ಮಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಮೇರು ವಿವಿ ಮತ್ತು ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಹೆಸರುವಾಸಿಯಾಗಿದೆ. ಆದರೆ ವಿಶ್ವವಿದ್ಯಾಲಯ ಸದಾ ಒಂದಲ್ಲ ಒಂದು ಗೊಂದಲಗಳಿಗೆ ಸಾಕ್ಷಿಯಾಗಿ ರಾಜ್ಯದಲ್ಲಿ ಸದ್ದುಮಾಡುತ್ತಿದೆ. ಅದು ಫಲಿತಾಂಶ, ಮೌಲ್ಯಮಾಪನ, ಮರುಮೌಲ್ಯಮಾಪನ ಮತ್ತು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವಿವಿಯು ಅನೇಕ ಸಂದರ್ಭದಲ್ಲಿ ಪದೇ ಪದೇ ತನ್ನ ನಿಲುವನ್ನು ಬದಲಾಯಿಸುತ್ತಾ ಅವೈಜ್ಞಾನಿಕತೆಯನ್ನು ಮೆರೆದಿದೆ. ಸಮಸ್ಯೆಗಳು ಪದೇ ಪದೇ ಮರುಕಳಿಸುತ್ತಿದ್ದರೂ ಸಹ ವಿವಿಯ ಆಡಳಿತ ಮಂಡಳಿಯು ನೋಡುತ್ತಾ ಕುಳಿತಿರುವುದು ದುರ್ದೈವದ ಸಂಗತಿಯಾಗಿದೆ.
ವಿಟಿಯು ಹೊಸ ಪಠ್ಯಕ್ರಮದಲ್ಲಿನ ಗೊಂದಲದಿಂದಾಗಿ ನಾಲ್ಕಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೂ 2016-17 ನೇ ಸಾಲಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಆದರೆ ಪರೀಕ್ಷೆಗಳಿಗೆ ಕೇವಲ ಎರಡು ದಿನದ ಬಿಡುವು ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ತೊಂದರೆಯಾಗಿದೆ. ಆದ್ದರಿಂದ ಕನಿಷ್ಟ ನಾಲ್ಕು ದಿನಗಳ ಅಂತರ ನೀಡುವುದರಿಂದ ವಿದ್ಯಾರ್ಥಿಗಳಿಗೆ ಅನೂಕುಲವಾಗಲಿದೆ.
ಅದರಂತೆಯೇ ಪ್ರಸ್ತುತ ಸೆಮಿಸ್ಟರ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಧಿಡೀರ್ ಏರಿಕೆ ಮಾಡಿರುವುದನ್ನು ಅಭಾವಿಪ ತೀರ್ವವಾಗಿ ಖಂಡಿಸುತ್ತದೆ. ಮೊದಲಿಗೆ ಇರುವ ಪರೀಕ್ಷಾ ಶುಲ್ಕಕ್ಕಿಂತ ಒಂದು ಪಟ್ಟು ಹೆಚ್ಚಾಗಿ ಶುಲ್ಕ (ಅಂದರೆ 1300 ರೂ) ಏರಿಕೆ ಕಂಡಿರುವುದು ಖಂಡನಾರ್ಹ. ಅಷ್ಟೇ ಅಲ್ಲದೆ ಮರುಮೌಲ್ಯಮಾಪನ ಶುಲ್ಕವನ್ನು ಏರಿಕೆ ಮಾಡಿರುವುದು ವಿವಿಯು ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ.
ಆದ್ದರಿಂದ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿವಿಯ ಈ ವಿದ್ಯಾರ್ಥಿ ವಿರೋಧಿ ನಡೆಯನ್ನು ಖಂಡಿಸುತ್ತಿದೆ. ಮತ್ತು ಕೂಡಲೇ ಪರೀಕ್ಷಾ ಶುಲ್ಕವನ್ನು ಇನ್ನೊಮ್ಮೆ ಪರಿಶಿಲಿಸಿ ಏರಿಕೆಯಾದ ಶುಲ್ಕವನ್ನು ಕಡಿಮೆ ಮಾಡಿ ರಾಜ್ಯದ ತಾಂತ್ರಿಕ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕುಎಂದು ಎಬಿವಿಪಿ ಈ ಮೂಲಕ ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೇಡಿಕೆಗಳು:
→ ಮರುಮೌಲ್ಯಮಾಪನದ ಫಲಿತಾಂಶದ ನಂತರ ಪ್ರಸಕ್ತ ಸಾಲಿನ ಪರೀಕ್ಷೆಗಳನ್ನು ನಡೆಸತಕ್ಕದ್ದು.
→ ಪರೀಕ್ಷಾ ಶುಲ್ಕಏರಿಕೆ ಮಾಡಿರುವುದನ್ನುಕೈಬಿಡಬೇಕು.
→ ಕ್ರ್ಯಾಶ್ಕೋರ್ಸ್ ವಿದ್ಯಾರ್ಥಿಗಳ ಅನೂಕುಲಕ್ಕಾಗಿ ನಿಗದಿತ ಸೆಮಿಸ್ಟರ್ ಪರೀಕ್ಷೆಗೆ 4 ದಿನಗಳ ಅಂತರವಿರುವಂತೆ ಪರೀಕ್ಷಾ ದಿನಾಂಕಗಳನ್ನು ಮುಂದೂಡಬೇಕು.
ಇಂದು ನಗರದ ಪಿವಿಎಸ್ ವೃತ್ತದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ ರವರು ಮನವಿ ಸ್ವೀಕರಿಸಿ ಈ ಸಮಸ್ಯೆಯು ನಿಮ್ಮ ಹೋರಾಟದಿಂದ ತಿಳಿದಿದ್ದು ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಈ ಹೋರಾಟದಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಮೀಕ್ಷ ಶೆಟ್ಟಿ, ಕೀರ್ತನ್ದಾಸ್, ಕೃತೇಶ್ ಭಂಡಾರಿ, ಕಾರ್ತಿಕ್, ಅರ್ಜುನ್, ಭವಿಷ್, ಶ್ರೀದೇವಿ ಕಾಲೇಜಿನ ಮನೋಜ್, ಜ್ಞಾನೇಶ್ ಮುಕ್ಕ ಶ್ರೀನಿವಾಸ ಕಾಲೇಜಿನ ಶುಭಂ, ಮೈಟ್ ಕಾಲೇಜಿನ ವೆಲ್ಸಾ ಸೋಫಿಯಾ , ಪಿ.ಎ ಕಾಲೇಜಿನ ಶಿವಾನಂದ ಶ್ರೀನಿವಾಸ ವಲಚ್ಚಿಲ್ ಕಾಲೇಜಿನ ಶ್ರೀನಿಕೇತ್, ಆಸ್ಟೆಲ್, ವಿಖ್ಯಾತ್, ಕೆನರಾ ಕಾಲೇಜಿನ ಶಿವರಾಜ್ ಮತ್ತು ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಮತ್ತಿತರರು ಶೀತಲ್ ಕುಮಾರ್ ಜೈನ್, ಎ.ಬಿ.ವಿ.ಪಿ ಸರ್ವಕಾಲೇಜು ಸಂಘದ ಸಂಚಾಲಕ್ ವರುಣ್, ಹಾಸ್ಟೆಲ್ ಪ್ರಮುಖ್ ಸಂಕೇತ್ ಎಸ್.ಬಂಗೇರ, ಶರೋಲ್ ವಾಮಂಜೂರು ಮನೀಶ್ ಮುಂತಾದವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.