಬ ಆರಂಭವಾಯಿತೆಂದರೆ ಶ್ರಾವಣ ಅಡಿ ಇಟ್ಟಂತೆ. ತುಳಸಿ ಪೂಜೆ, ಗಂಗೆ ಪೂಜೆ ಹಾಗೂ ಹೊಸ್ತಿಲು ಪೂಜೆಯೊಂದಿಗೆ ಶ್ರಾವಣಕ್ಕಿಲ್ಲಿ ಅದ್ದೂರಿ ಸ್ವಾಗತ.
ಚೂಡಿ ಎಂದರೆ…
ಐದು ಗರಿಕೆಯ ಚಿಗುರು ಹುಲ್ಲು, ಅವುಗಳ ಜೊತೆ ಕೆಂಪು, ಹಳದಿ ರತ್ನಗಂಧಿ, ಕರಾವಳಿಯಲ್ಲಿ ವಿಶೇಷವಾಗಿ ಸಿಗುವ ಬೆಕ್ಕಿನುಗುರು, ಕುದುರೆ ಕಾಲು ಗಿಡದ ಎಲೆಗಳು (ಇವುಗಳು ಸಿಗದಿದ್ದರೆ ಕರವೀರ ಹೂವು, ಮಿಠಾಯಿ ಹೂವು, ನೀರ್ಕಡ್ಡಿ, ನೇರಳೆ ಹೂವು, ಸೇವಂತಿಗೆ ಹೂವು) ಇವುಗಳನ್ನು ಸೇರಿಸಿ ಕಟ್ಟುವ ಹೂಗುಚ್ಛವೇ ಚೂಡಿ. ಈ ಚೂಡಿ ಮಾರುಕಟ್ಟೆಯಲ್ಲಿ ಸಿದ್ಧವಾಗಿ ಸಿಕ್ಕರೂ, ಇದನ್ನು ಕೈಯಾರೆ ಕಟ್ಟುವುದು, ಅದರಲ್ಲೂ ಹಿತ್ತಲಲ್ಲಿಯೇ ಬೆಳೆದ ಹೂವುಗಳಲ್ಲಿ ಇದನ್ನು ಕಟ್ಟುವುದು ಈ ಹಬ್ಬದ ವಿಶೇಷ.
ಹಿಂದೆಲ್ಲ, ಚೂಡಿ ಹಬ್ಬದಲ್ಲಿ 18 ಮೊಳದ ಸೀರೆ ಮಹತ್ವ ಪಡೆದಿತ್ತು. ಮಹಿಳೆಯರು ಇಷ್ಟು ಉದ್ದದ ಸೀರೆಯುಟ್ಟು ಹಬ್ಬಕ್ಕೆ ಮುನ್ನುಡಿ ಹಾಡುತ್ತಿದ್ದರು. ಆದರೆ ಈಗ 18 ಅಡಿ ಸೀರೆ ಸಿಗುವುದು ಕಷ್ಟವಾದ್ದರಿಂದ ಬೆಲೆ ಬಾಳುವ ರೇಷ್ಮೆ ಸೀರೆಗಳದ್ದು ಕಾರುಬಾರು. ಸೀರೆ, ಆಭರಣಗಳಿಂದ ಸಿಂಗಾರಗೊಳ್ಳುವ ಮಹಿಳೆಯರು, ಬಾವಿ ದಂಡೆಗೆ ಅರಿಶಿಣ ಕುಂಕುಮ ಹಚ್ಚಿ ನೀರು ತೆಗೆಯುತ್ತಾರೆ. ಕಟ್ಟಿರುವ ಐದು ಚೂಡಿಗಳನ್ನು ಸಣ್ಣ ರಂಗೋಲಿ, ಹೂಗಳಿಂದ ಅಲಂಕರಿಸಿದ ತುಳಸಿಯ ಬಳಿಯಲ್ಲಿ ತಾಂಬೂಲದ ಜೊತೆಯಲ್ಲಿ ಇರಿಸಿ, ಅರಿಶಿಣ ಕುಂಕುಮ, ಅಗರಬತ್ತಿಗಳಿಂದ ಪೂಜಿಸುತ್ತಾರೆ.
ಅಂಗಳದಲ್ಲಿ ಹಾಗೂ ತುಳಸಿ ಕಟ್ಟೆ ಎದುರು ರಂಗೋಲಿ ಹಾಕಿ, ಮನೆ ಹೊಸ್ತಿಲಿಗೆ ಶೇಡಿ ಬರೆದು ಚೂಡಿ ಕಟ್ಟಿ ಪೂಜೆಗೆ ಸಿದ್ಧರಾಗುತ್ತಾರೆ. ಅಲಂಕರಿಸಿದ ಚೂಡಿಯನ್ನು ಹೊಸ್ತಿಲಿನ ಬಲಭಾಗಕ್ಕೂ ಅರ್ಪಿಸುತ್ತಾರೆ. ಚೂಡಿಗೆ ಪೂಜೆ ನೆರವೇರಿದ ನಂತರ ಅದನ್ನು ಐದು ಜನ ಮುತ್ತೈದೆಯರಿಗೆ ನೀಡಲಾಗುವುದು. ತಮ್ಮ ಪತಿಗೆ ವೀಳ್ಯ ನೀಡಿ ಆಶೀರ್ವಾದ ಪಡೆಯುತ್ತಾರೆ. ನಂತರ ಹಿರಿಯರ ಮನೆಗೆ ತೆರಳಿ ಚೂಡಿ ವಿನಿಮಯ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ಆ ದಿನದ ಚೂಡಿ ಪೂಜೆಯ ಕಾರ್ಯಕ್ರಮ 12 ಗಂಟೆಯ ಒಳಗೆ ಮುಗಿಯುತ್ತದೆ. ಈ ಸಂದರ್ಭದಲ್ಲಿ ಹಿತ್ತಲಿನಲ್ಲಿರುವ ತೆಂಗಿನ ಮರಕ್ಕೆ ಒಂದು ಚೂಡಿ ಅರ್ಪಿಸಿ, ಮಡಿದ ಹಿರಿಯರಿಗಾಗಿ ಮನೆಯ ಛಾವಣಿಯ ಮೇಲೆ ಒಂದು ಚೂಡಿ ಇರಿಸಲಾಗುತ್ತದೆ.
ನವ ವಿವಾಹಿತೆಯರು ಮೊದಲು ಗಂಡನ ಮನೆಯಲ್ಲಿ ಚೂಡಿ ಪೂಜೆ ಮಾಡಿ ಬಳಿಕ ತವರು ಮನೆಯಲ್ಲಿ ಪೂಜೆ ನೆರವೇರಿಸುತ್ತಾರೆ. ಈ ಪೂಜೆ ಮಾಡಿದರೆ ವಿವಾಹಿತ ಮಹಿಳೆಯರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಕೆಲವೆಡೆ ಮಹಿಳಾ ಮಂಡಳಿಗಳು ಸಾರ್ವಜನಿಕವಾಗಿ ಸಾಮೂಹಿಕ ಚೂಡಿ ಪೂಜೆಯನ್ನು ಆಚರಿಸುತ್ತಾರೆ. ಇದು ಮಹಿಳೆಯರಿಗೆ ಒಂದೆಡೆ ಸೇರಿ ಪರಸ್ಪರ ಮಾತುಕತೆ, ಸುಖ ಕಷ್ಟ ವಿನಿಮಯಕ್ಕೆ ವೇದಿಕೆಯಾಗು ತ್ತದೆ. ಪರಸ್ಪರ ಪರಿಚಯಕ್ಕೂ ಇದು ಅವಕಾಶ ಕಲ್ಪಿಸುತ್ತದೆ.
ಉಂಡ್ಲಕಾಳು ವಿಶೇಷ
ಈ ದಿನ ಉಂಡ್ಲಕಾಳು ತಿನಿಸು ವಿಶೇಷವಾದುದು. ಉಕ್ಕಡಿಸಿದ ಅಕ್ಕಿ ಅಥವಾ ಗೋಧಿ ಹಿಟ್ಟಿನ ಸಣ್ಣ ಸಣ್ಣ ಗೋಲಿಗಳನ್ನು ತುಪ್ಪದಲ್ಲಿ ಕರಿದು ತೆಂಗಿನ ತುರಿ ಮತ್ತು ಬೆಲ್ಲದ ಚೂರ್ಣದೊಂದಿಗೆ ಬೆರೆಸಿ ಮಾಡುವ ತಿನಿಸೇ ಉಂಡ್ಲಕಾಳು. ಇದರ ಜೊತೆಗೆ ಸಿಹಿಕಡುಬು, ರಸಾಯನ, ಶೀರಾ ಮುಂತಾದ ತಿನಿಸುಗಳನ್ನೂ ಮಾಡಲಾಗುವುದು.
ವಿವಿಧ ಹಿನ್ನೆಲೆ
‘ಚೂಡಿ’ ಹಬ್ಬಕ್ಕೆ ವೈಜ್ಞಾನಿಕ ಹಾಗೂ ಪೌರಾಣಿಕ ಹಿನ್ನೆಲೆಗಳಿವೆ. ಗರಿಕೆ ಹುಲ್ಲು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಹಬ್ಬದಲ್ಲಿ ಗರಿಕೆ ಹುಲ್ಲಿಗೆ ವಿಶೇಷ ಆದ್ಯತೆ. ಇದರ ಸೇವನೆಯಿಂದ ಹವಾಮಾನದಲ್ಲಾಗುವ ವೈಪರೀತ್ಯದಿಂದ ಆರೋಗ್ಯ ಹಾಳಾಗುವುದನ್ನು ತಡೆಯಬಹುದು ಎಂಬ ಕಾರಣಕ್ಕೆ ಅದನ್ನು ಪರಸ್ಪರ ವಿನಿಯಮ ಮಾಡಿ ಸೇವಿಸುವ ಕಾರ್ಯ ನಡೆಯುತ್ತದೆ.
ಒಂದು ಗರಿಕೆ ಕವಲೊಡೆದು ತುದಿಯಲ್ಲಿ ಎರಡು ಭಾಗಗಳಾಗಿರುತ್ತವೆ. ಹೀಗೆ ವಂಶದ ಕುಡಿ ಅಭಿವೃದ್ಧಿಯಾಗಲಿ ಎಂಬ ಹಾರೈಕೆಯೂ ಇದರಲ್ಲಿ ಅಡಗಿದೆ ಎನ್ನುತ್ತಾರೆ ಹಿರಿಯರು. ಹಿಂದುಗಳ ಪ್ರತಿಯೊಂದು ಆಚರಣೆ ಹಿಂದೆಯೂ ಪೌರಾಣಿಕ ಕಥೆ ಇರಲೇಬೇಕು. ಅದೇ ರೀತಿ ಚೂಡಿ ಹಬ್ಬದ ಹಿಂದೆಯೂ ಕುತೂಹಲಕಾರಿ ಕಥನವಿದೆ.
ರಕ್ಕಸ ದೊರೆ ಜಲಂಧರನ ಪತ್ನಿ ವೃಂದಾ ಮಹಾನ್ ಪತಿವ್ರತೆ. ವಿಷ್ಣುವಿನ ಪರಮಭಕ್ತೆ ಕೂಡ. ಜಲಂಧರನಿಂದ ದೇವತೆಗಳನ್ನು ರಕ್ಷಿಸಲು ವಿಷ್ಣು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಜಲಂಧರ ಸಾಯಬೇಕಾದರೆ ವೃಂದಾಳ ಪಾತಿವ್ರತ್ಯಕ್ಕೆ ಧಕ್ಕೆಯಾಗಬೇಕು, ಜಲಂಧರ ಯುದ್ಧಕ್ಕೆ ಹೋದ ಸಂದರ್ಭ ಉಪಯೋಗಿಸಿಕೊಳ್ಳುವ ವಿಷ್ಣು ಜಲಂಧರನ ವೇಷದಲ್ಲಿ ವೃಂದಾಳ ಬಳಿ ಬರುತ್ತಾನೆ. ಇದನ್ನು ತಿಳಿಯದ ವೃಂದಾ ವಿಷ್ಣುವನ್ನು ತನ್ನ ಗಂಡನೆಂದೇ ತಿಳಿದು ಆತನೊಂದಿಗೆ ಕೂಡುತ್ತಾಳೆ. ಇತ್ತ ಯುದ್ಧಭೂಮಿಗೆ ಹೋಗಿದ್ದ ಜಲಂಧರ ಮರಣ ಹೊಂದುತ್ತಾನೆ.
ಪತಿಯ ಸಾವಿನ ಕಾರಣ ಅರಿತ ವೃಂದಾ ತುಂಬಾ ದುಃಖಿತಳಾಗಿ ತನ್ನ ಆರಾಧ್ಯದೈವ ವಿಷ್ಣುವನ್ನು ಸ್ಮರಿಸಿ ತನ್ನನ್ನು ಮತ್ತೆ ಪವಿತ್ರಳನ್ನಾಗಿ ಮಾಡುವಂತೆ ಬೇಡಿಕೊಳ್ಳುತ್ತಾಳೆ. ಆಗ ವಿಷ್ಣು ಶ್ರಾವಣ ಮಾಸದಲ್ಲಿ 11 ವಿಧದ ಹೂವುಗಳನ್ನು ನಾರಿನಿಂದ ಕಟ್ಟಿ ತುಳಸಿಗೆ ಅರ್ಪಿಸಿ ತುಳಸಿ ದೇವಿಯನ್ನು ಪೂಜಿಸುವಂತೆ ಸಲಹೆ ನೀಡುತ್ತಾನೆ. ಅದರಂತೆ ವೃಂದಾ ತುಳಸಿದೇವಿಯನ್ನು ಪೂಜಿಸಿ ಪವಿತ್ರಳಾಗುತ್ತಾಳೆ. ಪುರಾಣದಲ್ಲಿ ಉಲ್ಲೇಖಗೊಂಡಿರುವಂತೆ ಹನ್ನೊಂದು ಹೂವು ಈಗ ಲಭ್ಯವಿಲ್ಲದೆ ಇರುವುದರಿಂದ ಮಹಿಳೆಯರು ಸ್ಥಳೀಯವಾಗಿ ಸಿಗುವ ನಾಲ್ಕರಿಂದ ಐದು ವಿವಿಧ ಹೂವು ಹಾಗೂ ಗರಿಕೆ ಬಳಸುತ್ತಾರೆ.
ದುರ್ಗಾ ನಾಯಕ್
ಚಿತ್ರ: ಮಂಜು ನಿರೇಶ್ಯಾಲ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.