* ವಾಜಪೇಯಿ ಆರೋಗ್ಯ ಶ್ರೀ, ರಾಜೀವ ಆರೋಗ್ಯ ಭಾಗ್ಯ ಯೋಜನೆ
* ಪಾಣಾಜೆ ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕ್ರಮ
ಪುತ್ತೂರು: ಮಂಗಳೂರು ಒಮೇಗಾ ಆಸ್ಪತ್ರೆಗೆ ನೀಡಿದ್ದ ಬಿಪಿಎಲ್ ಕಾರ್ಡ್ದಾರರ ವಾಜಪೇಯಿ ಆರೋಗ್ಯ ಶ್ರೀ ಹಾಗೂ ಎಪಿಎಲ್ ಕಾರ್ಡ್ದಾರರ ರಾಜೀವ ಆರೋಗ್ಯ ಭಾಗ್ಯ ಯೋಜನೆಯ ಅನುಮತಿಯನ್ನು ರದ್ದು ಪಡಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಿಸಿದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಶಸ್ತ್ರಚಿಕಿತ್ಸೆಗೊಳಪಟ್ಟು ಮೃತರಾದ ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು, ಪುತ್ತೂರು ಪಾಣಾಜೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ವಾರ್ಷಿಕವಾಗಿ ಸರ್ಕಾರದ ಬೊಕ್ಕಸದಿಂದ 380 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗುತ್ತಿದೆ. ಚಿಕಿತ್ಸೆ ನೀಡಲಾಗುವ ಯೋಜನೆಯ ಅನುಷ್ಠಾನದಲ್ಲಿ ಲೋಪವಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಾ.ಬಿ.ಎಂ.ಹೆಗ್ಡೆ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಪ್ರಕರಣದ ಬಗ್ಗೆ ತನಿಖೆ ನಡೆಸುವ ಚಿಂತನೆ ನಡೆಸಿದೆ. ಒಂದು ವೇಳೆ ಡಾ.ಬಿ.ಎಂ.ಹೆಗ್ಡೆ ಒಪ್ಪದೇ ಇದ್ದಲ್ಲಿ, ಬೇರೆ ವೈದ್ಯರನ್ನು ಸಂಪರ್ಕಿಸಲಾಗುವುದು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದೆಡೆ ತನಿಖೆ ನಡೆಸುತ್ತಿದ್ದರೆ, ಆರೋಗ್ಯ ಇಲಾಖೆಯೂ ತನಿಖೆ ನಡೆಸಲಿದೆ. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಮುಂದಿದೆ. ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳು ಕರ್ನಾಟಕದ ಯೋಜನೆ ಅನುಷ್ಠಾನವನ್ನು ಮಾದರಿಯಾಗಿ ತೆಗೆದುಕೊಂಡಿದೆ. ಜನಸಾಮಾನ್ಯರ ಮಟ್ಟಕ್ಕೂ ತಲುಪಬೇಕೆಂಬ ಕಳಕಳಿ ರಾಜ್ಯ ಸರ್ಕಾರಕ್ಕಿದೆ. ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಟ್ರಸ್ಟ್ ನಿರ್ದೇಶಕರು ಸ್ಥಳಕ್ಕೆ ಆಗಮಿಸದೇ ಜಿಲ್ಲಾಧಿಕಾರಿ ಕರೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಗಮನ ಸೆಳೆದಾಗ, ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಯೋಜನೆಯನ್ನು ಮೊದಲು ತಾಲೂಕು ಮಟ್ಟದಲ್ಲಿ ನಡೆಸುತ್ತಿದ್ದು, ಇದೀಗ ಸಮುದಾಯ ಮಟ್ಟಕ್ಕೆ ವಿಸ್ತರಿಸಲಾಗಿದೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಆದರೆ ವೈದ್ಯ ವೃತ್ತಿಯ ಗೌರವವನ್ನು ಉಳಿಸುವ ಕೆಲಸವೂ ಇದೇ ಸಂದರ್ಭ ನಡೆಯಬೇಕಿದೆ. ವೈದ್ಯರ ನಿರ್ಲಕ್ಷೃ ಮತ್ತು ಆಡಳಿತದ ನಿರ್ಲಕ್ಷೃ ಎಂಬ ನೆಲೆಯಲ್ಲಿ ತನಿಖೆ ನಡೆಯಲಿದೆ. ವೈದ್ಯರು ವೇತನದ ಆಸೆಗೆ ಕೆಲಸ ಮಾಡುವುದಲ್ಲ. ಸರ್ಕಾರಿ ವೈದ್ಯರಿಗೆ ಗೌರವ, ಉತ್ತಮ ವಾತಾವರಣ ನಿರ್ಮಿಸಿ ಕೊಡಬೇಕಾದ ಜವಾಬ್ದಾರಿ ಗ್ರಾಮಸ್ಥರಿಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ತಿಂಗಳಿಗೊಮ್ಮೆ ಪ್ರತಿ ಪ್ರಾಥಮಿಕ ಆರೋಗ್ಯಕ್ಕೆ ತೆರಳಿ, ವೈದ್ಯ, ಗ್ರಾಪಂ, ಜಿಪಂ, ಸಂಘ ಸದಸ್ಯರ ಸಭೆ ನಡೆಸಬೇಕು. ಇದರಿಂದ ಸಮಸ್ಯೆ ಮನದಟ್ಟಾಗುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿ ಮಾರ್ಗದರ್ಶನ ನೀಡುವಂತೆ ಸೂಚಿಸಿದರು.
ಪರಿಹಾರಕ್ಕೆ ನ್ಯಾಯಾಲಯದ ಮೊರೆ:
ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಇದನ್ನು ಗಂಭೀರ ಪ್ರಕರಣವಾಗಿ ತೆಗೆದುಕೊಳ್ಳಬೇಕು. ಆಂಜಿಯೋಪ್ಲಾಸ್ಟ್ ಸರ್ಜರಿಗೆ ಒಳಗಾದ ಕುಟುಂಬಗಳು ಇದೀಗ ಗೊಂದಲಕ್ಕೆ ಒಳಗಾಗಿವೆ. ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಚಿವರು, ತಪಾಸಣಾ ಶಿಬಿರದ ಮೂಲಕ ಕಾರ್ಯಕ್ರಮ ನಡೆದ ಕಾರಣ ಸರ್ಕಾರದಿಂದ ಸಹಾಯಧನ ನೀಡಲು ಸಾಧ್ಯವಿಲ್ಲ. ನುರಿತ ವೈದ್ಯರ ಮೂಲಕ ರೋಗಿಗಳ ಪುನರ್ ಪರಿಶೀಲನೆಗೆ ಆದೇಶ ನೀಡಬಹುದು. ಪರಿಹಾರ ಧನ ಸಿಗಬೇಕಾದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ವೈದ್ಯಾಧಿಕಾರಿ ಡಾ.ಬೋರೆಗೌಡ ಮಾತನಾಡಿ, ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಸಿಗದ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡುವ ಯೋಜನೆ ವಾಜಪೇಯಿ ಆರೋಗ್ಯ ಶ್ರೀ, ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವೇ ಈ ವೆಚ್ಚವನ್ನು ತುಂಬಲಿದೆ. ಯೋಜನೆಯಡಿ 7 ವಿವಿಧ ಶಸ್ತ್ರಚಿಕಿತ್ಸೆಗಳನ್ನು ಅಳವಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ಲ್ಯಾಬ್ ಇಲ್ಲದೇ ಇರುವುದರಿಂದ ಯೋಜನೆಯನ್ನು ಖಾಸಗಿ ಆಸ್ಪತ್ರೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮೊಬೈಲ್ ಆಪ್:
ಆಸ್ಪತ್ರೆಯ ಸೌಲಭ್ಯ, ದರದ ಬಗ್ಗೆ ಮಾಹಿತಿ ನೀಡುವ ಮೊಬೈಲ್ ಆಪ್ ರೂಪಿಸಲಾಗುವುದು. ಆಸ್ಪತ್ರೆಯಲ್ಲಿ ನೀಡುವ ಶಸ್ತ್ರಚಿಕಿತ್ಸೆ ಮತ್ತು ಅದರ ದರವೂ ಆಪ್ನಲ್ಲಿ ಲಭ್ಯವಾಗಲಿದೆ. ಆಸ್ಪತ್ರೆಯಲ್ಲಿ ಸಿಗುವ ದರದ ಮಾಹಿತಿ ಆಪ್ನಲ್ಲಿ ಸಿಕ್ಕಿದರೆ, ಆಸ್ಪತ್ರೆಯ ದರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಆಸ್ಪತ್ರೆಯ ದರದಲ್ಲಿ ಸಾಮ್ಯತೆ ಕಂಡುಬರದಿದ್ದರೆ, ಸೂಕ್ತ ಆಸ್ಪತ್ರೆಯನ್ನು ಜನರೇ ಆರಿಸಬಹುದು ಎಂದು ಆರೋಗ್ಯ ಸಚಿವರು ಹೇಳಿದರು.
ಶಸ್ತ್ರಚಿಕಿತ್ಸೆಯಿಂದ ಮೃತಪಟ್ಟ ಪೂವಕ್ಕ ಹಾಗೂ ಆಯಿಷತ್ ಹಸೀನಾ ಮನೆಗೆ ಸಚಿವರು ಭೇಟಿ ನೀಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ, ಶ್ರೀರಾಮ್ ಪಕ್ಕಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಕೃಷ್ಣಪ್ರಸಾದ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.