ಪ್ರಕಾಶ್ ರಾಜ್ ನಾನು ತುಂಬಾ ಇಷ್ಟ ಪಡುವ ನಟ ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಅವರ ಪ್ರತಿಭೆಯನ್ನು ಕನ್ನಡ ಚಿತ್ರತಂಗ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಅನ್ನೋದು ನನ್ನ ಬಹುದಿನದ ಅಳಲು.
ಆದರೆ ಇತ್ತೀಚಿಗಿನ ಅವರ ಕೆಲವೊಂದು ಹೇಳಿಕೆಗಳ ನಂತರ ಮನುಷ್ಯನಿಗೆ ಪ್ರತಿಭೆಗಿಂತ ಎಲ್ಲಿ ಏನು ಮಾತಾಡಬೇಕು ಅನ್ನೋ ಸಾಮಾನ್ಯ ಜ್ಞಾನ ಬಹುಮುಖ್ಯ ಅನಿಸಿದ್ದು ಸುಳ್ಳಲ್ಲ.
ತಮ್ಮನ್ನು ತಾವು ದೊಡ್ಡ ನಟ ಎಂದು ಕರೆದುಕೊಳ್ಳುತ್ತಿರೋ ಪ್ರಕಾಶ್ ರಾಜ್ ಅವರು ದೊಡ್ಡವರೆಲ್ಲ ಜಾಣರಲ್ಲ ಅನ್ನೋದನ್ನ ಮತ್ತೊಮ್ಮೆ ಪ್ರತಿಪಾದಿಸಿದರು. ಅವರು ಇಂದು ತಮ್ಮ ದಡ್ಡತನವನ್ನು ಪ್ರದರ್ಶಿಸುತ್ತ ಮೋದಿ, ಯೋಗಿ ಅಷ್ಟೇ ಯಾಕೆ ಅವರುಗಳನ್ನು ಆರಿಸಿದ ಜನರನ್ನೂ ಮೂರ್ಖರೆನ್ನುವ ಮೂಲಕ ಅವರಂತಹ ಪ್ರಗತಿಪರರು ದಿನಬೆಳಗಾದರೆ ಪ್ರತಿಪಾದಿಸೋ ಪ್ರಜಾಪ್ರಭುತ್ವದ ಮೇಲೆ ಅವರಿಗಿರುವ ಗೌರವ, ಪ್ರೀತಿಯನ್ನು ತೋರ್ಪಡಿಸಿದರು.
ಹೆಚ್ಚಾಗಿ ಇಂತಹ ದೊಡ್ಡವರು ಮಾತಾಡೋ ದೊಡ್ಡ ವಿಷಯಗಳು ನನ್ನಂತಹ ಸಾಮಾನ್ಯ ಜನರಿಗೆ ಅರ್ಥವಾಗುವದಕ್ಕಿಂತ ನಮ್ಮಲ್ಲಿ ಗೊಂದಲಗಳನ್ನು ಸೃಷ್ಟಿಸುವುದೇ ಜಾಸ್ತಿ. ಇಂತಹ ಹಲವಾರು ಗೊಂದಲಗಳು ನನ್ನಲ್ಲೂ ಇದೆ. ಅವರು ತಮ್ಮ ಹೇಳಿಕೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯಾನಂದರ ಬಗ್ಗೆ ಮಾತನಾಡುತ್ತ ಅವರ ಒಂದು ವಿಡಿಯೋ ನೋಡಿದೆ ಅವರು ಮುಖ್ಯಮಂತ್ರಿಗಳೋ ಇಲ್ಲ ದೇವಸ್ಥಾನದ ಅರ್ಚಕರೋ ಅನ್ನೋ ಅನುಮಾನ ವ್ಯಕ್ತ ಪಡಿಸಿದರು. ಆದರೆ ಪ್ರಕಾಶ್ ರಾಜ್ ಇಲ್ಲಿ ಯೋಚಿಸಬೇಕಾದ ಮುಖ್ಯ ಅಂಶವೇನೆಂದರೆ ಯೋಗಿ ಮುಖ್ಯಮಂತ್ರಿಗಳಾಗುವುದಕ್ಕಿಂತ ಮುಂಚೆ ಒಂದು ಮಠದ ಮಠಾಧಿಪತಿಗಳು. ಪೂಜೆ ಪುನಸ್ಕಾರ ಅನ್ನೋದು ಅವರ ದಿನಚರಿಯಲ್ಲಿ ವರ್ಷಗಳಿಂದ ಬಂದದ್ದು. ಮುಖ್ಯಮಂತ್ರಿಗಳಾದ ಕೂಡಲೇ ಅದನ್ನು ಬಿಟ್ಟಿದ್ದರೆ ಅದನ್ನು ನಟನೆ ಅನ್ನಬಹುದಾಗಿತ್ತೇನೋ ? ಜೀವನಪೂರ್ತಿ ಹಿಂದುತ್ವ ಪ್ರತಿಪಾದಿಸಿದ ಸಂತ ಮುಖ್ಯಮಂತ್ರಿಯಾದ ಕೂಡಲೇ ಇತರ ರಾಜಕಾರಣಿಗಳಂತೆ ಟೋಪಿ ಹಾಕ್ಕೊಂಡು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಲ್ಲಿ ಅದನ್ನು ನಟನೆ ಅನ್ನಬಹುದಿತ್ತೇನೋ ? ಆದ್ರೆ ಇಲ್ಲಿ ಅದ್ಯಾವುದೂ ಆಗಿಲ್ಲ ಅಂದ ಮೇಲೆ ದೊಡ್ಡ ನಟರಾದ ನೀವು ಯಾವುದು ನಟನೆ ಯಾವುದು ಅಲ್ಲ ಅನ್ನೋದನ್ನು ಗುರುತಿಸುವುದರಲ್ಲಿ ಯಾಕೆ ವಿಫಲರಾದಿರಿ ಅನ್ನೋದು ನನ್ನಂತ ಹಲವಾರು ಅಲ್ಪಜ್ಞಾನಿಗಳಿಗೆ ಕಾಡೋ ಪ್ರಶ್ನೆ.
ಇನ್ನು ತಮ್ಮ ಮಿತ್ರರಾದ ಗೌರಿ ಲಂಕೇಶ್ ಕೊಲೆ ವಿಚಾರದಲ್ಲಿ ತಾವು ಭಾವುಕರಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿ ಮೆರೆದವರನ್ನು ತರಾಟೆಗೆ ತಗೊಂಡ್ರಿ ಸಂತೋಷ. ಆದರೆ ಇದಕ್ಕಿಂತ ಮೊದಲು ಗೌರಿಯವರು ಕೇರಳ ಹತ್ಯಾಕಾಂಡವನ್ನು ಸ್ವಚ್ಛ ಕೇರಳಂ ಅಂತ ಬಣ್ಣಿಸಿದಾಗ ಅದು ನಿಮಗೆ ವಿಕೃತಿ ಅನ್ನಿಸಿಲ್ಲವೇ ? ಇನ್ನು ಮೋದಿ ಗೌರಿ ಕೊಲೆ ಬಗ್ಗೆ ಹೇಳಿಕೆ ನೀಡಿಲ್ಲ ಅಂತ ಆರೋಪಿಸೋ ನೀವು ಕರ್ನಾಟಕ, ಕೇರಳಗಳಲ್ಲಿ ನೀವು ಬೆಂಬಲಿಸೋ ಜಾತ್ಯಾತೀತ ಸರಕಾರ ಇದ್ದಾಗ ನಡೆದ ಒಂದು ಕೋಮಿನ ಸರಣಿ ಕೊಲೆಗಳ ವಿರುದ್ಧ ಎಷ್ಟು ಸಲ ಧ್ವನಿ ಎತ್ತಿದ್ರಿ ಅನ್ನೋದನ್ನೂ ಯೋಚಿಸಬೇಕಾಗುತ್ತದೆ. ಇರಲಿ ಬಿಡಿ ಹಿಂದೂಗಳು ಇರೋದೇ ಸಾಯೋದಕ್ಕೆ ಅಂದ್ಕೊಳ್ಳೋಣ. ನಿಮಗೆ ವೃತ್ತಿರಂಗದಲ್ಲಿ ಒಂದು ಸ್ಥಾನವನ್ನು ತಂದುಕೊಟ್ಟ ತಮಿಳುನಾಡಿನಲ್ಲಿ ನಿಮ್ಮದೇ ಸಿದ್ಧಾಂತವನ್ನು ಬೆಂಬಲಿಸೋ ಪ್ರಗತಿಪರ ಸಂಘಟನೆಯೊಂದರ ಕಾರ್ಯಕರ್ತ ಫಾರೂಕ್ ಅವರನ್ನು ಅವರದೇ ಧರ್ಮದ ಮತಾಂಧರು ಧರ್ಮ ವಿರೋಧಿ ಹಣೆಪಟ್ಟಿ ಹಚ್ಚಿ ಬೀದಿ ಹೆಣವನ್ನಾಗಿಸಿದಾಗ ನಿಮ್ಮ ಧ್ವನಿ, ಆಕ್ರೋಶ ಯಾಕೆ ಉಕ್ಕಿ ಹರಿಯಲಿಲ್ಲ ? ಈಗ ಹೇಳಿ ಯಾವುದು ನಟನೆ ? ನೀವು ಅವಾಗ ಮಾಡುತ್ತಿದ್ದದ್ದೋ ಇಲ್ಲಾ ಈಗ ಮಾಡುತ್ತಿರುವುದೋ ? ಹೌದು ನೀವು ದೊಡ್ಡ ನಟರೇ ಸರಿ. ಯೋಗಿ, ಮೋದಿಗಳಿಂದ ಇನ್ನೊಂದು ಜನುಮ ಎತ್ತಿ ಬಂದರೂ ಇಂತಹ ನಟನೆ ಸಾಧ್ಯವಿಲ್ಲ.
ಎಡ, ಬಲ ವ್ಯತ್ಯಾಸವಿಲ್ಲದೆ ಸರಣಿ ಕೊಲೆಗಳಾಗುತ್ತಿರುವ ಕರ್ನಾಟಕ, ಕೇರಳ ಮುಖ್ಯಮಂತ್ರಿಗಳನ್ನು ಖಂಡಿಸೋ ಧೈರ್ಯ ಮಾಡದ ತಾವು ಅದ್ಯಾವ ನೈತಿಕತೆಯಿಂದ ಮೋದಿಯನ್ನು ಇದ್ಯಾವುದಕ್ಕೂ ಸಂಬಂಧವೇ ಇಲ್ಲದಿರೋ ದೂರದ ಉತ್ತರಪ್ರದೇಶದ ಮುಖ್ಯಮಂತ್ರಿಗಳನ್ನು ದೂಷಿಸುತ್ತಿದ್ದೀರಿ ? ನಿಮ್ಮ ಈ ಪೂರ್ವಾಗ್ರಹ ಚಿಂತನೆಗಳನ್ನೇ ಪ್ರಗತಿಪರ ಚಿಂತನೆ ಅನ್ನೋದಾದರೆ ಅಂತಹ ಚಿಂತನೆಗಳಿಗೆ ನನ್ನದೊಂದು ಧಿಕ್ಕಾರ. ನಿಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಬೆಂಬಲಿಸಿದರು ಅನ್ನೋ ಒಂದೇ ಕಾರಣಕ್ಕೆ ಮತ ನೀಡಿದವರೆಲ್ಲರೂ ಮೂರ್ಖರು ಅನ್ನೋ ದಾರ್ಷ್ಟ್ಯ ಯಾಕೆ ? ದೊಡ್ಡವರೆನಿಸಿಕೊಂಡವರ ಬಾಯಲ್ಲಿ ಇಂತಹ ಸಣ್ಣತನ, ಹತಾಶೆ ಮಾತುಗಳು ಶೋಭೆ ನೀಡುವುದೇ ?
ಕೊನೆಯದಾಗಿ ಒಂದು ವಿನಂತಿ. ನಿಮಗೆ ಸಿಕ್ಕಿದ ಪ್ರಶಸ್ತಿಗಳು ನಿಮ್ಮ ನಟನಾ ಕೌಶಲ್ಯಕ್ಕೆ ಸಿಕ್ಕಿದವೇ ಹೊರತು ನಿಮ್ಮ ವ್ಯಕ್ತಿತ್ವಕ್ಕಲ್ಲವಾದ್ದರಿಂದ ನೀವದನ್ನು ಹಿಂತಿರುಗಿಸೋ ಅಗತ್ಯವಿಲ್ಲ ಯಾಕಂದರೆ ನಿಮ್ಮ ವ್ಯಕ್ತಿತ್ವ ಪಾತಾಳಕ್ಕಿಳಿದಿರಬಹುದು ಆದರೆ ನಟನೆ ಅಂತ ಬಂದಾಗ ನೀವಿನ್ನೂ ಬಹು ಎತ್ತರದಲ್ಲಿದ್ದೀರಿ ನಿಮಗೆ ಶುಭವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.