ಶಿಕ್ಷಣ ಎಂದಾಗ ನಮಗೆ ನೆನಪಾಗುವುದು ಮಗುವಿನ/ ವ್ಯಕ್ತಿಯ ಬೌದ್ಧಿಕ, ಭೌತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ, ಮೌಲ್ಯಗಳಿರುವ ಪ್ರಬಲವಾಗಿರುವ ಬುದ್ಧಿಶಕ್ತಿಯನ್ನು ಉತ್ತೇಜಿಸಿ ಸದೃಢರನ್ನಾಗಿ ಮಾಡುವುದೇ ಶಿಕ್ಷಣ.
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಶಿಕ್ಷಣ ಇಲಾಖೆಯ ಪರಮ ಗುರಿ ‘ಗುಣಮಟ್ಟದ ಶಿಕ್ಷಣವೇ’ಆಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಸರಕಾರವು ಮೊದಲ ಆದ್ಯತೆಯನ್ನು ನೀಡುತ್ತಿದೆ. ಕಲಿಕೆಯನ್ನು ಖಾತ್ರಿಗೊಳಿಸುವುದಕ್ಕೆ ಇಲಾಖೆಯ ಕಾರ್ಯಕ್ರಮಗಳು, ಹೀಗೆ ಮೊದಲಾದ ಬಹು ಆಪ್ಯಾಯಮಾನ ಘೋಷಣೆಯನ್ನು ಪ್ರತಿ ದಿನ ಎಂಬಂತೆ ಇತ್ತೀಚಿನ ವರ್ಷಗಳಲ್ಲಿ ನಾವು ಕೇಳುತ್ತಲೇ ಬಂದಿದ್ದೇವೆ. ಆಶ್ಚರ್ಯವೆಂದರೆ ಶಿಕ್ಷಣದಲ್ಲಿ ಗುಣಮಟ್ಟ ಎಂದರೇನು? ಎಂಬುದರ ಬಗ್ಗೆ ಇಂದು ಶಿಕ್ಷಣದಲ್ಲಿ ಹಲವು ಬಗೆಯ ಸಂದೇಹಗಳು, ಗೊಂದಲಗಳು, ಕಾಣುವುದು ಸಹಜ.
ಹಾಗಾದರೆ ಗುಣಮಟ್ಟದ ಶಿಕ್ಷಣ ಎಂದರೆ “ಅರ್ಹ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ, ನಿಯಮಿತವಾಗಿ ಹಾಜರಾಗಿ ಕಲಿಕೆಯಲ್ಲಿ ಗುಣಾತ್ಮಕತೆಯನ್ನು ಸಾಧಿಸಿ ಪ್ರಗತಿ ಹೊಂದುವುದು.” ಎಂಬರ್ಥ. ಈ ವ್ಯಾಖ್ಯಾನವನ್ನು 2005 ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹೊರತಂದ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆಯ ಶಾಲಾ ಕೈಪಿಡಿಯಲ್ಲಿ ನೀಡಲಾಗಿದೆ.
ವಿಶ್ವ ಸಂಸ್ಥೆಯ ಅಂಗವಾದ ಯುನೆಸೆಫ್, ಗುಣಮಟ್ಟ ಶಿಕ್ಷಣದ ಬಗ್ಗೆ ಹೀಗೆ ಹೇಳಿದೆ. “1997 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿದ 10 ಜೀವನ ಕೌಶಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ನೀಡುವುದೇ ಗುಣಮಟ್ಟದ ಶಿಕ್ಷಣ” ಎಂದು ಅದು ವ್ಯಾಖ್ಯಾನಿಸಿದೆ.
ಈ 10 ಜೀವನ ಕೌಶಲ್ಯಗಳನ್ನು 3 ವಿಭಾಗಗಳಲ್ಲಿ ಗುರುತಿಸಲಾಗಿದೆ.
ಬೌದ್ಧಿಕ ಕೌಶಲ್ಯಗಳು- ವಿಮರ್ಶಾತ್ಮಕ ಚಿಂತನೆ, ಸೃಜನಾತ್ಮಕ ಚಿಂತನೆ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯಾ ಪರಿಹಾರ, ಸ್ವ ಅರಿವು. ಭಾವ ಸಂಬಂಧಿ ಕೌಶಲ್ಯಗಳು- ಭಾವನೆಗಳ ನಿರ್ವಹಣೆ, ಪರಿಣಾಮಕಾರಿ ಸಂವಹನ, ಇತರರ ಭಾವನೆ ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಸಮಸ್ಯಾ ನೆಲೆಗಳ ಯಶಸ್ವಿ ನಿರ್ವಹಣಾ ಕೌಶಲ್ಯ- ಅಂತರ ಶಕ್ತಿ ಸಂಬಂಧಗಳು, ಒತ್ತಡ ನಿರ್ವಹಣೆ.
ತಮ್ಮ ತಮ್ಮ ವ್ಯಾಸಂಗದಲ್ಲಿ ಮಕ್ಕಳು ಈ ಕೌಶಲ್ಯಗಳನ್ನು ಮೈಗೂಡಿಸಿಕೊಂಡರೆ ಅದನ್ನು ಗುಣಮಟ್ಟದ ಶಿಕ್ಷಣವೆಂದು ಹೇಳಬಹುದು, ಎಂದು ಹೇಳುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಈ ಹಿನ್ನೆಲೆಯಲ್ಲಿ ಬೋಧನೆ/ಕಲಿಕೆಗಳಲ್ಲಿ ಬದಲಾವಣೆಗಳಾಗಿರುವುದನ್ನು ನಾವು ಗಮನಿಸಬೇಕಾಗಿದೆ. ಎಂದರೆ ಸಾರ್ವತ್ರಿಕ ದಾಖಲಾತಿ, ದಾಖಲೆಗೆ ತಕ್ಕಂತೆ ಸಾರ್ವತ್ರಿಕ ಹಾಜರಾತಿ, ಹಾಜರಾತಿಗೆ ತಕ್ಕಂತೆ ಸಾರ್ವತ್ರಿಕ ಕಲಿಕೆ, ಕಲಿಕೆಗೆ ತಕ್ಕಂತೆ ಪ್ರಗತಿಯನ್ನು ಸಾಧಿಸುವುದೇ ಗುಣಮಟ್ಟದ ಶಿಕ್ಷಣ. ಆದರೆ ಪರೀಕ್ಷೆಗಳಲ್ಲಿ ಶೇಕಡಾ 100 ಹಾಗೂ ಅದಕ್ಕೆ ಸಮೀಪದ ಉತ್ತಮ ಫಲಿತಾಂಶ ಬರುವ ಶಾಲೆಗಳಲ್ಲಿ, ಕ್ರೀಡಾ ಸ್ಪರ್ಧೆಗಳಲ್ಲಿ ಗುಣಮಟ್ಟದ ಶಿಕ್ಷಣವಿದೆ ಎಂದು ಸಾಮಾನ್ಯವಾಗಿ ನಾವು ನೀವೆಲ್ಲರೂ, ಪೋಷಕರು ಗ್ರಹಿಸಿಕೊಂಡಂತಿದೆ.
ಹೀಗೆ ಶಾಲಾ ಫಲಿತಾಂಶದೊಂದಿಗೆ, ವಿದ್ಯಾರ್ಥಿಗಳು ಪಡೆದುಕೊಂಡ ಅಂಕಗಳೊಂದಿಗೆ, ನಾನಾ ಸ್ಪರ್ಧೆಗಳಲ್ಲಿ ಶಾಲೆ ಬಾಚಿಕೊಂಡ ಬಹುಮಾನಗಳ ಸಂಖ್ಯೆಯೊಂದಿಗೆ ಅಲ್ಲಿಯ ಶಿಕ್ಷಣದ ಗುಣಮಟ್ಟವನ್ನು ಸಮೀಕರಿಸಲಾಗುತ್ತಿದೆ. ವಾಸ್ತವದಲ್ಲಿ ಶಾಲೆಯ ಫಲಿತಾಂಶ ವಿದ್ಯಾರ್ಥಿಗಳು ಪಡೆದ ಅಂಕ, ಬಹುಮಾನ, ಭೌತಿಕ ಸೌಲಭ್ಯ, ಇತ್ಯಾದಿಗಳಿಗೂ ಗುಣಮಟ್ಟದ ಶಿಕ್ಷಣಕ್ಕೂ ಯಾವ ನೇರ ಸಂಬಂಧವನ್ನು ಕಲ್ಪಿಸಬಾರದು.
1986 ರಲ್ಲಿ ಬಂದ ಹೊಸರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಮೂದಿಸಿದ 84 ಸಾಮಾಜಿಕ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮಕ್ಕಳು ರೂಢಿಸಿಕೊಳ್ಳುವಂತೆ ನೀಡುವ ಶಿಕ್ಷಣವೇ ಗುಣಾತ್ಮಕ ಶಿಕ್ಷಣ ಎಂದು ಹಲವು ಚಿಂತಕರು ವಿಶ್ಲೇಷಿಸಿದ್ದಾರೆ.
ಈ ತೆರನಾದ ಗುಣಮಟ್ಟ ಶಿಕ್ಷಣದ ಪರಿಣಾಮವಾಗಿ ವ್ಯಕ್ತಿತ್ವ ನಿರ್ಮಾಣ, ಶಾರೀರಿಕ ದೃಢತೆ, ಸೃಷ್ಟಿಶೀಲ ಮತ್ತು ವಿಮರ್ಶಾತ್ಮಕ ಯೋಚನಾಶಕ್ತಿ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಜಾಣ್ಮೆ, ಸರಿಯಾದ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇವುಗಳು ಮಕ್ಕಳಲ್ಲಿ ಮೈಗೂಡಿ ಇವೇ ಅವರ ಬಾಳಿನ ಆಧಾರ ಸ್ಥಂಭಗಳಾಗುವಂತಿರಬೇಕು.
ಶಾಲೆಯ ಭೌತಿಕ ವಾತಾವರಣ, ಅಲ್ಲಿ ಲಭಿಸುವ ಶೈಕ್ಷಣಿಕ ಸೌಲಭ್ಯಗಳು, ಸರಕಾರ ನೀಡುವ ಬಾಹ್ಯ ಪ್ರೇರಕಾಂಶಗಳು ಪೂರಕ ಅಂಶಗಳೇ ವಿನಃ ಗುಣಾತ್ಮಕ ಶಿಕ್ಷಣದ ಆತ್ಮವಲ್ಲ, ಜೀವದ್ರವವಲ್ಲ. ಶಾಲೆಯ ತರಗತಿ ಕೋಣೆ ಹಾಗೂ ಅಲ್ಲಿನ ಶಿಕ್ಷಕರೇ ಗುಣಮಟ್ಟದ ಆತ್ಮ ಮತ್ತು ಜೀವದ್ರವವಿದ್ದಂತೆ.
ಇದನ್ನೇ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಬಹು ಅರ್ಥಪೂರ್ಣವಾಗಿ “No system of education can rise above the quality of it’s teachers. First requisite is qualified, motivated teachers” ಎಂದು ಹೇಳಿದೆ. ಹಾಗಾಗಿ ಗುಣಮಟ್ಟದ ವೃದ್ಧಿಯೇ ಶಿಕ್ಷಣದ ಗುಣಮಟ್ಟದ ವೃದ್ಧಿಯ ಮೊದಲ ಹೆಜ್ಜೆ.
ಗುಣಮಟ್ಟದ ಶಿಕ್ಷಣ ಎಂದರೆ ಬೇರೇನೂ ಆಗಿರದೆ, ಗುಣಮಟ್ಟದ ಶಿಕ್ಷಕನಿಂದ ತರಗತಿಯಲ್ಲಿ ನಡೆಯುವ ಅಪೇಕ್ಷಿತ ಕಲಿಕಾ ಪ್ರಕ್ರಿಯೆಯೇ ಆಗಿದೆ. ಮಗುವಿನ ಸ್ವತಂತ್ರ ಚಿಂತನೆಗೆ ಅವಕಾಶವಿದ್ದು ಕಲಿಕೆಗೆ ಮಗುವಿನಲ್ಲಿ ಕಲಿಕೆಯ ಕೂತೂಹಲ ಕೆರಳಿಸುವ, ಮಗುವಿಗೆ ಪ್ರಶ್ನೆ ಕೇಳಲು ಅವಕಾಶವಿರುವಾಗ, ಮಗುವಿನ ಅಭಿಪ್ರಾಯಗಳನ್ನು ಗೌರವಿಸುವಂತಹ ತರಗತಿ ಪ್ರಕ್ರಿಯೆ ಗುಣಮಟ್ಟದ ಶಿಕ್ಷಣ ಆಗಿರುತ್ತದೆ ಅಲ್ಲವೆ? ಹಾಗಾದರೆ ಕಲಿಕೆಯ ಗುಣಮಟ್ಟ ಎಂದರೆ ಭೌತಿಕವಾಗಿ ಸುಂದರವಾಗಿ ಕಾಣುವ ಕಟ್ಟಡವಲ್ಲ, ಬಣ್ಣ ಬಣ್ಣದ ಗೋಡೆಗಳಲ್ಲ, ತೂಗುಹಾಕಿದ ಧೂಳು ಹಿಡಿದ ಉಪಕರಣವಲ್ಲ, ಬದಲಾಗಿ ಶಿಕ್ಷಕ ಮತ್ತು ಮಗುವಿನ ನಡುವಿನ ಸಂಬಂಧ, ಸಂವಾದ ಮತ್ತು ಅಂತಃ ಕ್ರಿಯೆಯಾಗಿದೆ.
ಇಂತಹ ಗುಣಾತ್ಮಕ ಶಿಕ್ಷಣವನ್ನು ನೀಡಿದಾಗ ಮಾತ್ರ ಒಬ್ಬ ವ್ಯಕ್ತಿ ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಒಳಿತು ಮಾಡಲು ಸಾಧ್ಯ. ಭಾರತವನ್ನು ಮತ್ತೆ ವಿಶ್ವಮಾತೆ ಜಗದ್ಗುರುವನ್ನಾಗಿಸಲು ಈ ಮಾರ್ಗ ಇಂದು ಅತ್ಯಾವಶ್ಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.