ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ ರಾಮಕೃಷ್ಣ ಪರಮಹಂಸರು ಹಿಂದೂ ಧರ್ಮದ ಬಗ್ಗೆ ಹೇಳಿದ ಮಾತುಗಳಿವು, “ಹಿಂದೂಧರ್ಮ ಮಾತ್ರವೇ ಸನಾತನ ಧರ್ಮ; ಹಿಂದೂಧರ್ಮವೇ ಚಿರಂತನವಾದುದು. ಅದೇ ನಿರಂತರವಾಗಿ ಮುಂದೆಯೂ ಉಳಿಯುತ್ತದೆ”.
ತ್ಯಾಗ ಮತ್ತು ಸೇವೆಗಳೇ ಇದರ ಮುಖ್ಯ ಅಂಶಗಳು. ಇಂತಹ ಶ್ರೇಷ್ಠ ಪರಂಪರೆಯ ನಮ್ಮ ಸಂಸ್ಕೃತಿಯ ಮೇಲೆ ಅನೇಕ ಆಕ್ರಮಣಗಳಾಗಿವೆ. ಇದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ಶತಮಾನಗಳಿಂದ ಈ ಆಕ್ರಮಣಗಳು ತಪ್ಪಿದ್ದಲ್ಲ. ಆದರೆ ಹೊರಗಿನ ಆಕ್ರಮಣಗಳಾಗಲೀ, ಒಳಗಿನ ಜಂಜಾಟಗಳಾಗಲೀ, ಅದನ್ನು ನಾಶಮಾಡಲಾಗಲಿಲ್ಲ, ಮತ್ತೆ ಆಗುವುದೂ ಇಲ್ಲ. ಈ ರೀತಿಯ ಪ್ರತಿಯೊಂದು ಉತ್ಕ್ರಾಂತಿಯೂ ಅದರ ಸ್ನಾಯುಗಳನ್ನೂ ಬಲಪಡಿಸುವ ಪ್ರೇರಕಶಕ್ತಿಯಾಗಿರುವುದನ್ನು ಗಮನಿಸಿದಾಗ, ಹಿಂದೂ ಧರ್ಮದಲ್ಲಿನ ಪುಟಿದೇಳುವ ಶಕ್ತಿಯನ್ನೂ, ಅಳಿಯದೇ ಉಳಿಯಲು ಇರುವ ಪ್ರಬಲವಾದ ಸಾಮರ್ಥ್ಯವನ್ನೂ ಎತ್ತಿತೋರಿಸುತ್ತದೆ.
ಮತಾಂತರ, ಜಿಹಾದ್ನಂತಹ ಸಮಸ್ಯೆಗಳು ಒಂದು ಕಡೆಯಾದರೇ, ಕೆಲವು ವಿಚಾರವಾದಿಗಳು, ಬುದ್ಧಿಜೀವಿಗಳು ಹಾಗು ಮಾರ್ಕಿಸ್ಟರ ವಿಚಾರಧಾರೆ ಇನ್ನೊಂದು ಕಡೆ. ಸೇವೆಯ ಹೆಸರಿನಲ್ಲಿ ವಿದ್ಯಾಲಯಗಳನ್ನು, ಆಸ್ಪತ್ರೆಗಳನ್ನು, ಇನ್ನಿತರೆ ಕೆಲಸಗಳನ್ನು ಮಾಡುತ್ತಾ ನಮ್ಮ ಅಮಾಯಕರನ್ನು ಮತಾಂತರದ ಬಲೆಗೆ ಹಾಕುತ್ತಿದ್ದಾರೆ. ವಿದೇಶದಿಂದ ಬಂದು ಇಲ್ಲಿ ನೆಲೆನಿಂತು ನಮ್ಮ ಪರಂಪರೆಯನ್ನು ಟೀಕಿಸುವುದು, ನಮ್ಮ ದೇವರುಗಳ ಬಗ್ಗೆ ನಮ್ಮ ಆಚಾರ ವಿಚಾರಗಳ ಬಗ್ಗೆ ನೀಚವಾಗಿ ಮಾತಾಡಿ ಜನರ ತಲೆಯನ್ನು ಕೆಡಿಸಿ ಅವರನ್ನು ತಮ್ಮ ಜಾಲಕ್ಕೆ ಸೆಳೆಯುವ ಕಪಟನಾಟಕವಿದು. ‘ನಾವು ಮಾಡಿದ್ದೇ ಸರಿ’ ಎಂಬ ಮನೋಭಾವ ತಾಳುವುದಲ್ಲದೇ, ಅಶಾಂತಿ ಉದ್ವೇಗಗಳನ್ನು ಸೃಷ್ಟಿಸುವಲ್ಲಿ ಇವರ ಪಾತ್ರ ಅಪಾರ. ಮತಪರಿವರ್ತನೆಯು ತಲೆತಲಾಂತರದಿಂದಲೂ ಬೆಳೆದು ಬಂದಂತಹ ಸಂಸ್ಕೃತಿಯ ಹಾಗು ರಾಷ್ಟ್ರೀಯತೆಯ ಬೇರುಗಳನ್ನು ಕತ್ತರಿಸಿ, ವ್ಯಕ್ತಿಗಳನ್ನು ದೇಶದ್ರೋಹಿಗಳನ್ನಾಗಿ ಬಂಡುಕೋರರನ್ನಾಗಿ ಮಾಡಿದರೆ ಯಾವ ಸಮಾಜ ತಾನೇ ಅದನ್ನು ಸಹಿಸೀತು?
ಆದರೆ ಇದಕ್ಕೆ ಸೂಕ್ತವಾಗುವ ಪರಿಹಾರವನ್ನು ಕಂಡುಕೊಂಡು ಬಲಿಷ್ಠ ಸಮಾಜವಾಗಿ ಹಿಂದುತ್ವ ಎದ್ದು ನಿಲ್ಲಬಲ್ಲ ಶಕ್ತಿಯನ್ನು ಹೊಂದಿದೆ. ಹಿಂದುಗಳು ತ್ಯಾಗ ಮತ್ತು ಸೇವೆಯ ಹಾಗು ಸತ್ಯದ ಪಾಠವನ್ನು ಯಾರಿಂದಲೂ ಕಲಿಯುವ ಅವಶ್ಯಕತೆ ಇಲ್ಲ. ತನ್ನಲ್ಲಿ ತಾನು ಶ್ರೇಷ್ಠವೆಂದೆನಿಸಿಕೊಂಡ ಧರ್ಮ ನಮ್ಮದು. ನಮ್ಮ ಧರ್ಮದ ರಕ್ಷಣೆಯ ಹೊಣೆಯು ನಮ್ಮದೇ, ಅದನ್ನು ಯಾವ ಹೊರಗಿನವರು ಬಂದು ಸರಿಮಾಡಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಒಮ್ಮೆ ಹಿಂದೂ ಧರ್ಮದ ಬಗ್ಗೆ ಅದರ ರಕ್ಷಣೆಯ ಬಗ್ಗೆ ಹೀಗೆ ಹೇಳಿದ್ದಾರೆ; “ಧರ್ಮವನ್ನು ಅತ್ಯಂತ ಜಾಗರೂಕತೆಯಿಂದ ಕಾಪಾಡಿದ್ದರಿಂದಲೇ ಅದಕ್ಕಾಗಿ ನಿಮ್ಮದೆಲ್ಲವನ್ನೂ ತ್ಯಾಗ ಮಾಡಿದ್ದರಿಂದಾಗಿಯೇ ಶತಮಾನಗಳ ಕ್ಷೋಭೆಯನ್ನೂ, ಆಘಾತಗಳನ್ನೂ, ತಡೆದುಕೊಳ್ಳುವ ಶಕ್ತಿ ನಮ್ಮದಾಯಿತು. ನಮ್ಮ ಪೂರ್ವಜರು ಎಲ್ಲವನ್ನು ಧೈರ್ಯದಿಂದ ಎದುರಿಸಿದರು, ಮರಣವನ್ನೂ ಸಹ! ಒಂದೊಂದಾಗಿ ದೇಗುಲಗಳೆಲ್ಲ ವಿದೇಶೀ ಆಕ್ರಮಣಕಾರರಿಂದ ನುಚ್ಚುನೂರಾದವು. ಆದರೆ ಆ ಅಲೆ ಹಾದುಹೋದೊಡನೆ ಗುಡಿಗೋಪುರಗಳು ಮತ್ತೆ ತಲೆಯೆತ್ತಿದವು. ನಮ್ಮ ಧರ್ಮವನ್ನು ಕಾಪಾಡುವ ಅದರ ರಕ್ಷಣೆ ಮಾಡುವ ಬಹುದೊಡ್ಡ ಕರ್ತವ್ಯ ನಮ್ಮೆಲ್ಲರ ಹೆಗಲಮೇಲಿದೆ, ನಾವೆಲ್ಲರೂ ಸೇರಿ ಇದನ್ನು ಮಾಡುವ ಸಮಯ ಕೂಡಿ ಬಂದಿದೆ.” ಎಂದು ಘರ್ಜಿಸಿದರು. ಈ ಮಾತುಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತಿದೆ. ಹೌದು ಸ್ವಾಮೀಜಿ ಹೇಳಿದ ಹಾಗೆ ನಮ್ಮ ಧರ್ಮದ ರಕ್ಷಣೆಯ ಸಮಯ ಕೂಡಿಬಂದಿದೆ, ನಾವೆಲ್ಲರೂ ಸೇರಿ ಈ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾಗಿದೆ.
ಹೇಗೆ ಒಂದು ಮನೆಯಲ್ಲಿ ಯಾವುದಾದರು ಸಮಸ್ಯೆ ಬಂದಾಗ ಮನೆಯವರು ಸೇರಿ ಕುಳಿತು ಚಿಂತಿಸಿ ಅದರ ಪರಿಹಾರದ ಮಾರ್ಗವನ್ನು ಕಂಡುಕೊಳ್ಳುತ್ತಾರೋ, ಇದೂ ಹಾಗೇ, ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಧರ್ಮದ ಮೂಲಾಂಶಗಳನ್ನು ಎಲ್ಲರೂ ಅಧ್ಯಯನ ಮಾಡಬೇಕಾಗಿದೆ, ಇಂತಹ ಮಹಾಧರ್ಮಕ್ಕೆ ಸೇರಿದವರು ನಾವು ಎಂಬ ಹೆಮ್ಮೆಯಾಗಬೇಕಾಗಿದೆ. ಸಾಮಾನ್ಯರಿಗೆ ಅರ್ಥವಾಗುವ ರೀತಿಯ ಸಾಹಿತ್ಯವು ಬರಬೇಕು. ಹಿಂದೂ ಧಾರ್ಮಿಕ ಸಂಸ್ಥೆಗಳೂ ಮುಖಂಡರೂ ಅದನ್ನು ಪ್ರಕಾಶಿಸುವ ಶ್ರಮ ತೆಗೆದುಕೊಳ್ಳಬೇಕು. ನಮ್ಮ ಶಿಕ್ಷಣ ಪದ್ದತಿಯಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಇಲ್ಲವೇ ಆರ್ಥಿಕವಾಗಿ ಮೇಲ್-ಸ್ತರಕ್ಕೇರುವ ಸಾಮಾಜಿಕರು ನಾಯಕರು ಎಲ್ಲರನ್ನೂ ಒಟ್ಟುಗೂಡಿಸಿ ನಡೆಯಬೇಕಾಗಿದೆ. ಹಿಂದೂ ಸಮಾಜಕ್ಕೆ ತುರ್ತಾಗಿ ಒಂದು ಹೊಸ ಆಕಾರ ಕೊಡಬೇಕಾಗಿದೆ, ಅದಿನ್ನೂ ಹೆಚ್ಚು ಏಕರೂಪ ತಾಳಬೇಕು; ಅಥವ ಕನಿಷ್ಠ ಅದು ಹೆಚ್ಚು ಒಗಟ್ಟಿನಿಂದಿರಬೇಕು. ಹಿಂದುಗಳನ್ನು “ಹಿಂದೂಕರಿಸಲು” ಅಚಲ ಪ್ರಯತ್ನವಾಗಬೇಕಾಗಿದೆ. ಸರಳ ಸಂಸ್ಕಾರಗಳ ಮೂಲಕ ಪ್ರತಿಯೊಬ್ಬನೂ ‘ನಾನೊಬ್ಬ ಹಿಂದೂ, ನಾನು ಭವ್ಯ ಪರಂಪರೆಗೆ ಸೇರಿದವನು’ ಎಂದು ಹೆಮ್ಮೆಯಿಂದ ಹೇಳಿ ತನ್ನ ಧರ್ಮದ ರಕ್ಷಣೆಯ ಹೊಣೆಯನ್ನು ತಾನೇ ಸಿದ್ಧನಾಗಬೇಕು. ಈ ಕೆಲಸದಲ್ಲಿ ವಿವಿಧ ಮಠಗಳು, ಧಾರ್ಮಿಕ ಮತ-ಪಂಥಗಳೆಲ್ಲವೂ ಈ ನಿಟ್ಟಿನಲ್ಲಿ ಒಗಟ್ಟಾಗಿ ಕೆಲಸ ಮಾಡಬೇಕು. ಹೀಗಾದಾಗ ಮಾತ್ರ ಹಿಂದೂ ಧರ್ಮವು ಸುಭದ್ರ ಆಲದ ಮರವಾಗಿ ನಿಂತು ತನ್ನ ಅಡಿಯಲ್ಲಿ ಅನೇಕರಿಗೆ ನೆರಳು ನೀಡಲು ಸಾಧ್ಯವಾಗುವುದು. ಈ ಕಾರ್ಯವು ಇಂದಿನಿಂದಲೇ ಪ್ರಾರಂಭವಾಗಬೇಕು ನಮ್ಮ ಮನೆಗಳೇ ಇದಕ್ಕೆ ನಾಂದಿಯಾಗಬೇಕು. ಮತ್ತೆ ಭಾರತದ ಸನಾತನ ಹಿಂದುಧರ್ಮವು ಜಗದ್ಗುರುವಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ನೀಡಿ, ತಾಯಿ ಭಾರತಿಯು ವಿಶ್ವ ಮಾತೆಯಾಗಿ ಎಲ್ಲರನ್ನು ಸಲಹುವ ಜಗನ್ಮಾತೆಯಾಗುವಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.