ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದಡಿಯಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ಥಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತೋ… ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮರ್ದ್ ಮರಾಠಾ ನಮ್ಮೆಲ್ಲರ ಹೆಮ್ಮೆಯ ವೀರ ಶಿವಾಜಿ.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿ ಭೋಂಸ್ಲೆ (ಫೆಬ್ರುವರಿ 19, 1630 – ಏಪ್ರಿಲ್ 3, 1680) ಮರಾಠಾ ರಾಜ್ಯದ ಸ್ಥಾಪಕರು. ಇವರು 1630 ರಲ್ಲಿ ಪುಣೆಯ ಹತ್ತಿರವಿರುವ ಶಿವನೇರಿ ಎಂಬಲ್ಲಿ ಜನಿಸಿದರು. ಇವರು 1674 ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು 1818 ರ ವರೆಗೂ ರಾರಾಜಿಸಿತು.
ಗೆಲುವಿನ ಮೂಲ:
ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೋಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರು ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ, ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಲಿನ ಬಳಿ ಬಂದರು.
ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕನಿರಬೇಕೆಂದು ತಿಳಿದು ಸ್ವಾಗತಿಸಿದಳು. ಅವನು ಹಸಿದಿರುವನೆಂದು ಅರಿತ ಮಹಿಳೆಯು ಕೈ ಕಾಲು ಮುಖ ತೊಳೆಯಲು ನೀರು ನೀಡಿದಳು ಮತ್ತು ವಿಶ್ರಮಿಸಲು ಚಾಪೆಯನ್ನು ಹಾಸಿದಳು. ಅವನು ವಿಶ್ರಮಿಸಿದ ನಂತರ ಮಹಿಳೆಯು ಬಿಸಿ ಬಿಸಿ ಅನ್ನ ಮತ್ತು ಸಾಂಬಾರನ್ನು ತಿನ್ನಲು ನೀಡಿದಳು.
ತುಂಬಾ ಹೊಟ್ಟೆ ಹಸಿದಿದ್ದ ಶಿವಾಜಿಯು ತಕ್ಷಣ ತಿನ್ನಲು ಬಿಸಿ ಅನ್ನಕ್ಕೆ ಕೈ ಹಾಕಿದನು. ಬಿಸಿ ತಡೆಯಲಾರದೆ ಚೀರಿದನು ಮತ್ತು ಸ್ವಲ್ಪ ಅನ್ನವನ್ನು ಚೆಲ್ಲಿದನು. ಇದನ್ನು ನೋಡಿದ ಮಹಿಳೆಯು ಹೇಳಿದಳು, “ಅರೇ ನೀನು ಸಹ ನಿನ್ನ ಸ್ವಾಮಿ ಶಿವಾಜಿಯಂತೆ ಗಡಿಬಿಡಿ ಮಾಡುತ್ತೀಯ. ಅದಕ್ಕೆ ಕೈ ಸುಟ್ಟುಕೊಂಡೆ ಮತ್ತು ಸ್ವಲ್ಪ ಅನ್ನವನ್ನು ಬೀಳಿಸಿದೆ”.
ಶಿವಾಜಿಯು ಆಶ್ಚರ್ಯದಿಂದ, “ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಯಾಕೆ ಹೇಳುತ್ತೀಯ?” ಎಂದು ಕೇಳಿದನು.
ಆಗ ಮಹಿಳೆಯು ಹೇಳಿದಳು, “ನೋಡು ಮಗನೆ, ಶಿವಾಜಿಯು ತನ್ನ ಗಡಿಬಿಡಿಯಿಂದಾಗಿ ಶತ್ರುಗಳ ಸಣ್ಣ ಕೋಟೆಯನ್ನು ಗೆಲ್ಲುವ ಬದಲಾಗಿ ದೊಡ್ಡ ದೊಡ್ಡ ಕೋಟೆಗಳನ್ನು ಗೆಲ್ಲಲು ಹೋಗುತ್ತಿದ್ದಾನೆ ಮತ್ತು ಇದರಿಂದಾಗಿ ಅವನು ತನ್ನ ವೀರ ಸೈನಿಕರನ್ನು ಕಳೆದುಕೊಳ್ಳುತ್ತಿದ್ದಾನೆ. ಅದರ ಬದಲಿಗೆ ತಾಳ್ಮೆಯಿಂದ ಮೊದಲು ಸಣ್ಣ ಸಣ್ಣ ಕೋಟೆಗಳನ್ನು ಗೆದ್ದರೆ ಅವನ ಬಲವೂ ಹೆಚ್ಚುತ್ತದೆ ಮತ್ತು ಸೈನಿಕರೂ ಉಳಿಯುತ್ತಾರೆ. ಅದೇ ರೀತಿ ನೀನು ಮೊದಲು ಬದಿಯಲ್ಲಿರುವ ತಣ್ಣಗಿರುವ ಅನ್ನವನ್ನು ಮೊದಲು ತಿನ್ನು”.
ಶಿವಾಜಿಯು ಕೂಡಲೇ ವೃದ್ಧ ಮಹಿಳೆಯ ಮಾತಿನ ಹಿಂದಿರುವ ಅರ್ಥವನ್ನು ಅರಿತನು ಮತ್ತು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ಮಾಡಬಾರದೆಂದು ಅರಿತನು.
ಶಿವಾಜಿ ಮಹಾರಾಜರ ಗುರುಕಾಣಿಕೆ:
17 ನೇ ಶತಮಾನದಲ್ಲಿ, ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು.
ಒಂದು ದಿನ ಶಿವಾಜಿ ಮಹಾರಾಜರು ರಾಜಸಭೆಯಲ್ಲಿ ಕಾರ್ಯಭಾರ ಮಾಡುವಾಗ ಯಾರೋ ಭಿಕ್ಷೆ ಬೇಡುವುದು ಕೇಳಿಸಿತು. ಅದು ತನ್ನ ಗುರು ರಾಮದಾಸ ಸ್ವಾಮಿಗಳ ಧ್ವನಿ ಎಂದು ಅರಿತು ಕೂಡಲೆ ಅವನು ಓಡಿ ಹೋಗಿ ಅವರನ್ನು ಆದರದಿಂದ ಒಳಗೆ ಕರೆದುಕೊಂಡು ಬಂದನು. ಗುರುಗಳಿಗೆ ಪೂಜೆಯನ್ನು ಮಾಡಿ ಅವರು ಅನ್ನ ಗ್ರಹಣ ಮಾಡಿದ ನಂತರ ಶಿವಾಜಿಯು ಒಂದು ಚೀಟಿಯಲ್ಲಿ ಏನೋ ಬರೆದು ಗುರುಗಳಿಗೆ ನೀಡಿದರು.
ಗುರುಗಳೊಂದಿಗೆ ಇದ್ದ ಇತರ ಜನರಿಗೆ ಆಶ್ಚರ್ಯವಾಯಿತು. ಶಿವಾಜಿಯು ಗುರುಗಳಿಗೆ ರಾಜಭೋಜನ ನೀಡಬಹುದು, ಅರ್ಪಣೆ ನೀಡಬಹುದು ಎಂದು ವಿಚಾರ ಮಾಡುತ್ತಿದ್ದರು. ಆದರೆ ಶಿವಾಜಿ ಮಹಾರಾಜರು ಒಂದು ಸಣ್ಣ ಚೀಟಿಯಲ್ಲಿ ಏನು ಬರೆದಿರಬಹುದು ಅನಿಸಿತು. ಏನು ಬರೆದಿರುವನೆಂದು ಅರಿತಿದ್ದ ಗುರುಗಳು ಜನರ ವಿಚಾರಗಳಿಗೆ ಉತ್ತರ ನೀಡಲು ಅವರಲ್ಲೊಬ್ಬನಿಗೆ ಚೀಟಿಯಲ್ಲಿ ಏನಿದೆ ಎಂದು ಜೋರಾಗಿ ಓದಿ ಹೇಳಲು ಹೇಳಿದರು. ಆ ಚೀಟಿಯಲ್ಲಿ ಶಿವಾಜಿಯು ತನ್ನ ಸಂಪೂರ್ಣ ರಾಜ್ಯವನ್ನು ಗುರುಗಳ ಚರಣಗಳಿಗೆ ಸಮರ್ಪಿಸಿದ್ದನು.
ಗುರುಗಳು ಕೇಳಿದರು, “ಎಲ್ಲವನ್ನು ಅರ್ಪಿಸಿಬಿಟ್ಟರೆ ನೀನೇನು ಮಾಡುವೆ?” ಆಗ ರಾಜನು ಉತ್ತರಿಸಿದನು, “ನಾನು ನಿಮ್ಮ ಸೇವೆ ಮಾಡಿಕೊಂಡಿರುವೆನು”.
ಆಗ ಗುರುಗಳು ಹೇಳಿದರು, “ಸರಿ ನಡಿ ಹಾಗಿದ್ದರೆ ನಾವು ಮನೆ ಮನೆಗೆ ಹೋಗಿ ಭಿಕ್ಷೆ ಬೇಡೋಣ”.
ಕೂಡಲೇ ರಾಜನು ಒಳಗೆ ಹೋಗಿ ಸಾಧಾರಣ ಉಡುಪುಗಳನ್ನು ಧರಿಸಿ ಬಂದನು. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿದ ನಂತರ ಎಲ್ಲರೂ ವಿಶ್ರಾಂತಿಗಾಗಿ ಮರದಡಿ ಕೂತರು. ಶಿವಾಜಿಯ ಗುರುಸೇವೆಯ ತಳಮಳವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.
ಗುರುಗಳು ಹೇಳಿದರು, “ನನಗೆ ರಾಜ್ಯದಿಂದೇನು ಲಾಭ? ಹಾಗಾಗಿ ನನಗೆ ನೀನು ನೀಡಿರುವ ರಾಜ್ಯವನ್ನು ನಾನು ಇಟ್ಟುಕೊಳ್ಳುವುದಿಲ್ಲ. ಇಂದಿನಿಂದ ನಾನು ನಿನ್ನನ್ನು ನನ್ನ ರಾಜ್ಯವನ್ನು ನೋಡಿಕೊಳ್ಳಲು ನೇಮಿಸುತ್ತೇನೆ”.
ನಮ್ರತೆಯಿಂದ ಶಿವಾಜಿಯು ಗುರುಗಳ ಅರಮನೆಗೆ ಹಿಂತಿರುಗಿದನು ಮತ್ತು ಅವರ ರಾಜ್ಯಭಾರವನ್ನು ಮಾಡಿದನು.
ಅಪ್ರತಿಮ ವೀರ ಛತ್ರಪತಿ ಶಿವಾಜಿ
ಪ್ರಜಾಹಿತ ರಕ್ಷಕ, ಹಿಂದುತ್ವ ರಕ್ಷಕ, ರಾಷ್ಟ್ತ್ರಪ್ರೇಮಿ, ನ್ಯಾಯವಂತ, ಸುಸಜ್ಜಿತ ನೌಕಾದಳ ಮತ್ತು ಕರ್ತವ್ಯ ದಕ್ಷ, ಧರ್ಮಶ್ರದ್ದೆ ಮತ್ತು ಭಾಷಾ ಶುದ್ದಿಯನ್ನು ಪುರಸ್ಕರಿಸುವ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ರಾಜಸಿಂಹಾಸನ ದೊರಕಿಸಿಕೊಟ್ಟಿದ್ದು ಅವಿಸ್ಮರಣೀಯ. ಸಾಮ್ರಾಜ್ಯ ತನಗಾಗಿ ಅಲ್ಲ. ಧರ್ಮಕ್ಕಾಗಿ ಎಂಬುದು ಶಿವಾಜಿಯ ವಾದ. ಶತ್ರುವನ್ನು ಸರಿಯಾಗಿ ಗ್ರಹಿಸಿ ತಕ್ಕಪಾಠ ಕಲಿಸಿದವನು ಶಿವಾಜಿ.
ಇವತ್ತು ಭಾರತ ಕಂಡ ಅತ್ಯಂತ ಶ್ರೇಷ್ಠ ಪುರುಷ ಹಿಂದವೀ ಸ್ವರಾಜ್ಯದ ಮೂಲಕ ಆ ತಾಯಿಯನ್ನು ಜಗ್ಗದ್ಗುರುವನ್ನಾಗಿಸಲು ತನ್ನ ಸರ್ವಸ್ವವನ್ನೂ ಸಮರ್ಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯ ತಿಥಿ. ಬನ್ನಿ ಈ ಮಹಾ ಪುರುಷನನ್ನು ಸ್ಮರಿಸೋಣ. ಅವರ ಜೀವನ ಮಾರ್ಗವನ್ನು ಪಾಲಿಸುತ್ತಾ ಮತ್ತೆ ಆ ತಾಯಿ ಭಾರತಿಯನ್ನು ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.