ಮೂಡಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿ ಕಿರಣ್ ರೆಡ್ಡಿ ಚೆನೈನ ಸೂರ್ಯ ಎಂಬುವವರ ಸಹಯೋಗದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಕಂಪನಿಯನ್ನು ಆರಂಭಿಸಿದ್ದು, ಆಳ್ವಾಸ್ ಶಿಕ್ಷಣ ಪ್ರತಿಪ್ಠಾನದ ಕುವೆಂಪು ಸಭಾಂಗಣದಲ್ಲಿ ಸೋಮವಾರ ‘ಬೆಸ್ಟಿ'(ಸ್ಯಾನಿಟರ್ ನ್ಯಾಪ್ಕಿನ್) ಎಂಬ ಹೊಸ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮ ನೆರವೇರಿತು.
ಹೊಸ ಉತ್ಪನ್ನವನ್ನು ಲಾಂಚ್ ಮಾಡಿ ಮಾತಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ “ಹೋರಾಟ ಮನೋಭಾವ, ಇಚ್ಛಾಶಕ್ತಿ ಹಾಗೂ ಸೃಜನಾತ್ಮಕ ಚಿಂತನೆಗಳು ಇದ್ದಲ್ಲಿ ಯಾರು ಬೇಕಾದರೂ ಸಾಧಿಸಬಹುದು” ಎಂದು ಹೇಳಿದರು.
ಕಿರಣ್ ಈ ಕಿರಿಯ ವಯಸ್ಸಿಗೆ ಕಂಪನಿಯ ಮಾಲಿಕರಾಗಿದ್ದಾರೆ. ಈ ರೀತಿಯ ಕ್ರಿಯಾತ್ಮಕ ಮನೋಭಾವವನ್ನು ರೂಢಿಸಿಕೊಂಡಿರುವ ಮಕ್ಕಳನ್ನು ಕಂಡಾಗ ಮನ ತುಂಬಿ ಬರುತ್ತದೆ. ಹೆಣ್ಣು ಮಕ್ಕಳಿಗೆ ಅಗತ್ಯವಿರುವ ಉತ್ಪನ್ನವನ್ನು ತಯಾರಿಸಿರುವುದು ಉತ್ತಮ ಕಾರ್ಯ. ಇದು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಗಳಿಸುವುದರಲ್ಲಿ ಸಂಶಯವಿಲ್ಲ. ಕಿರಣ್ರಂತೆ ಇನ್ನಷ್ಟು ವಿದ್ಯಾರ್ಥಿಗಳು ಹೊಸ ಆಲೋಚನೆಗಳೊಂದಿಗೆ ಹೊರಬರಬೇಕು. ಅಂತಹವರಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ” ಎಂದು ಕಿರಣ್ ರೆಡ್ಡಿಯ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತಮ್ಮ ವೃತ್ತಿ ಆರಂಭದ ದಿನಗಳನ್ನು ಮೆಲುಕು ಹಾಕಿದ ಡಾ. ಆಳ್ವ “ನಾನೇನು ಬಂಗಾರದ ಚಮಚ ಹಿಡಿದುಕೊಂಡು ಹುಟ್ಟಿದವನಲ್ಲ. ವೃತ್ತಿಯನ್ನು ಆರಂಭಿಸುವ ದಿನಗಳಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಾನು ಕಾಲೇಜು ದಿನಗಳಲ್ಲಿ ಬ್ಯಾಂಕ್ನಿಂದ ಸಾಲ ಪಡೆದು, ಲಾರಿ ಖರೀದಿಸಿ ಅದರಿಂದ ವ್ಯಾಪಾರ ಆರಂಭಿಸಿದ್ದೆ. ಪದವಿ ಮುಗಿಯುವ ಹೊತ್ತಿಗೆ ಒಂದು ಲಕ್ಷ ಬಂಡವಾಳದೊಂದಿಗೆ ಹೊರಬಂದಿದ್ದೆ” ಎಂದು ನೆನಪಿಸಿಕೊಂಡರು.
ಪ್ರಾಡಕ್ಟ್ ಲಾಂಚ್ ನಂತರ ಮಾತನಾಡಿದ ಕಿರಣ್ ರೆಡ್ಡಿ “ಆಳ್ವಾಸ್ ಕಾಲೇಜಿನಿಂದ ನಾನು ಸಾಕಷ್ಟು ಕಲಿತ್ತಿದ್ದೇನೆ. ನನ್ನ ಎಲ್ಲಾ ಚಿಂತನೆಗಳಿಗೆ ಬೆನ್ನೆಲುಬಾಗಿ ನಿಂತವರು ನನ್ನ ಪಾಲಕರು ಹಾಗೂ ಶಿಕ್ಷಕರು. ಅವರಿಗೆ ನಾನು ಸದಾ ಚಿರಋಣಿ” ಎಂದು ಹೇಳಿದರು.
ತಂದೆಯಿಂದಲೇ 10% ಬಡ್ಡಿಗೆ ಸಾಲ
“ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಕಂಪನಿಯನ್ನು ಆರಂಭಿಸುವ ಆಲೋಚನೆ ಹುಟ್ಟಿಕೊಂಡಿದ್ದು ನನ್ನ ತಾಯಿಯಿಂದ. ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾಪ್ಕಿನ್ ಬಳಕೆಯಿಂದ ಅವರು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಅದಕ್ಕಾಗಿ ಉತ್ತಮ ಗುಣಮಟ್ಟದ ತಯಾರಿಸಲು ಮುಂದಾದೆ. ಇದಕ್ಕೆ ನನಗೆ ಬೆಂಬಲವಾಗಿದ್ದು ನನ್ನ ತಂದೆ. ಅವರು ಕಂಪನಿ ಆರಂಭಿಸಲು ಬೇಕಿದ್ದ ಹಣವನ್ನು 10% ಬಡ್ಡಿ ದರದಲ್ಲಿ ನೀಡಿದ್ದಾರೆ. ಅದನ್ನು ನಾನು ಮೂರು ವರ್ಷದ ಒಳಗೆ ಹಿಂದುರಗಿಸದೇ ಇದ್ದಲ್ಲಿ 5% ವಾರ್ಷಿಕ ಬಡ್ಡಿ ದರ ಹೆಚ್ಚಾಗುತ್ತದೆ” ಎಂದು ತಮ್ಮ ಕಂಪನಿ ಹುಟ್ಟಿಕೊಂಡ ಬಗೆಯನ್ನು ಬಿಚ್ಚಿಟ್ಟರು ಕಿರಣ್ ರೆಡ್ಡಿ.
ಇತರ ಸ್ಯಾನಿಟರ್ ನ್ಯಾಪ್ಕಿನ್ಗಿಂತ ಭಿನ್ನ
“ಸ್ಯಾನಿಟರ್ ನ್ಯಾಪ್ಕಿನ್ಗಳ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ. ಆದರೆ ಇದು ಎಲ್ಲದಕ್ಕಿಂತ ಭಿನ್ನ. ನಮ್ಮ “ಬೆಸ್ಟಿ” ಉತ್ಪನ್ನ ಡ್ರೈ ನೆಟ್ ಹೊಂದಿದ್ದು ಪಲ್ಪ್ ಶೀಟ್ಗಳನ್ನು ಬಳಸಲಾಗಿದೆ. ಆರಾಮದಾಯಕ ಬಳಕೆಗಾಗಿ ಜೆಲ್ ಆಗಿ ಪರಿವರ್ತಿತಗೊಳ್ಳುವ ಸ್ಯಾಪ್ ಉಪಯೋಗಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿ “ಋತುಚಕ್ರ ಹೆಣ್ಣಿಗಷ್ಟೇ ಅಲ್ಲದೇ ಮಾನವ ಜೀವನ ವ್ಯವಸ್ಥೆಯ ಮುಖ್ಯ ಭಾಗ. ಆದರೆ ಇದನ್ನು ಋಣಾತ್ಮಕ ರೀತಿಯಲ್ಲಿ ಕಾಣುತ್ತಿವುದು ವಿಷಾದನೀಯ. ಋತುಚಕ್ರದ ಸಮಯದಲ್ಲಿ ಹೆಣ್ಣನ್ನು ಬಹಳ ಕೀಳು ಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತದೆ. ಈ ಮನೋಭಾವ ತೊಲಗಿಸುವ ಅಭಿಯಾನ ಆರಂಭವಾಗಬೇಕು” ಎಂದು ಅಭಿಪ್ರಾಯಪಟ್ಟರು.
“ಋತುಚಕ್ರದ ಕುರಿತು ಹೇಳಿಕೊಳ್ಳಲು ಸ್ವತಃ ಹೆಣ್ಣುಮಕ್ಕಳೇ ಹಿಂಜರಿಯುತ್ತಾರೆ. ಅದು ಹೋಗಬೇಕು. ಋತುಮತಿಯಾಗುವುದು ಒಂದು ಹೆಮ್ಮೆಯ ವಿಷಯ. ಅದನ್ನು ಅರಿತು ಧೈರ್ಯದಿಂದ ಸಮಾಜವನ್ನು ಹುಡುಗಿಯರು ಎದುರಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಸಂಸ್ಥೆಯ ಟ್ರಸ್ಟಿಗಳಾದ ಜಯಶ್ರೀಅಮರನಾಥ್ ಶೆಟ್ಟಿ, ವಿವೇಕ್ ಆಳ್ವ, ವಾಣಿಜ್ಯ ವಿಭಾಗದ ಡೀನ್ ಡಾ. ಉಮೇಶ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್ರಾಮ್ ಉಪಸ್ಥಿತರಿದ್ದರು.
ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಒಂದು ಲಕ್ಷ ಮೌಲ್ಯದ “ಬೆಸ್ಟಿ” ಉತ್ಪನ್ನವನ್ನು ಖರೀದಿಸಿ ಅದನ್ನು ಕಾಲೇಜು ಸ್ಟೇಷನರಿಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.