ಇಂದು ಮಾಘ ಬಹುಳ ಏಕಾದಶಿ, ತಾಯಿ ಭಾರತೀಯ ಮಡಿಲಲ್ಲಿ, ಹಿಂದುತ್ವದ ಕಹಳೆ ಊದಿ, ಹಿಂದೂ ಸಮಾಜಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದ ಪರಮಪೂಜ್ಯ ಗುರೂಜಿ ಮಾಧವ ಸದಾಶಿವ ಗೋಲ್ವಾಳ್ಕರ್ ಅವರ ಜನ್ಮದಿನ.
ಶ್ರೀ ಗುರೂಜಿ ಆರ್.ಎಸ್.ಎಸ್ ನ ಎರಡನೆಯ ಸರಸಂಘಚಾಲಕರು(ಸಂಘಟನೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರು). ಶ್ರೀ ಗುರೂಜಿ ಎಂಬುದು ಅವರ ಮೂಲ ಹೆಸರಲ್ಲ. ಅವರು ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾಗ, ವಿದ್ಯಾರ್ಥಿಗಳು ಅವರನ್ನು ಆದರದಿಂದ ‘ಶ್ರೀ ಗುರೂಜಿ’ ಎಂದು ಕರೆಯುತ್ತಿದ್ದರು. ಆಗಿನಿಂದ ಅದೇ ಹೆಸರು ಸಂಘದಲ್ಲಿ ಮತ್ತು ದೇಶದಲ್ಲಿ ಬಳಕೆಯಲ್ಲಿದೆ. ಅವರ ಹೆಸರು ‘ಮಾಧವ ಸದಾಶಿವರಾವ್ ಗೋಳವಲಕರ್’. ಇವರು ಕ್ರಿ.ಶ 1906 ಫೆಬ್ರವರಿ 19ರಂದು ನಾಗಪುರದಲ್ಲಿ ಜನಿಸಿದರು. ತಂದೆ ಸದಾಶಿವರಾವ್ ಮತ್ತು ತಾಯಿ ಲಕ್ಷ್ಮೀಬಾಯಿ.
ಆ ದಿನಗಳಲ್ಲಿ ನಾಗಪುರ ಈಗಿನ ಮಧ್ಯಪ್ರದೇಶದಲ್ಲಿ ಇತ್ತು. ತಂದೆ ಅಧ್ಯಾಪಕರಾಗಿದ್ದರು. ತಂದೆಯವರ ವರ್ಗಾವಣೆ ಹಿಂದಿ ಭಾಷಾ ಪ್ರದೇಶಗಳಲ್ಲೇ ಆಗುತ್ತಿತ್ತು. ಹೀಗಾಗಿ ಗುರೂಜಿ ಅವರಿಗೆ ಹಿಂದಿ ಭಾಷೆಯ ಮೇಲೆ ಒಳ್ಳೆಯ ಹಿಡಿತವಿತ್ತು. ಗುರೂಜಿಯವರು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ವಿದ್ಯಾಲಯದಲ್ಲಿ ಕಲಿತಿದ್ದರಿಂದ ಆಂಗ್ಲಭಾಷೆಯಲ್ಲಿಯೂ ಪ್ರಾವೀಣ್ಯ ಹೊಂದಿದ್ದರು. 1924 ರಲ್ಲಿ ಆಂಗ್ಲಭಾಷೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದರು ಹಾಗೂ 1926 ರಲ್ಲಿ ಬಿ.ಎಸ್ಸಿ ಯಲ್ಲಿ ಉತ್ತೀರ್ಣರಾದರು. 1928 ರಲ್ಲಿ ಎಂ.ಎಸ್ಸಿ (ಪ್ರಾಣಿಶಾಸ್ತ್ರ)ದಲ್ಲೂ ಉತ್ತೀರ್ಣರಾದರು. ನಂತರ 1929 ರಲ್ಲಿ ಚೆನ್ನೈನ ಮತ್ಸ್ಯಾಲಯದಲ್ಲಿ ಸಂಶೋಧನೆಯಲ್ಲಿ ನಿರತರಾದರು.
ಶ್ರೀ ಗುರೂಜಿ ಅವರು 1931 ರಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ರವರು 1925 ರಲ್ಲಿ ಸ್ಥಾಪಿಸಿದ್ದ ಸಂಘವನ್ನು ಪ್ರವೇಶಿಸಿದರು. ನಂತರ (1931-1933)ರವರೆಗೆ ಕಾಶೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು ಹಾಗೂ 1935 ರಲ್ಲಿ ಎಲ್.ಎಲ್.ಬಿ ಯಲ್ಲಿ ಉತ್ತೀರ್ಣರಾದರು.
ನಂತರದ ದಿನಗಳಲ್ಲಿ ನಾಗಪುರದ ಸಂಘ ಶಿಕ್ಷಾವರ್ಗದ ಸರ್ವಾಧಿಕಾರಿಯಾಗಿ ನೇಮಕಗೊಂಡರು ಹಾಗೂ 1954 ರಲ್ಲಿ ಗೋಹತ್ಯಾ ನಿಷೇಧ ಆಂದೋಲನದಲ್ಲಿ ಪಾಲ್ಗೊಂಡರು ಮತ್ತು ಆಕಾಲದಲ್ಲಿಯೇ, ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರಿಗೆ ಸುಮಾರು 1.75 ಕೋಟಿ ಹಸ್ತಾಕ್ಷರಗಳ ನಿವೇದನೆಯನ್ನು ಮಾಡಿದರು. 1964 ರಲ್ಲಿ ಕೃಷ್ಣಜನ್ಮಾಷ್ಟಮಿಯಂದು ಮುಂಬಯಿಯ ಸಾಂದೀಪಿನಿ ಆಶ್ರಮದಲ್ಲಿ ವಿಶ್ವಹಿಂದು ಪರಿಷತ್ತಿನ ಸ್ಥಾಪನೆಯನ್ನು ಮಾಡಿದರು.
1940ರ ಜೂನ್ 21ರಂದು ತಮ್ಮ ಇಹಯಾತ್ರೆ ಕೊನೆಗೊಳ್ಳುವ ಮುನ್ನ ಡಾ॥ಹೆಡಗೆವಾರರು ಸರಸಂಘಚಾಲಕತ್ವದ ಹೊಣೆಯನ್ನು ಗುರೂಜಿ ಗೋಳ್ವಲ್ಕರ್ ಅವರಿಗೆ ಹಸ್ತಾಂತರಿಸಿದರು. ಮುಂದಿನ 33 ವರ್ಷಗಳ ಕಾಲ ಗುರೂಜಿಯವರು ಡಾ॥ಹೆಡಗೇವಾರರು ಕಲ್ಪಿಸಿ, ಹುಟ್ಟು ಹಾಕಿದ ಸಂಘದ ಈ ವಿಚಾರ ಮತ್ತು ಕಾರ್ಯಪ್ರೇರಣೆಯನ್ನು ತಮ್ಮ ಅವಿಶ್ರಾಂತ ಪರಿಶ್ರಮದ ಮೂಲಕ ಸ್ವಯಂಸೇವಕರಲ್ಲಿ ತುಂಬಿ ಅವರಿಗೆ ಮಾರ್ಗದರ್ಶನ ಮಾಡಿದರು. ಗುರೂಜಿಯವರು ರಾಮಕೃಷ್ಣರ ನೇರ ಶಿಷ್ಯ ಮತ್ತು ಸ್ವಾಮಿ ವಿವೇಕಾನಂದರ ನಿಕಟವರ್ತಿ, ಗುರುಬಂಧುವಾಗಿದ್ದ ಸ್ವಾಮಿ ಅಖಂಡಾನಂದರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಅವರ ಶಿಷ್ಯರಾಗಿ ರಾಮಕೃಷ್ಣ ಮಿಷನ್ನ ಆಶ್ರಮದಲ್ಲಿ ಕೆಲಕಾಲ ಇದ್ದವರು. ಸ್ವಾಮಿ ಅಖಂಡಾನಂದರ ಮಹಾಸಮಾಧಿಯ ನಂತರ ಗುರೂಜಿಯವರು ನಾಗಪುರಕ್ಕೆ ಮರಳಿ ಡಾ॥ಹೆಡಗೇವಾರರ ಮಾರ್ಗದರ್ಶನದಲ್ಲಿ ಸಂಘಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಒಮ್ಮೆ ಪತ್ರಕರ್ತರೊಬ್ಬರು ಗುರೂಜಿಯವರ ಬಳಿ ‘ಆಶ್ರಮ ಜೀವನವನ್ನು ಅನುಭವದಿಂದ ತಿಳಿದಿದ್ದ ನೀವು, ಅದಕ್ಕಿಂತ ಪೂರಾ ಭಿನ್ನ ಸ್ವರೂಪದ ಕಾರ್ಯವಾದ ಸಂಘವನ್ನು ಸ್ವೀಕರಿಸಿದುದು ಹೇಗೆ?’ ಎಂದು ಪ್ರಶ್ನಿಸಿದ್ದರು. ಗುರೂಜಿಯವರು ಅವರಿಗೆ ನೀಡಿದ್ದ ಉತ್ತರ ಗಮನಿಸಬೇಕಾದಂತಹುದು: ‘ಸಂಘದಲ್ಲಿ ನಾನೀಗ ಮಾಡುತ್ತಿರುವ ಕೆಲಸ ಸ್ವಾಮಿ ವಿವೇಕಾನಂದರ ತತ್ತ್ವಜ್ಞಾನ, ಮಾರ್ಗದರ್ಶನ ಮತ್ತು ಕಾರ್ಯಶೈಲಿಗನುಗುಣವಾಗಿಯೇ ಇರುವುದಾಗಿ ಪ್ರತ್ಯಕ್ಷ ಅನುಭವದಿಂದ ನನಗೆ ಗೊತ್ತಾಗಿದೆ. ಅವರನ್ನು ಬಿಟ್ಟು ಇನ್ನಾವ ವ್ಯಕ್ತಿಯ ಬದುಕು ಮತ್ತು ವಿಚಾರ ಕೂಡ ನನ್ನ ಮೇಲೆ ಅಂತಹ ಪ್ರಭಾವ ಬೀರಿಲ್ಲ. ಸಂಘ ಕಾರ್ಯದ ಮೂಲಕ ಸ್ವಾಮೀಜಿಯವರ ಕಾರ್ಯವನ್ನೇ ನಾನು ಮಾಡುತ್ತಿರುವುದಾಗಿ ನಂಬಿದ್ದೇನೆ’ ಎಂದರು.
ಆರ್.ಎಸ್.ಎಸ್ ಮತ್ತು ಗೋಳ್ವಲ್ಕರ್ರನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಏಕೆಂದರೆ ಆರ್.ಎಸ್.ಎಸ್ ನ ಸಿದ್ಧಾಂತ, ಕಾರ್ಯಪದ್ಧತಿ, ಚರಿತ್ರೆ, ಶಿಸ್ತು, ತರಬೇತಿಯ ಮಾದರಿ, ಸಾರ್ವಜನಿಕ ಚಿತ್ರಣ ಇವೆಲ್ಲ ಒಟ್ಟಿಗೆ ಹೊಂದಿಕೊಂಡಿವೆ. ಕಳೆದ ಅನೇಕ ದಶಕಗಳಲ್ಲಿ ಬಹುಶಃ ಅತಿಹೆಚ್ಚು ಪ್ರಶಂಸೆಗೆ ಮತ್ತು ಅಷ್ಟೇ ಪ್ರಮಾಣದ ತೆಗಳಿಕೆಗೆ ಒಳಗಾದ ಸಂಘಟನೆ ಆರೆಸ್ಸೆಸ್ ಹಾಗೆಯೇ ಗುರೂಜೀ ಗೋಳ್ವಲ್ಕರ್ ಕೂಡ. ಸಾಮಾಜಿಕವಾಗಿ ಪ್ರಶಂಸಿಲ್ಪಡುವ ಆರೆಸ್ಸೆಸ್ ರಾಜಕೀಯ ಕಾರಣಗಳಿಂದಾಗಿ ವಿರೋಧಕ್ಕೆ ಒಳಗಾಗಿದೆ. ಇದೇ ರೀತಿ ಗುರೂಜೀಯವರು ಸತ್ಯ ಅಥವಾ ಅಪಾರ್ಥಕ್ಕೆ, ಪ್ರಶಂಸೆ ಅಥವಾ ಟೀಕೆಗೆ ಒಳಗಾದರು. ಆದರೆ ಪ್ರಶಂಸೆ ಅಥವಾ ಟೀಕೆಯ ಮಿತಿಯನ್ನು ದಾಟದ ಹೊರತು ಕೇವಲ ತನ್ನ ತಾಯ್ನಾಡಿಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ದೃಷ್ಟಿಕೋನ ಹೊಂದಿದ್ದ ಶ್ರೇಷ್ಟ ತತ್ವಜ್ಞ ಚಿಂತಕರಾಗಿದ್ದ ಗುರೂಜಿಯವರ ಪೂರ್ಣ ವ್ಯಕ್ತಿತ್ವದ ಪರಿಚಯ ದೊರಕುವುದಿಲ್ಲ. 33 ವರ್ಷಗಳ ಕಾಲ ಅತ್ಯಂತ ಕಠಿಣ ಸಮಯದಲ್ಲಿ ಅವರು ಸಂಘಕ್ಕೆ ಮಾರ್ಗದರ್ಶನ ನೀಡಿದರು. ತಮ್ಮ ಜೀವನದ ಪ್ರತೀ ಕ್ಷಣವನ್ನು ದೇಶಕ್ಕೆ ಸಮರ್ಪಿಸಿದರು ಗುರೂಜಿ.
“ಸೇವೆಯ ನಿಜ ಅರ್ಥ: ಹೃದಯ ಶುದ್ಧಿ, ಅಹಂಕಾರದ ವಿನಾಶ, ದೈವತ್ವದ ಅನುಭವ ಹಾಗೂ ಸರ್ವತ್ರ ಶಾಂತಿಯ ಪ್ರಾಪ್ತಿ” ಎಂಬ ಅವರ ನುಡಿಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ.
ತಾಯಿ ಭಾರತೀಯ ಹೆಮ್ಮೆಯ ಪುತ್ರನ ಚರಣಾರವಿಂದಗಳಿಗೆ ಶತ ಶತ ನಮನ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.