ಬಾಗಲಕೋಟೆ: ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಸೆ. 16 ರಂದು ಬಿಜೆಪಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೊರ್ಟ್ ಸಿಬಿಐ ತನಿಖೆಗೆ ವಹಿಸುವಂತೆ ಆದೇಶಿಸಿದರೂ ಸಹ ಸಚಿವ ಜಾರ್ಜ್ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಜಾರ್ಜ್ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ಅವರು ಗೌರವಯುತವಾಗಿ ರಾಜನಾಮೆ ನೀಡಬೇಕು ಎಂದು ಅವರು ಜಾರ್ಜ್ ಅಪರಾಧಿ ಎಂದು ಹೇಳುವುದಿಲ್ಲ. ಆದರೆ ಸಿಬಿಐ ತನಿಖೆ ಮುಗಿಯುವವರೆಗೆ ರಾಜಿನಾಮೆ ನೀಡಿ ತನಿಖೆಗೆ ಒಳಪಡಬೇಕು ಎಂದರು.
ಸೆ. 16 ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬಿಜೆಪಿಯ ಎಲ್ಲ ಹಾಲಿ, ಮಾಜಿ ಶಾಸಕರುಗಳು, ಮಾಜಿ ಸಚಿವರು, ಸಂಸದರು ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಭಾಗವಹಿಸಲಿದ್ದಾರೆ. ಜಾರ್ಜ್ ಅವರು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಮುಂದಿನ ಎಪ್ರಿಲ್ ಇಲ್ಲವೆ ಅದಕ್ಕೂ ಮುನ್ನ ವಿಧಾನಸಭೆ ಚುನಾವಣೆ ನಡೆಯಬಹುದು. ಹಾಗಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆಯಲ್ಲಿ ರಾಜ್ಯದ ಯಾವೊಬ್ಬ ಸ್ವಾಮೀಜಿಗಳಿಗ ಟಿಕೆಟ್ ನೀಡುವುದಿಲ್ಲ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಸಂಪುಟದ ಮೂರು-ನಾಲ್ಕು ಜನ ಸಚಿವರ, ಶಾಸಕರ ಮತ್ತು ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರ ಭ್ರಷ್ಟಾಚಾರದ ಕುರಿತು ದಾಖಲೆ ಸಂಗ್ರಹಿಸಲಾಗುತ್ತಿದ್ದು, ಎರಡು-ಮೂರು ದಿನಗಳಲ್ಲಿ ಚಾರ್ಜ್ಶೀಟ್ ಬಿಡುಗಡೆ ಮಾಡಲಾಗುವುದು. ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಅದರ ಬಗ್ಗೆಯೂ ಚಾರ್ಜ್ಶೀಟ್ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಬಾಗಲಕೋಟೆ ಬಸವೇಶ್ವರ ಮಂಗಲಭವನದಲ್ಲಿ 17 ಜಿಲ್ಲೆಯ 96 ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಲಾಗುವುದು. ಗುರುವಾರ ನಡೆಯುವ ಕಾರ್ಯಕರ್ತರ ಸಭೆಗೆ ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಆಗಮಿಸಿಲಿದ್ದಾರೆ ಎಂದರು.
ದಿನವಿಡೀ ನಡೆಯಲಿರುವ ಸಭೆಯಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಮುಂದಿನ ವಿದಾನಸಭೆ ಚುನಾವಣೆಗೆ ಸಂಪೂರ್ಣವಾಗಿ ತಯಾರಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಸೆ.18 ರಂದು ಬೀದರ್ನಲ್ಲಿ ಸುಮಾರು 50 ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು. ನೀರಾವರಿ ಸಮಸ್ಯೆ ಕುರಿತು ಕೊಪ್ಪಳದಲ್ಲಿ ಸೆ. 20 ರಂದು ವಿಜಯಪುರದಲ್ಲಿ ಸೆ. 23 ರಂದು ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು.
ಜಿಲ್ಲೆಯ ಬೀಳಗಿ ಮತಕ್ಷೇತ್ರದಲ್ಲಿ ಅಕ್ಟೋಬರ್ನಲ್ಲಿ ಸುಮಾರು 1 ಲಕ್ಷ ಜನರನ್ನು ಸೇರಿಸಿ ಎಸ್ಸಿ-ಎಸ್ಟಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ ನವೆಂಬರ್, ಡಿಸೆಂಬರ್ ಹಾಗೂ ಜನವರಿ 15 ವರೆಗೆ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರ್ಯಾಲಿ ನಡೆಸಲಾಗುವುದು. ಇದೇ ಸೆ. 17 ರಂದು ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ಬೆಂಗಳೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಳೆಯಿಂದ ತತ್ತರಿಸಿರುವ ಬೆಂಗಳೂರಿನ ಜನತೆಗೆ ಅಕ್ಕಿ ವಿತರಣೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಮಾಜಿ ಸಚಿವ ಹಾಗೂ ಶಾಸಕ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ದೊಡ್ಡನಗೌಡ ಪಾಟೀಲ್, ನಾರಾಯಣಸಾ ಭಾಂಡಗೆ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.