ಕೆರೆ ಪಕ್ಕ ಕುರುಚಲು ಪೊದೆಗಳಿರಲಿ – ಹಕ್ಕಿ ಮಿತ್ರರ ಮನವಿ
ಧಾರವಾಡ : ಕೆರೆ ಆವರಣ ಸ್ವಚ್ಛತೆಗೂ, ಪಕ್ಷಿ ಸಂಕುಲಕ್ಕೂ ಎಂತಹ ಬಾದರಾಯಣ ಸಂಬಂಧ? ಕೆಲಗೇರಿ ಕೆರೆಗೆ ನೀವು ಈಗ ಭೇಟಿ ನೀಡಿದರೆ, ಸ್ಪಷ್ಟವಾಗುತ್ತದೆ.
ಇತ್ತೀಚೆಗೆ ಕೆರೆ ಆವರಣ ಸ್ವಚ್ಛತೆ ಹೆಸರಿನಲ್ಲಿ, ಪಾದಚಾರಿಗಳಿಗೂ ತೊಂದರೆಯಾಗದ ಪುಟ್ಟ ಗಿಡ, ಗಂಟಿ ಹಾಗೂ ಮುಳ್ಳು ಪೊದೆಗಳನ್ನು ಪರಿಸರಾಸಕ್ತ ಸ್ವಯಂಸೇವಕರು ಬಹು ಉಮ್ಮೇದಿನಿಂದ ಎರಡು ದಿನಗಳ ಅಂತರದಲ್ಲಿ ಕತ್ತರಿಸಿ ಹಾಕಿದ್ದಾರೆ. ಈ ಗಿಡಗಳೇ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು, ಸಂತಾನಾಭಿವೃದ್ಧಿ ಸುರಕ್ಷಿತವಾಗಿ ಕೈಗೊಳ್ಳಲು ಆಸರೆ.
ಕೆರೆಯ ಅಕ್ಕ-ಪಕ್ಕದ ತರಿ ಭೂಮಿಯಲ್ಲಿ ಕುರುಚಲು ಪೊದೆ, ಮುಳ್ಳುಕಂಟಿಗಳಿರಲಿ ಎಂಬ ಮನವಿ ಹಕ್ಕಿ ಮಿತ್ರರದ್ದು. ಅವರ ಕಾಳಜಿ ಬಗ್ಗೆ ಎರಡು ಮಾತಿಲ್ಲ. ಪರಿಸರ ಸೂಕ್ಷ್ಮತೆಗಳ ಅರಿವಿನ ಕೊರತೆ ಇಂದ ಹೀಗಾಗಿರಬಹುದು.
ಕೆಂಪು, ಕಪ್ಪು ಪಿಕಳಾರ (ಬುಲ್ ಬುಲ್), ದರ್ಜಿ ಹಕ್ಕಿ (ಟೇಲರ್ ಬರ್ಡ್), ಹಳದಿ ಹೂ ಗುಬ್ಬಿ (ಪರ್ಪಲ್ ರಂಪ್ಡ್ ಸನ್ ಬರ್ಡ್), ಚುಕ್ಕೆ ಚೊರ್ಲೆ (ಸ್ಪಾಟೆಡ್ ಮುನಿಯಾ), ಮಣಿ ಹೊರಸಲು (ಸ್ಪಾಟೆಡ್ ಡೌ), ಜಂಗಲ್ ಮೈನಾ, ಬೂದು ಪಾರಿವಾಳ, ಗುಬ್ಬಚ್ಚಿ, ಗೀಜಗ (ಬಾಯಾವ್ಹೀವರ್), ಬಿಳಿ ಹುಬ್ಬಿನ ಬೀಸಣಿಗೆ ಬಾಲ (ವ್ಹೈಟ್ ಬ್ರೋವ್ಡ್ ಫ್ಯಾನ್ ಟೇಲ್ ಫ್ಲೈ ಕ್ಯಾಚರ್), ನೊಣ ಹಿಡುಕ (ಫ್ಲೈ ಕ್ಯಾಚರ್), ಜೇನ್ನೊಣ ಹಿಡುಕ (ಬೀ ಈಟರ್) ಕುರುಚಲು, ಪೊದೆಯಂತಹ ಗಿಡಗಳಲ್ಲಿ ಗೂಡು ಕಟ್ಟಿದರೆ, ಇಂಡಿಯನ್ ರಾಬಿನ್, ಮ್ಯಾಗ್ಪೈ ರಾಬಿನ್, ಟಿಟ್ಟಿಭ, ಸ್ಕೈ ಲಾರ್ಕ್ ಕುರುಚಲ ಪೊದೆಗಳ ಬುಡದ ಮಣ್ಣನಲ್ಲಿ ನೆಲದ ಮೇಲೆ ಸೂರು ಹೂಡುತ್ತವೆ.
ಸ್ಥಳೀಯ ಹಾಗೂ ವಲಸೆ ಹಕ್ಕಿಗಳಾದ, ಬಿಳಿ ನಾಮಗೋಳಿ, ಕೆಂಪು ಹುಂಡುಗೋಳಿ, ನೀಲಿಗೋಳಿ (ಪರ್ಪಲ್ ಮೂರ್ಹೆನ್), ಗುಳುಮುಳಕ, ಜಕಾನಾ, ಕೆರೆ ಬದಿಗೆ ಜೊಂಡಿನಲ್ಲಿ ಶತೃ ಹಕ್ಕಿ, ಪ್ರಾಣಿಗಳ ಕಣ್ಣು ತಪ್ಪಿಸಿ ತೇಲುವ ಗೂಡು ರೂಪಿಸುತ್ತವೆ. ಮರಿಗಳು ಜೀವ ತಳೆದಾಗ, ಇಂತಹ ಕುರುಚಲು ಗಿಡದ ಬುಡವನ್ನೇ ನೆರಳಿಗಾಗಿ, ಆಹಾರಕ್ಕೆ ಆಶ್ರಯವಾಗಿ ಬಳಸಿಕೊಳ್ಳುತ್ತವೆ.
ಕೇವಲ ಮನುಷ್ಯರು ತಂದು ಬಿಸಾಕುವ, ಪೂಜೆ ಸಾಮಗ್ರಿ, ಚೌಕಟ್ಟು ಮುರಿದ ದೇವರುಗಳ ಫೊಟೊ, ತೇಲಿಬಿಟ್ಟ ಬಟ್ಟೆ, ಸಾರಾಯಿ ಶೀಷೆಗಳು, ಮದ್ಯ ಹಾಗೂ ತಂಪು ಪಾನೀಯಗಳ ಟೆಟ್ರಾ ಪ್ಯಾಕ್ಗಳು, ಪ್ಲಾಸ್ಟಿಕ್ ಬಾಟಲಿಗಳು, ಗುಟಿಖಾ ಚೀಟಿಗಳು, ದಿನಾಂಕ ಮುಗಿದ ಔಷಧಿಗಳು, ತಲೆದಿಂಬು, ಗಾದಿ ಹೆಕ್ಕಬೇಕಿದೆ. ಕೆರೆ ಆವರಣಕ್ಕೆ ಅಮವಾಸ್ಯೆ, ಹುಣ್ಣಿಮೆಯಂದು ದ್ವಿಚಕ್ರ, ತ್ರಿಚಕ್ರ ಹಾಗೂ ಚತುಷ್ಕಚ್ರ ವಾಹನ ತಂದು ಭಕ್ತಿಯಿಂದ ತೊಳೆದುಕೊಳ್ಳುವ ಪರಿ, ಆಯಿಲ್ ಕಕ್ಕುವ ರೀತಿ, ಜನ ಮೈತುಂಬ ಸೋಪು ಬಳಿದುಕೊಂಡು ಕೆರೆಗೆ ಸ್ವಿಮ್ಮಿಂಗ್ ಹೆಸರಿನಲ್ಲಿ ಧುಮುಕುವ ಉಮ್ಮೇದು, ದನಕರುಗಳು ನೀರು ಕುಡಿಯಲು ಬಂದು ಮೀಯುವ ಅವ್ಯವಸ್ಥೆ, ಅಕ್ಕಪಕ್ಕದ ಹೆಂಗಳೆಯರು ಕೆರೆಯಲ್ಲಿ ಥರಹೇವಾರಿ ಡಿಟರ್ಜಂಟ್ ನೊರೆ ಉಕ್ಕಿಸಿ ಬಟ್ಟೆ ತೊಳೆಯುವ ಸ್ಥಿತಿ ಕಳವಳಕಾರಿಯಾಗಿದೆ. ಇತ್ತ ಪರಿಸರ ಸ್ವಯಂ ಸೇವಕರು ಕಣ್ಣಾಡಿಸಿದರೆ ಉತ್ತಮ.
ಪರಿಸರ ಸ್ವಯಂ ಸೇವಕರು, ಯಾರ ಪಾಲೂ ಬೇಡದ ಹಕ್ಕಿಗಳ ಬಡಾವಣೆಯನ್ನು, ಕೆರೆ ಒಂಡಿಗುಂಟ ನೈಸರ್ಗಿಕವಾಗಿಯೇ ಬೆಳೆದ ಮುಳ್ಳುಕಂಟಿಯಂತಹ ಚಿಕ್ಕ ಗಿಡಗಳನ್ನು ಸ್ವಚ್ಛತೆಯ ಹೆಸರಿನಲ್ಲಿ ಕತ್ತರಿಸಿದರೆ ಹಕ್ಕಿಗಳ ಬದುಕೇ ಮೂರಾಬಟ್ಟೆ. ಜಂಗಲ್ ಮೈನಾ ಹಾಗೂ ರೆಡ್/ಬ್ಲ್ಯಾಕ್ ವ್ಹಿಸ್ಕರ್ಡ್ ಬುಲ್ಬುಲ್ನ ಮೂರು ಮರಿಗಳನ್ನು ನಿನ್ನೆ ರಕ್ಷಿಸಿ, ತಂದೆ-ತಾಯಿ ಹಕ್ಕಿಗಳಿರುವಲ್ಲೇ ಪುನರ್ವಸತಿ ಕಲ್ಪಿಸಲಾಗದೇ ಸಹೃದಯರ ಮನೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮರಿಗಳು ತೀರ ಚಿಕ್ಕವಿದ್ದು, ಬದುಕುವ ಆಸೆ ನಾವು ಕೈಬಿಡುವಂತಾಗಿದೆ. ಅನ್ನಾಹಾರ ತ್ಯಜಿಸಿ, ಪ್ರತಿಭಟನೆಗೆ ಕುಳಿತಂತಿದೆ ಅವುಗಳ ಭಂಗಿ.
ಪರಿಸರದ ಜೀವಿ ವೈವಿಧ್ಯದ ಪರಸ್ಪರ ಅವಲಂಬನೆ ಹಾಗೂ ಸೂಕ್ಷ್ಮ ಕೊಂಡಿಗಳು ನಮ್ಮ ಜ್ಞಾನ ಕ್ಷಿತಿಜದ ವಿಸ್ತಾರಕ್ಕೆ ನಿಲುಕದ್ದು. ಸ್ವಚ್ಛತೆಯ ಹೆಸರಿನಲ್ಲಿ ಹಕ್ಕಿ ಮನೆಗಳ ಎತ್ತಂಗಡಿ ಅಕ್ಷಮ್ಯ. ಇನ್ನಾದರೂ ಇತ್ತ ಗಮನ ಹರಿಸುವಂತಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.