ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬ್ರಿಟೀಷರು ಕೈಗೊಂಡ ಅಮಾನವೀಯ ಕೃತ್ಯ. ಬ್ರಿಟೀಷ್ ಸೈನ್ಯದ ಕ್ರೌರ್ಯಕ್ಕೆ ಅಂದು ನೂರಾರು ಮಂದಿ ಬಲಿಯಾದರೆ ಹೆಂಗಸರು, ಮಕ್ಕಳು ಸೇರಿ ಸಾವಿರಾರು ದೇಶಭಕ್ತರು ಗಾಯಗೊಂಡರು. ಈ ಘಟನೆಯನ್ನು ಕಣ್ಣಾರೆ ಕಂಡ ಒಬ್ಬ ಯವಕ ಹತ್ಯಾಕಾಂಡದ ರೂವಾರಿ ಮೈಕೇಲ್ ಓಡ್ವಯರನನ್ನು ಕೊಂದು 21 ವರ್ಷಗಳ ನಂತರ ತನ್ನ ಭಾರತೀಯ ಬಂಧುಗಳ ಸಾವಿಗೆ ಪ್ರತೀಕಾರ ತೀರಿಸಿಕೊಂಡ. ಆ ಯುವಕನ ಹೆಸರೇ ಸರ್ದಾರ್ ಉಧಮ್ ಸಿಂಗ್. ಗುರಿಗಾಗಿ ಬಾಳಿದ ಆ ಮಹಾನ್ ವೀರನ ಕುರಿತು ತಿಳಿಸುವುದೇ ಈ ಲೇಖನದ ಆಶಯ.
ಉಧಮ್ ಸಿಂಗ್ 1899 ಡಿಸೆಂಬರ್ 26ರಂದು ಸುನಾಮದ ಶಹಪುರದಲ್ಲಿ ಜನಿಸಿದನು. ಉಧಮ್ ಸಿಂಗನ ತಂದೆ ಟಹಲ್ ಸಿಂಗ್ ಚೌಕಿದಾರನಾಗಿ ಕೆಲಸ ಮಾಡುತ್ತಿದ್ದನು. ಅಲ್ಪ ಆದಾಯದಿಂದ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಉಧಮ್ ಸಿಂಗನಿಗೆ ಎರಡು ವರ್ಷವಿರುವಾಗ ಆತನ ತಾಯಿ ಮರಣ ಹೊಂದಿದರು. ಉಧಮ್ ಸಿಂಗನಿಗೆ ಏಳು ವರ್ಷವಿರುವಾಗ ತಂದೆ ಟಹಲ್ ಸಿಂಗ್ ಅಸುನೀಗಿದ. ಉಧಮ್ ಸಿಂಗ್ ಮತ್ತು ಅಣ್ಣ ಸಾಧು ಸಿಂಗ್ ಅನಾಥರಾದರು. ಚಂಚಲ್ ಸಿಂಗ್ ಎಂಬ ವ್ಯಕ್ತಿ ಈ ಇಬ್ಬರನ್ನು ಕಂಡು ಅನಾಥಾಲಯಕ್ಕೆ ಸೇರಿಸಿದರು. ಇಬ್ಬರು ಶಾಲೆಗೆ ಸೇರಿ ಓದು ಮುಂದುವರೆಸಿದರು. ಜೊತೆಗೆ ಸಣ್ಣ ಪುಟ್ಟ ಕೈ ಕೆಲಸವನ್ನು ಕಲಿತರು. ಈ ವೇಳೆಗೆ ಅಣ್ಣ ಸಾಧುಸಿಂಗ್ ತೀರಿಕೊಂಡನು. ಉಧಮ್ ಸಿಂಗನಿಗೆ ಭಾರಿ ಆಘಾತವಾಯಿತು. ಕಷ್ಟ ಆತನ ಬೆನ್ನ ಹಿಂದೆಯೇ ಸಾಗುತ್ತಿತ್ತು. ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸಾದ ಉಧಮ್ ಸಿಂಗ್ ಅನಾಥಾಲಯವನ್ನು ತೊರೆದನು.
1919ರ ವೇಳೆಗೆ ಭಾರತದಲ್ಲಿ ಬ್ರಿಟಿಷರು ಅಮೃತಸರದಲ್ಲಿ ಹೆಚ್ಚು ದಬ್ಬಾಳಿಕೆ ನಡೆಸುತ್ತಿದ್ದರು. ಬಿಳಿಯ ಮಹಿಳೆಗೆ ಅವಮಾನ ಮಾಡಿದ್ದರೆಂದು ಆರೋಪ ಹೊರಿಸಿ ರಸ್ತೆಯಲ್ಲಿ ಭಾರತೀಯರು ತೆವಳಿಕೊಂಡು ಹೋಗಬೇಕೆಂದು ನಿಯಮ ವಿಧಿಸಿದರು. 1919ರ ಏಪ್ರಿಲ್ 13 ರಂದು ಭಾರತೀಯರು ಇದರ ವಿರುದ್ದ ಪ್ರತಿಭಟನೆ ಮಾಡಬೇಕೆಂದು ಭಾರತೀಯ ನಾಯಕರು ತೀರ್ಮಾನಿಸಿದರು. ಸಾವಿರಾರು ದೇಶಭಕ್ತರು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸಭೆ ಸೇರಿದರು. ಆಗ ಪಂಜಾಬಿನ ಗವರ್ನರ್ ಆಗಿದ್ದ ಮಹಾನ್ ಕ್ರೂರಿ ಮೈಕೇಲ್ ಓಡ್ವಯರ್ ಜಲಿಯನ್ ವಾಲಾಬಾಗಿಗೆ ಸೇನೆಯನ್ನು ನುಗ್ಗಿಸಿ ಗುಂಡಿನ ಮಳೆಗರೆಯುವಂತೆ ಆಜ್ಞೆ ಮಾಡಿದನು. ಸೈನಿಕರು ಅಮಾನುಷವಾಗಿ ಗುಂಡು ಹಾರಿಸಿದರು. 379 ಜನ ಮರಣಹೊಂದಿದರು ಮತ್ತು 15 ಸಾವಿರಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾದವು. ಇದೇ ಸಂದರ್ಭದಲ್ಲಿ ಪೇಶಾವರದಿಂದ ರತ್ನಾದೇವಿ ಎಂಬ ಮಹಿಳೆ ತನ್ನ ಗಂಡನ ಜೊತೆ ಅಮೃತಸರಕ್ಕೆ ಬಂದಿದ್ದಳು. ಆಕೆಯ ಗಂಡ ಸೈನಿಕರ ಗುಂಡಿಗೆ ಬಲಿಯಾಗಿದ್ದ. ಪತಿಯ ಶವವನ್ನು ಪಡೆದುಕೊಳ್ಳಲು ಆಕೆ ಪ್ರಯತ್ನಿಸಿ ವಿಫಲವಾಗಿ ಅಳುತ್ತಿದ್ದಳು. ಹತ್ತಿರದಲ್ಲೇ ಇದ್ದ ಉಧಮ್ ಸಿಂಗ್ ತುಂಬಾ ದುಃಖಿತನಾದ. ಅವನು ರತ್ನಾದೇವಿಯನ್ನು ಕರೆದುಕೊಂಡು ಶವವನ್ನು ಹುಡುಕತೊಡಗಿದನು. ಎಲ್ಲಿ ನೋಡಿದರೂ ಹೆಣಗಳ ರಾಶಿ. ಅಂತೂ ಅವರು ರತ್ನಾದೆವಿಯ ಗಂಡನ ಶವವನ್ನು ಹುಡುಕಿದರು. ಶವವನ್ನು ಕಂಡ ರತ್ನಾದೇವಿಗೆ ಆಳು ಉಕ್ಕಿ ಬಂದಿತು. ಇದನ್ನು ಕೇಳಿಸಿಕೊಂಡ ಒಬ್ಬ ಆಂಗ್ಲ ಸೈನಿಕ ಗುಂಡು ಹಾರಿಸಿದ. ಆ ಗುಂಡು ಉಧಮ್ ಸಿಂಗನ ಕೈಗೆ ತಾಗಿತು. ಅವನ ಕೈಯಿಂದ ರಕ್ತ ಸುರಿಯುತ್ತಿದ್ದರೂ ಉಧಮ್ ಸಿಂಗ್ ಶವವನ್ನು ಹೊರತರಲು ಯಶಸ್ವಿಯಾದ. ಈ ಬೀಕರ ಘಟನೆಯಿಂದ ಕೋಪಗೊಂಡ ಉಧಮ್ ಸಿಂಗ್ ಅಮಾಯಕರ ಕೊಲೆಯ ಪ್ರತೀಕಾರವನ್ನು ಕೊಲೆಯಿಂದಲೇ ತೀರಿಸುವ ದೃಢ ನಿರ್ಧಾರವನ್ನು ಕೈಗೊಂಡನು.
ಜಲಿಯನ್ ವಾಲಾಬಾಗ್ ಹತ್ಯಾಕಾ೦ಡವಾದ ಕೆಲವೇ ದಿನಗಳಲ್ಲಿ ಉಧಮ್ ಸಿಂಗ್ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಗದರ್ ಪಕ್ಷದ ಸಂಪರ್ಕ ಸಾಧಿಸಿದನು. ಕ್ರಾಂತಿಯ ಮೂಲಕ ಬ್ರಿಟಿಷರನ್ನು ಎದುರಿಸುವುದು ಈ ಪಕ್ಷದ ಉದ್ದೇಶವಾಗಿತ್ತು. ಉಧಮ್ ಸಿಂಗ್ ಗದರ್ ಪಕ್ಷದಲ್ಲಿ ಸಕ್ರಿಯನಾದ. ಭಗತ್ ಸಿಂಗ್ ಉಧಮ್ ಸಿಂಗನಿಗೆ ತನಗೆ ಶಸ್ತ್ರಗಳನ್ನು ಸಂಗ್ರಹಿಸಲು ಸಹಕರಿಸಬೇಕೆಂದು ಉಧಮ್ ಸಿಂಗನಿಗೆ ಪತ್ರ ಬರೆದನು. ಇದರಂತೆ ಅನೇಕೆ ಶಸ್ತ್ರಗಳನ್ನು ಸಂಗ್ರಹಿಸಿಕೊಂಡು ಉಧಮ್ ಸಿಂಗ್ ಭಾರತಕ್ಕೆ ಮರಳಿದನು. ಆದರೆ ಲಾಹೋರ್ ನಲ್ಲಿ ಪೊಲೀಸರು ಉಧಮ್ ಸಿಂಗನನ್ನು ಬಂಧಿಸಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದರು. ಜೈಲಿನಿಂದ ಬಿಡುಗಡೆಯಾದ ಮೇಲೆ ಉಧಮ್ ಸಿಂಗ್ ಕೆಲವು ದಿನಗಳ ಕಾಲ ತನ್ನ ಸ್ವಗ್ರಾಮ ಸುನಾಮದಲ್ಲಿ ಕಳೆದನು. ಉಧಮ್ ಸಿಂಗ್ ಓಡಾಡುವುದೇ ಕಷ್ಟವಾಯಿತು. ಪೊಲೀಸರು ಯಾವಾಗಲೂ ಹಿಂದೆಯೇ ಇರುತ್ತಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಉಧಮ್ ಸಿಂಗ್ ಹಲವು ಮಾರುವೇಷಗಳನ್ನು ಧರಿಸಿದನು.
ಉಧಮ್ ಸಿಂಗನಿಗೆ ಆಗಾಗ 1919 ಏಪ್ರಿಲ್ 13ರಂದು ಮಾಡಿದ ಪ್ರತಿಜ್ಞೆ ನೆನಪಾಗುತ್ತಿತ್ತು. ಆತನ ಗುರು ಒಂದೇ ಆಗಿತ್ತು ಅದೇ ಮೈಕೇಲ್ ಓಡ್ವಯರ್ ನ ಕೊಲೆ. ಗುರಿ ಸಾಧಿಸಲು ಉಧಮ್ ಸಿಂಗ್ 1934ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದನು. ಅಲ್ಲಿ ಕೂಲಿ ನಾಲಿ ಮಾಡುತ್ತಾ ಭಾರತೀಯರ ಸಂಪರ್ಕ ಸಾಧಿಸಿದನು. ಗುರಿ ಸಾಧನೆಗೆ ತನ್ನ ಪ್ರಾಣವನ್ನು ಅರ್ಪಿಸಲು ಸಿದ್ದನಾಗಿದ್ದ ಉಧಮ್ ಸಿಂಗ್ ಮೈಕೇಲ್ ಓಡ್ವಯರ್ನ ಸಂಪರ್ಕಕ್ಕೆ ಬಂದು ಅವನ ಜೊತೆ ಸ್ನೇಹ ಸಂಪಾದಿಸಿದನು. ಮೈಕೇಲ್ ಓಡ್ವಯರ್ಗೆ ಉಧಮ್ ಸಿಂಗ್ ಬಹಳ ಹತ್ತಿರದ ಸ್ನೇಹಿತನಾದ. ಆತ ಉಧಮ್ ಸಿಂಗನನ್ನು ಚಹಾಗೆ ಕರೆಯುತ್ತಿದ್ದನು. ಉಧಮ್ ಸಿಂಗ್ ಮನಸ್ಸು ಮಾಡಿದ್ದರೆ ಓಡ್ವಯರ್ ನನ್ನು ಆತನ ಮನೆಯಲ್ಲೆಯೇ ಮುಗಿಸಿಬಿಡಬಹುದಿತ್ತು ಆದರೆ ಉಧಮ್ ಸಿಂಗ್ ಮೈಕೇಲ್ ಓಡ್ವಯರ್ ನನ್ನು ಸಾರ್ವಜನಿಕವಾಗಿ ಕೊಲ್ಳಲು ನಿರ್ಧರಿಸಿ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದನು.
1940 ಮಾರ್ಚ್ 13 ರಂದು ಮೈಕೇಲ್ ಓಡ್ವಯರ್ ಒಂದು ಸಭೆಯಲ್ಲಿ ಭಾಗವಹಿಸುತ್ತಿದ್ದನು. ಇದನ್ನು ತಿಳಿದ ಉಧಮ್ ಸಿಂಗ್ ತಾನು ಕಾಯುತ್ತಿದ್ದ ದಿನ ಬಂದಿತೆಂದು ಸಂಭ್ರಮ ಪಟ್ಟ. ಉಧಮ್ ಸಿಂಗ್ ಸಕಲ ಸಿದ್ದತೆ ಮಾಡಿಕೊಂಡು ಸಭೆಗೆ ಬಂದ. ಸಭೆಯಲ್ಲಿ ಮಾತನಾಡಿದ ಮೈಕೇಲ್ ಓಡ್ವಯರ್ ಜಲಿಯನ್ ವಾಲಾಬಾಗ್ ಘಟನೆಯನ್ನು ನೆನೆದು ತನ್ನ ಜಂಭ ಕೊಚ್ಚಿಕೊಂಡನು. ಸಭೆ ಮುಕ್ತಾಯವಾದ ಮೇಲೆ ಉಧಮ್ ಸಿಂಗ್ ವೇದಿಕೆಯ ಬಳಿ ಬಂದು ಗುಂಡು ಹಾರಿಸಿದ. ಅವು ಗುರಿ ತಪ್ಪದೇ ಮೈಕೇಲ್ ಓಡ್ವಯರನಿಗೆ ತಗುಲಿದವು. ನೆಲಕ್ಕೆ ಉರುಳಿದ ಅವನು ಮತ್ತೆ ಏಳಲೇ ಇಲ್ಲ. ಉಧಮ್ ಸಿಂಗ್ನ ಆಸೆ ಈಡೇರಿತ್ತು. ಪ್ರತಿಜ್ಞೆ ಮಾಡಿದ 21 ವರ್ಷಗಳ ನಂತರ ಆತ ಪ್ರತೀಕಾರವನ್ನು ತೀರಿಸಿಕೊಂಡಿದ್ದ.
ಪೊಲೀಸರಿಗೆ ಶರಣಾದ ಉಧಮ್ ಸಿಂಗನಿಗೆ ಗಲ್ಲು ಶಿಕ್ಷೆ ವಿಧಿಸಿದರು. ದೇಶಕ್ಕಾಗಿ ಸಂತೋಷದಿಂದ ಸಾಯುತ್ತೇನೆ ಎಂದ ಉಧಮ್ ಸಿಂಗ್ 1940 ಜುಲೈ 31ರಂದು ತನ್ನ ಪ್ರಾಣವನ್ನು ಅರ್ಪಿಸಿದನು. ತನ್ನ ಭಾರತೀಯ ಬಂಧುಗಳ ಸಾವಿಗೆ 21 ವರ್ಷಗಳ ನಂತರ ಪ್ರತೀಕಾರ ತೀರಿಸಿಕೊಂಡ ಮಹಾನ್ ದೇಶ ಭಕ್ತ ಉಧಮ್ ಸಿಂಗ್ನನ್ನು ಮರೆತುಬಿಡುವಷ್ಟು ಕೃತಜ್ಞಹೀನರಾಗುವುದು ನಾವು ಬೇಡ. ನಮಗಾಗಿ ಪ್ರಾಣ ಅರ್ಪಿಸಿದ ಮಹಾನ್ ವೀರ ಉಧಮ್ ಸಿಂಗ್ ನಮ್ಮೆಲ್ಲರ ಮನಗಳಲ್ಲಿ ನೆಲೆಸಲಿ.
ವಂದೇ ಮಾತರಂ.
ಕೃಪೆ : ಅಭ್ಯೋದಯ ಕಲಿಕಾ ಕೇಂದ್ರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.