ಇಂದು (ಆಗಸ್ಟ್ 7 ಸೋಮವಾರ) ಕೈ ಮಗ್ಗ ದಿನಾಚರಣೆ
ಧಾರವಾಡ : ‘ಸರ್.. ನನ್ನ ಹತ್ರ ಕೈ ಮಗ್ಗ ಐತ್ರಿ ಯಾರ್ರೆ ಮ್ಯೂಸಿಯಂನ್ಯಾಗ ಇಟಕೊಳ್ಳಾಕ ದುಡ್ಡಿಗೆ ಖರೀದಿ ಮಾಡಿದ್ರ ನನ್ನ ಬಡತನಕ್ಕ ಆಸರ ಆಗ್ತೈತ್ರೀ.. ನೀವು ಪ್ರಯತ್ನ ಮಾಡಬೇಕ್ರಿ..’
ಮಹಾಲಿಂಗಪುರದಿಂದ ಈಶ್ವರ ಹಳ್ಳಿ ಎಂಬ ನೇಕಾರನ ಈ ಮಾತು, ಇಂದಿಗೆ ನೇಕಾರ ಸಮಾಜದ ಸಂಸ್ಕೃತಿ ಮತ್ತು ಆರ್ಥಿಕ ಸ್ಥಿತಿ-ಗತಿಯ ಚಿತ್ರಣವನ್ನು ಸ್ಥೂಲವಾಗಿಯೇ ಧ್ವನಿಸುತ್ತದೆ.
ರಾತ್ರಿ-ಹಗಲೆನ್ನದೇ ನೇಕಾರರು ಬಾಳುವ ಬೀದಿಗಳು ಯಾವತ್ತೂ ಎಚ್ಚರದಿಂದಿರುತ್ತವೆ. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನಿರಂತರವಾಗಿ ಮನೆಗಳಿಂದ ಹೊರಹೊಮ್ಮುವ ಕೈಮಗ್ಗದ ಲಟಕ್.. ಲಟಕ್ ಸದ್ದು ಸಂಜೆಯಾಗುತ್ತಿದ್ದಂತೆ ನಿಶ್ಶಬ್ದ! ತಮ್ಮ ಆರಾಧ್ಯ ದೇವತೆಗಳು ಗೋಧೂಳಿ ಸಮಯದಲ್ಲಿ ತಮ್ಮನ್ನು ಅನುಗ್ರಹಿಸುತ್ತಾರೆ ಎಂಬ ದೃಢ ವಿಶ್ವಾಸದಿಂದ ಮನೆಯೊಳಹೊರಗೆ ದೀಪ ಬೆಳಗಿ ದೈವಾನುಗ್ರಹಕ್ಕಾಗಿ ನೇಕಾರರು ಕಾಯುತ್ತಿದ್ದ ದಿನಗಳಿದ್ದವು!
ಮಗ್ಗದ ಕೊಟ್ಟಿಗೆಗಳಿಂದ ಒಬ್ಬೊಬ್ಬ ನೇಕಾರನೂ ಕೈಮಗ್ಗಕ್ಕೆ ನಮಸ್ಕರಿಸಿ ಕೆಳಗಿಳಿಯುವಾಗ, ಅವನ ಪಕ್ಕದಲ್ಲಿ ಕುಳಿತು ನೇಯುವ ಕೌಶಲ ಅರಗಿಸಿಕೊಳ್ಳುತ್ತಿದ್ದ ಅವನ ಪುಟ್ಟ ಮಗ-ಮಗಳು, ಅಪ್ಪ ಮಗ್ಗದಿಂದ ಇಳಿದ ಮೇಲೆ ಆ ಸ್ಥಾನದಲ್ಲಿ ತಾನು ಕುಳಿತು ಕಾಲೆಟುಕದಿದ್ದರೂ ಅಂಚಿಗೆ ಸರಿದು ಪುಟ್ಟ ಕಾಲಿನಿಂದ ಅಣಿಯ ಹಲಗೆಯ ಕೋಲನ್ನು ತುಳಿದು ಒಂದೆರೆಡು ಬಾರಿ ಲಾಳಿ ಎಳೆದು, ಲಾಳಿಯನ್ನು ತೆಗೆದು ಬದಿಗಿಟ್ಟು ಅಪ್ಪನ ಕೈ ಹಿಡಿದು ಅಂಗಳಕ್ಕೆ ಇಳಿಯುತ್ತಿದ್ದ. ಒಂದೇ ಸಮನೆ ರಾಟಿಯನ್ನು ತಿರುಗಿಸುತ್ತಿದ್ದ ಹೆಂಗಸರ ಕೈ ಸ್ತಬ್ಧವಾದರೆ, ಅವರ ಮಡಿಲಲ್ಲಿ ಕುಳಿತು ಅಮ್ಮ ತಿರುಗಿಸುವ ರಾಟಿಗೆ ಪುಟ್ಟ ಕೈ ಜೋಡಿಸಿ ಹೆಣ್ಣು ಮಕ್ಕಳು ನೂಲಿಲ್ಲದ ರಾಟಿ ತಿರುಗಿಸಿ, ನೇಯ್ದ ಬಟ್ಟೆಗಳ ಅಂಚು ಕತ್ತರಿಸುವುದರಲ್ಲಿ, ಅಂಚು ಕಟ್ಟುವುದರಲ್ಲಿ, ಎರಡೂ ಬದಿಯಲ್ಲಿ ಎಲೆ ಹಿಡಿದು ಚೊಕ್ಕವಾಗಿ ಮಡಿಸಿ ಇಡುವುದರಲ್ಲಿ, ಗಂಜಿ ತಯಾರಿಸುವಲ್ಲಿ, ಮಳೆಗಾಲದಲ್ಲಿ ನೂಲೊಣಗಿಸಲು ಕೆಂಡ ತಯಾರಿಸುವಲ್ಲಿ ನಿರತರಾಗಿರುತ್ತಿದ್ದ ದೃಶ್ಯ ಈಗ ಅಪರೂಪ.
ಇಂದು (ಆ.7 ಸೋಮವಾರ) ಕೈ ಮಗ್ಗ ದಿನಾಚರಣೆ. ಇದು ಕರ್ನಾಟಕ ಸರ್ಕಾರದಿಂದ ಎರಡನೇ ವರ್ಷದ ಆಚರಣೆ. ಎಲ್ಲೆಡೆ ವಿದ್ಯುತ್ ಮಗ್ಗಕ್ಕೆ ನೇಕಾರರು ಶರಣಾದ ಮೇಲೆ ಈ ಆಚರಣೆಗೆ ಅರ್ಥ ಉಳಿಸುವ ದ್ರಾವಿಡ ಪ್ರಾಣಾಯಾಮ ಚುಕ್ಕಾಣಿ ಹಿಡಿದವರಿಂದ!
೧೯೮೦ರ ಅವಧಿಯಲ್ಲಿ ಕರ್ನಾಟಕದಲ್ಲಿ ಸುಮಾರು 80,400 ಕೈಮಗ್ಗಗಳಿದ್ದವು. ಅಂದಿನ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ 26,200 ಕೈಮಗ್ಗಗಳಿದ್ದರೆ, ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ 10,006, ಬೆಳಗಾವಿ ಜಿಲ್ಲೆಯಲ್ಲಿ 5,253 ಮಗ್ಗಳಿದ್ದವು. ಬೆಂಗಳೂರು ಜಿಲ್ಲೆಯಲ್ಲಿ 6,858, ತುಮಕೂರು ಜಿಲ್ಲೆಯಲ್ಲಿ 7,218, ಚಿತ್ರದುರ್ಗ ಜಿಲ್ಲೆಯಲ್ಲಿ 4,819 ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ 3,993 ಮಗ್ಗಗಳಿದ್ದವು.
ಮಿಕ್ಕ ಎಲ್ಲ ಜಿಲ್ಲೆಗಳಲ್ಲಿ ಕೈಮಗ್ಗಗಳಿದ್ದರೂ, ಕಡಿಮೆ ಪ್ರಮಾಣ. ಕಾರಣ, ವಿದ್ಯುತ್ ಚಾಲಿತ ಮಗ್ಗದ ಪ್ರಭಾವ, ಕಚ್ಚಾ ಸರಕಿನ ದರದಲ್ಲಿ ಏರಿಕೆ, ಸಿದ್ಧ ಸರಕಿಗೆ ವ್ಯವಸ್ಥಿತ ಮಾರುಕಟ್ಟೆ ಇಲ್ಲದಿರುವುದು -ಇಂದಿಗೆ ಕೈ ಮಗ್ಗಗಳ ಗೃಹ ಉದ್ದಿಮೆಯ ಅವನತಿಗೆ ಕಾರಣವಾಗಿದೆ. ಒಂದು ಹಂತಕ್ಕೆ 30,000 ಕೈಮಗ್ಗಳಿಗೆ ಆಸರೆಯಾಗಿದ್ದ ಕರ್ನಾಟಕ, ಇಂದಿಗೆ ಸತತ ಇಳಿಮುಖ ಬೆಳವಣಿಗೆಗೆ ಕಾರಣ ಹುಡುಕುವಂತಾಗಿದೆ.
ಕರ್ನಾಟಕದಲ್ಲಿ ಸದ್ಯ 1,40,000 ವಿದ್ಯುತ್ ಚಾಲಿತ ಮಗ್ಗಗಳಿವೆ. ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ 50 ಸಾವಿರ ವಿದ್ಯುತ್ ಚಾಲಿತ ಮಗ್ಗಳಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 30 ಸಾವಿರ ವಿದ್ಯುತ್ ಮಗ್ಗಗಳಿವೆ.
ನೇಕಾರಿಕೆ ವೃತ್ತಿಯಲ್ಲಿ ಎರಡು ಪ್ರಮುಖ ಭಾಗಗಳಿವೆ. ಒಂದು ನೇಕಾರ, ಎರಡನೇಯದ್ದು ಯಜಮಾನ. ನೇಕಾರ ಶ್ರಮಜೀವಿ. ಬಟ್ಟೆಯನ್ನು ನೇಯುವ ಪ್ರಕ್ರಿಯೆಯನ್ನು ಪೂರೈಸಿ ಬಟ್ಟೆಯನ್ನು ಸಿದ್ಧ ಪಡಿಸುವವ. ಯಜಮಾನ ನೇಕಾರನಿಗೆ ಕಚ್ಚಾ ಸರಕನ್ನು ಒದಗಿಸುವುದು, ನೇಕಾರ ಸಿದ್ಧ ಪಡಿಸಿದ ಬಟ್ಟೆಯನ್ನು ಕೊಂಡುಕೊಳ್ಳುವುದು ಅಥವಾ ಕೂಲಿ ಕೊಡುವುದು. ಕೈಮಗ್ಗದಲ್ಲಿ ತಯಾರಾದ ಬಟ್ಟೆಗಳನ್ನು ಮಾರುಕಟ್ಟೆಯ ಅಗತ್ಯತೆಗೆ ಅನುಗುಣವಾಗಿ ಉಗ್ರಾಣದಿಂದ ಸರಬರಾಜು ವ್ಯವಸ್ಥೆಗೊಳಿಸುವುದು.
ನೇಕಾರಿಕೆ ವೃತ್ತಿಯಲ್ಲಿ ನೇಯ್ದ ಕೆಲಸಕ್ಕೆ ದೊರೆಯುವ ಕೂಲಿ, ಆಯಾ ಪ್ರದೇಶಗಳಿಗೆ ಅನುಗುಣವಾಗಿ, ಕೌಶಲ್ಯವನ್ನೂ ಆಧರಿಸಿ ಹೆಚ್ಚೂ ಕಡಿಮೆ ಇದೆ. ಬಾಗಲಕೋಟೆ ಜಿಲ್ಲೆ ಇಲಕಲ್, ಗದಗ ಜಿಲ್ಲೆ ಗದಗ-ಬೆಟಗೇರಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬೆಂಗಳೂರು ಮತ್ತು ಬೆಳಗಾವಿಗೆ ಹೋಲಿಸಿದರೆ, ಇಲಕಲ್ ರೇಶಿಮೆಯ ಟೋಪತೆನಿ ಸೀರೆಗಾಗಿ ಪ್ರಖ್ಯಾತ. ಕೃತ್ರಿಮ ರೇಶಿಮೆ ಮತ್ತು ಪ್ಲಾಸ್ಟಿಕ್ ಜರಿ ಬಳಸಿ ಅಥವಾ ಸೆರಗು ಮಾತ್ರ ರೇಶಿಮೆ, ಬಾಕಿ ಸೀರೆ ಕೃತ್ರಿಮ ರೇಶಿಮೆ ಒಳಗೊಂಡ ಉತ್ಪಾದನೆ ಆರಂಭವಾಯಿತು. ಇಲಕಲ್ ಸುತ್ತಲಿನ ಹನಮಸಾಗರ, ದೋಟಿಹಾಳ, ತಾವರಗೇರಿ, ಸೋಳೇಬಾವಿಯಲ್ಲಿ ಇಂತಹ ಸೀರೆಗಳ ಉತ್ಪಾದನೆ ಈಗ ಹೆಚ್ಚು.
ಗದಗ ಜಿಲ್ಲೆಯ ಬೆಟಗೇರಿ ಸೀರೆ, ಪರಾಸ, ಧೋಡಾ ಪರಾಸ್ ರೇಶಿಮೆ ಸೀರೆ ಜಗತ್ ಪ್ರಸಿದ್ಧ. ಪಾಲಿಸ್ಟರ್ ಮತ್ತು ಮಸರಾಯಿಜ್ ಸೀರೆಗಳೂ ವಿದ್ಯುತ್ ಮಗ್ಗದಲ್ಲಿ ಈಗ ನೇಯ್ಗೆಗೊಳ್ಳುತ್ತಿವೆ. ಬೆಟಗೇರಿಯಲ್ಲಿ ಇಲಕಲ್ಲಿಗಿಂತ ಸ್ವಲ್ಪ ಕೂಲಿ ಜಾಸ್ತಿ. ಐದೂವರೆ ಮೀಟರ್ ಸೀರೆಗೆ ಇಲ್ಲಿ ಕೂಲಿ 85 ರೂಪಾಯಿ. ಓರ್ವ ನೇಕಾರ ದಿನವೊಂದಕ್ಕೆ ಇಲ್ಲಿ 100 ರಿಂದ 140 ರೂಪಾಯಿ ಸಂಪಾದಿಸುತ್ತಾನೆ. ಅಂದರೆ, ವಾರಕ್ಕೆ 600 ರಿಂದ 800 ರೂಪಾಯಿ ಸಂಪಾದನೆ.
ಇನ್ನು ಮೊಳಕಾಲ್ಮೂರಲ್ಲಿ ವಿದ್ಯುತ್ ಮಗ್ಗಗಳೇ ಇಲ್ಲ! ಇಲ್ಲಿರುವುದು ಕೇವಲ ಕುಣಿ ಮಗ್ಗಗಳು. ಮೊಳಕಾಲ್ಮೂರು ರೇಶ್ಮೆ ಸೀರೆಗಳು ವಿಶ್ವ ಪ್ರಸಿದ್ಧ. ಸಂಪೂರ್ಣ ರೇಶಿಮೆ ಸೀರೆಗಳ ನಿರ್ಮಾಣ ಮೊಳಕಾಲ್ಮೂರಿನ ವಿಶೇಷತೆ. ಇಲ್ಲಿ ಒಂದು ಸೀರೆ ನೇಯಲು ಒಂದರಿಂದ 8 ದಿನಗಳ ಸಮಯ ತೆಗೆದುಕೊಳ್ಳುವ ವಿವಿಧ ಪ್ರಕಾರದ, ತರಹೇವಾರಿ ನಕ್ಷೆಗಳ, ಗ್ರಾಹಕರ ಬೇಕು-ಬೇಡಗಳಿಗೆ ಅಗತ್ಯವಾದ ಸೀರೆಗಳು ಲಭ್ಯ. ಒಂದು ಸೀರೆ ನೇಯಲು ನೇಕಾರನಿಗೆ ಕೂಲಿ 300 ರೂಪಾಯಿಯಿಂದ 900 ರ ವರೆಗೆ ಇದೆ. ವಾರದ ಸಂಪಾದನೆ ಕನಿಷ್ಠ 900 ರೂಪಾಯಿ.
ಬೆಳಗಾವಿ ಚೆಂದದ ಪಾಲಿಸ್ಟರ್ ಸೀರೆಗಳಿಗೆ ಹೆಸರುವಾಸಿ. ಇಲ್ಲಿ ಹತ್ತಿ-ಪಾಲಿಸ್ಟರ್ ಸಾದಾ ಸೀರೆ ಒಂದಕ್ಕೆ ನೇಕಾರನಿಗೆ ಕೂಲಿ ಒಂದಕ್ಕೆ 35 ರಿಂದ 50 ರೂಪಾಯಿ. ದಿನಕ್ಕೆ ಒಬ್ಬ ಮೂರು ಸೀರೆ ತಯಾರಿಸುತ್ತಾನೆ. ರೇಶಿಮೆ ಸೀರೆ ನೇಯ್ದಲ್ಲಿ ಸೀರೆಯೊಂದಕ್ಕೆ 50 ರಿಂದ 200 ರೂಪಾಯಿ ಕೂಲಿ ಸಿಗುತ್ತದೆ. ಕೆಲ ಕುಶಲಿ ಯುವಕರು ವಾರಕ್ಕೆ ನಾಲ್ಕು ಸಾವಿರ ರೂಪಾಯಿ ಗಳಿಸುವ ಉದಾಹರಣೆಗಳೂ ಇವೆ.
ಕೃಷಿ ಪ್ರಧಾನ ದೇಶದಲ್ಲಿ ಜವಳಿ ಉದ್ಯಮದ ಸ್ಥಾನ ಎರಡನೇಯದ್ದು. ಕೃಷಿ ಮತ್ತು ಜವಳಿ ಒಂದಕ್ಕೊಂದು ಪೂರಕ ಉದ್ಯಮಗಳು. ಬಂಡವಾಳದ ಕೊರತೆ ಇರುವ ನಮಗೆ, ಸಣ್ಣ ಪ್ರಮಾಣದ ಉದ್ಯಮಗಳು ಅದರಲ್ಲೂ ಜವಳಿ ಉದ್ಯಮ (ನೇಕಾರಿಕೆ) ಆಧಾರಿತ ಕೈಗಾರಿಕೆಗಳು ಗ್ರಾಮ್ಯ ಬದುಕಿನ ಸ್ವಾವಲಂಬನೆಗೆ ವರದಾನ ಎಂದು ಮಹಾತ್ಮ ಗಾಂಧಿ ಅಭಿಪ್ರಾಯಪಟ್ಟಿದ್ದರು.
ಕೈಮಗ್ಗಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದ ಹಿನ್ನೆಲೆ, ವಿದ್ಯುತ್ ಮಗ್ಗಗಳೇ ಬಹುತೇಕ. ಈ ವ್ಯವಸ್ಥೆಯಲ್ಲಿ ಒಬ್ಬ ಯಜಮಾನ ಕನಿಷ್ಟ ಒಂದು ಅಥವಾ ಎರಡು, ಗರಿಷ್ಠ 20 ರಿಂದ 25 ವಿದ್ಯುತ್ ಚಾಲಿತ ಮಗ್ಗಗಳನ್ನು ಹೊಂದಿರುವುದು ಕಂಡುಬರುತ್ತದೆ. ಕೈ ಕಸುಬು ಯಂತ್ರ ಕಸಿಯುತ್ತಿದೆ. ಪ್ರಕಾಶ್ ರೈ ಅಭಿನಯದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ‘ಕಾಂಜಿವರಂ’ ಕಣ್ಣಿಗೆ ಕಟ್ಟಿದಂತಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.