ಕಲ್ಲಡ್ಕ : ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನ ಆಧಾರದ ಮೇಲೆ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ಮೈಗೂಡಿಸಿಕೊಂಡು, ಕಳೆದ 37 ವರ್ಷಗಳಿಂದ ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಕೆಲಸವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ನಡೆಸುತ್ತಿದೆ. 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 150ಕ್ಕೂ ಹೆಚ್ಚು ಶಿಕ್ಷಕ ವೃಂದ, 50 ಕ್ಕೂ ಹೆಚ್ಚು ಇತರ ಸಹಕಾರಿ ವೃಂದವನ್ನು ಹೊಂದಿರುವ ಈ ಸಂಸ್ಥೆ ಶಿಶುಮಂದಿರದಿಂದ ಪದವಿ ಕಾಲೇಜಿನವರೆಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ. ಆಯಾ ವಯೋಮಾನಕ್ಕನುಗುಣವಾಗಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಇತರ ಗುಣಗಳನ್ನು ಬೆಳೆಸಲು ಬೇಕಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಈ ಪೈಕಿ ಯುವಪೀಳಿಗೆಯಲ್ಲಿ ಸಮಾಜಪ್ರಜ್ಞೆ , ರಾಷ್ಟ್ರಪ್ರಜ್ಞೆಯನ್ನು ಬಿತ್ತಿ ಬೆಳೆಸುವ ನಮ್ಮ ಮಹತ್ತರ ಯೋಜನೆಯನ್ವಯ ಪ್ರತೀ ತಿಂಗಳು ಚಿಂತನ ಕೂಟ, ವರ್ಷಕ್ಕೊಮ್ಮೆ ವಿಚಾರಸಂಕಿರಣ ಬಹಳ ಮಹತ್ವದ್ದಾಗಿದೆ.
2009-10 ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಪದವಿ ವಿಭಾಗದ ಆರಂಭಿಕ ದಿನಗಳಿಂದಲೂ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ವಿಚಾರಸಂಕಿರಣವೊಂದನ್ನು ಆಯೋಜಿಸುತ್ತಾ ಬಂದಿದೆ. ವಿಶ್ವ ವಿದ್ಯಾನಿಲಯಗಳ ಎಲ್ಲಾ ಕಾಲೇಜುಗಳಲ್ಲೂ ಯುಜಿಸಿ ಪ್ರಾಯೋಜಿತ ಅನೇಕ ವಿಚಾರಸಂಕಿರಣಗಳು ನಡೆಯುತ್ತದೆಯಾದರೂ, ಅವೆಲ್ಲಕ್ಕೂ ಭಿನ್ನವಾದ ಇಂದಿನ ಅನಿವಾರ್ಯತೆಗಳನ್ನು ಪೂರೈಸುವ ವಿಚಾರಗಳನ್ನು ತಿಳಿಸುವ ವಿಚಾರಸಂಕಿರಣ ಇದಾಗಿದೆ. ಆರಂಭಿಕ ವರ್ಷಗಳಲ್ಲಿ ರಾಷ್ಟ್ರ ರಾಷ್ಟ್ರೀಯರು ಮತ್ತು ನಮ್ಮ ರಾಷ್ಟ್ರೀಯತೆ ಎಂಬ ವಿಚಾರದಿಂದ ಆರಂಭಗೊಂಡ ಈ ವಿಚಾರಸಂಕಿರಣ ಮುಂದಿನ ದಿನಗಳಲ್ಲಿ ದೇಶದ ಭದ್ರತೆಗಿರುವ ಸವಾಲುಗಳು ಎಂಬ ವಿಷಯದಡಿ ಚೀನಾ, ಪಾಕಿಸ್ತಾನ, ಕಾಶ್ಮಿರಗಳ ಗಡಿಭಾಗದಲ್ಲಿರುವ ಸಮಸ್ಯೆಗಳ ಬಗ್ಗೆ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಯಿತು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದುದಷ್ಟೇ ಅಲ್ಲದೇ ಅದೇ ದಿನ ದೇಶ ವಿಭಜನೆಯೂ ನಡೆಯಿತೆಂಬ ವಾಸ್ತವ ಸತ್ಯ ಮೂರನೆಯ ವಿಚಾರಸಂಕಿರಣವಾದ ’ದೇಶವಿಭಜನೆಯಿಂದ ಸ್ವರಾಜ್ಯವೋ ಸ್ವರಾಜ್ಯಕ್ಕಾಗಿ ದೇಶ ವಿಭಜನೆಯೋ ಎಂಬ ವಿಷಯದಿಂದ ನನ್ನ ಗಮನಕ್ಕೆ ಬಂತು ಎಂಬ ಪದವಿ ವಿಭಾಗದ ವಿದ್ಯಾರ್ಥಿಯೊಬ್ಬ ಅನಿಸಿಕೆ ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಭಾರತದ ಮುಂದಿರುವ ಸವಾಲುಗಳಷ್ಟೇ ಅಲ್ಲದೇ ಭಾರತ ಹೇಗೆ ವಿಶ್ವವಂದ್ಯ ಸ್ಥಾನವನ್ನು ಪಡೆಯಿತು ಎಂಬುದನ್ನು ಮನಗಾಣಿಸಲು ವಿಶ್ವವಂದ್ಯ ಭಾರತದ ಸಾಧನಾ ಪಥ ಎಂಬ ವಿಷಯವನ್ನು ಆಯ್ಕೆ ಮಾಡಲಾಯಿತು. ಆಖಆಔ ವಿಜ್ಞಾನಿ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ, ಶ್ರೀ ವಿ. ನಾಗರಾಜ್ ಮುಂತಾದ ಹಿರಿಯರು ಅವಧಿಗಳನ್ನು ತೆಗೆದುಕೊಂಡಿದ್ದರು.
2014 ರಲ್ಲಿ ದೇಶದಲ್ಲಿ ಉಂಟಾದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿವರ್ತನೆಯ ಹಿಂದಿನ ಜನಮಾನಸಿಕತೆಯ ಬಗೆಗೆ ಸಂಸದರಾದ ಪ್ರತಾಪ ಸಿಂಹ ಹಾಗೂ ಸಾಮಾಜಿಕ ಜಾಲತಾಣದ ಸಮೀಕ್ಷಕರಾದ ಶ್ರೀ ಕಿರಣ್ ಕೆ. ಎಸ್., ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀ ವಾದಿರಾಜರು ನಡೆಸಿಕೊಟ್ಟ ಅವಧಿಗಳು ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ಆಗ ಪ್ರತಿನಿಧಿಸಿದ ಮಂಗಳೂರು ವಿಶ್ವವಿದ್ಯಾನಿಲಯದ 55 ಕಾಲೇಜುಗಳ ಪತ್ರಿನಿಧಿಗಳು ಇದನ್ನು ಬಹುವಾಗಿ ಮೆಚ್ಚಿಕೊಂಡು ಇನ್ನಷ್ಟು ಇದರ ವ್ಯಾಪ್ತಿಯನ್ನು ವಿಸ್ತರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ತದನಂತರದ ವರ್ಷದಲ್ಲಿ ತುರ್ತುಪರಿಸ್ಥಿತಿಗೆ 40 ವರ್ಷ ತುಂಬಿದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮವಂತೂ ಐತಿಹಾಸಿಕ ಎನ್ನುವಷ್ಟರ ಮಟ್ಟಿಗೆ ಯಶಸ್ವಿಯಾಯಿತು. ಸನ್ಮಾನ್ಯ ಡಿ.ಎಚ್. ಶಂಕರಮೂರ್ತಿ, ಶ್ರೀ.ಸು.ರಾಮಣ್ಣನಂತಹ ಹಿರಿಯರು ಭಾಗವಹಿಸಿ ಕಿರಿಯರಿಗೂ ಪ್ರೇರಣೆ ನೀಡಿದರು. ಅಂದಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ನೂರಾರು ಮಂದಿ ಇಂದಿನ ಪೀಳಿಗೆಯೊಂದಿಗೆ ಬೆರೆತು ಆನಂದಿಸಿದುದು ಅವಿಸ್ಮರಣೀಯ ಕ್ಷಣವಾಗಿತ್ತು.
ಸಾಮರಸ್ಯ ಸಮಾಜ ನಿರ್ಮಾಣ ಕೇವಲ ಮಾತಿನಿಂದ ಸಾಧ್ಯವಿಲ್ಲ, ಅದಕ್ಕೆ ಪ್ರತ್ಯಕ್ಷ ಮೇಲ್ಪಂಕ್ತಿ ಹಾಗೂ ಸಾಮೂಹಿಕ ಸಹಜೀವನದ ಅನುಭವವಿರಬೇಕು. ಈ ನಿಟ್ಟಿನಲ್ಲಿ ಆಯೋಜಿಸಿದ ಅಂಬೇಡ್ಕರ್- ಸಾಮರಸ್ಯ ಮತ್ತು ರಾಷ್ಟ್ರೀಯತೆ ಎಂಬ ವಿಷಯದ ಮೇಲೆ ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀ ರಮೇಶ್ ಜಿಗಜಿಣಗಿ ಭಾಗವಹಿಸಿದ್ದು ಇಲ್ಲಿನ ವ್ಯವಸ್ಥೆ ಹಾಗೂ ಪ್ರತ್ಯಕ್ಷ ಸಾಮರಸ್ಯದ ಆಚರಣೆಯನ್ನು ಕಂಡು ಭಾವುಕರಾಗಿದ್ದು ಪತ್ರಿಕೆಗಳಲ್ಲೂ ಈ ಬಗ್ಗೆ ವಿಶೇಷ ವರದಿಯಾಗಿದೆ.
ಈ ಬಾರಿ ಇದೇ ರೀತಿ ನಡೆಯುತ್ತಿದ್ದ ವಿಚಾರ ಸಂಕಿರಣದ ವ್ಯಾಪ್ತಿಯು ರಾಜ್ಯಮಟ್ಟಕ್ಕೆ ವಿಸ್ತರಿಸಿದ್ದು, ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಚಾರಸಂಕಿರಣದ ವಿಷಯ ಹಾಗೂ ಉದ್ದೇಶ
ಭಾರತ ಸರ್ವವಿಧದಲ್ಲಿಯೂ ಸಮೃದ್ಧದೇಶ. ಈ ಸಮೃದ್ಧಿಗೆ ನಿರಂತರ ಪೋಷಣೆಯನ್ನೂ, ರಕ್ಷಣೆಯನ್ನೂ ಒದಗಿಸಿದ ಇಲ್ಲಿಯ ಕ್ಷಾತ್ರ-ಪೌರುಷವೂ ಅಸಾಧಾರಣವಾದುದು, ಅವಿಚ್ಛಿನ್ನವಾದುದು. ಸನಾತನಧರ್ಮದ ಭದ್ರ ಬುನಾದಿಯ ಮೇಲೆ ಮೈತಳೆದುನಿಂತ ಈ ಅಪ್ರತಿಮ ಕ್ಷಾತ್ರ-ಪೌರುಷಗಳಿಂದಾಗಿಯೇ ಸಾಂಸ್ಕೃತಿಕವಾಗಿ ನಾವಿನ್ನೂ ಭಾರತೀಯರಾಗಿಯೇ ಉಳಿದಿದ್ದೇವೆ ಎಂಬುದನ್ನು ಮನಗಾಣಿಸಲು ಹಾಗೂನಮ್ಮ ವೇದ-ವೇದಾಂತಾದಿ ಸಂಸ್ಕೃತಸಾಹಿತ್ಯದಲ್ಲಿ, ಮಹಾಕಾವ್ಯಗಳಲ್ಲಿ ಕ್ಷಾತ್ರವು ಒಂದು ಪ್ರಮುಖ ಮೌಲ್ಯವಾಗಿಯೇ ಮೆರೆದಿದೆ. ಇತಿಹಾಸಕಾಲದಿಂದೀಚೆಗೂ ಅದೇ ಮೌಲ್ಯ. ಅದೇ ಸ್ಫೂರ್ತಿ ನಮ್ಮ ಜನಜೀವನವನ್ನು ಮುನ್ನಡೆಸಿದೆ ಕಳೆದ ಒಂದು ಶತಮಾನದಿಂದೀಚೆಗೆ ಅದು ದುರ್ಲಕ್ಷ್ಯಕ್ಕೀಡಾಗಿರುವುದನ್ನೂ ಅನೇಕರು ಗುರುತಿಸಿದ್ದಾರೆ: ಸರ್ವಕಾಲಕ್ಕೂ ನಮಗೆ ಅದೇ ಕ್ಷಾತ್ರಮೌಲ್ಯ- ಸ್ಫೂರ್ತಿಯೇ ಆಶ್ರಯಣೀಯ ಎಂಬುದನ್ನೂ ಈ ವಿಚಾರಸಂಕಿರನ ತೋರ್ಪಡಿಸಲಿದೆ.
ಸ್ವಾತಂತ್ರ್ಯೋತ್ತರ ಭಾರತದ ಶಾಲಾ ಪಾಠ್ಯಪುಸ್ತಕಗಳಲ್ಲಿ ಕಾಣಸಿಗದ, ಇತಿಹಾಸಕಾರರು ಅನೇಕರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ, ಬಚ್ಚಿಟ್ಟ ಹತ್ತುಹಲವು ಸಂಗತಿಗಳನ್ನು, ಈ ವಿಚಾರಸಂಕಿರಣದ ಮೂಲಕ ಭಾರತದ ನೈಜ ಇತಿಹಾಸವನ್ನೂ ಇಲ್ಲಿಯ ಅಪ್ರತಿಮ ಕ್ಷಾತ್ರತೇಜವನ್ನೂ ತೋರ್ಪಡಿಸುತ್ತಲೇ ಆಧುನಿಕ ಇತಿಹಾಸಕಾರರ ದುರುದ್ದೇಶವನ್ನು ಬಯಲಿಗೆಳೆಯಬೇಕಾಗಿದೆ.
ಈ ವಿಚಾರ ಸಂಕಿರಣದ ಉದ್ಘಾಟನೆಗೆ ದೇಶದ ಶೌರ್ಯ ಪರಂಪರೆಯ ಪ್ರತೀಕವೆಂದೇ ಹೇಳಬಹುದಾದ ಮಾನ್ಯ ರಕ್ಷಣಾ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಭಾಗವಹಿಸಿ, ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಂತೆಯೇ ವಿಷಯವನ್ನು ೨ ಪ್ರಮುಖ ಘಟ್ಟಗಳಾಗಿ ವಿಭಾಗಿಸಿದ್ದು ಸ್ವಾತಂತ್ರ್ಯ ಪೂರ್ವದ ವಿಚಾರವನ್ನು ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತರಾದ ಇತಿಹಾಸದ ವಿಷಯದಲ್ಲಿ ಆಳವಾದ ಅಧ್ಯಯನ ಹಾಗೂ ಸಂಶೋಧನೆ ನಡೆಸಿರುವ ಡಾ| ರವೀಂದ್ರ ಮಂಡಿಸಿದರೆ, ಸ್ವಾತಂತ್ರ್ಯ ನಂತರದ ಶೌರ್ಯ ಪರಂಪರೆಯನ್ನು ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿ, ವಾಗ್ಮಿ ಆದರ್ಶ ಗೋಖಲೆ ಮಂಡಿಸುತ್ತಾರೆ.
ಕುಟುಂಬ ಪ್ರಬೋಧನ್ನ ಪ್ರಮುಖರಾದ ಹಾಗೂ ರಾ.ಸ್ವ.ಸಂ.ನ ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಪ್ರಸ್ತಾವನೆಗೈಯಲಿದ್ದಾರೆ. ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ ಉದ್ಘಾಟನಾ ಅವಧಿಯ ಅಧ್ಯಕ್ಷತೆ ವಹಿಸಲಿದ್ದಾರೆ, ಸಂಚಾಲಕರಾದ ವಸಂತಮಾಧವ ಸಮಾರೋಪದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯಗಳ ೬೦ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದು, ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಗಳಿರುತ್ತವೆ.
ವಿದ್ಯಾಕೇಂದ್ರದ ಆವರಣದಲ್ಲಿ 6000 ಚದರ ಅಡಿಯ ವೀರಸಾವರ್ಕರ್ ಹೆಸರಿನ ಸಭಾಮಂಟಪ, ವಿಕ್ರಮಾದಿತ್ಯ ಹೆಸರಿನ ವೇದಿಕೆ, ಪ್ರದರ್ಶಿನಿಗಾಗಿ 2000 ಅಡಿ, ಊಟೋಪಚಾರಕ್ಕಾಗಿ 4000 ಅಡಿಯ ಪೆಂಡಾಲ್ಗಳು ಸಿದ್ಧವಾಗುತ್ತಿವೆ.
ಕಳೆದ 7 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಈ ಬಾರಿ ಇನ್ನಷ್ಟು ವ್ಯಾಪಕತೆಯನ್ನು ಪಡೆದು ಸುಮಾರು 1500 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾರೀ ಭರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ, www.srvk.org ಎಂಬ ವಿದ್ಯಾಕೇಂದ್ರದ ವೆಬ್ಸೈಟ್ನಲ್ಲಿ ಆಮಂತ್ರಣ ಹಾಗೂ ಸಂಪರ್ಕಿಸಬೇಕಾದವರ ವಿವರಗಳು ಲಭ್ಯವಿದೆ ಎಂದು ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್ಕಟ್ಟೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.