ಮಂಗಳೂರು : ಮಂಗಳೂರಿನ ಶ್ರೀಮಂಗಳಾದೇವಿ ಕ್ಷೇತ್ರದಲ್ಲಿ 1947 ರಲ್ಲಿ ಸ್ಥಾಪನೆಯಾದ ರಾಮಕೃಷ್ಣ ಮಠ ಈ ವರೆಗೆ ಹಲವಾರು ಬಗೆಯ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಭಗವತ್ಸೇವಾಭಾವದಿಂದ ಮಾಡುತ್ತಾ, ತನ್ನ ಎಪ್ಪತ್ತು ಸಾರ್ಥಕ ಸಂವತ್ಸರಗಳನ್ನು ಪೂರ್ಣಗೊಳಿಸಿದೆ. ಈ ಶುಭ ಸಂದರ್ಭದಲ್ಲಿ ದಿವ್ಯತ್ರಯರ ಕೃಪಾಬೆಳಗಿನಲ್ಲಿ ಭಾವಸಂಗಮ ಎಂಬುದು ಮೂರು ದಿನಗಳ ಕಾಲ ನಡೆಯಲಿರುವ ಭಕ್ತರ ವಿಶೇಷ ಸಮಾಗಮ. ಹಾಗೆಯೇ ಸ್ವಾಮಿ ವಿವೇಕಾನಂದರು ಶಿಕಾಗೋದ ವಿಶ್ವಧರ್ಮಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಉಪನ್ಯಾಸಕ್ಕೀಗ 125 ವರ್ಷಗಳು.
ಸ್ವಾಮಿ ವಿವೇಕಾನಂದರ ಅಂದು ನೀಡಿದ ಸಂದೇಶದ ಹಿನ್ನಲೆಯಲ್ಲಿ ಸಮನ್ವಯ ಹಾಗೂ ಸ್ವೀಕಾರ ಎಂಬ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ರಾಮಕೃಷ್ಣ ಪರಮಹಂಸರ ಹಾಗೂ ಶ್ರೀಮಾತೆ ಶಾರದಾದೇವಿಯವರ ಜೀವನ ಬೋಧನೆಗಳ ಕುರಿತಂತೆ ಮೂರು ದಿನಗಳ ಕಾಲ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಇಪ್ಪತ್ತು ಸ್ವಾಮಿಜಿಗಳು ಸೇರಿದಂತೆ ಐವತ್ತಕ್ಕೂ ಅಧಿಕ ಜನ ವಿದ್ವಾಂಸರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. 21 ಉಪನ್ಯಾಸಗಳು ಸೇರಿದಂತೆ ಡಾ. ಪ್ರಭಾಕರ ಜೋಶಿಯವರ ನೇತೃತ್ವದಲ್ಲಿ ತಾಳಮದ್ದಳೆ, ಖ್ಯಾತ ಗಾಯಕರಾದ ಶ್ರೀ ವಿದ್ಯಾಭೂಷಣರಿಂದ ಭಕ್ತಿಗಾನಾಮೃತ, ಡಾ. ಬಾಲಕೃಷ್ಣ ಭಾರದ್ವಾಜ್ರಿಂದ ಕನ್ನಡ ಅಷ್ಟಾವಧಾನ, ಕುದ್ರೋಳಿ ಗಣೇಶ್ ರವರಿಂದ ವಿಸ್ಮಯ ಜಾದೂ ಪ್ರದರ್ಶನ ಹಾಗೂ ಸುಮಾರು ಎಂಟನೂರು ಜನ ಭಕ್ತರಿಂದ ಸ್ವಚ್ಛ ಮಂಗಳೂರು ಕಾರ್ಯಕ್ರಮಗಳನ್ನು ಈ ಭಕ್ತ ಸಮಾಗಮ ಒಳಗೊಂಡಿರುತ್ತದೆ. ಧ್ಯಾನ, ಭಜನೆ ಸಂಕೀರ್ತನೆ, ಸಂವಾದಗಳು ಈ ಸಮ್ಮೇಳನದ ಭಾಗವಾಗಿರುತ್ತವೆ.
ಈ ಬಾರಿಯ ಭಾವಸಂಗಮ-ಭಕ್ತಸಮಾಗಮವನ್ನು ದಿನಾಂಕ ೨೬ ಜನವರಿ ೨೦೧೮ ರಂದು ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ ಅಮೇರಿಕದ ಬೋಸ್ಟನ್ ವೇದಾಂತ ಸೊಸೈಟಿಯ ಪೂಜ್ಯ ಸ್ವಾಮಿ ತ್ಯಾಗಾನಂದಜಿ ಮಹರಾಜ್ ದೀಪ ಪ್ರಜ್ವಲನೆಯ ಮೂಲಕ ಶುಭಾರಂಭಗೊಳಿಸಲಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ಹಿರಿಯ ಯತಿ ಪೂಜನೀಯ ಸ್ವಾಮಿ ನಿತ್ಯಸ್ಥಾನಂದಜಿ ಸಾನಿಧ್ಯ ವಹಿಸಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಮ್ಮೇಳನದ ಆಶಯ ಭಾಷಣ ಮಾಡಲಿದ್ದಾರೆ. ಕರ್ನಾಟಕದ ವಿವಿಧೆಡೆಗಳಿಂದ ಹಲವಾರು ಸ್ವಾಮಿಜಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ದಿನಾಂಕ 28 ಜನವರಿ 2018 ರಂದು ಮಧ್ಯಾಹ್ನ 2 ಗಂಟೆಗೆ ಈ ಸಮ್ಮೇಳನ ಸಂಪನ್ನಗೊಳ್ಳುವುದು. ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಉಡುಪಿಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಎನ್ ವಿನಯ ಹೆಗ್ಡೆ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ.
ಪ್ರತಿ ವರ್ಷ ’ವಾರ್ಷಿಕೋತ್ಸವ’ ಎಂಬ ಹೆಸರಿನಲ್ಲಿ ಮಂಗಳೂರಿಗೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ಇಡೀ ಕನ್ನಡ ನಾಡಿನ ಜನತೆಗೆ ಪರಿಚಯಿಸುವ ದೃಷ್ಟಿಯಿಂದ ಒಂದಿಷ್ಟು ಬದಲಾವಣೆಗಳೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಬಯಸುವ ಭಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಸುಮಾರು 600 ಕ್ಕೂ ಅಧಿಕ ಭಕ್ತರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಸುಮಾರು 400 ಜನ ಪರವೂರಿನ ಭಕ್ತರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.