ಬೈಂದೂರು: ಪ್ರಾಪಂಚಿಕ ಬದುಕಿನಲ್ಲಿ ಎಲ್ಲಾ ಇದೆ. ಇದರಲ್ಲಿ ಸೂಕ್ತವಾದ ಆಯ್ಕೆ ನಮ್ಮದಾಗಬೇಕು. ಶಿಕ್ಷಣ, ಪರಿಸರದ ಜೊತೆ ಏರುಮುಖದ ಸಂಸ್ಕೃತಿ ಕಾಣಬೇಕಾದರೆ ರಂಗಭೂಮಿಯೇ ಶ್ರೇಷ್ಠ ಆಯ್ಕೆ ಎಂದು ನಿನಾಸಂ ಪದವೀಧರ ಹಾಗೂ ಕುಂದಾಪುರ ರಂಗ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ವಿನಾಯಕ ಎಸ್. ಎಂ. ಹೇಳಿದರು.
ಬೆಂಗಳೂರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಲಾವಣ್ಯ ಬೈಂದೂರು ಆಶ್ರಯದಲ್ಲಿ ಶ್ರೀಶಾರದಾ ವೇದಿಕೆಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗೃಹಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಂಗಭೂಮಿಯ ಸವಾಲುಗಳು ಹಾಗೂ ಸಾಧ್ಯತೆಗಳು ಎರಡೂ ಒಂದೇ. ಮಕ್ಕಳಿಗಾಗಿ ರಂಗಭೂಮಿ ಮಾಡಿದರೆ ಸೂಕ್ತ. ಮಕ್ಕಳಿಂದಲೂ ನಾಟಕ ಮಾಡಿಸಬಹುದು. ಪ್ರಕ್ರಿಯೆ ಹಾಗೂ ಪ್ರದರ್ಶನ ಎಂಬ ಎರಡು ವಿಧದ ರಂಗಭೂಮಿಯಲ್ಲಿ ಸಂಹವನ ಪ್ರಕ್ರಿಯೆ ಚುರುಕುಗೊಳಿಸಬೇಕು. ಬಲೂನು ಬಣ್ಣಗಳಿಂದ ಅವಲಂಬಿತವಾಗದೇ ಅದರಲ್ಲಿ ತುಂಬಿದ ಗಾಳಿಯ ಪ್ರಮಾಣದ ಆಧಾರದ ಮೇಲೆ ಹಾರುತ್ತದೆ. ಹಾಗೆಯೇ ಮಕ್ಕಳನ್ನು ಕಲಿಕೆಯ ಜೊತೆ ಆಶಾದಾಯಕ, ಆಸಕ್ತಿದಾಯಕ ವ್ಯಕ್ತಿತ್ವ ರೂಪಿಸುವ ರಂಗಭೂಮಿ ನಿರ್ಮಾಣ ಮಾಡಬೇಕು ಎಂದರು.
ರಂಗಭೂಮಿಯ ಕಲಾಪ್ರಕಾರಗಳು ಇಂದಿಗೂ ತನ್ನತನವನ್ನು ಉಳಿಸಿಕೊಂಡಿದೆ. ಸಮಾಜವನ್ನು ಕೆರಳಿಸುವ ಕೆಲಸ ಮಾಡದೇ ಅರಳಿಸುವ ತಿದ್ದುವ ಪರಿವರ್ತಿಸುವ ಕೆಲಸಗಳನ್ನು ಮಾಡುತ್ತಿದೆ. ನಾಟಕ, ಯಕ್ಷಗಾನಗಳು ದಿನಾ ಒಂದೊಂದು ರೀತಿಯಲ್ಲಿ ಆಂಗಿಕ, ವಾಚಿಕ, ಸಾತ್ವಿಕ ಅಭಿನಯ ಮಾಡುವ ಸೃಜನಶೀಲ ಕಲೆಗಳಾಗಿದೆ. ಇಂದಿನ ಕಾಲಘಟ್ಟದಲ್ಲಿ ಸಿನಿಮಾ, ಇಂಟರ್ನೆಟ್, ವಾಟ್ಸ್ಸಪ್ಗಳು ಹಿಂಸಾಚಾರ, ಅತ್ಯಾಚಾರಗಳನ್ನು ಹೆಚ್ಚಾಗಿ ಬಿಂಬಿಸುವ ಹಾಗೆ ಆಧುನಿಕ ರಂಗಭೂಮಿ ನಾಟಕಗಳು ಸಂಸ್ಕಾರಕ್ಕೆ ಚ್ಯುತಿ ಬರದ ಹಾಗೆ ಒಂದು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಒರ್ವ ನಟ ಟಿವಿಯಲ್ಲಿ ಚಿಕ್ಕವನಾಗಿ, ಸಿನಿಮಾದಲ್ಲಿ ದೊಡ್ಡವನಾಗಿ ಕಾಣುತ್ತಾನೆ. ಆದರೆ ರಂಗಭೂಮಿಯಲ್ಲಿ ಮಾತ್ರ ಆತ ಇರುವ ಹಾಗೆ ಕಾಣಬಹುದಾಗಿದೆ ಎಂದರು.
ಲಾವಣ್ಯ ಅಧ್ಯಕ್ಷ ಯೋಗೀಶ್ ಬಂಕೇಶ್ವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕಲಾವಿದ ಪಡುಕೋಣೆ ರಾಬರ್ಟ ಡಿಸೋಜರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ರಂಗ ನಿರ್ದೇಶಕ ಸತ್ಯನಾ ಕೊಡೇರಿ, ರಂಗಕಲಾವಿದರಾದ ವಿ.ಎಚ್ ನಾಯಕ್, ಮಂಜು ಕಾಳಾವರ್, ಲಾವಣ್ಯ ಗೌರವಾಧ್ಯಕ್ಷ ಬಿ.ರಾಮ ಟೈಲರ್ ಉಪಸ್ಥಿತರಿದ್ದರು.
ಕಲಾವಿದ ಗಣಪತಿ ಎಸ್, ಕ್ರಜಿಸ್ಟೋಫ್ ವಾರ್ಲಿಕೋವಸ್ಕಿಯವರ (ಅಂತರಾಷ್ಟ್ರೀಯ ರಂಗಸಂಸ್ಥೆಯ) ಸಂದೇಶ ವಾಚಿಸಿದರು. ಕಾರ್ಯದರ್ಶಿ ನರಸಿಂಹ ನಾಯಕ್ ಸ್ವಾಗತಿಸಿ, ಸದಾಶಿವ ಡಿ. ಪಡುವರಿ ವಂದಿಸಿದರು. ಗಿರೀಶ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಅನಂತರ ಶ್ರೀನಿವಾಸ ಪ್ರಭು ಸಂಗೀತ ನಿರ್ದೇಶನದಲ್ಲಿ ಮೂರ್ತಿ ಬೈಂದೂರು ತಂಡದವರು ರಂಗಗೀತೆ ಹಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.