ಜೈನ್ ಕಂಬೈನ್ಸ್ ರವರ ನಿರ್ಮಾಣದಲ್ಲಿ 1974 ರಲ್ಲಿ ಬಿಡುಗಡೆಯಾದ “ಬೂತಯ್ಯನ ಮಗ ಅಯ್ಯು” ಚಿತ್ರ ಆಗಿನ ಕಾಲಕ್ಕೆ “ಅಖಿಲ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಹೊರಾಂಗಣದಲ್ಲೇ ಚಿತ್ರೀಕರಣ ಮಾಡಿದ ಮೊದಲ ಈಸ್ಟಮನ್ ಕಲರ್ ಚಿತ್ರ” ಈ ಸಿನಿಮಾ. ಡಾ. ವಿಷ್ಣುವರ್ಧನ್, ಲೋಕೇಶ್, ಶಾರದ, ಭವಾನಿ, ಬಾಲಕೃಷ್ಣ ಮುಂತಾದ ಘಟಾನುಘಟಿ ನಟರು ನಟಿಸಿದ ಚಿತ್ರ. ಎಂ.ಪಿ. ಶಂಕರ್ ರವರು ಗೌರವ ನಟರಾಗಿ ನಟಿಸಿದ್ದಾರೆ ಎಂದಷ್ಟೇ ಹೇಳಿದರಾಗದು. ಆ ಚಿತ್ರಕ್ಕೆ ಇವರ ನಟನೆ ಘನತೆಯನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಕನ್ನಡ ನೆಲ ಕಂಡ ಅಪ್ರತಿಮ ಸಾಹಿತಿ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ರವರ ‘ವೈಯ್ಯಾರಿ’ ಕಥಾಸಂಕಲನದಿಂದ ಆಯ್ದ ಕಥೆಗೆ ‘ಹುಣಸೂರ್ ಕೃಷ್ಣಮೂರ್ತಿ’ ರವರು ಮಾತುಗಳನ್ನು (ಸಂಭಾಷಣೆ) ಬರೆದಿದ್ದಾರೆ. ಜಿ.ಕೆ.ವೆಂಕಟೇಶ್ ರವರ ಸಂಗೀತವಿದ್ದು, ಚಿ.ಉದಯಶಂಕರ್, ಜಯಗೋಪಾಲ್, ವಿಜಯನಾರಸಿಂಹ ರವರ ರಚನೆಯ ಸೊಗಾಸದ ಹಾಡುಗಳಿವೆ. ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ವಾಣಿ ಜಯರಾಂ, ಜಿ.ಕೆ.ವೆಂಕಟೇಶ್ ರವರ ದನಿಯಲ್ಲಿ ಹಾಡುಗಳು ಇಂಪಾಗಿವೆ.
ಸಿನಿಮಾ ಆರಂಭವಾಗುವುದೇ ಬೂತಯ್ಯನ ಮನೆಯಲ್ಲಿ. ದೊಡ್ಡ ದೊಡ್ಡ ದೇವರ ಪೋಟೋಗಳಿಗೆ ಊದಿನಕಡ್ಡಿ ಹಿಡಿದು ಧೂಪ ಬೆಳಗುತ್ತಾ, ಪೂಜೆ ಮಾಡುವ ಬೂತಯ್ಯ ಪೂಜೆ ಮುಗಿದ ತಕ್ಷಣವೇ ಹಚ್ಚಿಟ್ಟಿದ್ದ ಊದಿನಕಡ್ಡಿಯ ಆರಿಸುತ್ತಾನೆ. ಇದು ನಾಳಿನ ದುರಾಲೋಚನೆ ಹಾಗೂ ಜಿಪುಣತನದ ಸೂಕ್ಷ್ಮತೆ ತಿಳಿಸುತ್ತದೆ. ಇವನು ಊರಿಗೇ ಸಾಹುಕಾರ. ಹಾಗಾಗಿ ಸಾಲ ಕೊಡುವುದು ಇವನ ಕಾಯಕ. ಅನಕ್ಷರಸ್ಥ ಬಡವ ಇವನು ಹೇಳಿದ್ದಕ್ಕೆ ಹ್ಞೂಂ ಅನ್ನಬೇಕು ವಿಧಿಯಿಲ್ಲ. ಹೆಬ್ಬಟ್ಟಿಗೆ ನೀಲಿ ಮಸಿ ಹಚ್ಚಿ, ಪೇಪರಿಗೆ ಒತ್ತಿಸಿಕೊಂಡು, ಸಾಲ ಪಡೆದವನ ಬಾಳು ಕತ್ತಲಾಗಿಸುತ್ತಾನೆ. ಅಷ್ಟೇ ಅಲ್ಲ, ಎದುರು ಬಿದ್ದವರನ್ನು ಪಿಸ್ತೂಲಿನಿಂದ ಸುಟ್ಟು ಬಿಡುವಷ್ಟು ಕ್ರೂರಿ. ಸಾಲ ವಸೂಲಾತಿಗಾಗಿ ಬಾಣಂತಿಯನ್ನು ಹಸಿಕಂದಮ್ಮನ ಜೊತೆ ಹೊರಗಟ್ಟುವಷ್ಟು ಕಟುಕ, ನಿರ್ದಯಿ. ಇವನ ತದ್ವಿರುದ್ದ ಗುಣಗಳುಳ್ಳ, ಮತ್ತೊಬ್ಬರ ಕಷ್ಟಕ್ಕೆ ಕರಗಿ, ಸಾಧ್ಯವಾದಷ್ಟೂ ನೆರವಾಗುವ ಸದ್ಗುಣ ಸಂಪನ್ನನಾಗಿ ದೇವಯ್ಯ ಎಂಬುವವ ಇದೇ ಊರಿನಲ್ಲಿ ಇರುತ್ತಾನೆ. ಈ ಎರಡೂ ಪಾತ್ರಗಳ ಹೆಸರೇ ವಿಶೇಷ. ಬೂತಯ್ಯ-ದೇವಯ್ಯ. ದೇವರು ಮತ್ತು ರಾಕ್ಷಸ ಎಂಬ ಪಾತ್ರಗಳ ಪೋಷಿಸುವಂತಿದೆ.
ಮಹಾಭಾರತದಲ್ಲಿ ಕೌರವರ ಜತೆಗೂಡಿ, ಕೌರವ ಕುಲವನ್ನೇ ನಾಶ ಮಾಡಿದ ಶಕುನಿಯಂತೆ, ಈ ಬೂತಯ್ಯನ ಸರ್ವನಾಶ ಮಾಡುವ ಸಲುವಾಗಿ ಸಿಂಗ್ಲಯ್ಯ ಉರುಫ್ ಮುಂಡೆಕ್ಯಾತ ಪಾತ್ರದಲ್ಲಿ ಬಾಲಕೃಷ್ಣ ರವರು ನಂಬರ್ ಒನ್. ಒಮ್ಮರ ಬೂತಯ್ಯನು ಹೊಲಿಗೆ ಹಾಕಲು ಜಾಗವಿರದಷ್ಟು ಹಳೆಯ ಚಪ್ಪಲಿಗೇ, ಮತ್ತೂ ಹೊಲಿಗೆ ಹಾಕಿಸಲು ಚಮ್ಮಾರನ ಹತ್ತಿರ ಬರುತ್ತಾನೆ. ಅವನು ಕೂಲಿ ಕೇಳಿದರೆ, “ನಾನ್ಯಾಕೋ ಕೊಡ್ಬೇಕು., ಈ ಮರದ ಕೆಳಗೆ ಕೂತ್ಕೊಳೋಕೆ ಜಾಗ ಕೊಟ್ಟೀನಲ್ಲ, ಅದ್ಕೆ ನೀನೆ ಕೊಡ್ಬೇಕು ಸುಂಕ” ಎಂದು ಅವನ ದರ್ಪ ತೋರಿಸುತ್ತಾನೆ. ಊರಲ್ಲಿ ಯಾರೇ ಸತ್ತರೂ, ಆ ಸೂತಕದ ಮನೆಗೆ ಹೋಗಿ, ಸತ್ತವ ತನ್ನ ಬಳಿ ಸಾಲ ತೆಗೆದುಕೊಂಡಿದ್ದ, ಅವನ ಸಾಲ ತೀರುವವರೆಗೂ ಹೆಣ ಎತ್ತಲು ಬಿಡುವುದಿಲ್ಲ ಎಂಬ ಹಠ ಮಾಡುತ್ತಾನೆ. ಅಂತಾ ಪಾಪಿ ಇವ. ಇಂತಹುದೇ ಪ್ರಸಂಗದಲ್ಲಿ ಸಾಲ ಮಾಡಿರದ ದೇವಯ್ಯನು ಒಬ್ಬಾತನಿಗೆ ಜಾಮೀನು ಹಾಕುತ್ತಾನೆ. ಇಲ್ಲಿಂದಲೇ ಕಥೆಗೆ ತಿರುವು.
ಈ ದೇವಯ್ಯನ ಮಗನೇ ಗುಳ್ಳ (ವಿಷ್ಣುವರ್ಧನ್), ಆ ಬೂತಯ್ಯನ ಮಗನೇ ಅಯ್ಯು (ಲೋಕೇಶ್). ಊರಿನವರ ಖುಷಿಗಾಗಿ ಪಂದ್ಯವೊಂದರಲ್ಲಿ ಅಯ್ಯು ಸೋತು, ಗುಳ್ಳ ಗೆಲ್ಲುತ್ತಾನೆ. ಗುಳ್ಳ ಗೆದ್ದುದರಿಂದ, ದೇವಯ್ಯನು ತನ್ನ ಮಗನಿಗೆ ಧರ್ಮಸ್ಥಳ ಮಂಜುನಾಥನ ದರುಷನ ಮಾಡಿಕೊಂಡು ಬರುವಂತೆ ಕಳುಹಿಸುತ್ತಾನೆ. ಮಗ ಸೋತ ಸಿಟ್ಟನ್ನು ಬೂತಯ್ಯ ಬಡಪಾಯಿಯೊಬ್ಬನ ದನ ಕದ್ದು ಸಿಟ್ಟು ತೀರಿಸಿಕೊಳ್ಳುತ್ತಾನೆ. ಪಾಪ ಆ ಬಡಪಾಯಿ ಧೈರ್ಯ ಮಾಡಿ ಬೂತಯ್ಯನ ಮನೆಗೆ ಬಂದು ಅವನ ಮೇಲೆ ಕೈ ಮಾಡುತ್ತಾನೆ. ಆ ಸಿಟ್ಟಿಗೆ ಬೂತಯ್ಯ ಅವನ ಮನೆಗೆ ಬೆಂಕಿ ಹಚ್ಚುತ್ತಾನೆ. ಹಾಗೇ ಬೆಂಕಿ ಹಚ್ಚಿ ಮನೆಗೆ ಹಿಂದಿರುಗಿ ಓಡಿ ಬರುವಾಗ ಅವನಿಗೆ ಲಕ್ವಾ ಹೊಡೆಯುತ್ತೆ. ಮಾಡಿದ ಪಾಪ ಸುಮ್ಮನೇ ಬಿಡುತ್ತದೆಯೇ ಎಂಬ ತತ್ವ ನೆನಪಾಗದೆ ಇರುವುದಿಲ್ಲ.
ಇತ್ತ ಧರ್ಮಸ್ಥಳಕ್ಕೆ ಬಂದ ಗುಳ್ಳನು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವಾಗ ಅನತಿ ದೂರದಲ್ಲಿ ಸ್ನಾನ ಮಾಡುತ್ತಿದ್ದ ಸುಂದರ ಯುವತಿಯ ಮೇಲೆ ಮೋಹಗೊಳ್ಳುತ್ತಾನೆ. ಆಕೆಯೂ ಇವನ ಚೆಲುವಿಗೆ ಮನಸೋಲುತ್ತಾಳೆ. ಮಂಜುನಾಥನ ದರುಷನ ಮಾಡಿ, ಹೊರಬಂದಾಗ ಆಕಸ್ಮಿಕವಾಗಿ ಅಯ್ಯು ತನ್ನ ಹೆಂಡತಿ ಮಕ್ಕಳೊಡನೆ ಸಿಗುತ್ತಾರೆ. ಗುಳ್ಳ ಮನಸೋತ ಚೆಲುವೆ, ಅಯ್ಯುವಿನ ಹೆಂಡತಿ ಗಿರಿಜಾಳ ಗೆಳತಿಯಾಗಿರುತ್ತಾಳೆ. ಗುಳ್ಳ ಹಾಗೂ ಮಾದೇವಿಯ ಕಣ್ಣಂಚಿನ ಸರಸವನ್ನು ಈ ಸಿನಿಮಾದಲ್ಲಿ ಅದೆಷ್ಟು ಮುದ್ದಾಗಿ ವರ್ಣಿಸಿದ್ದಾರೆಂದರೇ ಆ ಗೀತೆ ಇಂದಿಗೂ ಹಿಟ್. ಅಷ್ಟೇ ಅಲ್ಲ ಎಂದೆಂದಿಗೂ ಹಿಟ್..
“ಮಲೆನಾಡ ಹೆಣ್ಣ ಮೈಬಣ್ಣ,
ಆ ನಡು ಸಣ್ಣ, ನಾ
ಮನಸೋತೆನೆ ಚಿನ್ನಾ
ಬಯಲುಸೀಮೆಯ ಗಂಡು
ಬಲು ಗಂಡು, ಹೂಚೆಂಡು,
ನನ್ನ ಸರದಾಗೆ ರಸಗುಂಡು”
ಎಂಬ ಹಾಡು ಪಿ.ಬಿ.ಶ್ರೀನಿವಾಸ್ ಹಾಗೂ ಎಸ್.ಜಾನಕಮ್ಮನ ದನಿಯಲ್ಲಿ ಕೇಳ್ತಾ ಇದ್ರೆ ತುಂಬಾ ಖುಷಿಯಾಗುತ್ತೆ. ಅದೆಷ್ಟು ಯುವಹೃದಯಗಳು ಈ ಹಾಡು ಕೇಳಿ, ತಮ್ಮ ಅನುರಾಗದ ಅನುಭೂತಿ ಹೊಂದಿಲ್ಲ. ಅದೇ ಕನ್ನಡ ಸಾಹಿತ್ಯದ ಶಕ್ತಿ.
ಗುಳ್ಳ-ಮಾದೇವಿಯರಿಗೆ ಮದುವೆಯಾಗುತ್ತದೆ. ಇತ್ತ ಮದುವೆಯಾದ ಮಗನಿಗೆ ಸಂಸಾರ ನಿರ್ವಹಣೆಯಲ್ಲಿ ಗಂಡಿಗಿರಬೇಕಾದ ತಾಳ್ಮೆ, ಚಾಕಚಕ್ಯತೆ, ಸಹಾನುಭೂತಿ ಕುರಿತು ದೇವಯ್ಯ ಬುದ್ದಿಮಾತು ಹೇಳುತ್ತಾನೆ. ಅತ್ತ ಕೊನೆಯ ದಿನಗಳ ಎಣಿಸುತ್ತಿದ್ದ ಬೂತಯ್ಯ, ಮಗನನ್ನು ಕರೆದು, ಯಾರನ್ನು ನಂಬಬೇಡ, ದುಡ್ಡೇ ದೊಡ್ಡದು, ಸಾಲ ಕೊಡು, ವಸೂಲಿ ಮಾಡು, ಕೆಟ್ಟವರಾಗಿದ್ರೇನೆ ಜನ ಅಂಜೋದು. ಎದುರಿಸಿ ಜೀವನ ಮಾಡು ಎಂದು ದುಷ್ಟಗುಣಗಳ ಭೋದನೆ ಮಾಡಿ, ಕೊನೆಯುಸಿರೆಳೆಯುತ್ತಾನೆ. ಹೆಣ ಹೊರಲು ನಾಲ್ಕು ಜನ ಇಲ್ಲದೇ ಕೊನೆಗೆ ಎತ್ತಿನಗಾಡಿಯಲ್ಲಿಯೇ ಹೆಣ ಸಾಗಿಸಿ, ಅಂತ್ಯಕ್ರಿಯೆ ನಡೆಸುತ್ತಾನೆ ಅಯ್ಯು. ಯಾಕೇ ಬೇಕೆ ಇಂಥಾ ಜೀವನ ಅಂತಾ ನಮಗನಿಸದೇ ಇರಲ್ಲ. ನಮ್ ಕೈಯಲ್ಲಿ ಒಳ್ಳೆಯದು ಮಾಡೋದಕ್ಕಾಗದಿದ್ರು ಪರವಾಗಿಲ್ಲ, ಕೆಟ್ಟದ್ದು ಮಾಡಬಾರದು ಎಂದು ತಕ್ಷಣಕ್ಕೆ ಅನಿಸುತ್ತದೆ. ಇಂಥಾ ಕಠೋರ ಪಾತ್ರದಲ್ಲಿ ಎಂ.ಪಿ.ಶಂಕರ್ ಅಭಿನಯಿಸಿರುವುದು ಸಿನಿಮಾವನ್ನು ನೋಡುವಂತೆ ಮಾಡುತ್ತದೆ ಅಲ್ಲದೇ ಸಿನಿಮಾಗೂ ಒಂದು ಘನತೆ ಗೌರವ ತಂದಿರುತ್ತದೆ.
ತಂದೆ ಸಾವಿನ ನಂತರ, ತಂದೆಯ ಎಲ್ಲಾ ದುಷ್ಟಗುಣಗಳ ಆವಾಹಿತವಾಗಿಸಿಕೊಂಡು ತಂದೆಯ ಹಾದಿಯಲ್ಲಿಯೇ ಅಯ್ಯು ಸಾಗುತ್ತಾನೆ. ಸಾಲ ವಸೂಲಾತಿಗಾಗಿ ಬಂದಾಗ ಗುಳ್ಳನೆದುರಿಗೆ ದೇವಯ್ಯನ ಬಗ್ಗೆ ಹಗುರವಾಗಿ ಮಾತನಾಡುತ್ತಾನೆ. ಇದರಿಂದ ಕೋಪಗೊಂಡ ಗುಳ್ಳ ತಿರುಗಿ ಬೀಳುತ್ತಾನೆ. ಅಲ್ಲಿಂದ ಇವರಿಬ್ಬರ ಯುದ್ದ ಶುರು. ಯಾರೂ ಸೋಲೊಪ್ಪಿಕೊಳ್ಳಲು ತಯಾರಿರುವುದಿಲ್ಲ. ಇವರ ಜಗಳ ಕೋರ್ಟ್ ಮೆಟ್ಟಿಲೇರುತ್ತದೆ. ಇವರ ಆಸ್ತಿಯು ದಿನದಿನವೂ ಕರಗಿಹೋಗುತ್ತಿರುತ್ತದೆ. ಈ ಚಿಂತೆಯಲ್ಲಿಯೇ ದೇವಯ್ಯ ತೀರಿ ಹೋಗುತ್ತಾನೆ. ಆಗ ಬೂತಯ್ಯ ಸತ್ತಾಗ ಬಾರದ ಜನ, ಈಗ ಇಡೀ ಊರಿಗೆ ಊರೇ ದೇವಯ್ಯನ ಅಂತ್ಯಕ್ರಿಯೆಗೆ ಜನ ಸೇರುತ್ತಾರೆ, ದೇವಯ್ಯನ ಸಾವಿಗೆ ಮರುಗುತ್ತಾರೆ.
ಗುಳ್ಳನನ್ನು ಕೊಲ್ಲಲು ಪಿಸ್ತೂಲು ಹಿಡಿದು ಹೊರಟ ಅಯ್ಯುವನ್ನು ಪತ್ನಿ ಗಿರಿಜಾ ತಡೆಯುತ್ತಾಳೆ. ಅವನ ಹಾಗೂ ಮಾವನ ದುಷ್ಟಗುಣಗಳ ಬಗ್ಗೆ ಅವನಿಗೆ ಮನವರಿಕೆ ಮಾಡಿಕೊಡುತ್ತಾಳೆ. ಪಿಸ್ತೂಲು ಬಿಸಾಕಿ ಮನೆಯಿಂದ ಹೊರಬಂದ ಅಯ್ಯುವಿಗೆ ಗುಳ್ಳನ ಹೆಂಡತಿ ಕೆರೆ ನೀರಿಗೆ ಹಾರಿಬಿದ್ದದು ಕಾಣುತ್ತದೆ. ಅವಳನ್ನು ಕಾಪಾಡುತ್ತಾನೆ. ವೈಷಮ್ಯ ಅದೆಷ್ಟೇ ಇರಲಿ ಮಾನವೀಯತೆ ಮರೆಯಬಾರದು ಎಂಬುದಕ್ಕೆ ಒಳ್ಳೆಯ ಉದಾಹರಣೆ ಆಗುತ್ತದೆ ಈ ಪ್ರಸಂಗ. ಗುಳ್ಳನು ಅಯ್ಯು ವಿನ ಮನೆ ಕೆಲಸಕ್ಕೆ ಇರಬೇಕಾದ ಸಮಯ ಬರುತ್ತದೆ. ಆಗಲೂ ಸ್ವಾಮಿನಿಷ್ಠೆ ಮರೆಯೊಲ್ಲ ಗುಳ್ಳ. ನಂತರ ಊರಹಬ್ಬದ ಸಂದರ್ಭದಲ್ಲಿ ಊರಿನ ಜನ ಎಲ್ಲರೂ ಒಂದಾಗಿ ಅಯ್ಯುವಿನ ಮನೆ ನುಗ್ಗಿ ಕೈಗೆ ಸಿಕ್ಕದ್ದನ್ನೆಲ್ಲಾ ದೋಚುತ್ತಾರೆ. ಹಣ, ಒಡವೆ, ಸಾಮಾನು ಸರಂಜಾಮು ಎನ್ನದೇ ಕೊನೆಗೆ ಉಪ್ಪಿನಕಾಯಿ ಜಾಡಿಯನ್ನೂ ದೋಚುತ್ತಾರೆ. ಅವರನ್ನು ಹೊರಗೆ ದಬ್ಬಿ, ಮನೆಗೆ ಬೆಂಕಿ ಹಚ್ಚುತ್ತಾರೆ. ಊರಿಗೆ ಊರೇ ಎದುರಾಗಿ ನಿಂತಾಗ, ಅವನೊಬ್ಬ ಅದೇನು ಮಾಡಿಯಾನು ಅಲ್ಲವೇ? ಅದೇ ದಿನ ರಾತ್ರಿ ಅಯ್ಯು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗುತ್ತಾನೆ. ರಾತ್ರಿ ಜೋರು ಮಳೆಯಿಂದಾಗಿ ಕೆರೆ ಕಟ್ಟೆ ಒಡೆದು ನೀರು, ಅಯ್ಯು ವಿನ ಇನ್ನೊಂದು ಮನೆಯಲ್ಲಿ ಆಶ್ರಯವಾಗಿದ್ದ ಅಯ್ಯುವಿನ ಹೆಂಡತಿ ಮಕ್ಕಳನ್ನು ಪ್ರವಾಹದಿಂದ ಗುಳ್ಳ ಕಾಪಾಡುತ್ತಾನೆ. ಈ ಇಬ್ಬರೂ ಕೋಪದ ಕೈಗೆ ಬುದ್ದಿ ಕೊಟ್ಟು ರಾಕ್ಷಸರಾಗಿದ್ದರೆ ಹೊರತು, ತಮ್ಮ ಮಾನವೀಯತೆ ಕಳೆದುಕೊಂಡಿರಲಿಲ್ಲ. ಅದೇ ಇವರನ್ನು ಮತ್ತೆ ಒಂದು ಮಾಡಿತು. ಊರಿಗೆ ಊರೇ ಒಂದಾಗಿ ಅಯ್ಯುವನ್ನು ತಮ್ಮವರಲ್ಲೊಬ್ಬನಂತೆ ಬದುಕು ಸಾಗಿಸಲು ಹೆಗಲು ನೀಡಿತು. ಇಷ್ಟೆಲ್ಲಾ ಒಳ್ಳೆಯ ಅಂಶಗಳಿರುವ ಸಿನಿಮಾ ತಪ್ಪದೇ ನೋಡಬೇಕಲ್ಲವೇ?
ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಧರ್ಮಸ್ಥಳದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪನಪೂರ್ವ ಹೇಗಿತ್ತು ಎಂಬುದನ್ನು ಚಿತ್ರದಲ್ಲಿ ಕಾಣಬಹುದು. ಈ ಸಿನಿಮಾದಲ್ಲಿನ ಹಾಸ್ಯ ದೃಶ್ಯವೊಂದು, ಅದೇ ಹೋಟೆಲೊಂದರ ಫುಲ್ ಮೀಲ್ಸ್ ಕಾಮಿಡಿ. ಎರಡು ರೂಪಾಯಿ ಬೆಲೆಯ ಒಂದು ಊಟವನ್ನು ನಾಲ್ಕು ಜನ ಟವಲ್ ಮುಚ್ಚಿಕೊಂಡು ಊಟ ಬಡಿಸುವಾತನನ್ನು ಯಾಮಾರಿಸಿ ಹೊಟ್ಟೆ ತುಂಬಾ ಊಟ ಮಾಡುವ ದೃಶ್ಯ ಇವತ್ತಿಗೂ ಹೊಟ್ಟೆ ಹುಣ್ಣಾಗಿಸುವಂತ ಹಾಸ್ಯದೃಶ್ಯ.
ಇಂಥ ಒಂದು ಅದ್ಭುತ ಚಿತ್ರವನ್ನು ಎನ್.ವೀರಾಸ್ವಾಮಿ, ಎಸ್.ಪಿ.ವರದರಾಜ್, ಸಿದ್ದಲಿಂಗಯ್ಯ ಹಾಗೂ ಚಂದೂಲಾಲ್ ಜೈನ್ ನಿರ್ಮಾಣ ಮಾಡಿರುವುದು ಹಾಗೂ ಸಿದ್ದಲಿಂಗಯ್ಯ ರವರೇ ನಿರ್ದೇಶನ ಮಾಡಿ, ಸೊಗಸಾದ ದೃಶ್ಯರೂಪಕವನ್ನು ನೀಡಿರುವುದು ಕನ್ನಡಿಗನ ಪಾಲಿಗೆ ಹೆಮ್ಮೆಯ ವಿಷಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.