ಮಂಗಳೂರು : 30 ನೇ ಸ್ವಚ್ಛತಾ ಶ್ರಮದಾನ: ನಾಲ್ಕನೇ ವರ್ಷದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಮೂವತ್ತನೇ ಶ್ರಮದಾನವನ್ನು ಇಂದು ನಗರದ ಲಾಲಭಾಗ್-ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಡೆಸಲಾಯಿತು. ದಿನಾಂಕ 13-5-2018 ರವಿವಾರದಂದು ಮುಂಜಾನೆ 7.30 ಕ್ಕೆ ಶ್ರೀರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಸ್ವಾಮಿ ಜಿತಕಾಮಾನಂದಜಿ ಸಮ್ಮುಖದಲ್ಲಿ, ಕೊಯಮತ್ತೂರು ರಾಮಕೃಷ್ಣ ಮಿಷನ್ನಿನ ಸ್ವಾಮಿ ಸೂರ್ಯಾತ್ಮಾನಂದಜಿ ಹಾಗೂ ಪತ್ರಕರ್ತೆ ಶ್ರೀಮತಿ ರೇವತಿ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಆಗಮಿಸಿದ ಅತಿಥಿ ಗಣ್ಯರನ್ನು ಕಾರ್ಯಕರ್ತರನ್ನು ಸ್ವಾಗತಿಸಿದರು. ಸಂಜಯ ಪ್ರಭು, ಉಪನ್ಯಾಸಕಿ ಸ್ಮಿತಾ ಶೆಣೈ, ಇಮ್ತಿಯಾಜ್ ಶೇಖ್, ಡಾ. ರಾಜೇಂದ್ರ ಪ್ರಸಾದ್, ಸುದಿನಿ ಬೋರ್ಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಚ್ಛತೆ: ಕಾರ್ಯಕರ್ತರು ನಾಲ್ಕು ತಂಡಗಳಾಗಿ ವಿಂಗಡಿಸಿಕೊಂಡು ಮುಖ್ಯವಾಗಿ ಎಂಜಿ ರಸ್ತೆಯಲ್ಲಿ ಸ್ವಚ್ಛತೆಯ ಕಾರ್ಯ ಹಮ್ಮಿಕೊಂಡರು. ಮೆಹಬೂಬ್ ಖಾನ್ ಹಾಗೂ ಕಾರ್ಯಕರ್ತರ ತಂಡ ಮನಪಾ ಎದುರಿನಿಂದ ಮಂಗಳಾ ಸ್ಟೇಡಿಯಂ ವರೆಗಿನ ಪುಟ್ ಪಾಥ್ ಹಾಗೂ ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿಯರು ಡಾ. ಪುರುಷೋತ್ತಮ್ ಚಿಪ್ಪಾಲ್ ಮಾರ್ಗದರ್ಶನದಲ್ಲಿ ಶ್ರೀರಾಮಕೃಷ್ಣ ವಿದ್ಯಾರ್ಥಿನಿ ನಿಲಯದಿಂದ ಲೇಡಿಹಿಲ್ನತ್ತ ಸಾಗುವ ಮಾರ್ಗವನ್ನು ಹಾಗೂ ಕಾಲುದಾರಿಯನ್ನು ಸ್ವಚ್ಛಗೊಳಿಸಿದರು. ಜಯರಾಜ್ ಜಿ ಎನ್ ಹಾಗೂ ಸ್ವಯಂ ಸೇವಕರು ಲಾಲಭಾಗ್ ೫ನೇ ಅಡ್ಡರಸ್ತೆಯಲ್ಲಿ ಪುಟ್ಪಾಥ್ನಲ್ಲಿ ಬಿದ್ದುಕೊಂಡಿದ್ದ ನಿರುಪಯುಕ್ತ ದೊಡ್ಡ ದೊಡ್ಡ ಸಿಮೇಂಟಿನ್ ಸ್ಲಾಬ್ಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ವೃತ್ತದ ದುರಸ್ತಿ: ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದ ಮಹಾತ್ಮಾ ಗಾಂಧಿಜಿ ಪ್ರತಿಮೆಯುಳ್ಳ ವೃತ್ತಕ್ಕೆ ವಾಹನ ತಾಗಿದ ಪರಿಣಾಮ ವೃತ್ತಕ್ಕೆ ಹಾನಿಯಾಗಿತ್ತು. ಸ್ವಚ್ಛ ಮಂಗಳೂರು ಕಾರ್ಯಕರ್ತರು ಇಂದು ಅದನ್ನು ಗಾರೆಯವರ ಸಹಾಯದಿಂದ ಕಟ್ಟಿಸಿ ಪ್ಲಾಸ್ಟರಿಂಗ್ ಮಾಡಿಸಿದರು. ಅಭಿಯಾನದ ಪ್ರಧಾನ ಸಂಯೋಜಕ ದಿಲ್ರಾಜ್ ಆಳ್ವ ಹಾಗೂ ಸ್ವಯಂ ಸೇವಕರು ತ್ರಿಕೋನಾಕೃತಿಯುಳ್ಳ ಆ ಸ್ಥಳಗಳೆರಡನ್ನೂ ಸ್ವಚ್ಛಗೊಳಿಸಿ, ಪ್ರತಿಮೆಯನ್ನೂ ನೀರಿನಿಂದ ತೊಳೆದು ಶುಚಿಗೊಳಿಸಿದರು. ನಂತರ ಆ ಎರಡೂ ಸ್ಥಳಗಳಲ್ಲಿ ಹೂಗಿಡಗಳನ್ನು ಜೊತೆಗೆ ಹೂಬಳ್ಳಿಗಳನ್ನೂ ನೆಟ್ಟು ಅಂದಗೊಳಿಸಲು ಪ್ರಯತ್ನಿಸಿದರು.
ಪ್ರಯಾಣಿಕರ ತಂಗುದಾಣಗಳ ಸ್ವಚ್ಛತೆ: ಲಾಲಭಾಗ್ನಲ್ಲಿರುವ ಮೂರು ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು. ಮೊದಲಿಗೆ ಸ್ವಾಮಿಜಿಗಳು, ಡಾ. ಶಶಿಧರ ಹಾಗೂ ಸ್ವಯಂ ಸೇವಕರು ಸಾಯಿಬಿನ್ ಮುಂಭಾಗದ ಬಸ್ ಶೆಲ್ಟರನ್ನು ಗುಡಿಸಿ ಸ್ವಚ್ಛಗೊಳಿಸಿದರು. ನಂತರ ಸುಜಿತ್ ಪ್ರತಾಪ್, ಆನಂದ ಅಡ್ಯಾರ ಮತ್ತಿತರರು ಸೇರಿಕೊಂಡು ಲಾಲಭಾಗ್ನಲ್ಲಿರುವ ಜೋಡಿ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಅಂಟಿಸಿದ್ದ ಜಾಹೀರಾತು ಪೋಸ್ಟರ್ ತೆಗೆದು ಕಂಬಗಳಿಗೆ ಸಿಲ್ವರ್ ಕಲರ್ ಬಣ್ಣ ಹಚ್ಚಿ ಅಂದಗೊಳಿಸಿದರು.
ಮಾರ್ಗಸೂಚಿ ಫಲಕಗಳ ನವೀಕರಣ: ಎಂಜಿ ರಸ್ತೆಯಿಂದ ಲೇಡಿಹಿಲ್ಗೆ ಸಾಗುವ ಮುಖ್ಯರಸ್ತೆಯಲ್ಲಿ ಕಾಣಸಿಗುವ ಆಫೀಸರ್ಸ್ ಕ್ಲಬ್, ಲೇಡಿಹಿಲ್ ೫ನೇ ಅಡ್ಡರಸ್ತೆ ಯಲ್ಲಿರುವ ಫಲಕಗಳ ಬಣ್ಣ ಮಾಸಿಹೋಗಿ ಕಪ್ಪಾಗಿದ್ದವು. ಸ್ವಚ್ಛತಾ ಅಭಿಯಾನದ ಭಾಗವಾಗಿ ಈ ವಾರ ಅವುಗಳನ್ನು ನೀರಿನಿಂದ ತೊಳೆದು ಶುಚಿಮಾಡಿ, ಹಳದಿ ಬಣ್ಣ ಹಚ್ಚಲಾಯಿತು. ನಂತರ ದೇವಿ ಆರ್ಟ್ಸ್ ಕಲಾವಿದ ಕರ್ಣ ಇವರು ಸುಂದರ ಅಕ್ಷರಗಳಿಂದ ಅವುಗಳ ಹೆಸರುಗಳನ್ನು ಬರೆದು ಅಂದಗೊಳಿಸಿದ್ದಾರೆ.
ಸಂಕಲ್ಪ: ಹಿರಿಯ ಕಾರ್ಯಕರ್ತ ಅಶೋಕ್ ಸುಬ್ಬಯ್ಯ ಜೊತೆಗೂಡಿ ಸ್ವಯಂ ಸೇವಕರು ಲಾಲಭಾಗ್ ಪರಿಸರ ವಿಶೇಷವಾಗಿ ಮಂಗಳಾ ಸ್ಟೇಡಿಯಮ್ ಮುಂಭಾಗದ ಮನೆಗಳಿಗೆ ತೆರಳಿ ಸಂಕಲ್ಪ ಕರಪತ್ರ ವಿತರಿಸಿದರು. ಮನೆಯ ಮುಂಭಾಗ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ, ಅಚ್ಚುಕಟ್ಟಾಗಿಡುವಂತೆ ವಿನಂತಿಸಿದರು.
ಮಂಗಳೂರು ನಗರ ಬಿಜೆಪಿ ಅಧ್ಯಕ್ಷ ವೇದವ್ಯಾಸ್ ಕಾಮತ್, ಕುಶಿರಾಜ್ ಕೊಟ್ಟಾರಿ, ಕವಿತಾ ಪುರೋಹಿತ್, ಜಯಶ್ರೀ ಕುಳಾಯಿ, ಕಾವ್ಯಶ್ರೀ ಉಮಾಕಾಂತ್, ಅವಿನಾಶ್ ಅಂಚನ್ ಸೇರಿದಂತೆ ಅನೇಕ ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು. ಉಮಾನಾಥ್ ಕೋಟೆಕಾರ್ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದರು. ಅಭಿಯಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂ ಆರ್ಪಿಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.