News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಅಕ್ರಮ ಕಟ್ಟಡಗಳ ನಿವಾಸಿಗಳೇ ಎದ್ದೇಳಿ..

buildingಗೊತ್ತಿದ್ದೊ, ಗೊತ್ತಿಲ್ಲದೆಯೊ ತಪ್ಪುಗಳು ಮನುಷ್ಯನಿಂದ ಆಗುವುದು ಸಾಮಾನ್ಯ. ಆ ತಪ್ಪನ್ನು ಸರಿಪಡಿಸಿ ನಂತರ ಮುಂದಕ್ಕೆ ಆ ತಪ್ಪುಗಳು ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಕಾನೂನಾತ್ಮಕವಾಗಿ ಯಾವುದೇ ತಪ್ಪುಗಳು ಆದಾಗ ಅದನ್ನು ಸರಿಪಡಿಸಲು ನ್ಯಾಯಾಲಯಗಳ ಎದುರು ವಾದ-ಪ್ರತಿವಾದ ಎಲ್ಲ ನಡೆದು ಕೊನೆಗೆ ನ್ಯಾಯದ ಸಿಗುವ ವ್ಯವಸ್ಥೆ ಆಗುತ್ತದೆ. ಆದರೆ ಕೆಲವೊಮ್ಮೆ ತಪ್ಪುಗಳು ಸಣ್ಣ ಮಟ್ಟದಲ್ಲಿ ನಡೆದಾಗ ಅದನ್ನು ಕಾನೂನಾತ್ಮವಾಗಿ ಸರಿ ಮಾಡುವ ಪ್ರಕ್ರಿಯೆಗಳು ನಡೆದು ಅದರಿಂದ ಒಂದಷ್ಟು ಆದಾಯವನ್ನು ಗಳಿಸುವಂತಹ ಯೋಜನೆಯನ್ನು ಸರ್ಕಾರಗಳು ಪ್ರಾರಂಭಿಸುವ ಮನಸ್ಸು ಮಾಡಿದ್ದೇ “ಅಕ್ರಮ ಸಕ್ರಮ” ಯೋಜನೆ.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಂತನೆಗೆ ಬಂದ ಈ ಯೋಜನೆ ಇಲ್ಲಿ ತನಕ ಕಾನೂನಿನ ಹಲವು ತೊಡರುಗಳ ಮೂಲಕ ಅನುಷ್ಟಾನಕ್ಕೆ ಬರಲೇ ಇಲ್ಲ. ಎಸ್.ಎಂ.ಕೃಷ್ಣ ಅವರು ಸೇರಿದಂತೆ ನಂತರ ರಾಜ್ಯವಾಳಿದ ೭ ಮುಖ್ಯಮಂತ್ರಿಗಳ ಎದುರು ಕಾಲಕಾಲಕ್ಕೆ ಅಕ್ರಮ-ಸಕ್ರಮ ಯೋಜನೆಯ ಕಡತ ಬರುತ್ತಲೇ ಇತ್ತು. ಪ್ರತಿಬಾರಿ ಬಂದಾಗಲೂ ಅದರ ಬಗ್ಗೆ ಸರಣಿ ಸಭೆಗಳು ನಡೆದು ಅದನ್ನು ಅನುಷ್ಟಾನಕ್ಕೆ ತರಲೇ ಬೇಕೆಂದು ಮುಖ್ಯಮಂತ್ರಿಗಳು ಮನಸ್ಸು ಮಾಡುತ್ತಲೇ ಇದ್ದರು. ಆದರೆ ಇಲ್ಲಿ ತನಕ ಯಾವುಸು ದಡ ಸೇರುತ್ತಲೇ ಇರಲಿಲ್ಲ. ಕಾರಣ ಪ್ರತಿ ಬಾರಿ ಸರ್ಕಾರಗಳು ಇದನ್ನು ಅನುಷ್ಟಾನಕ್ಕೆ ತರಲು ಹೊರಟಾಗ ಯಾರಾದರೂ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹಾಕುತ್ತಿದ್ದರು. ಅದನ್ನು ನ್ಯಾಯಾಲಯಗಳು ಸ್ವೀಕರಿಸುತ್ತಿದ್ದವು. ಇನ್ನೂ ಎಸ್.ಎಂ.ಕೃಷ್ಣ ಸರ್ಕಾರದ ಬಳಿಕ ಯಾವುದೇ ಸ್ಥಿರ ಸರ್ಕಾರ ಅಧಿಕಾರಕ್ಕೆ ಬರದಿದ್ದ ಕಾರಣ ಅಕ್ರಮ-ಸಕ್ರಮ ಕಡತಗಳು ಹಾಗೇ ಉಳಿದು ಬಿಟ್ಟಿದ್ದವು. ಈಗ ಸಿದ್ಧರಾಮಯ್ಯನವರ ಕಾಂಗ್ರೆಸ್ ಬಹುಮತದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ಚಾಲನೆ ಸಿಕ್ಕಿದೆ. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಸುದ್ದಿಗೋಷ್ಠಿ ಕರೆದು ಮೊನ್ನೆ ಮಾರ್ಚ್ ೨೩ ರಿಂದ ಮುಂದಿನ ವರ್ಷದ ಮಾರ್ಚ್ ೨೨ ರತನಕ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವವರು ತಮ್ಮ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಹಾಗಾದರೆ ಯಾರ್‍ಯಾರು ತಮ್ಮ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಬಹುದು? ವ್ಯವಹಾರಿಕ ಕಟ್ಟಡಗಳಾದರೆ ಕೇವಲ ೨೫% ಅಕ್ರಮವಾಗಿ ಕಟ್ಟಿದರೆ ಅದನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಬಹುದು. ಅದೇ ರೀತಿಯಲ್ಲಿ ವಾಸ್ತವ್ಯದ ಕಟ್ಟಡವಾದರೆ ೫೦% ಅಕ್ರಮವಾಗಿ ಕಟ್ಟಿದರೆ ಅದನ್ನು ಸಕ್ರಮಗೊಳಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿದ್ದರೆ ಅದನ್ನು ನ್ಯಾಯಾಲಯಗಳ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು. ಇದು ಮೊದಲ ಮತ್ತು ಕೊನೆಯ ಅವಕಾಶವಾಗಿರುವುದರಿಂದ ಇಂತಹ ಅಕ್ರಮ ಕಟ್ಟಡಗಳನ್ನು ಒಂದೇ ಬಾರಿ ಸಕ್ರಮಗೊಳಿಸಲು ರಾಜ್ಯ ಸರ್ಕಾರ ಅವಕಾಶ ಕೊಡುತ್ತಿದೆ. ಇದರಿಂದ ಏನಿಲ್ಲವೆಂದರೂ ಹತ್ತರಿಂದ ಹದಿನೈದು ಸಾವಿರ ಕೋಟಿ ಆದಾಯ ನಿರೀಕ್ಷಿಸುತ್ತಿದೆ. ಆ ಹಣವನ್ನು ನಗರಾಭಿವೃದ್ಧಿ ಯೋಜನೆಗೆ ತೊಡಗಿಸಲು ಯೋಜಿಸಲಾಗಿದೆ. ಆದರೆ ಮಂಗಳೂರಿನ ಇಬ್ಬರು ನಾಗರಿಕರು ಸರ್ಕಾರದ ಈ ಯೋಜನೆಯ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹಾಕಿದ್ದಾರೆ. ಅದನ್ನು ಸ್ವೀಕರಿಸಿದ ನ್ಯಾಯಾಲಯ ಈಗ ಸದ್ಯಕ್ಕೆ ಅರ್ಜಿಯನ್ನು ಮಾತ್ರ ಸ್ವೀಕರಿಸಿ. ಆ ಬಗ್ಗೆ ಮುಂದಿನ ಪ್ರಕ್ರಿಯೆಗೆ ನ್ಯಾಯಾಲಯದ ಆದೇಶ ಬರುವ ತನಕ ಕಾಯಿರಿ ಎಂದು ಸರ್ಕಾರಕ್ಕೆ ಆದೇಶ ನೀಡಿದೆ.

ಇಲ್ಲಿ ಒಟ್ಟು ಬರುವ ಇನ್ನೊಂದು ಪ್ರಶ್ನೆ ಎಂದರೆ ಒಬ್ಬ ವ್ಯಕ್ತಿ ತನ್ನ ಸ್ವಹಿತಕ್ಕಾಗಿ ಅಕ್ರಮವಾಗಿ ಕಟ್ಟುವ ಕಟ್ಟಡ ಆತನಿಗೆ ಹೇಗೋ ಸ್ವಲ್ಪ ದಂಡ ಕಟ್ಟಿ ಸಕ್ರಮವಾಗಬಹುದು. ಆದರೆ ಅದರಿಂದ ಅದರ ಪಕ್ಕದಲ್ಲಿ ಇರುವ ಇತರ ಕಟ್ಟಡಗಳ ವಾಸಿಗಳಿಗೆ ತೊಂದರೆಯಾಗುವುದಿಲ್ಲವೇ? ಯಾರದ್ದೊ ಅಕ್ರಮ ಕಟ್ಟಡ ಸುಲಭವಾಗಿ ಸಕ್ರಮವಾದರೆ ಸಕ್ರಮವಾಗಿ ಪಕ್ಕದಲ್ಲಿ ಇರುವ ಕಟ್ಟಡಗಳ ಮಾಲೀಕರ ಹಕ್ಕುಗಳನ್ನು ಮೊಟಕುಗೊಳಿಸಿದಂತೆ ಆಗುವುದಿಲ್ಲವೇ? ಎನ್ನುವ ಪ್ರಶ್ನೆ ಕೂಡ ಬರುತ್ತದೆ. ಅಂತಹ ಸಂದರ್ಭದಲ್ಲಿ ಆಂತಹ ತೊಂದರೆಗೆ ಒಳಗಾಗುವ ನಾಗರಿಕರು ಸಕ್ಷಮ ಪ್ರಾಧಿಕಾರದ ಎದುರು ತಮ್ಮ ಹಕ್ಕು ದಾವೆಯನ್ನು ಮಂಡಿಸಬಹುದು. ಅದರ ಬಳಿಕ ಯೋಗ್ಯ ವಿಚಾರಣೆ ಮುಗಿದು ಆ ಅರ್ಜಿಯನ್ನು ಸಕ್ರಮಗೊಳಿಸಬೇಕೊ ಬೇಡವೊ ಎಂದು ಆ ಪ್ರಾಧಿಕಾರ ತೀರ್ಮಾನಿಸುತ್ತದೆ.

ಸಾಮಾನ್ಯವಾಗಿ ಪ್ಲಾಟ್‌ಗಳನ್ನು ಕಟ್ಟುವಾಗ ಬಿಲ್ಡರ್‍ಸ್‌ಗಳು ಸ್ವಲ್ಪಮಟ್ಟಿಗೆ ತಪ್ಪುಗಳನ್ನು ಮಾಡಿಯೇ ಮಾಡಿರುತ್ತಾರೆ. ಅದು ಗೊತ್ತಿಲ್ಲದ ಗ್ರಾಹಕರು ಅದನ್ನು ಖರೀದಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅಂತಹ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಆ ಗ್ರಾಹಕನಿಗೆ ಸಾಧ್ಯವಾಗಿರುವುದಿಲ್ಲ. ಆತ ಮೋಸಕ್ಕೆ ಒಳಗಾಗಿರುತ್ತಾನೆ. ಅಂತಹ ಮಾಲೀಕರಿಗೆ ಈ ಯೋಜನೆ ಈಗ ಸುವರ್ಣ ಅವಕಾಶ ನೀಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top