ಪರಿಸರದ ವಿಶ್ವ ದಿನಾಚರಣೆ; ಧ್ಯೇಯ, ‘ಜನರನ್ನು ನಿಸರ್ಗಕ್ಕೆ ಜೋಡಿಸೋಣ’
ಧಾರವಾಡ, (ಹಳ್ಳಿಗೇರಿ) : ನೀರಿಗಾಗಿ ನೆಲದ ಕಾಡು ಪೋಷಿಸುತ್ತಿದ್ದ ಹಿರಿಯರ ಪರಂಪರೆಯನ್ನು ಈಗ ಪುನರುಜ್ಜೀವಿತಗೊಳಿಸಬೇಕಿದೆ. ಕಾರಣ, ಕಾಡಿನೆದೆ ಬತ್ತಿದ ಪರಿಣಾಮ ನಾಡು ಮೂಳೆ ಮುರುಕಿದ ಅಸ್ಥಿ ಪಂಜರ ಎನಿಸುತ್ತಿದೆ. ಹಸಿರು ಕುಲಕ್ಕೆ ಈಗ ಹೆಚ್ಚೂ ಕಡಿಮೆ ವಿನಾಶದಂಚಿನ ಕಾಲ. ಹಾಗಾಗಿ, ಪ್ರತಿಯೊಬ್ಬರೂ ಸಸಿ ನೆಟ್ಟು ಮರವಾಗಿಸುವ ಪ್ರತಿಜ್ಞೆಗೈಯುವ ಅನಿವಾರ್ಯತೆ ಇದೆ; ನೇಚರ್ ರಿಸರ್ಚ್ ಸೆಂಟರ್ ಅಧ್ಯಕ್ಷ ಪಿ.ವಿ.ಹಿರೇಮಠ ಅವರ ಖಚಿತ ಅಭಿಪ್ರಾಯ.
ಹಳಿಯಾಳ ರಸ್ತೆಯ ಮೇಲೆ, ಧಾರವಾಡದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ’ನೇಚರ್ ಫಸ್ಟ್ ಇಕೋ ವಿಲೇಜ್’ನಲ್ಲಿ, (ಸೋಮವಾರ, ಜೂನ್ 05), ನೇಚರ್ ರಿಸರ್ಚ್ ಸೆಂಟರ್ ಹಾಗೂ ಧಾರವಾಡ ರೋಟರಿ ಕ್ಲಬ್ ವತಿಯಿಂದ, ಪರಿಸರದ ವಿಶ್ವ ದಿನಾಚರಣೆಯ ಅಂಗವಾಗಿ, ಈ ಬಾರಿ ಆಚರಣೆಯ ಧ್ಯೇಯ ‘ಜನರನ್ನು ನಿಸರ್ಗಕ್ಕೆ ಜೋಡಿಸೋಣ’ ಹಿನ್ನೆಲೆ, ಪಶ್ಚಿಮ ಘಟ್ಟದ ಅಪರೂಪದ 10 ಪ್ರಜಾತಿಯ ವಿಶೇಷ ಸಸಿಗಳನ್ನು ನೂರಕ್ಕೂ ಹೆಚ್ಚು ಜನ ನೆಟ್ಟು, ಪೋಷಿಸುವ ಪ್ರತಿಜ್ಞೆಗೈದರು.
ಹಸಿರು ಕಾಡಿನ ಎದೆ ಬತ್ತುತ್ತಿರುವ ಈ ಸಂದರ್ಭದಲ್ಲಿ, ಜಲ ನಕ್ಷೆ ಆಧರಿಸಿ ಮತ್ತೆ ಹಿರಿಯರ ಹೆಜ್ಜೆ ಗುರುತುಗಳಲ್ಲಿ ನಡೆಯಬೇಕಿದೆ. ಭೂಮಿಯನ್ನು ಬಿಂದಿಗೆಯಾಗಿಸಿ, ತಾವೇ ಸ್ವತಃ ಆಕಾಶಕ್ಕೆ ಲಾಳಿಕೆಯಾಗಿ ಅಬ್ಬರದಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ, ಭೂ ಸವಕಳಿ ತಡೆದು, ಮಳೆ ನೀರು ಶೋಧಿಸಿ ಅಂತರ್ಜಲ ಹೆಚ್ಚಿಸುವ ವಿಶಿಷ್ಟ ಕಾಯಕದ ಅಪರೂಪದ ಪಶ್ಚಿಮ ಘಟ್ಟದ ಇನ್ನೂರು ಸಸ್ಯ ಪ್ರಬೇಧಗಳಿಗೆ ಇಕೋ ವಿಲೇಜ್ನಲ್ಲಿ ಸ್ಥಾನ ಕಲ್ಪಿಸಲಾಗುತ್ತಿದೆ. 160 ಅತ್ಯಪರೂಪದ ಹಾಗೂ 40 ವಿಶಿಷ್ಟ ತಾಳೆ ಸಸಿಗಳನ್ನು ಇಲ್ಲಿ ಮುಂದಿನ ಒಂದು ವಾರದಲ್ಲಿ ನೆಡಲಾಗುತ್ತಿದೆ ಎಂದು ಪಿ.ವಿ.ಹಿರೇಮಠ ಹೇಳಿದರು.
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ಕೊಟ್ರೇಶ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನೈಜ ಅರಣ್ಯಗಳು ಛಿದ್ರಗೊಳ್ಳುತ್ತಿವೆ. ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರುತ್ತಿದೆ. ಆಹಾರ ಮತ್ತು ನೀರಿನ ಸಮಸ್ಯೆ ವನ್ಯಜೀವಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಾಡು ನೆಲದಲ್ಲಿ ಬೇಸಾಯ ಮತ್ತು ನೆಡುತೋಪು ವಿಸ್ತರಣೆಯಾಗುತ್ತಿದೆ. ಹಾಗಾಗಿ, ಅಪರೂಪದ ಸಸ್ಯ ಸಂಪತ್ತನ್ನು ಪ್ರಯತ್ನ ಪೂರ್ವಕವಾಗಿ ಪೋಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ಆರ್ಸಿ ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ ಶೀಲವಂತ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯೆ ರಸ್ತೆಗಾಗಿ ಕತ್ತರಿಸಿದ ಇನ್ನೂರಕ್ಕೂ ಹೆಚ್ಚು ಮರ, ಧಾರವಾಡ ಬೆಳಗಾವಿ ಮಧ್ಯೆ ಚತುಷ್ಪಥ ರಸ್ತೆಗಾಗಿ ಕಿತ್ತೊಗೆದ 600 ಕ್ಕೂ ಹೆಚ್ಚು, ನೂರಾರು ವರ್ಷ ಬಾಳಿದ್ದ ಮರಗಳಿಂದ ಉಂಗುರು ಮಾಹಿತಿ ಸಂಗ್ರಹಿಸುವ, ದಾಖಲಿಸುವ ಯಾವ ಪ್ರಯತ್ನವೂ ನಡೆಯಲಿಲ್ಲ. ‘ಡೆಂಡ್ರಾ ಕ್ರೊನಾಲಜಿ’ ಮೂಲಕ, ಮರಗಳ ಒಡಲುಂಗುರ ಹೇಳುವ ಇತಿಹಾಸ ಶಾಶ್ವತವಾಗಿ ಇನ್ನಿಲ್ಲವಾಯಿತು. ಕಾರಣ, ನಮ್ಮ ‘ಇಕಾಲಜಿ’ ಮತ್ತು ‘ತಜ್ಞತೆ’ ಸ್ಥಳೀಯವಾಗಿದ್ದಷ್ಟು ಗೌಣ.. ಆಮದಾದಷ್ಟು ಕಿಮ್ಮತ್ತು..! ಎಂಬಂತಿದೆ ಧೋರಣೆ.
ಅಭಿವೃದ್ಧಿಯ ಹೆಸರಿನಲ್ಲಿ ಹನನಗೊಂಡ ಮರಗಳ ಒಡಲಿನಿಂದ ಅರ್ಧ ಸೆಂ.ಮೀ. ತುಂಡನ್ನು ಅಧ್ಯಯನಕ್ಕಾಗಿ ಕೃಷಿ ವಿವಿ, ಕರ್ನಾಟಕ ವಿವಿಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗ, ಅರಣ್ಯ ಇಲಾಖೆಯವರು ಅಥವಾ ಸರ್ಕಾರೇತರ ಸಂಸ್ಥೆಯ ಸಸ್ಯ ಶಾಸ್ತ್ರಜ್ಞರು ಕತ್ತರಿಸಿ ಇಟ್ಟುಕೊಂಡಿದ್ದರೂ.. ಎರಡು ಜಿಲ್ಲೆಗಳ ನೂರಾರು ವರ್ಷಗಳ ಪಾರಿಸಾರಿಕ ಇತಿಹಾಸ ದಾಖಲೆಯಾಗುತ್ತಿತ್ತು! ಹವಾಮಾನ, ಮಳೆ, ಬರ, ಕೀಟ ಆಕ್ರಮಣ, ರೋಗ ಇತ್ಯಾದಿ ಮರದ ಒಡಲುಂಗುರ ದಾಖಲಿಸಿಟ್ಟುಕೊಂಡಿದೆ. ಶಾಸನಗಳಲ್ಲಿ ಇತಿಹಾಸ ಹುಡುಕುವ ಬದಲು, ಹಸಿರು ಇತಿಹಾಸದ ದಾಖಲೆ ಓದಿದ್ದರೆ ಸಾಕಿತ್ತು. ಹಾಗಾಗಲಿಲ್ಲ.. ಸಹಸ್ರಾರು ಕೋಟಿ ವೆಚ್ಚದ ಯೋಜನೆ ರೂಪಿಸುವ ತಜ್ಞರಿಗೆ, ಹತ್ತಾರು ಕೋಟಿ ಇಂತಹ ಕೆಲಸಗಳಿಗೆ ಮೀಸಲಿಡುವ ಯೋಚನೆ, ಯೋಜನಾ ವೆಚ್ಚದಲ್ಲಿ ಸೇರಿಸಿಕೊಳ್ಳುವ ‘ದೂರದೃಷಿ’ ಇದ್ದಂತಿಲ್ಲ. ದಾಖಲಿಸಬೇಕೆಂಬ ಕನಿಷ್ಟ ಕಾಳಜಿ ವಿವೇಕವೂ ಇಲ್ಲದಂತಾಗಿದ್ದು ನಮ್ಮ ಪೀಳಿಗೆಯ ದುರ್ದೈವ, ಎಂದರು.
ರೋಟರಿ ಕ್ಲಬ್, ಧಾರವಾಡ ಅಧ್ಯಕ್ಷ ಸಂಜಯ್ ಇಂಗಳೆ ಅಧ್ಯಕ್ಷೀಯ ನುಡಿಗಳನ್ನಾಡಿ, ರೋಟರಿ ಕ್ಲಬ್ ಈ ವರ್ಷ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಿದೆ. ಅವಳಿ ನಗರಕ್ಕೆ ಹಸಿರು ಆವರಣ ತೊಡಿಸುವ ಪ್ರಯತ್ನ ಸಮುದಾಯದ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಎನ್ಆರ್ಸಿ ಮತ್ತು ನೇಚರ್ ಫಸ್ಟ್ ವತಿಯಿಂದ ಡಾ.ಕೆ.ಕೊಟ್ರೇಶ್ ಅವರಿಗೆ, ಎನ್ಆರ್ಸಿ ಉಪಾಧ್ಯಕ್ಷ ಚಂದ್ರಶೇಖರ ಭೈರಪ್ಪನವರ ಹಾಗೂ ವೇದಿಕೆಯ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿದರು. ಚಿತ್ರದುರ್ಗದ ಯುವ ಪ್ರತಿಭೆ ಪ್ರಜ್ವಲ್ ಬಿ.ಎಂ. ಭಾವಗೀತೆಗಳ ಗಾಯನ ಹಾಗೂ ಯುವ ಬಾನ್ಸುರಿ ವಾದಕ ಬೆಂಗಳೂರಿನ ಶ್ರೀಧರ್ ಗುಜ್ಜರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಎನ್ಆರ್ಸಿಯ ಪ್ರಕಾಶ್ ಗೌಡರ ನಿರೂಪಿಸಿ, ವಂದಿಸಿದರು. ಡಾ.ಧೀರಜ್ ವೀರನಗೌಡರ ಅತಿಥಿಗಳನ್ನು ಸ್ವಾಗತಿಸಿದರು. ಕೆಲಗೇರಿಯ ರೈತ ಶಂಕರಗೌಡ ಪಾಟೀಲ ಕುಟುಂಬ ಉತ್ತರ ಕರ್ನಾಟಕ ಶೈಲಿ ಊಟವನ್ನು ಸಿದ್ಧಪಡಿಸಿ, ಸೇವಾ ಕೆಫೆಯಲ್ಲಿ ಉಣ ಬಡಿಸಿದರು. ವಿಶೇಷ ಆಹ್ವಾನಿತರು, ನೂರಕ್ಕೂ ಹೆಚ್ಚು ಜನ ಪಾಲ್ಗೊಂಡು ಸಸಿ ನೆಟ್ಟು ಸಂಭ್ರಮಿಸಿದ್ದು ವಿಶೇಷ.
ಸಹಕಾರ : ಶ್ರೀ ಹರ್ಷವರ್ಧನ್ ವಿ.ಶೀಲವಂತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.