ಮಂಗಳೂರು : ಎಬಿವಿಪಿಯು ಶಿಕ್ಷಣದ ವ್ಯಾಪಾರೀಕರಣ ತಡೆಯುವಂತೆ ಪದವಿಪೂರ್ವ ಉಪನಿರ್ದೇಶಕರು ಮಂಗಳೂರು ರವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡಲಾಯಿತು.
ಶಿಕ್ಷಣ ಸಮಾಜದ ಸಂಪೂರ್ಣ ಉನ್ನತಿಗೆ ಹೊರೆತು ವ್ಯಾಪಾರಕ್ಕಲ್ಲ ಎಂಬ ವಿಷಯವನ್ನು ಮರೆತು ಇಂದಿನ ಶಿಕ್ಷಣ ಸಂಸ್ಥೆಗಳು ಕಾಲೇಜುಗಳನ್ನು ನಡೆಸುತ್ತಿವೆ. ಶಿಕ್ಷಣವು ವ್ಯಾಪಾರದ ಸರಕಾಗಿದೆ. ಕಳೆದ ವರ್ಷ ಇಂತಹ ಕಾಲೇಜುಗಳು ತಮ್ಮ ಸಂಸ್ಥೆಯ ಫಲಿತಾಂಶ ಹೆಚ್ಚಸಿಕೊಳ್ಳಲು ಪ್ರಶ್ನೆಪತ್ರಿಕೆ ಸೋರಿಕೆಯಂತಹ ವಾಮಮಾರ್ಗ ಅನುಸರಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡಿದ್ದವು. ಕಳೆದ ವರ್ಷದ ದ್ವಿತೀಯ ಪಿ.ಯು ರಸಾಯನಶಾಸ್ತ್ರ ಹಾಗೂ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣವನ್ನು ಸರ್ಕಾರ ಸಿ.ಐ.ಡಿ. ತನಿಖೆಗೆ ಒಪ್ಪಿಸಿದ ನಂತರ ಮೊದಲ ಹಂತದಲ್ಲಿ 3 ಆರೋಪಿಗಳನ್ನು ಬಂಧಿಸುವಲ್ಲಿ ಸಿ.ಐ.ಡಿ ಯಶಸ್ವಿಯಾಯಿತು. ತನಿಖೆಯನ್ನು ಚುರುಕುಗೊಳಿಸಿದ ಸಿ.ಐ.ಡಿ. ತಂಡ ಈ ಪ್ರಕರಣದಲ್ಲಿ ರಾಜ್ಯದ ಪ್ರತಿಷ್ಠಿತ 11 (ನಾರಾಯಣ, ಚೈತನ್ಯ, ದೀಕ್ಷಾ, ಪ್ರೆಸಿಡೆಸ್ಸಿ, ಎಕ್ಸ್ಪರ್ಟ್, ಮಹೇಶ್, ಬೃಂದಾವನ) ಖಾಸಗಿ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿತ್ತು.
ಆದರೆ ಪ್ರಕರಣ ನಡೆದು ಇಂದಿಗೆ ವರ್ಷವಾದರು, ಕೇವಲ ಕಣ್ಣೊರೆಸುವ ತಂತ್ರವೆಂಬಂತೆ ಪಿಯು ಮಂಡಳಿಯ 26 ಜನ ನೌಕರರನ್ನು ವರ್ಗಾಯಿಸಿದ್ದನ್ನು ಬಿಟ್ಟರೆ ಈ 11 ಕಾಲೇಜುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೆ ಅಲ್ಲದೆ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಫಲಿತಾಂಶಗಳನ್ನು ನೀಡುತ್ತಿವೆ ಎಂದು ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಈ ದಂಧೆಯಲ್ಲಿ ಟ್ಯೂಷನ್ ಮಾಫಿಯಾ ಕೂಡಾ ಸೇರಿಕೊಂಡಿದೆ. ಪಕ್ಕದ ತೆಲಂಗಾಣ ಮತ್ತು ಸೀಮಾಂದ್ರ ರಾಜ್ಯದಲ್ಲಿ ಕಾರ್ಪೋರೇಟ್ ಪಿ.ಯು. ಕಾಲೇಜುಗಳಿಂದ ಎರಡು ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಸಂಪೂರ್ಣವಾಗಿ ವ್ಯಾಪಾರಕ್ಕೆ ತಿರುಗಿರುವುದು ಆತಂಕಕಾರಿ ವಿಷಯ. ಆದ್ದರಿಂದ ಇತರ ಪರಿಸ್ಥಿತಿ ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಬರಕೂಡದು ಎಂದು ಎಬಿವಿಪಿ ಆಗ್ರಹಿಸುತ್ತದೆ.
ತಮ್ಮ ಕಾಲೇಜುಗಳ ಫಲಿತಾಂಶವನ್ನು ಹೆಚ್ಚಿಸಲು ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿರುವ ಇಂತಹ ಶಿಕ್ಷಣ ಸಂಸ್ಥೆಗಳಿಂದ ನಮ್ಮ ಸಮಾಜ ಮತ್ತು ವಿದ್ಯಾರ್ಥಿಗಳು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಣ ಕೇವಲ ವ್ಯಾಪಾರದ ಸರಕಾಗಿ ಉಪಯೋಗಿಸಿಕೊಳ್ಳುತ್ತಿರುವ ಇಂತಹ ಖಾಸಗಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಕೇವಲ ಅಂಕಗಳನ್ನು ಗಳಿಸುವುದೇ ಮುಖ್ಯವೆಂದು ತಿಳಿಸಿ ಸಾಮಾಜಿಕ ಜೀವನದಿಂದ ಸಂಪೂರ್ಣವಾಗಿ ದೂರವಿಟ್ಟು ವಿದ್ಯಾರ್ಥಿಗಳನ್ನು ರೋಬೊಟ್ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮತ್ತು ಪೋಷಕರ ಭಾವನೆಗಳ ಮತ್ತು ಭವಿಷ್ಯಗಳೊಂದಿಗೆ ಆಟವಾಡುತ್ತಿವೆ. ಆದ್ದರಿಂದ ಸಿ.ಐ.ಡಿ ಉಲ್ಲೇಖಿಸಿರುವ ಕಾಲೇಜು ಸಂಸ್ಥೆಗಳ ಮಾನ್ಯತೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಶಿಕ್ಷಣದ ವ್ಯಾಪಾರಿಕರಣಕ್ಕೆ ಕಡಿವಾಣ ಹಾಕಬೇಕೆಂದು ಸರ್ಕಾರಕ್ಕೆ ಎಬಿವಿಪಿ ಆಗ್ರಹಿಸುತ್ತದೆ.
ಆರ್.ಟಿ.ಇ. ಮೂಲಕ ಬಡ, ಪ್ರತಿಭಾವಂತ, ಹಿಂದುಳಿದ ವಿದ್ಯಾರ್ಥಿಗಳಿಗಿರುವ ಸೀಟ್ಗಳನ್ನು ಖಾಸಗಿ ಶಾಲೆಗಳುಸೀಟ್ ಬ್ಲಾಕಿಂಗ್ ಮಾಡಿ ಸೀಟ್ ಸಿಗದಂತೆ ಮಾಡಲಾಗುತ್ತಿವೆ. ಎಲ್.ಕೆ.ಜಿಯಿಂದಲೆ ಲಕ್ಷಾಂತರರೂಗಳ ಡೊನೇಶನ್ ಪಡೆಯಲಾಗುತ್ತಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳಿಗೆ ಸೀಟ್ ಸಿಗದೇ ಪರದಾಡುವಂತಾಗಿದೆ. ಈ ಸೀಟ್ಗಳನ್ನು ಆರ್.ಟಿ.ಇ. ಖೋಟಾದಿಂದ ಮ್ಯಾನೇಜಮೆಂಟ್ ಸೀಟ್ಗಳಾಗಿ ಪರಿವರ್ತಿಸಿ ಲಕ್ಷಾಂತರ ರೂಗಳಿಗೆ ಮಾರಿಕೊಳ್ಳುತ್ತಿದ್ದಾರೆ.ಆದ್ದರಿಂದ ಶಿಕ್ಷಣ ಸಚಿವರು ಈ ಕೂಡಲೇ ಆರ್.ಟಿ.ಇ. ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು ಹಾಗೂ ಸೀಟ್ ಬ್ಲಾಕಿಂಗ್ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸಬೇಕು.
ಈಗಾಗಲೇ ಈ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪ್ರಾರಂಭವಾಗಿದ್ದು, ಖಾಸಗಿ ಶಾಲಾ/ಕಾಲೇಜುಗಳು ಲಕ್ಷಾಂತರ ರೂ ಗಳನ್ನು ಡೊನೇಶನ್ ರೂಪದಲ್ಲಿ ಪಾಲಕರಿಂದ ಕೀಳುತ್ತಿವೆ. ಕಳೆದ ನವೆಂಬರ್ನಲ್ಲಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಸಮಯದಲ್ಲಿ ಎಲ್ಲಾ ಕಾಲೇಜುಗಳು ತಮ್ಮ ಹಣವನ್ನು ಚೆಕ್, ಡಿಡಿ, ಅಥವಾ ಆನ್ಲೈನ್ ಮೂಲಕವೇ ಪಡೆಯಬೇಕೆಂದು ತಿಳಿಸಿದ್ದು ಕರ್ನಾಟಕ ಸರ್ಕಾರ ಈ ಕೂಡಲೇ ಎಲ್ಲಾ ಕಾಲೇಜುಗಳಿಗೂ ಸುತ್ತೋಲೆ ಕಳುಹಿಸಿ ಕ್ಯಾಶ್ಲೆಸ್ ವ್ಯವಹಾರವನ್ನು ಪ್ರೋತ್ಸಾಹಿಸಬೇಕು, ಈ ಮೂಲಕ ಕಾಲೇಜುಗಳ ಅಕ್ರಮ ವಹಿವಾಟನ್ನು ತಡೆಯಬೇಕೆಂದು ಸರ್ಕಾರಕ್ಕೆ ಎಬಿವಿಪಿ ಆಗ್ರಹಿಸಿ ಪದವಿಪೂರ್ವ ಉಪನಿರ್ದೇಶಕರು ಮಂಗಳೂರು ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಶೀತಲ್ ಕುಮಾರ್ ಜೈನ್, ಸಂಕೇತ್ ಕೆ.ಎಸ್ ಬಂಗೇರ, ರಾಜೇಂದ್ರ, ಶರೋಲ್ ಗೆವಿನ್ ಕಾರ್ಯಕರ್ತರಾದ ಯತೀಶ್, ಧನುಶ್, ಕಾರ್ತಿಕ್, ಚಿತ್ತರಂಜನ್, ಪವನ್, ಹಿತೇಶ್, ಕೌಶಿಕ್, ಪವನ್ರಾಜ್ ಉಪಸ್ಥಿತರಿದ್ದರು.
ಬೇಡಿಕೆಗಳು:
1. ಸರ್ಕಾರ ಶಿಕ್ಷಣದ ವ್ಯಾಪಾರಿಕರಣಕ್ಕೆ ಕಡಿವಾಣ ಹಾಕಲು ಡೋನೇಶನ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಬೇಕು
2. ಡೊನೇಶನ್ ಹಾವಳಿ ತಪ್ಪಿಸಿ,ಅಕ್ರಮವನ್ನು ತಡೆಗಟ್ಟಬೇಕು.
3. ಆರ್.ಟಿ.ಇ. ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು
4. ಸೀಟ್ ಬ್ಲಾಕಿಂಗ್ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸಬೇಕು.
5. ಎಲ್ಲಾ ಕಾಲೇಜುಗಳು ತಮ್ಮ ಹಣವನ್ನು ಚೆಕ್, ಡಿಡಿ, ಅಥವಾ ಆನ್ಲೈನ್ ಮೂಲಕವೇ ಪಡೆಯಬೇಕೆಂದು ಸರ್ಕಾರ ಈ ಕೂಡಲೇ ಎಲ್ಲಾ ಕಾಲೇಜುಗಳಿಗೂ ಸುತ್ತೋಲೆ ಕಳುಹಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.