ನವದೆಹಲಿ: ಕಳೆದ 10 ವರ್ಷಗಳಿಂದ ತಮ್ಮ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮಂತ್ರದಿಂದಾಗಿ ಜಗತ್ತು ಈಗ ಭಾರತದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಅಂಗೀಕರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜರ್ಮನಿಯ ಸ್ಟಟ್ಗಾರ್ಟ್ನಲ್ಲಿ ಮಾಧ್ಯಮ ಭವನ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು. “ಭಾರತ-ಜರ್ಮನಿ: ಸುಸ್ಥಿರ ಬೆಳವಣಿಗೆಗೆ ಮಾರ್ಗಸೂಚಿ” ಎಂಬ ವಿಷಯದೊಂದಿಗೆ ಕಾರ್ಯಕ್ರಮ ಜರುಗಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಅಭಿವೃದ್ಧಿಗಾಗಿ ಪ್ರತಿ ದೇಶವು ಭಾರತದೊಂದಿಗೆ ಸಹಕರಿಸಲು ಬಯಸುತ್ತದೆ ಎಂದು ಮೋದಿ ಹೇಳಿದರು.
ಜರ್ಮನಿಯ ‘ಫೋಕಸ್ ಆನ್ ಇಂಡಿಯಾ’ ಡಾಕ್ಯುಮೆಂಟ್ ಇದಕ್ಕೆ ಉದಾಹರಣೆಯಾಗಿದೆ ಮತ್ತು ಈ ದಾಖಲೆಯು ಭಾರತದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಜಗತ್ತು ಹೇಗೆ ಅಂಗೀಕರಿಸುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದರು.
ಭಾರತವು ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ನೀತಿಗಳನ್ನು ಪರಿಚಯಿಸಿದೆ ಮತ್ತು 21 ನೇ ಶತಮಾನದಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಲು ತನ್ನನ್ನು ತಾನು ಸಿದ್ಧಪಡಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಮ್ಮ ಸರ್ಕಾರವು ಸುಲಭವಾಗಿ ವ್ಯಾಪಾರ ಮಾಡುವುದನ್ನು ಉತ್ತೇಜಿಸಲು ರೆಡ್ ಟ್ಯಾಪಿಸಂ ಅನ್ನು ಕೊನೆಗೊಳಿಸಿದೆ. ಅಭಿವೃದ್ಧಿಗಾಗಿ ಕೈಗೆಟುಕುವ ಬಂಡವಾಳವನ್ನು ಲಭ್ಯವಾಗುವಂತೆ ಮಾಡಲು ಭಾರತವು ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು.
ಭದ್ರ ಬುನಾದಿಯ ಮೇಲೆ ವಿಕಸಿತ ಭಾರತದ ಭವ್ಯ ಸೌಧವನ್ನು ನಿರ್ಮಿಸಲಾಗುವುದು ಎಂದು ಪ್ರಧಾನಮಂತ್ರಿ ತಿಳಿಸಿದರು. ಜರ್ಮನಿಯು ತನ್ನ ಅಭಿವೃದ್ಧಿ ಪಯಣದಲ್ಲಿ ಭಾರತದ ವಿಶ್ವಾಸಾರ್ಹ ಪಾಲುದಾರನಾಗಲಿದೆ ಎಂದು ಅವರು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಜರ್ಮನಿ ನಡುವಿನ ಪರಸ್ಪರ ಪಾಲುದಾರಿಕೆ ನಿರಂತರವಾಗಿ ಬಲಗೊಂಡಿದೆ . 1800 ಕ್ಕೂ ಹೆಚ್ಚು ಜರ್ಮನ್ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಈ ಕಂಪನಿಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 34 ಬಿಲಿಯನ್ ಡಾಲರ್ಗಳನ್ನು ಮುಟ್ಟಿದೆ ಮತ್ತು ಮುಂಬರುವ ವರ್ಷಗಳಲ್ಲಿ ಈ ವ್ಯಾಪಾರವು ಮತ್ತಷ್ಟು ಬೆಳೆಯಲಿದೆ ಎಂದು ಮೋದಿ ಹೇಳಿದರು.
ಜರ್ಮನಿಯ ಅಭಿವೃದ್ಧಿ ಪಯಣದಲ್ಲಿ ಉತ್ಪಾದನೆ ಮತ್ತು ಇಂಜಿನಿಯರಿಂಗ್ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಭಾರತವೂ ವಿಶ್ವದ ಬೃಹತ್ ಉತ್ಪಾದನಾ ಕೇಂದ್ರವಾಗುವತ್ತ ಸಾಗುತ್ತಿದೆ ಎಂದು ಹೇಳಿದರು. ಮೇಕ್ ಇನ್ ಇಂಡಿಯಾಗೆ ಸಂಬಂಧಿಸಿದ ತಯಾರಕರಿಗೆ ಭಾರತವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಅನ್ನು ಒದಗಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇಂದು ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಯಾವುದೇ ದೇಶದ ವೇಗದ ಅಭಿವೃದ್ಧಿಗೆ ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು ಮುಖ್ಯ ಎಂದು ಮೋದಿ ಒತ್ತಿ ಹೇಳಿದರು. ದೇಶದಲ್ಲಿ ಈ ಮೂರೂ ಕಡೆಗಳಲ್ಲಿ ಮೂಲಸೌಕರ್ಯ ನಿರ್ಮಾಣದ ಕೆಲಸ ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದರು. ಭಾರತದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ಅವರು ಜರ್ಮನ್ ಕಂಪನಿಗಳನ್ನು ಆಹ್ವಾನಿಸಿದರು. ಭಾರತದಲ್ಲಿ ಇಂದಿಗೂ ನೆಲೆ ಇಲ್ಲದವರನ್ನು ದೇಶಕ್ಕೆ ಆಹ್ವಾನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.