ಬದಿಯಡ್ಕ: ವಿದ್ಯೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಹಿಂದಿನ ತಲೆಮಾರಿನ ಸಾಧಕರ ಶ್ರಮ ಎಂದೆಂದಿಗೂ ಮಾರ್ಗದರ್ಶಕಗಳು. ಹಿರಿಯರ ಇಂತಹ ಪ್ರಜ್ಞೆಗಳನ್ನು ಗುರುತಿಸಿ, ಅವರ ಸ್ಮರಣೆ ವರ್ತಮಾನದ ಪ್ರಪಂಚಕ್ಕೆ ವಿಸ್ತರಿಸುವ ಹೊಣೆ ನಾಗರಿಕ ಸಮಾಜಕ್ಕೆ ಇದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತಿ ಶ್ರೀಗಳು ಆಶೀರ್ವಚನದ ಮೂಲಕ ತಿಳಿಸಿದರು.
ಖಂಡಿಗೆ ಶ್ಯಾಮ ಭಟ್ ಪ್ರತಿಷ್ಠಾನದ ವತಿಯಿಂದ ಭಾನುವಾರ ಸಂಜೆ ನೀರ್ಚಾಲು ಮಹಾಜನ ಹೈಸ್ಕೂಲಿನ ಸಭಾಂಗಣದಲ್ಲಿ ನಡೆದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಸ್ಥಾಪಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿದ್ವಾನ್ ಖಂಡಿಗೆ ಶ್ಯಾಮ ಭಟ್ ರವರ ಸಂಸ್ಮರಣೆ, ಪ್ರಶಸ್ತಿ ಪ್ರಧಾನ ಹಾಗು ಯಕ್ಷಗಾನ ಬಯಲಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಳ ಜೀವನ ಮತ್ತು ಅಪರಿಮಿತ ಜನಸ್ನೇಹಿಯಾದ ಖಂಡಿಗೆ ಶ್ಯಾಮ ಭಟ್ ರವರು ಸ್ವಾತಂತ್ರ್ಯ ಹೋರಾಟ ಮತ್ತು ಕಾಸರಗೋಡಿನ ಗಡಿನಾಡ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿ ದುಡಿದವರು.ಗ್ರಾಮೀಣ ಪ್ರದೇಶದ ಜನಸಾಮಾನ್ಯರ ವಿದ್ಯಾಭ್ಯಾಸದ ಅಗತ್ಯಗಳಿಗಾಗಿ ವಿದ್ಯಾಸಂಸ್ಥೆ ಸಹಿತ ವಿವಿಧ ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಭಟ್ಟರು ಹೊಸ ತಲೆಮಾರಿಗೆ ಅವರ ಜೀವನಾದರ್ಶಗಳು ಮಾರ್ಗದರ್ಶಿ ಎಂದು ತಿಳಿಸಿದರು. ಶ್ರೀಎಡನೀರು ಮಠದೊಂದಿಗಿನ ಒಡನಾಟವನ್ನು ಸ್ಮರಿಸಿದ ಶ್ರೀಗಳು ಆಧ್ಯಾತ್ಮ ಮತ್ತು ಪಾರಮಾರ್ಥಿಕ ವಿಚಾರಗಳಲ್ಲಿ ಆಸಕ್ತರಾಗಿ, ಅದರ ಪ್ರಸರಣಕ್ಕೂ ಶ್ರಮಿಸಿದವರು ಎಂದು ನೆನಪಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ವೈದ್ಯ,ಸಾಹಿತಿ, ಯಕ್ಷಗಾನ ಅರ್ಥದಾರಿ ಡಾ.ರಮಾನಂದ ಬನಾರಿ ಸಂಸ್ಮರಣಾ ಭಾಷಣಗೈದು ಖಂಡಿಗೆ ಶ್ಯಾಮ ಭಟ್ ರವರ ಜೀವನ, ಸಾಧನೆಗಳ ಬಗ್ಗೆ ತಿಳಿಸಿದರು.
ಹಿರಿಯ ವೈದಿಕ, ತಾಂತ್ರಿಕ ವಿದ್ವಾಂಸ ವೇದಮೂರ್ತಿ ಪೊಳ್ಳಕಜೆ ಗೋವಿಂದ ಭಟ್ ರವರಿಗೆ ಖಂಡಿಗೆ ಶ್ಯಾಮ ಭಟ್ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಗೈದರು. ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ, ಡಾ.ಪತಂಜಲಿ ಖಂಡಿಗೆ, ರಾಮಚಂದ್ರ ಭಟ್ ಖಂಡಿಗೆ ಉಪಸ್ಥಿತರಿದ್ದರು.ನ್ಯಾಯವಾದಿ ಐ.ವಿ. ಭಟ್ ಸ್ವಾಗತಿಸಿ, ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀಎಡನೀರು ಮೇಳದವರಿಂದ ಯಕ್ಷಗಾನ ಬಯಲಾಟ ಪಂಚವಟಿ-ಇಂದ್ರಜಿತು ಕಾಳಗ ಪ್ರದರ್ಶನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.