ಅದು 1980, ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಸಿಪಿಐನ ಹಿರಿಯ ಮುಖಂಡರಾದ ಭೂಪೇಶ್ ಗುಪ್ತಾ,ರಾಷ್ಟ್ರಪತಿಗಳ ಸುಗ್ರೀವಾಜ್ಞೆಯ ಕುರಿತು ಮಾತನಾಡುತ್ತಿರುತ್ತಾರೆ, ಉಸ್ತುವಾರಿ ಮತ್ತು ವಾಣಿಜ್ಯ, ರೇಷ್ಮೇ, ಜವಳಿ, ಉಕ್ಕು ಗಣಿ ಮತ್ತು ನಾಗರೀಕ ಸರಬರಾಜು ಸಚಿವರಾಗಿದ್ದವರು ಶ್ರೀ ಪ್ರಣಬ್ ಮುಖರ್ಜಿ. ರಾತ್ರಿ ಅದಾಗಲೇ ತಡವಾಗಿ ಬಿಟ್ಟಿದ್ದರಿಂದ ಇನ್ನೆಷ್ಟು ಸಮಯದಲ್ಲಿ ಮುಕ್ತಾಯವಾಗುತ್ತದೆ, ರಾತ್ರಿ ಊಟದ ವ್ಯವಸ್ಥೆ ಮಾಡಬೇಕೆಂದು ಮುಖರ್ಜಿ ಕೇಳುತ್ತಾರೆ. ಚರ್ಚೆ ಅದಾಗಲೇ ಕಾವೇರಿದ್ದು ಭೂಪೇಶ್ ಗುಪ್ತಾ ಸ್ವಲ್ಪ ಖಾರವಾದ ದನಿಯಲ್ಲಿ ನಿಮ್ಮ ಖರ್ಚಿನಲ್ಲೇ ಪುಷ್ಕಳವಾದ ಭೋಜನ ಮಾಡುತ್ತೇವೆ ಮತ್ತು ಅದು ನಿಮ್ಮ ನಿಲುವನ್ನು ಸೋಲಿಸಿದ ಮೇಲೆ ಎಂದು ಬಿಡುತ್ತಾರೆ, ಮುಜುಗರಗೊಂಡ ಮುಖರ್ಜಿ ಸಾವರಿಸಿಕೊಂಡು ಈ ಸಭೆಯ ಅಧ್ಯಕ್ಷರು ನೀವೂ ಅಲ್ಲ ನಾನೂ ಅಲ್ಲ. ಸಭಾಪತಿಗಳ ಸ್ಥಾನವನ್ನು ಅಹಂಕಾರದಿಂದ ಮಾತನಾಡಿ ವಶಪಡಿಸಿಕೊಳ್ಳಬೇಡಿ ಎಂದು ಬಿಡುತ್ತಾರೆ.
ಪ್ರಣಬ್ ಮುಖರ್ಜಿಯವರ ಪಕ್ಕದಲ್ಲೇ ಇದ್ದ ಶ್ರೀಮತಿ ಇಂದಿರಾಗಾಂಧಿಯವರು ಮಿಸ್ಟರ್ ಮುಖರ್ಜಿ ನೀವು ಸುಖಾಸುಮ್ಮನೆ ಗುಪ್ತಾರ ಮೇಲೆ ಕೋಪಗೊಂಡಿರಿ ಎಂದು ಎಚ್ಚರಿಸುತ್ತಾರೆ. ತಮ್ಮ ತಪ್ಪಿನ ಅರಿವಾಗಿ ಪ್ರಣಬ್ ಮುಖರ್ಜಿಯವರು ಕೂಡಲೇ ಕಾಗದದಲ್ಲಿ ಕ್ಷಮಾಪಣೆಯೊಂದನ್ನು ಬರೆದು ಭೂಪೇಶ್ ಗುಪ್ತಾರಿಗೆ ಬರೆದು ಕಳುಹಿಸುತ್ತಾರೆ. ಅದನ್ನು ತೆಗೆದು ಒಪ್ಪಿಕೊಂಡು ಆದರದಿಂದ ನಗುವೊಂದನ್ನು ಚೆಲ್ಲಿ ಅಂದಿನ ಸದದ ಕಲಾಪವನ್ನು ಅಲ್ಲಿಗೆ ಮುಕ್ತಾಯಗೊಳಿಸುತ್ತಾರೆ.
ಈ ಘಟನೆಯನ್ನು ಸ್ವತಃ ತಮ್ಮ ಆತ್ಮಕಥೆ ‘ದಿ ಕೊಯಿಲೇಷನ್ ಯಿಯರ್ಸ್ ‘ ಪುಸ್ತಕದಲ್ಲಿ ಪ್ರಣಬ್ ಮುಖರ್ಜಿಯವರು ಉಲ್ಲೇಖಿಸುತ್ತಾರೆ. ಅಷ್ಟು ಸಣ್ಣ ಕೋಪಗೊಂಡ ಪ್ರತಿಕ್ರಿಯೆಗೆ ಕ್ಷಮೆ ಕೋರುವ, ಅರಿತು ನಡೆಯುವ, ಸಂಸತ್ತಿನ ಗಂಭೀರತೆಗೆ ಮೆರಗು ನೀಡುವಂತೆ ನಡೆದುಕೊಳ್ಳುವ ಆ ಮುತ್ಸದ್ದಿತನ ಇವತ್ತಿಗೆ ಕಾಣೆಯಾಗಿದ್ದಾದರೂ ಎಲ್ಲಿ ? ನಾವು ಸೋತಿದ್ದೆಲ್ಲಿ?
ಅಷ್ಟಕ್ಕೂ ಈ ಘಟನಾವಳಿ ಹೇಳಿದ್ದಾದರೂ ಯಾಕೆಂದರೆ ಮೊನ್ನೆ ಮೊನ್ನೆ ಸಂಸತ್ತಿನ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಲಾಗಿತ್ತು, ಸ್ವತಃ ಪ್ರಧಾನಮಂತ್ರಿಯವರು ಮಾತನಾಡಲು ನಿಂತಾಗಲೂ ಟಿಡಿಪಿಯ ಸದಸ್ಯರು ಗಲಾಟೆ ಗದ್ದಲ ದೊಂಬಿಯೆಬ್ಬಿಸಿದ್ದರು, ಇಡೀ ಸದನದಲ್ಲಿ ಕಿರಿಕಿರಿಯುಂಟು ಮಾಡಿದ್ದರು. ಅಷ್ಟಕ್ಕೂ ಸಂಸತ್ತಿನ ಅಧಿವೇಶನ ಸಂತೆ ಮಾರುಕಟ್ಟೆಯೇನಲ್ಲ. ಅಲ್ಲಿರುವ ಪ್ರತಿ ಸದಸ್ಯನೂ ಒಂದೊಂದು ಲೋಕಸಭಾ ಕ್ಷೇತ್ರವನ್ನು, ಅಲ್ಲಿನ ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿ. ಆತ ಅಷ್ಟೂ ಜನರ ಪರವಾಗಿ ಧ್ವನಿ ಎತ್ತಲು ಸಂಸತ್ತಿಗೆ ಬಂದಿರುತ್ತಾನೆ, ಕನಿಷ್ಟ ಆರಿಸಿ ಕಳಿಸಿದ ಜನಗಳ ಮರ್ಯಾದೆಯನ್ನು ಉಳಿಸುವ ಕೆಲಸ ಮಾಡದಿದ್ದರೂ ಮರ್ಯಾದೆ ತೆಗೆಯುವ ಕೆಲಸವಂತೂ ಮಾಡಬಾರದು. ಕ್ಷಮೆ ಕೋರುವ ಮುತ್ಸದ್ದಿತನ ಹಾಗಿರಲಿ ಸಾಮಾನ್ಯವಾದ ಸಭ್ಯ ನಡವಳಿಕೆಯೂ ಕಾಣೆಯಾಗಿತ್ತು,
ಇನ್ನು ಪ್ರಬಲ ಪ್ರತಿಪಕ್ಷ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿ(?)ಯವರಂತೂ ತಮ್ಮ ಎಂದಿನಂತ ಸಿಂಹ ಘರ್ಜನೆ(!)ಯನ್ನು ಮುಂದುವರೆಸುತ್ತಾ ಸಾಕ್ಷಿಯಿಲ್ಲದ ಆರೋಪಗಳು, ಫ್ರಾನ್ಸಿನ ಅಧ್ಯಕ್ಷರು, ಹೀಗೆ ಲಗಾಮಿಲ್ಲದ ಕುದುರೆಯಂತಾದ ಪರಿಸ್ಥಿತಿಗೆ ಕಾಂಗ್ರೆಸ್ ಸದಸ್ಯರೂ ಕೂಡ ಎಂದಿನಂತೆಯೇ ಪರಿತಪಿಸಬೇಕಾಯಿತು. ಪ್ರಧಾನಮಂತ್ರಿಯವರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುತ್ತಿಲ್ಲ ಅವಲತ್ತುಕೊಂಡ ರಾಹುಲ್ ರಫೆಲ್ ಒಪ್ಪಂದದಲ್ಲಿ ಹಗರಣವಾಗಿದೆ ಅಂತೆಲ್ಲಾ ಅಬ್ಬರಿಸಿ ಬೊಬ್ಬಿರಿದ ನಂತರ ಸಾಕ್ಷ್ಯಾಧಾರ ಕೊಡುವ ಗೋಜಿಗೆ ಹೋಗಲೇ ಇಲ್ಲ.
ಆದರೆ ಅಷ್ಟೆಲ್ಲ ಗುಡುಗಿ ಗೂಡಾಡಿದ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಹೋಗಿ ಪ್ರಧಾನಮಂತ್ರಿ ಮೋದಿಯವರನ್ನ ತಬ್ಬಿಕೊಂಡಿದ್ದು, ವಾಪಾಸ್ಸು ಬಂದು ಪಕ್ಕದಲ್ಲಿದ್ದ ಇತರ ಸಂಸತ್ ಸದಸ್ಯರಿಗೆ ಕಣ್ಣು ಹೊಡೆದಿದ್ದು ಇಡೀ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದೆ. ಸದನಕ್ಕೆ ತನ್ನದೇ ಆದ ನೀತಿ ನಿಯಮಗಳು ನಡಾವಳಿಗಳಿದ್ದಾವೆ, ಅಲ್ಲಿನ ಪ್ರತಿ ಸಣ್ಣ ಚಲನವಲನಗಳೂ ಕಡತದಲ್ಲಿ ಸೇರಿಸಲ್ಪಡುತ್ತವೆ. ಯಾವುದೇ ಅಸಂವಿಧಾನಿಕ ಸಂಜ್ಞೆಗಳನ್ನು , ಹೇಳಿಕೆಗಳನ್ನು, ನಡಾವಳಿಯನ್ನು ಸಹಿಸಲಾಗುವುದಿಲ್ಲ. ಅಲ್ಲದೆ ಭಾಷಣದ ಕೊನೆಗೆ ರಾಹುಲ್ ಗಾಂಧಿ ಪ್ರಧಾನಮಂತ್ರಿಯವರನ್ನು ತಬ್ಬಿಕೊಂಡದ್ದೂ ಮತ್ತು ವಾಪಾಸ್ಸು ಬಂದು ಪಕ್ಕದ ಸಂಸದರಿಗೆ ಕಣ್ಣು ಹೊಡೆದದ್ದೂ ಕೂಡ ಈ ರೀತಿಯ ಅಸಾಂವಿಧಾನಿಕ ನಡವಳಿಕೆಯೇ. ಈ ಬಗ್ಗೆ ಸ್ಪೀಕರ್ ಕೂಡ ಗರಂ ಆದರು. ಅಂತೆಯೇ ರಾಹುಲ್ ಗಾಂಧಿಯೆಂಬ ಚಿರಯುವಕ ಸಂಸತ್ತಿಗೆ ಹೊಸಬನಲ್ಲ 2004ರಿಂದಲೂ ಸಂಸತ್ ಸದಸ್ಯರು 14 ವರ್ಷಗಳ ದೀರ್ಘಕಾಲೀನ ಸಂಸತ್ಪಟುತ್ವದ ಅನುಭವವುಳ್ಳವರು, ಅನುಭವಿ ಸಂಸತ್ಪಟುಗಳ ಗರಡಿಯಲ್ಲೇ ಇದ್ದವರು. ಆದರೂ ಸಂಸತ್ತಿನ ಎಷ್ಟು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ? ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ?
ತನ್ನ ಅಜ್ಜಿಯ ,ಅಪ್ಪನ ಜಪವನ್ನ, ಅವರ ಬಲಿದಾವೆನ್ನುವ ಜಪವನ್ನು ಮಾಡುವ ರಾಹುಲ್ ಗಾಂಧಿ ಆ ಮಟ್ಟಿನ ಸಂಸದೀಯ ಪಟುತ್ವವನ್ನು ಮೈಗೂಡಿಸಿಕೊಳ್ಳುವ ಯಾವ ಗೋಜಿಗೂ ಹೋಗಲಿಲ್ಲ. ಅವರ ಮುತ್ಸದ್ದಿತನದ ದಲಿಗೆ ಪಪ್ಪುತನವನ್ನು ಸಂಸತ್ತಿನಲ್ಲೇ ಒಪ್ಪಿಕೊಳ್ಳುವ ದಿಟ್ಟತನವನ್ನು ತೋರಿದ್ದು ಮಾತ್ರ ಇಡೀ ದೇಶದ ಜನತೆಯನ್ನ ಒಂದು ಕ್ಷಣಕ್ಕಾದರೂ ನಗೆಗಡಲಲ್ಲಿ ತೇಲುವಂತೆ ಮಾಡಿದ್ದು ಸುಳ್ಳಲ್ಲ.
ಸಂಸತ್ತಿಗೆ ತನ್ನದೇ ಆದ ಗೌರವವಿದೆ,ಇವತ್ತಿನ ಸದನವಂತೂ ಲೈವ್ನಲ್ಲಿ ಕ್ಷಣಕ್ಷಣದ ಮಾಹಿತಿಯೂ ಟಿವಿಯ ಮೂಲಕ ಪ್ರತಿ ಮನೆ ತಲುಪುತ್ತದೆ.ಜನರ ಹಣದಲ್ಲಿ ನಡೆಯುವ ಸದನದ ಯೋಗ್ಯತೆಯನ್ನು ಜನ ಕೂತು ಅಳೆಯುತ್ತಾರೆ. ಅಲ್ಲಿ ಸಂಸದರನ್ನು ಆರಿಸಿ ಕಳುಹಿಸಿರುವುದು ತಮ್ಮ ಪ್ರತಿನಿಧಿಸುವುದಕ್ಕೇ ಎಂಬ ಪ್ರಜ್ಙೆ ಜಾಗೃತವಾಗಿದೆ ಮತ್ತು ಜನಪ್ರತಿನಿಧಿಗಳು ಕೇವಲ ಪ್ರಾತಿನಿಧ್ಯ ತೋರಿದರೆ ಸಾಲದು ಬದಲಿಗೆ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಸಮಾಜದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಬೇಕು ಎಂದು ಜನ ಬಯಸುತ್ತಾರೆ. ಅಷ್ಟಕ್ಕೂ ಇತ್ತೀಚೆಗಿನ ಎರಡು ಕಲಾಪದಲ್ಲಿ ಆಗಿದ್ದು ದೊಂಬಿ ಗಲಾಟೆ ಮಾತ್ರ. ಹಾಗಿದ್ದರೆ ಸಾರ್ವಜನಿಕರ ಹಣದಲ್ಲಿ ಏನು ನಡೆದರೂ ಒಪ್ಪಿಕೊಳ್ಳಬೇಕೆ? ಮಾಜಿ ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾದ ಪವನ್ ಕುಮಾರ್ ಬನ್ಸಲ್ ಒಂದು ಕಡೆ ಉಲ್ಲೇಖಿಸುತ್ತಾರೆ ಸದನದಲ್ಲಿ ಪ್ರತಿ ನಿಮಿಷಕ್ಕೂ 2.5ಲಕ್ಷ ರೂಪಾಯಿ ಖರ್ಚಾಗುತ್ತದೆ, ಹಾಗಾದರೆ ವ್ಯರ್ಥವಾದ ಕಲಾಪದ ಖರ್ಚುವೆಚ್ಚವನ್ನು ಸಂಸತ್ ಸದಸ್ಯರು ಜೇಬಿನಿಂದ ಭರಿಸುತ್ತಾರೇನು? ಜನರ ತೆರಿಗೆ ಹಣವನ್ನು ಜನಪ್ರತಿನಿಧಿಗಳು ಇಷ್ಟು ಬೇಕಾಬಿಟ್ಟಿಯಾಗಿ ಉಡಾಯಿಸಬಹುದೋ?
ಸಂಸತ್ತಿಗೆ ತನ್ನದೇ ಆದ ಇತಿಹಾಸವಿದೆ,ಗೌರವವಿದೆ.ನೆಹರೂನಿಂದ ಹಿಡಿದು ವಾಜಪೇಯಿಯವರವರೆಗೆ ದೊಡ್ಡ ದೊಡ್ಡ ಐತಿಹಾಸಿಕ ಭಾಷಣಗಳಿಗೆ ಸಾಕ್ಷಿಯಾದದ್ದು ಇದೇ ಸಂಸತ್ತು.ಮೇಲ್ಮನೆ ಮತ್ತು ಕೆಳಮನೆಯ ಸ್ವಾರಸ್ಯಕರವಾದ ಚರ್ಚೆಗಳು ಇಡೀ ದೇಶದ ದಿಕ್ಕನ್ನೇ ಬದಲಿಸಿದೆ.ಅದರ ಕಾರ್ಯಕಲಾಪಗಳೂ ಹೆಚ್ಚಿನ ಮಹತ್ವದಿಂದ ಕೂಡಿದೆ.ಆದರೆ ಈಗ ಆಯ್ಕೆಯಾಗಿರುವ ಸಂಸದರಿಗೆ ಅದರ ಕಿಂಚಿತ್ ಪರಿವೆಯೂ ಇಲ್ಲದೆ ಹೋಗಿರುವುದು ವಿಪರ್ಯಾಸ.ಸಂಸದರಿಗಾಗಿ ನಡೆಸುವ ಓರಿಯಟೇಶನ್ ಕಾರ್ಯಕ್ರಮಗಳ ಪ್ರತಿಫಲನ ಕಾರ್ಯ ಕಲಾಪಗಳಲ್ಲಿ ಕಾಣುವುದೇ ಇಲ್ಲ. ಲೋಕಸಭಾ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ಕೂಡ ಸಂಸದೀಯ ಕಾರ್ಯಕಲಾಪಗಳ ಬಗೆಗಿನ ಅರಿವಿನ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. 2014ರಲ್ಲಿ ಅಂದಿನ ಸಚಿವರು ಮತ್ತು ಇಂದಿನ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಈಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದರಾದರೂ ನಂತರ ಅದೂ ಪರದೆಯಿಂದ ಹಿಂದೆ ಸರಿಯಿತು.
ಅಷ್ಟಕ್ಕೂ ಸಂಸತ್ತಿನ ಚರ್ಚೆಗೆ ಗೌರವ ಕೊಡುವ ಅದರ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸವಾಗಬೇಕು.ಆಡಳಿತ ಪಕ್ಷ ಹಳಿತಪ್ಪಿದರೂ ಪ್ರತಿಪಕ್ಷಗಳು ಹದ್ದಿನ ಕಣ್ಣಿನಿಂದ ಕಾಯಬೇಕು,ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು, ಆದರೆ ಪ್ರತಿಪಕ್ಷಗಳೇ ಅಡ್ಡದಾರಿ ಹಿಡಿದಿರುವುದು ವಿಷಾದನೀಯ. ಇದಕ್ಕೆ ತದ್ವಿರುದ್ದವೆಂಬಂತೆ ಆಡಳಿತ ಪಕ್ಷದಲ್ಲಿದ್ದಾಗ್ಯೂ ಪ್ರಧಾನಿ ಮೋದಿಯವರು ಈ ಹಿಂದೆ ಒಮ್ಮೆಯೂ ಸಂಸತ್ ಸದಸ್ಯರಾದ ಅನುಭವವಿಲ್ಲ್ಲದಿದ್ದರೂ ಸಂಸತ್ ಪ್ರವೇಶಿಸುವಾಗಲೇ ಅದರ ಬಾಗಿಲಿಗೆ ನಮಸ್ಕರಿಸಿ ಒಳಬಂದಿರುವುದು ಮತ್ತು ಇದುವರೆಗೂ ಯಾವುದೇ ಅಸಂವಿಧಾನಾತ್ಮಕ ನಡವಳಿಕೆಗಳನ್ನು ಕಲಾಪವು ಅವರ ಮೇಲೆ ದಾಖಲಿಸಿಲ್ಲದಿರುವುದು ಸೋಜಿಗ.
ಸಂಸತ್ತು ಎನ್ನುವ ಕಲ್ಪನೆ ಈ ದೇಶದ ಮಣ್ಣಿನಲ್ಲೇ ಬಂದಿದೆ .12ನೇ ಶತಮಾನದಲ್ಲೇ ಆಧ್ಯಾತ್ಮಿಕ ವಿಚಾರಗಳ ಚರ್ಚೆಗೆ ಅನುಭವ ಮಂಟಪ ಸಾಕ್ಷಿಯಾಗಿತ್ತು. ಚರ್ಚೆಗಳ ಮೂಲಕವೇ ವಿಚಾರಗಳನ್ನು ವಿನಿಮಯ ಮಾಡಿ, ಅದನ್ನು ಮಥಿಸಿ ಅಮೂಲಾಗ್ರವಾಗಿ ವಿಶ್ಲೇಷಿಸಿ ನಂತರವೇ ಒಪ್ಪಿಕೊಳ್ಳುವ, ಜಾರಿಗೆ ತರುವ, ಸಹನೆಯಿಂದ ಆಲಿಸುವ ಈ ದೇಶದ ಸಂಸ್ಕೃತಿಯನ್ನು ಸಂಸತ್ತಿನಲ್ಲಿ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ.
ಇನ್ನಾದರೂ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ತಿಳಿದು ಸದನದ ಗಂಭೀರತೆಯನ್ನು ಅರಿಯಬೇಕು. ಜನಪ್ರನಿಧಿಗಳ ದನಿಗೆ ದನಿಯಾಗಬೇಕಿದೆ, ಪಕ್ಷ ಭೇದ ಮರೆತು ಮುತ್ಸದ್ದಿತನ ತೋರಬೇಕಿದೆ.ಸದನದ ಕಾರ್ಯಕಲಾಪಗಳನ್ನು ಅರಿತು ಪಾಲಿಸಿ,ಸಂವಿಧಾನವನ್ನು ಗೌರವಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.