ಬಂದ್ ಕರೆ ಕೊಡುವುದು ಹೊಸದೇನೂ ಅಲ್ಲ. ಬೆಲೆ ಏರಿಕೆ ವಿರುದ್ಧ, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದರ ವಿರುದ್ಧ, ಸರ್ಕಾರದ ರೀತಿ ನೀತಿಗಳ ವಿರುದ್ಧ, ನದಿ ನೀರು ಹಂಚಿಕೆಯಲ್ಲಾಗುವ ಅನ್ಯಾಯಗಳ ವಿರುದ್ಧ, ಹೀಗೆ ಹಲವಾರು ಸಂದರ್ಭಗಳಲ್ಲಿ ವರ್ಷಕ್ಕೆ ಹಲವಾರು ಬಾರಿ ರಾಷ್ಟ್ರ ಬಂದ್, ರಾಜ್ಯ ಬಂದ್, ಜಿಲ್ಲಾ ಬಂದ್, ತಾಲ್ಲೂಕು ಬಂದ್ಗಳಿಗೆ ಕರೆಕೊಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಬಂದಿವೆ. ಆದರೆ ರಾಜಕೀಯ ಕಾರಣಗಳಿಗೆ ಒಂದು ಪಕ್ಷದ ವಿರುದ್ಧ ಇನ್ನೊಂದು ಪಕ್ಷ ಇನ್ಯಾವುದೋ ಸಂಘಟನೆಗಳನ್ನು ಬಳಸಿಕೊಂಡು ಬಂದ್ಗೆ ಕರೆ ಕೊಟ್ಟು ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡುವ ಸಂಪ್ರದಾಯ ಇತ್ತೀಚಿಗೆ ತಾನೇ ಪ್ರಾರಂಭವಾಗಿದ್ದು. ಅಂತಹಾ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕರ್ನಾಟಕ ಎನ್ನುವುದು ಕನ್ನಡಿಗರ ದೌರ್ಭಾಗ್ಯವೆಂದೇ ಹೇಳಬಹುದು.
ಹೌದು. ಇದರಲ್ಲಿ ಅನುಮಾನವೇ ಇಲ್ಲ. ಗೋವಾದ ಜೀವನದಿಯಾಗಿರುವ ಮಾಂಡೋವಿ/ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ. ಮಹದಾಯಿ ಯೋಜನೆಯನ್ನು 1978 ರಲ್ಲಿ ಸಿದ್ಧಪಡಿಸಲಾಯಿತು. ಎಸ್.ಆರ್.ಬೊಮ್ಮಾಯಿ ಆಯೋಗದಿಂದ 1980 ರಲ್ಲಿ ಯೋಜನೆ ಜಾರಿಗೆ ಸಲಹೆ ನೀಡಲಾಯಿತು. ಕರ್ನಾಟಕ ಸರ್ಕಾರ 1988 ರಲ್ಲಿ ಅನುಮೋದನೆ ನೀಡಿತು. ಆದರೆ ಅಂದಿನ ಗೋವಾ ಸರ್ಕಾರ ಈ ಯೋಜನೆಯನ್ನು ವಿರೋಧಿಸಿದ್ದರಿಂದ ಯೋಜನೆಗೆ ತಡೆ ಬಿತ್ತು. ನಂತರ 2002 ರಲ್ಲಿ ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ಕೇಂದ್ರದ ಮಂಜೂರಾತಿಯನ್ನು ಪಡೆದ ಕರ್ನಾಟಕ ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು. ಆದರೆ ಗೋವಾ ಸರ್ಕಾರ ಅದೇ ವರ್ಷ ಈ ಯೋಜನೆಗೆ ತಕರಾರು ಅರ್ಜಿಯನ್ನು ಕೇಂದ್ರಕ್ಕೆ ಸಲ್ಲಿಸಿತು. ಮತ್ತು ನ್ಯಾಯಾಧಿಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯಿತು. 2002ರ ಸೆಪ್ಟೆಂಬರ್ ತಿಂಗಳಿನಲ್ಲಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ, ಜಲ ಆಯೋಗವೇ ತಡೆಯಾಜ್ಞೆ ನೀಡಿತು. ಮಹದಾಯಿ ನೀರಿನ ವಿವಾದ ಕುರಿತು ರ್ಚಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ 2002ರ ಡಿಸೆಂಬರ್ ತಿಂಗಳಿನಲ್ಲಿ ಗೋವಾ ಹಾಗೂ ಕರ್ನಾಟಕ ಸರ್ಕಾರಗಳ ಮಂತ್ರಿಗಳ ಸಭೆ ಕರೆಯಲಾಯಿತು. ಆದರೆ ಅದು ಒಪ್ಪಂದಕ್ಕೆ ಬರಲು ವಿಫಲವಾಯಿತು.
ಆ ಸಂದರ್ಭಗಳಲ್ಲೆಲ್ಲಾ ಕೇಂದ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಯಾವ ಯಾವ ಪಕ್ಷ ಅಧಿಕಾರದಲ್ಲಿತ್ತು ಮತ್ತು ಆ ಪಕ್ಷದ ನಾಯಕರುಗಳ ಅಂದಂದಿನ ಹೇಳಿಕೆಗಳು ಏನೇನಿದ್ದವು ಎನ್ನುವುದನ್ನು ಗಮನಿಸಿದರೆ ಕನ್ನಡಪರ ಸಂಘಟನೆಗಳು ಯಾರ ವಿರುದ್ಧ ಬಂದ್ ಮಾಡಬೇಕಿತ್ತು ಎನ್ನುವುದು ಅತ್ಯಂತ ಸಾಮಾನ್ಯನಿಗೂ ಅರ್ಥವಾಗುತ್ತದೆ. ಆದರೆ ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಇಷ್ಟು ವರ್ಷಗಳ ನಂತರ, ಅದರಲ್ಲೂ ವಿಧಾನಸಭಾ ಚುನಾವಣೆ ಅತ್ಯಂತ ಸಮೀಪದಲ್ಲಿರುವಾಗ ಕನ್ನಡಪರ ಸಂಘಟನೆಗಳು ಇನ್ಯಾವುದೋ ನೆಪವೊಡ್ಡಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ರಾಜ್ಯಕ್ಕೆ ಭೇಟಿ ಕೊಟ್ಟ ದಿನದಂದೇ ರಾಜ್ಯ ಬಂದ್ಗೆ ಕರೆ ಕೊಟ್ಟಿದ್ದಾರೆಂದರೆ, ಮತ್ತು ವಿವಾದದ ಅಷ್ಟೂ ಜವಾಬ್ಧಾರಿಯನ್ನು ಆ ಪಕ್ಷದ ಮೇಲೆ ಹೊರಿಸಿದ್ದಾರೆಂದರೆ ರಾಜ್ಯದ ಆಡಳಿತ ಪಕ್ಷ ಅಥವಾ ಕೇಂದ್ರದ ವಿರೋಧ ಪಕ್ಷ ಆ ಕನ್ನಡಪರ ಸಂಘಟನೆಗಳನ್ನು ತಮ್ಮ ಪರವಾಗಿ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ ಎಂದು ಹೇಳಲು ಪ್ರತ್ಯೇಕ ಜ್ಞಾನವೇನೂ ಬೇಕಿಲ್ಲ. ಅಷ್ಟಾಗಿಯೂ ಯಾರಾದರೂ ನಾವು ಆ ಸಂಘಟನೆಗಳನ್ನು ನಂಬುತ್ತೇವೆ ಎನ್ನುವುದಾದರೆ ಕೆಲವೇ ದಿನಗಳ ಅಂತರದಲ್ಲಿ ಅದೇ ಪಕ್ಷದಿಂದ ಆಯ್ಕೆಯಾಗಿರುವ ಪ್ರಧಾನಿಯವರು ಬೆಂಗಳೂರಿಗೆ ಬರುವ ದಿನದಂದೇ ಮತ್ತೆ ಬಂದ್ಗೆ ಕರೆ ಕೊಡುವುದಾಗಿ ಕೆಲ ಕನ್ನಡಪರ ಸಂಘಟನೆಗಳು ಬೆದರಿಸುತ್ತಿರುವುದರ ಹಿಂದೆ ಅದು ಯಾವ ಪ್ರೇರಣೆಯಿದೆ ಎನ್ನುವುದನ್ನು ಅವರೇ ಹೇಳಬೇಕು.
ಇದೆಲ್ಲವನ್ನೂ ಒತ್ತಟ್ಟಿಗಿಟ್ಟು ನೋಡಿದರೂ ಇದೊಂದು ಜನಸಾಮಾನ್ಯರ ಜನಜೀವನಕ್ಕೆ ಅತ್ಯಂತ ಮಾರಕವಾಗಬಹುದಾದಂತಹ ನಡೆ ಎಂದೇ ಹೇಳಬಹುದು. ಮುಂದೊಂದು ದಿನ ಈಗ ವಿರೋಧ ಎದುರಿಸುತ್ತಿರುವ ಪಕ್ಷದವರೂ ಇದೇ ಸಂಘಟನೆಗಳನ್ನು ಈಗ ಆ ಸಂಘಟನೆಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಪಕ್ಷದ ವಿರುದ್ಧ ಬಂದ್ ಕರೆ ಕೊಡಲು ಬಳಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಖಾತರಿಯೇನು? ಈಗ ಬಂದ್ಗೆ ಕರೆ ಕೊಟ್ಟ ಸಂಘಟನೆಗಳಿಗೆ ಪರೋಕ್ಷವಾಗಿ ಬೆಂಬಲಿಸುತ್ತಿರುವ ಪಕ್ಷಕ್ಕೆ ಆಗ ವಿರೋಧಿಸಲು ಎಷ್ಟು ನೈತಿಕತೆ ಉಳಿದಿರುತ್ತದೆ?
ಹಾಗೆ ಆ ಪಕ್ಷದ ವಿರುದ್ಧ ಈ ಪಕ್ಷ, ಈ ಪಕ್ಷದ ವಿರುದ್ಧ ಆ ಪಕ್ಷ ಯಾವ ಯಾವುದೋ ನೆಪವೊಡ್ಡಿ ಕನ್ನಡಪರ ಸಂಘಟನೆಗಳನ್ನು ಬಳಸಿಕೊಂಡು ಪದೇ ಪದೇ ಬಂದ್ಗೆ ಕರೆ ಕೊಡುತ್ತಾ ಹೋದರೆ ಕರ್ನಾಟಕದ ಜನಸಾಮಾನ್ಯರ ಪಾಡೇನು? ದಿನಗೂಲಿ ನೌಕರರ ಪಾಡೇನು? ವಿದ್ಯಾರ್ಥಿಗಳ ಭವಿಷ್ಯವೇನು? ಚಿಕಿತ್ಸೆಗಾಗಿ ಪರದಾಡುತ್ತಿರುವ ರೋಗಿಗಳ ಪರಿಸ್ಥಿತಿಯೇನು?
ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜನ ಸಾಮಾನ್ಯರಿಗೇಕೆ ತೊಂದರೆ ಕೊಡುತ್ತೀರಿ? ನಿಮ್ಮ ನಿಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಬಂದ್ ಕರೆ ಕೊಡುವ ಮೂಲಕ ಸಾಮಾನ್ಯ ಕನ್ನಡಿಗರನ್ನೇಕೆ ಸಂಕಷ್ಠಕ್ಕೆ ನೂಕುತ್ತೀರಿ? ಅಷ್ಟಾಗಿಯೂ ಮೊನ್ನೆಯ ಬಂದ್ನಿಂದಾಗಿ ಕರ್ನಾಟಕಕ್ಕೆ ಏನು ಲಾಭವಾಯಿತು? ಉತ್ತರ ಕರ್ನಾಟಕದ ಸಮಸ್ಯೆಗೆ ದಕ್ಷಿಣ ಕರ್ನಾಟಕದವರು ಸ್ಪಂದಿಸಿಲ್ಲ, ಬೆಂಗಳೂರಿನ ಸಂಘಟನೆಗಳ ಕರೆಗೆ ಮಂಗಳೂರಿನ ಸಂಘಟನೆಗಳು ಸ್ಪಂದಿಸಲಿಲ್ಲ ಎನ್ನುವ ವೈಷಮ್ಯದ ಮಾತುಗಳು ನಮ್ಮ ನಮ್ಮಲ್ಲೇ ಮತ್ತಷ್ಟು ಬಿರುಕು ಮೂಡಿಸಿತೇ ಹೊರತೂ ನಮಗನ್ನಿಸಿದಂತೆ ಯಾವ ಪ್ರಯೋಜನವೂ ಆಗಿಲ್ಲ. ಆದರೆ ಕನ್ನಡಪರ ಸಂಘಟನೆಗಳ ಮೂಲಕ ಕರೆ ಕೊಟ್ಟ ಆ ಬಂದ್ನಿಂದಾಗಿ ನಮ್ಮ ಕರ್ನಾಟಕಕ್ಕಂತೂ ಸಾಕಷ್ಟು ನಷ್ಟವುಂಟಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ಸರ್ಕಾರೀ ನಗರ ಸಾರಿಗೆ ಸಂಸ್ಥೆಗಳು ಒಂದು ದಿನದಲ್ಲಿ ಕೋಟ್ಯಂತರ ನಷ್ಟ ಅನುಭವಿಸಿದವು. ಲಕ್ಷಾಂತರ ಕನ್ನಡ ಮಕ್ಕಳು ಒಂದು ದಿನ ಶಿಕ್ಷಣ ವಂಚಿತರಾದರು. ಲಕ್ಷಾಂತರ ರೈತರು, ಬಡವರು ತಮ್ಮ ಕೆಲಸಗಳಿಗಾಗಿ ಸರ್ಕಾರೀ ಕಚೇರಿಗಳಿಗೆ ಒಂದು ದಿನ ಹೆಚ್ಚು ಅಲೆಯಬೇಕಾಯಿತು.
ಲಕ್ಷಾಂತರ ದಿನಗೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೆಲಸ ಕಳೆದುಕೊಂಡರು. ಕನ್ನಡ ನೆಲದ ಲಕ್ಷಾಂತರ ಸ್ವಾಭಿಮಾನೀ ಸ್ವಯಂ ಉದ್ಯೋಗಿಗಳು ತಮ್ಮ ಉದ್ಯಮವನ್ನು ಒಂದು ದಿನದ ಮಟ್ಟಿಗೆ ಮುಚ್ಚಬೇಕಾಯಿತು. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಬಂದ್ ಎನ್ನುವುದು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಇರುವ ಒಂದು ಅಸ್ತ್ರ ಎಂದು ಇದುವರೆಗೂ ನಂಬಿದ್ದ ಕೋಟ್ಯಂತರ ಭಾರತೀಯರ ನಂಬಿಕೆಯೇ ಸುಳ್ಳಾಗಿ ಹೋಯಿತು. ಇನ್ನೊಮ್ಮೆ ಯಾರೇ ಯಾವ ಕಾರಣಕ್ಕಾಗಿಯೇ ಬಂದ್ ಕರೆ ಕೊಟ್ಟರೂ ಅವರನ್ನು ಪ್ರತಿಯೊಬ್ಬ ಪ್ರಜ್ಞಾವಂತರೂ ಸಂಶಯದ ಕಣ್ಣುಗಳಿಂದ ನೋಡುವಂತಹಾ ಪರಿಸ್ಥಿತಿ ಸೃಷ್ಟಿಯಾಯಿತು. ಆ ಮೂಲಕ ಭಾರತದಲ್ಲಿ ನಡೆದು ಬಂದ ಶತಮಾನದ ಒಂದು ಚಳುವಳಿಯ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ ಅಪವಾದಕ್ಕೆ ಕರ್ನಾಟಕ, ಕರ್ನಾಟಕದ ಕೆಲ ಸಂಘಟನೆಗಳು ಹಾಗೂ ಅವುಗಳಿಗೆ ಪರೋಕ್ಷವಾಗಿ ಸಹಕರಿಸಿದ ಒಂದು ರಾಜಕೀಯ ಪಕ್ಷ ಮತ್ತು ಆ ಪಕ್ಷದ ನೇತೃತ್ವದ ಸರ್ಕಾರ ಪಾತ್ರವಾಯಿತು.
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಮಾತೊಂದಿದೆ. ಅದರಂತೆ ಈಗ ತಮ್ಮಿಂದಾದ ಅನಾಹುತದ ಬಗ್ಗೆ ಎಷ್ಟು ಮಾತನಾಡಿದರೂ ಯಾವುದೇ ಪ್ರಯೋಜನವಿಲ್ಲ. ಆದರೆ ಮುಂದೆ ಈ ರೀತಿಯಾಗದಂತೆ ತಡೆಯಲು ಹಲವು ಮಾರ್ಗಗಳಿವೆ.
ಹೋರಾಟಗಾರರೇ, ಯಾವುದೇ ಕಾರಣಕ್ಕೂ ನೀವು ರಾಜಕೀಯ ಪಕ್ಷಗಳ ಅಡಿಯಾಳಾಗಬೇಡಿ. ಒಂದು ವೇಳೆ ಬಂದ್ ಕರೆ ಕೊಡುವುದೇ ಆದರೆ ಆ ವಿಚಾರವಾಗಿ ಯಾವ ರಾಜಕೀಯ ಪಕ್ಷಗಳ ಸಲಹೆಯನ್ನೂ ಪಡೆಯಬೇಡಿ. ಯಾವರಾಜಕೀಯ ಪಕ್ಷಗಳಿಂದಲೂ ಬೆಂಬಲ ನಿರೀಕ್ಷಿಸಬೇಡಿ. ಆದಷ್ಟೂ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಹೋರಾಟಗಳನ್ನು ರೂಪಿಸಿ. ಒಂದು ವೇಳೆ ನಿಮ್ಮ ಹೋರಾಟದ ಫಲವನ್ನು ಯಾವುದೋ ರಾಜಕೀಯಪಕ್ಷ ಅನುಭವಿಸುತ್ತದೆ ಎಂದು ತಿಳಿದರೆ ಸಾಧ್ಯವಾದಷ್ಟು ಅಂತಹಾ ಸಾಧ್ಯತೆಗಳನ್ನು ತಪ್ಪಿಸುವ ಬಗ್ಗೆ ಪರಿಶೀಲಿಸಿ. ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮ ಹೋರಾಟಗಳನ್ನು ಸಾರ್ವಜನಿಕರು ಸಂಶಯದ ದೃಷ್ಟಿಯಲ್ಲಿ ನೋಡುವಂತೆಮಾಡಿಕೊಳ್ಳಬೇಡಿ. ಹಾಗೊಂದು ವೇಳೆ ನಿಜವಾಗಿಯೂ ತಾವುಗಳು ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಡುವುದಕ್ಕೋಸ್ಕರವೇ ಹೋರಾಟ ಮಾಡುವುದೇ ಆದರೆ ನೇರವಾಗಿ ಆಯಾ ಪಕ್ಷಗಳ ಸದಸ್ಯತ್ವ ಪಡೆದು ಆಯಾಪಕ್ಷಗಳ ಬಾವುಟದ ಅಡಿಯಲ್ಲೇ ಹೋರಾಟ ನಡೆಸಿ.
ಕನ್ನಡಪರ ಹೋರಾಟಗಳಿಗೆ ಅದರದ್ದೇ ಆದ ಘನತೆಯಿದೆ. ಅದರದ್ದೇ ಆದ ಇತಿಹಾಸವಿದೆ. ದಯವಿಟ್ಟು ಆ ಘನತೆಗೆ ಮಸಿ ಬಳಿಯಬೇಡಿ. ಆ ಇತಿಹಾಸವನ್ನು ಅಳಿಸಿಹಾಕಬೇಡಿ. ರಾಜಕೀಯ ಪಕ್ಷಗಳ ನಾಯಕರೇ, ದಯವಿಟ್ಟು ನಮ್ಮ ನಾಡಿನ ಭಾಷಾ ಹೋರಾಟಗಾರರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ. ಕನ್ನಡ ನಾಡಿನ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ಇವಿಷ್ಟೇ ನಾವು ನಿಮ್ಮಿಂದ ನಿರೀಕ್ಷಿಸುವುದು. ಧನ್ಯವಾದಗಳು.
ಜೈ ಕರ್ನಾಟಕ ಮಾತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.