ಅಹಿಂದ ಪ್ರೇಮದ ಹಿಡನ್ ಅಜೆಂಡಾ ಇಟ್ಟುಕೊಂಡೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ಅಹಿಂದ ಅಂಧಪ್ರೇಮದ ಪರಾಕಾಷ್ಠೆಗೆ ತಲುಪಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಕಡುಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿಯನ್ನು ಒಂದು ರೂ. ದರದಲ್ಲಿ ಹಂಚಿದರು. ತನ್ಮೂಲಕ ದುಡಿದು ತಿನ್ನುವ ಮಂದಿಯನ್ನು ಶುದ್ಧ ಸೋಮಾರಿಗಳಾಗುವಂತೆ ಉತ್ತೇಜಿಸಿದರು. ಕಿಲೋಗೆ ಒಂದು ರೂ.ನಂತೆ ಅಕ್ಕಿ ವಿತರಿಸಿದರೆ ಕಡುಬಡವರ ಉದ್ಧಾರ ಆಗಿಬಿಡುತ್ತದೆ ಎಂದು ಸಿದ್ಧರಾಮಯ್ಯನವರಿಗೆ ಅದ್ಯಾವ ಬುದ್ಧಿಜೀವಿ ಸಲಹೆ ನೀಡಿದರೋ ಗೊತ್ತಿಲ್ಲ. ಈಗೇನಾಗಿದೆಯೆಂದರೆ, ಒಂದು ರೂ.ಗೆ ಕಿಲೋ ಅಕ್ಕಿ ಪಡೆದವರ ಆರ್ಥಿಕ ಸ್ಥಿತಿಯೇನೂ ಬದಲಾಗಿಲ್ಲ. ತಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕಿದ ಅಕ್ಕಿಯನ್ನು ಅವರು ಅಂಗಡಿಗಳಿಗೆ, ಹೊಟೇಲ್ಗಳಿಗೆ, ಇನ್ಯಾರೋ ಅನುಕೂಲವಂತ ಪರಿಚಿತರಿಗೆ ಹೆಚ್ಚು ಬೆಲೆಗೆ ಮಾರಿ, ಆ ಹಣವನ್ನು ಹೊಟ್ಟೆ ತುಂಬ ಹೆಂಡ ಕುಡಿಯಲು ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಮುಖ್ಯಮಂತ್ರಿಯವರ ಈ ಬಡವರ ಉದ್ಧಾರದ `ಕ್ರಾಂತಿಕಾರಿ’ ಕ್ರಮದಿಂದಾಗಿ ಇಡೀ ರಾಜ್ಯದ ಯಾವುದೇ ಹಳ್ಳಿಗಳಲ್ಲಿ ಕೃಷಿ ಕಾರ್ಯಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಪರಿಣಾಮವಾಗಿ ಕೃಷಿ ಕೆಲಸ ಹಳ್ಳ ಹತ್ತಿ ಹೋಗಿದೆ. ಪ್ರಾಮಾಣಿಕವಾಗಿ ದುಡಿದು ತಿನ್ನಬೇಕೆಂಬ ಮನೋಭಾವ ಜನಮನದಿಂದ ದೂರವಾಗಿದೆ. ಸೋಮಾರಿಗಳಾಗಿ, ಸರ್ಕಾರದಿಂದ ಸಿಗುವ ಬಿಟ್ಟಿ ಹಣ, ಆಹಾರ ಪದಾರ್ಥಗಳನ್ನೇ ಅವಲಂಬಿಸಿ ಸ್ವಾಭಿಮಾನವೆನ್ನುವುದು ಸತ್ತೇ ಹೋಗಿದೆ. ಕನ್ನಡಿಗರು ಮೊದಲೇ ಸ್ವಾಭಿಮಾನಶೂನ್ಯರೆಂಬ ಹೆಗ್ಗಳಿಕೆ ಹೊತ್ತವರು. ಈಗ ಇದು ಇನ್ನಷ್ಟು ನಿಜವಾಗಿದೆ.
ಅಹಿಂದ ಸಮುದಾಯಕ್ಕೆ ಹಲವು ರೀತಿಯ `ಭಾಗ್ಯ’ಗಳನ್ನು ಕರುಣಿಸಿದ ಸಿದ್ಧರಾಮಯ್ಯ ಸರ್ಕಾರ ಈಗ ಕರುಣಿಸಿರುವ `ಬಿಡುಗಡೆಯ ಭಾಗ್ಯ’ವಂತೂ ಘನಘೋರ! 2009-10 ರಲ್ಲಿ ಕರ್ನಾಟಕದ ಮೈಸೂರು, ಹಾಸನ, ಶಿವಮೊಗ್ಗ ಮುಂತಾದೆಡೆ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ 175 ಪ್ರಕರಣಗಳನ್ನು ವಜಾಗೊಳಿಸಿ, 1600 ಕ್ಕೂ ಹೆಚ್ಚು ಆರೋಪಿಗಳಿಗೆ ಬಿಡುಗಡೆ ಭಾಗ್ಯ ಕರುಣಿಸಿದೆ. ಇವರೆಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಪಿಗಳಾಗಿ ವಿವಿಧ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದರು. ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿತ್ತು. ಅವರ ಮೇಲಿನ ಆರೋಪ ನಿಜವೇ, ಸುಳ್ಳೇ ಎಂಬುದು ಇತ್ಯರ್ಥವಾಗಬೇಕಾಗಿದ್ದುದು ನ್ಯಾಯಾಲಯದಲ್ಲಿ. ಸರ್ಕಾರ ನ್ಯಾಯಾಲಯಕ್ಕೇ ಅದನ್ನು ಬಿಡಬೇಕಾಗಿತ್ತು. ಆದರೆ ಹಾಗೆ ಮಾಡದೇ ಸಂಪುಟ ಸಭೆಯಲ್ಲಿ ನಿರ್ಧರಿಸಿ ಮೊಕದ್ದಮೆ ಹಿಂದಕ್ಕೆ ಪಡೆದ ತೀರ್ಮಾನ ಅತ್ಯಂತ ಆಘಾತಕಾರಿ ಹಾಗೂ ಪ್ರಜಾತಂತ್ರ ವಿರೋಧಿ ಕ್ರಮ.
ಸಂಪುಟ ಸಭೆಯಲ್ಲಿ ಹೀಗೊಂದು ನಿರ್ಧಾರ ಕೈಗೊಳ್ಳಬೇಕಾದರೆ ಅದಕ್ಕೆ ಗೃಹ ಮತ್ತು ಕಾನೂನು ಇಲಾಖೆಗಳ ಸಮ್ಮತಿ ಇರಬೇಕಾಗುತ್ತದೆ. ಏಕೆಂದರೆ ಕೋಮುಗಲಭೆಗಳು ನಡೆದಾಗ ಅದನ್ನು ನಿರ್ವಹಿಸುವುದು ಗೃಹ ಇಲಾಖೆ ಹಾಗೂ ಕಾನೂನು ಇಲಾಖೆ. ಆದರೆ ಯಾವುದೇ ಪ್ರಕರಣಗಳನ್ನು ಹಿಂದೆ ಪಡೆಯಲು ರಾಜ್ಯದ ಗೃಹ ಮತ್ತು ಕಾನೂನು ಇಲಾಖೆ ಸಮ್ಮತಿಸಿಲ್ಲ. ಪ್ರಕರಣಗಳನ್ನು ದಾಖಲಿಸಿದ ಪೊಲೀಸ್ ಅಧಿಕಾರಿಗಳು ಪ್ರಕರಣ ಹಿಂದೆ ಪಡೆಯಲು ಸರ್ಕಾರವನ್ನು ಬೇಡಿಕೊಂಡಿಲ್ಲ. ಹೀಗಿದ್ದರೂ ಸರ್ಕಾರ ಕೋಮುಗಲಭೆ ಕೇಸುಗಳನ್ನು ವಾಪಾಸ್ ಪಡೆದಿದ್ದು ಏಕೆ?
ಮೈಸೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದಿದ್ದ ಕೋಮುಗಲಭೆಗಳಲ್ಲಿ ಭಾಗಿಯಾಗಿದ್ದ ಸುಮಾರು 1600 ಜನರ ವಿರುದ್ಧ ೧೭೫ ಮೊಕದ್ದಮೆಗಳು ದಾಖಲಾಗಿದ್ದವು. ಸರ್ಕಾರ ಮತ್ತು ಖಾಸಗಿಯವರ ಆಸ್ತಿಹಾನಿ, ಹಿಂಸಾಚಾರ, ದೊಂಬಿ, ಕೋಮುದ್ವೇಷ ಬಿತ್ತುವಂಥ ಗಂಭೀರ ಸ್ವರೂಪದ ಅಪರಾಧಗಳಲ್ಲಿ ಭಾಗಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಈ ಎಲ್ಲ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಸಂಘಟನೆಗಳೆಂದರೆ ಪಿಎಫ್ಐ ಮತ್ತು ಕೆಎಫ್ಡಿ. ಎಂಬುದನ್ನು ಪೊಲೀಸರೇ ಸ್ವತಃ ತಿಳಿಸಿದ್ದರು. ಪಿಎಫ್ಐ ಮತ್ತು ಕೆಎಫ್ಡಿ ಭಯೋತ್ಪಾದಕ ಸಂಘಟನೆಗಳಲ್ಲ ಎಂದು ಸಿದ್ಧರಾಮಯ್ಯ ಸರ್ಕಾರ ಈಗ ವಾದಿಸಬಹುದು. ಆದರೆ ಅವೆರಡೂ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯ ಹೊಸ ಅವತಾರಗಳೆಂಬುದು ಸರ್ಕಾರಕ್ಕೆ ಗೊತ್ತಿರದೇ ಇರಲು ಸಾಧ್ಯವಿಲ್ಲ. ಗುಪ್ತಚರ ಇಲಾಖೆಯ ಮಾಹಿತಿಗಳೇ ಸರ್ಕಾರದ ಮುಂದಿರುವಾಗ ಅದನ್ನೇಕೆ ಕಡೆಗಣಿಸಲಾಗಿದೆ? ಕರ್ನಾಟಕ ಸೇರಿದಂತೆ ಕೇರಳ, ಗೋವಾ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರ ಮುಂತಾದ ರಾಜ್ಯಗಳಲ್ಲಿ ಈ ಸಂಘಟನೆಗಳು ಸಮಾಜಘಾತುಕ ಕೃತ್ಯಗಳಲ್ಲಿ ಸಕ್ರಿಯವಾಗಿವೆ. ಮೈಸೂರಿನ ಕ್ಯಾತಮಾರನಹಳ್ಳಿ ಬಡಾವಣೆ ಗಲಭೆಯಲ್ಲಿ ಪೊಲೀಸ್ ವಾಹನ ಸುಟ್ಟಿದ್ದು, ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಮೈಸೂರಿನ ಎನ್.ಆರ್. ಮೊಹಲ್ಲದಲ್ಲಿ 4 ದೇವಸ್ಥಾನಗಳನ್ನು ಒಡೆದು ಲೂಟಿ ಮಾಡಿದ್ದು, ಪ್ರೆಸ್ಕ್ಲಬ್ಗೆ ಕೆಎಫ್ಡಿ ಕಾರ್ಯಕರ್ತರು ಸುದ್ದಿಗೋಷ್ಠಿ ವೇಳೆ ಕಾನೂನುಬಾಹಿರವಾಗಿ ಶಸ್ತ್ರಗಳನ್ನು ತಂದಿದ್ದು, ಹುಣಸೂರಿನ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಅಪಹರಿಸಿ ಹತ್ಯೆ ಮಾಡಿದ್ದು… ಇತ್ಯಾದಿ ಪ್ರಕರಣಗಳಲ್ಲಿ ಇವೆರಡೂ ಸಂಘಟನೆಗಳ ಮೇಲೆ ಆರೋಪದ ತೂಗುಕತ್ತಿ ನೇತಾಡುತ್ತಿದೆ.
ಕೇರಳದಲ್ಲಿ ಉಪನ್ಯಾಸಕ ಜೋಸೆಫ್ ಎಂಬುವರ ಕೈ ಕಡಿದವರಿಗೆ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿತ್ತು. ಆ ಪ್ರಕರಣದಲ್ಲಿ ರಾಜ್ಯದ ಪಿಎಫ್ಐ ಪದಾಧಿಕಾರಿಗಳು ಶಾಮೀಲಾಗಿದ್ದರೆಂದು ಪತ್ತೆಯಾಗಿದೆ. ಕೇರಳ ಸರ್ಕಾರ, ಪಿಎಫ್ಐ ದೇಶದ್ರೋಹಿ ಸಂಘಟನೆಗಳೊಂದಿಗೆ ಕೈಜೋಡಿಸಿ ಕಾರ್ಯ ಮಾಡುತ್ತಿದೆ ಎಂದು ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಇವೆಲ್ಲ ಸಂಗತಿಗಳು ಸಿದ್ಧರಾಮಯ್ಯ ಸರ್ಕಾರಕ್ಕೆ ಗೊತ್ತಿಲ್ಲವೆ?
ಉತ್ತರ ಭಾರತದಲ್ಲಿ ಭಯೋತ್ಪಾದಕ ಸಿಮಿ ಸಂಘಟನೆಯನ್ನು ಸರ್ಕಾರ ನಿಷೇಧಿಸಿದರೇನಂತೆ, ದಕ್ಷಿಣದಲ್ಲಿ ಅದರ ಹೊಸ ಹೊಸ ಅವತಾರಗಳು ಮರುಹುಟ್ಟು ಪಡೆದಿವೆ. ಕೆಎಫ್ಡಿ, ಪಿಎಫ್ಐ… ಇತ್ಯಾದಿ ಸಿಮಿಯ ಹೊಸ ಅಪರಾವತಾರಗಳು! ಪಾಕಿಸ್ಥಾನದ ಐಎಸ್ಐ ಮತ್ತು ತಾಲಿಬಾನ್ ಜೊತೆ ನೇರ ಸಂಪರ್ಕ, ಸಂಬಂಧ ಈ ಸಂಘಟನೆಗಳಿಗಿವೆ ಎಂದು ಗುಪ್ತಚರ ಇಲಾಖೆಯೇ ಸಂಶಯಿಸಿದೆ. ಹೀಗಿದ್ದರೂ ಆ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಏಕಾಏಕಿ ಸರ್ಕಾರ ಹಿಂದೆ ಪಡೆದಿದ್ದು ಏನನ್ನು ಸೂಚಿಸುತ್ತದೆ? ರಾಜ್ಯ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆ ಎಂಬ ಸಂದೇಶ ರವಾನೆಯಾಗದೆ ಇರಲು ಸಾಧ್ಯವೆ?
ಬಾಲಿವುಡ್ ತಾರೆ ಸಂಜಯ್ದತ್ ಅಕ್ರಮ ಶಸ್ತ್ರಾಸ್ತ್ರಗಳನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆತನಿಗೆ ಶಿಕ್ಷೆಯಾಗಿ ಜೈಲುವಾಸ ಅನುಭವಿಸಬೇಕಾಯಿತು. ಇನ್ನು ಪೊಲೀಸ್ ವಾಹನ ಸುಟ್ಟಿದ್ದು, ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಹತ್ಯೆ ಮಾಡಿದ್ದು, ಮೈಸೂರಿನ ಸುದ್ದಿಗೋಷ್ಠಿಗೆ ಕಾನೂನುಬಾಹಿರವಾಗಿ ಶಸ್ತ್ರಗಳನ್ನು ತಂದಿದ್ದು ಇತ್ಯಾದಿ ವಿದ್ಯಮಾನಗಳು ಹಾಗಿದ್ದರೆ ಗಂಭೀರ ಪ್ರಕರಣಗಳೇ ಅಲ್ಲವೇ? ಇಂತಹ ಸಮಾಜಘಾತುಕ ಪ್ರಕರಣಗಳನ್ನು ಸರ್ಕಾರ ವಜಾಗೊಳಿಸುತ್ತದೆಂದರೆ ಮುಂದಿನ ದಿನಗಳಲ್ಲಿ ಯಾರು ಬೇಕಾದರೂ ಇಂತಹ ಇನ್ನಷ್ಟು ಪ್ರಕರಣಗಳಲ್ಲಿ ರಾಜಾರೋಷವಾಗಿ ಶಾಮೀಲಾಗಬಹುದೆಂದು ಅರ್ಥವೇ?
`ನಮ್ಮ ಸರ್ಕಾರ ಕೋಮುಗಲಭೆಗೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧದ ಕೇಸುಗಳನ್ನು ಮಾತ್ರವೇ ವಾಪಸ್ ಪಡೆದಿಲ್ಲ. ಹಿಂದುಗಳ ವಿರುದ್ಧದ ಪ್ರಕರಣವನ್ನೂ ಪಡೆದಿದೆ. ೧೨೦೦ ಹಿಂದುಗಳ ಕೇಸುಗಳನ್ನು ಹಿಂದೆ ಪಡೆಯಲಾಗಿದೆ’ ಎಂದು ಗೃಹ ಸಚಿವ ಜಾರ್ಜ್ ಹಾಗೂ ಕಾನೂನು ಸಚಿವ ಜಯಚಂದ್ರ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ದ್ವೇಷಕ್ಕಾಗಿ ಹೆಚ್ಚು ಮುಸ್ಲಿಮರ ಮೇಲೆ ಪ್ರಕರಣ ದಾಖಲಿಸಲಾಗಿತ್ತು ಎಂಬುದು ಅವರ ಇನ್ನೊಂದು ಸಮರ್ಥನೆ. ಬಿಜೆಪಿ ದ್ವೇಷದಿಂದ ಹೆಚ್ಚು ಮುಸ್ಲಿಮರ ಮೇಲೆ ಕೇಸು ಹಾಕಿದೆಯೋ ಇಲ್ಲವೋ ಎಂದು ಇತ್ಯರ್ಥವಾಗಬೇಕಾದುದು ನ್ಯಾಯಾಲಯದಲ್ಲಿ . ಅದನ್ನು ಸರ್ಕಾರ ತೀರ್ಮಾನಿಸುವುದು ಎಷ್ಟು ಸಮಂಜಸ?
ಸಿದ್ಧರಾಮಯ್ಯ ಸರ್ಕಾರ 175 ಕೋಮುಗಲಭೆ ಸಂಬಂಧದ ಕೇಸುಗಳನ್ನು ಹಿಂದೆ ಪಡೆದ ವಿದ್ಯಮಾನ ಈಗ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವುದು ನಿಜ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಅರ್ಧದಷ್ಟು ಕೆದಿಗಳು ಅಲ್ಪಸಂಖ್ಯಾತರು. ಅವರು ಅಪರಾಧ ಚಟುವಟಿಕೆಗಳತ್ತ ಮುಖ ಮಾಡಲು ಕಾರಣಗಳೇನೆಂದು ತಿಳಿದುಕೊಳ್ಳಲು ತಜ್ಞರ ಸಮಿತಿ ರಚಿಸಲಾಗುವುದೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕಿಶ್ ಬಾನು ತಿಳಿಸಿದ್ದಾರೆ. ಬಲ್ಕಿಶ್ ಬಾನು ರಚಿಸಲಿರುವ ತಜ್ಞರ ಸಮಿತಿಯಲ್ಲಿ ಯಾರು ಇರುತ್ತಾರೆ, ಅವರು ಎಂತಹ ವರದಿ ಕೊಡುತ್ತಾರೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಆ ತಜ್ಞರ ಸಮಿತಿ ವರದಿ ಸರ್ಕಾರದ ನಿರೀಕ್ಷೆಯಂತೆಯೇ ಹೊರಬರಬಹುದು. ಆಗ ಪರಪ್ಪನ ಜೈಲಿನಲ್ಲಿರುವ 2058 ಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಕೈದಿಗಳಿಗೆ ಬಿಡುಗಡೆಯ ಭಾಗ್ಯ ದೊರಕಿದರೆ ಆಶ್ಚರ್ಯವೇನಿಲ್ಲ.
ಅಹಿಂದದ ನಾಯಕರಾಗಿ ಸಿದ್ಧರಾಮಯ್ಯ ಆ ಸಮುದಾಯಕ್ಕೆ ಆಪ್ಯಾಯಮಾನವಾದ ಯಾವುದೇ ಕೆಲಸಗಳನ್ನು ಮಾಡಲಿ, ಅದಕ್ಕೆ ಯಾರದ್ದೂ ವಿರೋಧ ಇರದು. ಆದರೆ ಸಿದ್ಧರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿಗಳು. ಇಡೀ ರಾಜ್ಯದ 6 ಕೋಟಿ ಜನತೆಯ ಯೋಗಕ್ಷೇಮ ನೋಡಿಕೊಳ್ಳಬೇಕಾದ ಗುರುತರ ಹೊಣೆ ಹೊತ್ತವರು. ವೋಟ್ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದು ಮುಖ್ಯಮಂತ್ರಿ ಹುದ್ದೆಗೆ ಖಂಡಿತ ಶೋಭೆ ತರುವುದಿಲ್ಲ. ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ವಜಾಗೊಳಿಸಲು ತೀರ್ಮಾನಿಸಿದ ಮುಖ್ಯಮಂತ್ರಿ ರಾಜ್ಯದ ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಪತ್ರಕರ್ತರ ವಿರುದ್ಧದ ಹಲವು ಪ್ರಕರಣಗಳನ್ನು ಏಕೆ ವಜಾಗೊಳಿಸಲು ಮುಂದಾಗಲಿಲ್ಲ? ವಕೀಲರ ವಿರುದ್ಧ ನಿಂದನೆ ಮಾಡಿದ್ದಕ್ಕೆ ಹಲವಾರು ಮಾಧ್ಯಮಗಳು ಈಗಲೂ ಮೊಕದ್ದಮೆ ಎದುರಿಸುತ್ತಿವೆ. ಆ ಮೊಕದ್ದಮೆಗಳಲ್ಲಿ ಯಾವ ಹುರುಳೂ ಇಲ್ಲ. ಅವುಗಳನ್ನೇಕೆ ವಜಾಗೊಳಿಸಲು ನಿರ್ಧರಿಸಿಲ್ಲ?
ಸಿದ್ಧರಾಮಯ್ಯ ಅಹಿಂದ ಮುಖ್ಯಮಂತ್ರಿಯಲ್ಲ. ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ರಾಜ್ಯದ ಸಮಸ್ತ ಜನತೆಯ ಹಿತ ಕಾಪಾಡುವುದು ಅವರ ಕರ್ತವ್ಯ. ಆ ಕರ್ತವ್ಯವನ್ನು ಅವರು ಮರೆಯದಿರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.