ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಈ ಬಾರಿಯ ಸ್ವಾತಂತ್ರೋತ್ಸವ ಅತ್ಯಂತ ವಿಭಿನ್ನ ಹಾಗು ವಿಶೇಷ. ಶ್ರೀ ಕೃಷ್ಣನ ಜನ್ಮದಿನ ಹಾಗು ಸ್ವಾತಂತ್ರ್ಯ ದಿನ ಒಂದೇ ಸತಿ ಬಂದಿದೆ. ಅದರಲ್ಲಿ ವಿಶೇಷವೇನು ಎಂದು ಬಹಳಷ್ಟು ಮಂದಿ ಪ್ರಶ್ನಿಸಬಹುದು ಹಾ ಇಂತಹ ಪ್ರಶ್ನೆ ಮೂಡುವುದೂ ಸಹಜ. ಆದರೆ ಇದು ರಾಷ್ಟ್ರವನ್ನು ಅತ್ಯಂತ ಪ್ರೀತಿಯಿಂದ ಕಾಣುವವರಿಗೆ ಅಪಾರವಾಗಿ ಗೌರವಿಸುವವರಿಗೆ ವಿಶೇಷ. ಕಳೆದ ಒಂದಷ್ಟು ವರ್ಷಗಳ ಹಿಂದೆ ಭಾರತ ಅತ್ಯಂತ ಅಸಹನೀಯ ಹಾಗು ಗಾಢ ನಿದ್ದೆಗೆ ಜಾರಿದಾಗ ರಾಷ್ಟ್ರೀಯತೆಯ ಅಲೆಯೊಂದು ಸೃಷ್ಟಿಯಾಯಿತು. ಆ ಅಲೆಯು ಕ್ರಮೇಣ ಎಲ್ಲರ ಮೈ ಮನ ಹೊಕ್ಕಿತು. ಈಗ ಆ ಅಲೆ ದೊಡ್ಡ ಪ್ರವಾಹವಾಗಿದೆ. ಪ್ರತಿಯೊಬ್ಬ ಭಾರತೀಯನೂ ತನ್ನಿಂದ ಈ ದೇಶಕ್ಕೆ ಏನನ್ನಾದರು ಮಾಡಬೇಕು ಎಂಬ ಆಸೆಯನ್ನು ಹೊತ್ತು ಆ ದಿಕ್ಕಿನಲ್ಲಿ ಕೆಲಸವನ್ನು ಮಾಡುತ್ತಿರುವನು.
ಕೃಷ್ಣನ ಜನ್ಮದ ಮುಂಚೆಯೂ ಹೀಗೇ ಇತ್ತು. ಅಧರ್ಮ ತಾಂಡವವಾಡುತ್ತಿತ್ತು ಅಸಹನೀಯ ಪರಿಸ್ಥಿತಿ ಎದುರಾಗಿತ್ತು ಎಲ್ಲರೂ ಗಾಢ ನಿದ್ರೆಗೆ ಜರುಗಿದ್ದರು. ಆ ಸಮಯದಲ್ಲಿ ಮಧ್ಯರಾತ್ರಿ ಜನಿಸಿದವ ಶ್ರೀ ಕೃಷ್ಣ ಆತನ ಜನ್ಮವು ಆದದ್ದು ಧರ್ಮದ ರಕ್ಷಣೆಗಾಗಿ. ಜನರನ್ನು ಮತ್ತೆ ಎಬ್ಬಿಸಲು. ಮತ್ತೆ ಆ ಕಾಲ ಬಂದಿದೆ ಈ ಬಾರಿ ಶ್ರೀ ಕೃಷ್ಣ ಮತ್ತೆ ಬರಲಿದ್ದಾನೆ ಮತ್ತೆ ಜನರಲ್ಲಿ ಧರ್ಮದ ಅಲೆ ಮೂಡಿಸಲಿದ್ದಾನೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಭರವಸೆ ನೀಡುತ್ತಲೇ ವೋಟು ಗಿಟ್ಟಿಸಿಕೊಂಡರೆ ಹೊರತು ಅನ್ನದಾತರ ಕಷ್ಟಗಳನ್ನು ಕೇಳುವವರು ಯಾರು ಎಂಬಂತಾಗಿದೆ. ವಿದ್ಯುತ್ ಸಮಸ್ಯೆ, ಗಡಿ ವಿವಾದ, ಭಯೋತ್ಪಾದನೆ, ನಕ್ಸಲಿಸಂ…ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣದಲ್ಲೇ ಮುಂದುವರಿಯುತ್ತಿವೆ ವಿನಃ ಜನಪರ ಕಾಳಜಿಯಾಗಲಿ, ದೇಶಪ್ರೇಮ ಲವಲೇಶವೂ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಬಣ ರಾಜಕೀಯ, ಜಾತಿ ರಾಜಕೀಯ, ಓಲೈಕೆ ರಾಜಕಾರಣ, ಕುರ್ಚಿ ರಾಜಕಾರಣಗಳೇ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತುಂಬಿ ತುಳುಕುತ್ತಿವೆ. ಯಾವ ರಾಜಕೀಯ ಪಕ್ಷಗಳಿಗೂ ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿ ಇಲ್ಲ ಎಂಬುದು ಹಲವು ವಿಧದಲ್ಲಿ ಸಾಬೀತಾಗಿದೆ. ಅದರಲ್ಲಿಯೂ ಮತದಾರರಾದ ನಾವೂ ಕೂಡ ತಪ್ಪಿತಸ್ಥರೇ ಆಗಿದ್ದೇವೆ. ಹಣ ಪಡೆದು ಮತ ಚಲಾಯಿಸುವ ಮತದಾರರು, ಪಡಪೋಶಿಯನ್ನ ಪ್ರತಿನಿಧಿಯನ್ನಾಗಿ ಆರಿಸುವ ನಾವು…ಇಂತಹವರಿಂದ ಏನನ್ನ ನಿರೀಕ್ಷಿಸಲು ಸಾಧ್ಯ?
ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ನಂತರ ಈ ಭರತ ಭೂಮಿಯಲ್ಲಿ ಹಲವು ಚಳವಳಿಗಳು ನಡೆದಿವೆ. ಅವುಗಳು ಯಶಸ್ವಿಯೂ ಆಗಿವೆ. ಆದರೆ ದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಕೇಂದ್ರದವರೆಗೆ ವ್ಯಾಪಿಸಿರುವ ಲಂಚಾವತಾರದ ವಿರುದ್ಧ ಜನಸಾಮಾನ್ಯರಿಂದ ಹಿಡಿದು ಪ್ರತಿಯೊಬ್ಬರೊಳಗೂ ಒಂದು ಅಸಮಾಧಾನದ ಕಿಡಿ ಇದ್ದಿತ್ತು. ಅದಕ್ಕೆ ಪೂರಕ ಎಂಬಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ತಂಡ ಹೋರಾಟಕ್ಕಿಳಿಯುವ ಮೂಲಕ ಭರವಸೆಯ ಕಿರಣ ಮೂಡಿಸಿತ್ತು. ಆದರೆ ಅಣ್ಣಾ ತಂಡದೊಳಗಿನ ಭಿನ್ನಮತ, ಸರ್ವಾಧಿಕಾರಿ ಧೋರಣೆಯಿಂದಾಗಿ ಕೂಸು ಹುಟ್ಟುವ ಮುನ್ನವೇ ಬಲವಂತದ ಗರ್ಭಪಾತ ಎಂಬಂತೆ ಅಣ್ಣಾ ಹೋರಾಟ ಅರ್ಧಕ್ಕೆ ನಿಂತುಬಿಟ್ಟಿದೆ. ಇದೀಗ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಅಖಾಡಕ್ಕೆ ಇಳಿದಿದ್ದಾರೆ. ಅಣ್ಣಾ ಹಜಾರೆ ಸೇರಿದಂತೆ ಅಣ್ಣಾ ತಂಡದ ಸದಸ್ಯರ ವಿರುದ್ಧ (ಹೆಗ್ಡೆಯನ್ನು ಹೊರತು ಪಡಿಸಿ) ಒಬ್ಬೊಬ್ಬರ ಮೇಲೂ ಒಂದೊಂದು ತೆರನಾದ ಆರೋಪ ಹೊರಿಸಲಾಗಿ ಅವರನ್ನೂ ತಪ್ಪಿತಸ್ಥರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಇದೀಗ ಬಾಬಾ ಸರದಿ, ಬಾಬಾ ವಿರುದ್ಧವೂ ಸಾಕಷ್ಟು ಆರೋಪಗಳಿವೆ. ಆದರೆ ಆಡಳಿತಾರೂಢ ಪಕ್ಷವಾಗಲಿ, ನಮ್ಮನ್ನಾಳುವ ಜನಪ್ರತಿನಿಧಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರ ಸೇರಿದಂತೆ ಹಲವು ವಿಧದ ಚಳವಳಿಗಳನ್ನು ವ್ಯವಸ್ಥಿತವಾಗಿಯೇ ಹತ್ತಿಕ್ಕಲಾಗುತ್ತಿದೆ. ಈ ನೆಲದಲ್ಲಿ ಬೃಹತ್ ಚಳವಳಿಯ ಮೂಲಕ ಏನನ್ನಾದರೂ ಸಾಧಿಸುತ್ತೇವೆ ಎಂಬುದು ಮೂರ್ಖತನವಾದೀತು. ಯಾಕೆಂದರೆ ಅಂತಹ ವ್ಯಕ್ತಿ ಮತ್ತು ಶಕ್ತಿ ಯಾರಲ್ಲಿದೆ ಎಂಬುದು ಪ್ರಶ್ನೆ? ಈಗಾಗಲೇ ಅಣ್ಣಾ ತಂಡ ಮತ್ತು ಬಾಬಾ ತಂಡದ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ! ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಹಾಗಾಗಿ ಮತದಾರರು ಮತ್ತಷ್ಟು ಪ್ರಜ್ಞಾವಂತರಾಗಬೇಕು. ಆ ನಿಟ್ಟಿನಲ್ಲಿ ಸಮಸ್ಯೆಗಳ ನಿವಾರಣೆ ಮತ್ತು ರಾಷ್ಟ್ರದ, ರಾಜ್ಯದ ಹಿತಕಾಪಾಡುವ ಜನಪ್ರತಿನಿಧಿಗಳ ಆಯ್ಕೆಯ ಬಗ್ಗೆ ಗಂಭೀರ ಚಿಂತನೆ ನಡೆಸಲು ಇದು ಸಕಾಲವಾಗಿದೆ.
ಭಗವಂತ ತಾನು ಜನಿಸಿದ ನಂತರ ಹೇಗೆ ಎಲ್ಲಾ ರಾಕ್ಷಸರನ್ನು ಸಂಹರಿಸಿ ಧರ್ಮವನ್ನು ದೇಶವನ್ನು ರಕ್ಷಿಸುವನು. ಈಗ ಆ ಸದಾವಕಾಶ ಬಂದಿದೆ ಕೃಷ್ಣ ಮತ್ತೆ ಬಂದಿರುವನು ಮತ್ತೆ ಈ ರಾಷ್ಟ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಿ ಮಲಗಿದ್ದ ಭಾರತೀಯರನ್ನು ಮತ್ತೆ ಎಬ್ಬಿಸಿ ಧರ್ಮದ ರಕ್ಷಣೆಯನ್ನು ಮಾಡುವನು. ಹಾಗಾಗಿ ಈ ಬಾರಿ ಮತ್ತೆ ನವಭಾರತದ ಉದಯ ಅಸತ್ಯದಿಂದ ಸತ್ಯದ ಕಡೆ ಕತ್ತಲೆಯಿಂದ ಬೆಳಕಿನಡೆಗೆ. ಬನ್ನಿ ಈ ಸುಸಂದರ್ಭದಲ್ಲಿ ಭಾರತವನ್ನು ಮತ್ತೆ ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.