ಯುವ ಜನತೆಯ ಕನಸುಗಳಿಗೆ ಬಲ ನೀಡುವ, ಬಾಲರಿಗೆ ಮುದ ನೀಡುವ ಹಿರಿಯರಿಗೆ ಅಭಯ ನೀಡುವ, ಪ್ರವಾಸಿಗರಿಗೆ ಸಂತಸ ನೀಡುವ ನುಗ್ಗಿಕೇರಿ ಹನುಮ ಉತ್ತರ ಕರ್ನಾಟಕದ ವೈಶಿಷ್ಟ್ಯ.
ಧಾರವಾಡದಿಂದ ಕಲಘಟಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಒಂದು ಕೆರೆ ಇದೆ. ಅದರ ದಂಡೆಯಲ್ಲೇ ವಿರಾಜಮಾನನಾಗಿದ್ದಾನೆ ವೀರ ಹನುಮ. ಆ ಮಾರ್ಗದಲ್ಲಿ ಪಯಣಿಸುವ ಅಸಂಖ್ಯ ಭಕ್ತರು ಇವನ ದರ್ಶನ ಪಡೆಯದೇ ಮುಂದಡಿ ಇಡರು.
ಪ್ರತಿ ದಿನವಂತೂ ಭಕ್ತರು ಬರುವುದು ಸಾಮಾನ್ಯ. ಆದರೆ ಶನಿವಾರ ಬಂತೆಂದರೆ ಸಾಕು ಅಬಾಲವೃದ್ಧರಾದಿಯಾಗಿ ಎಲ್ಲರೂ ವಿಶಿಷ್ಟ ಹನುಮನ ದರ್ಶನಕ್ಕೆ ಬರುತ್ತಾರೆ. ಅನೇಕ ಯುವಕರು, ಕೆಲ ಗೆಳೆಯರು ಸೇರಿ ಅರುಣೋದಯಕ್ಕೆ ಪಾದಯಾತ್ರೆ ಮೂಲಕ ಬಂದರೆ, ಇನ್ನು ಕೆಲವರು ಬೈಕ್ಗಳ ಮೂಲಕವೂ ಗುಡಿಯತ್ತ ಪಯಣ ಬೆಳೆಸುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಒಂದು ಬೃಹತ್ ಮಹಾದ್ವಾರ ನಿರ್ಮಿಸಲಾಗಿದೆ. ಅದನ್ನು ಕಂಡವರು ಯಾರೂ ದರ್ಶನ ಪಡೆಯದೇ ಹಾಗೇ ಹೋಗುವುದು ವಿರಳ.
ಈ ದೇವಾಲಯ ದೇಸಾಯಿ ಮನೆತನದ ಒಡೆತನದಲ್ಲಿದೆ. ಇತ್ತೀಚೆಗಂತೂ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ಬದಲಾಗಿದೆ ದೇವಸ್ಥಾನ. ವಿಶಾಲವಾದ ಅಂಗಳ, ಕೊಠಡಿಗಳು, ಕುಡಿಯುವ ನೀರು, ಸ್ನಾನ ಹಾಗೂ ಶೌಚಾಲಯಗಳ ವ್ಯವಸ್ಥೆ ಇದೆ.
ಸ್ವರ್ಗದಲ್ಲಿದೆ ಎಂದು ನಂಬಲಾದ ಸೌಗಂಧಿಕಾ ಪುಷ್ಪವನ್ನು ತನ್ನ ಎಡಗೈಯಲ್ಲಿ ಹಿಡಿದಿದ್ದಾನೆ ಹನುಮಂತ. ಅಭಯ ಹಸ್ತ ನೀಡುವ ಬಲಗೈ, ಶಿರದ ಮೇಲೆ ವಸ್ತ್ರಧಾರಣೆ ಗಮನಾರ್ಹ. ಮುಖ್ಯವೆಂದರೆ ಹನುಮನ ಮೂರ್ತಿಯು ಕೆಂಪು ಶಿಲೆಯಿಂದ ಕೂಡಿದ್ದು. ಗರ್ಭಗೃಹದ ಗೋಡೆಗೆ ಗೋಮುಖ ಎನಿಸುವ ಅಪರೂಪದ ಸಾಲಿಗ್ರಾಮ ಇದೆ. ಮೂರ್ತಿಯನ್ನು ನೋಡಿದರೆ ನೋಡುತ್ತಲೇ ಇರಬೇಕೆನಿಸುವ, ನೋಡುತ್ತಲೇ ಇದ್ದಲ್ಲಿ ಮೈಯಲ್ಲೇನೋ ಶಕ್ತಿ ಸಂಚಾರವಾದಂತೆ ಭಾಸವಾಗುವ ಅನುಭವ. ಅಬ್ಬಾ..! ಅಚಲ ಭಕ್ತಿಯೊಂದಿದ್ದರೆ ಸಾಕು, ಹನುಮ ಒಲಿಯದೇ ಇರಲಾರ.
ಮಹಾಭಾರತಕ್ಕೂ ಈ ದೇವಸ್ಥಾನಕ್ಕೂ ಸಂಬಂಧವಿದೆ ಎನ್ನುತ್ತಾರೆ ದೇವಸ್ಥಾನದ ಮಾಲಿಕ ದೇಸಾಯಿಯವರು. ಹಾವು ಕಚ್ಚಿದ ಪರಿಣಾಮ ಪರೀಕ್ಷಿತ ಸಾವನ್ನಪ್ಪುತ್ತಾನೆ. ತನ್ನ ತಂದೆಯ ಸಾವಿಗೆ ಕಾರಣವಾದ ತಕ್ಷಕ ಎಂಬ ಹಾವಿನ ಸಂತತಿಯನ್ನೇ ನಾಶ ಮಾಡುವ ಪ್ರತಿಜ್ಞೆಯನ್ನು ಜನಮೇಜಯ ಮಾಡುತ್ತಾನೆ. ಆದರೆ ಒಂದು ಹಾವಿನ ಮೇಲಿನ ಸೇಡನ್ನು, ಇಡೀ ಕುಲದ ಮೇಲೆ ತೀರಿಸಿಕೊಳ್ಳುವುದು ತಪ್ಪು. ಅವು ಮಾನವನಿಗೆ ಪಾರಿಸರಿಕವಾಗಿ ಉಪಕಾರಿ. ಆದ್ದರಿಂದ ಸರ್ಪ ಸಂಹಾರ ಕಾರ್ಯವನ್ನು ನಿಲ್ಲಿಸುವಂತೆ ಪಂಡಿತರು ಜನಮೇಜಯನಿಗೆ ಸೂಚಿಸುತ್ತಾರಂತೆ. ಅಲ್ಲದೇ ಪಾಪ ಪರಿಹಾರಾರ್ಥವಾಗಿ ಹನುಮಂತನ 500 ದೇವಾಲಯಗಳನ್ನು ನಿರ್ಮಿಸುವಂತೆ ತಿಳಿಸುತ್ತಾರೆ. ಆ ರೀತಿ ನಿರ್ಮಿಸಿದ ದೇವಾಲಯಗಳಲ್ಲಿ ನುಗ್ಗಿಕೇರಿ ಹನುಮನೂ ಒಂದು ಎಂಬುದು ಪ್ರತೀತಿ.
ಇದು ಮೂಲತಃ ಕೆರೆಯುಳ್ಳ ಅರಣ್ಯ ಪ್ರದೇಶ. ಅಂದಾಜು 60 ದಶಕದ ಹಿಂದೆ ವ್ಯಕ್ತಿಯೋರ್ವ ಹನುಮಂತನ ಮೂರ್ತಿಯನ್ನು ಕೆರೆಯಲ್ಲಿ ಎಸೆದುಬಿಟ್ಟನಂತೆ. ಕಾಲಾನುಕ್ರಮದಲ್ಲಿ ಈ ಜಾಗವು ದೇಸಾಯಿ ಅವರ ಮನೆತನಕ್ಕೆ ಸೇರಿದ ಪರಿಣಾಮ ಅವರು ಅಲ್ಲಿಯೂ ಬಂದು ವಾಸಿಸುತ್ತಿದ್ದರಂತೆ.
ಒಮ್ಮೆ ವ್ಯಾಸರಾಯರು ಅಲ್ಲಿಗೆ ಬಂದರಂತೆ. ಅಂದು ಅವರ ಕನಸಿನಲ್ಲಿ ಹನುಮಪ್ಪನ ವಿಗ್ರಹ ಕೆರೆಯಲ್ಲಿರುವಂತೆ ಮೂಡಿ ಬಂದಿದೆ. ಇದೇ ರೀತಿಯ ಕನಸು ದೇಸಾಯಿಯವರಿಗೂ ಬಿದ್ದಿತು. ಆಶ್ಚರ್ಯವೆಂದರೆ, ಕೆರೆಯಲ್ಲಿ ಹುಡುಕಿದರೆ ಮೂರ್ತಿ ದೊರೆಯಿತು. ಕಾರಣ ಮೂರ್ತಿಯನ್ನು ಅಲ್ಲಿಯೇ ಪುನಃ ಪ್ರತಿಷ್ಠಾಪಿಸಲಾಯಿತಂತೆ.
ಎಲ್ಲ ದೇವಾಲಯಗಳಂತೆ ಇಲ್ಲಿಯೂ ಪಂಚಾಮೃತ, ಕುಂಕುಮ, ಎಲೆ, ಬೆಣ್ಣೆ ಪೂಜೆಗಳನ್ನು ಮಾಡಲಾಗುತ್ತದೆ. ಅನ್ನಸಂತರ್ಪಣೆಯೂ ಇಲ್ಲಿ ನಡೆಯುತ್ತದೆ. ಹನುಮ ಜಯಂತಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತೊಟ್ಟಿಲ ಸೇವೆಯೂ ಆಪ್ತವಾಗಿ ನಡೆಯುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಗರ್ಭಗುಡಿಯ ಹಿಂಭಾಗದಲ್ಲಿ ತಾಯಿತ, ದಾರ ಕಟ್ಟಿ ಹೋಗುವುದು ವಿಶೇಷ.
ಪ್ರತಿ ವಾರವೂ ಗುಡಿಗೆ ತಪ್ಪದೇ ಹೋಗುತ್ತಿರುವೆ. ಮನಸ್ಸಿಗೆ ಬೇಸರವಾದಾಗ, ಜೀವನವೇ ಬೇಡ ಎನಿಸಿದಾಗ, ಅತೀ ಖುಷಿಯಾದಾಗ, ಗೆಳೆಯರೊಂದಿಗೆ ಸೇರಿದಾಗ ಹೀಗೇ ಬದುಕಿನ ಅನೇಕ ಸಂದರ್ಭಗಳಲ್ಲಿ ನಾನು ಹೋಗುವುದೇ ನುಗ್ಗಿಕೇರಿ ಹನುಮಂತನ ಗುಡಿಗೆ ಎನ್ನುತ್ತಾರೆ ಭಕ್ತರಾದ ಜಿತೇಂದ್ರ ಗುಡಿ.
ಬದುಕಿನ ಎಲ್ಲ ಸಂದರ್ಭಗಳಲ್ಲೂ ಭರವಸೆ, ಆತ್ಮವಿಶ್ವಾಸದ ದೀವಿಗೆಯನ್ನು ಜಾಗೃತಗೊಳಿಸುವ, ಮನಸ್ಸಿಗೆ ನೆಮ್ಮದಿ, ಧನಾತ್ಮಕ ಹಾಗೂ ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಅಪರೂಪದ ಗುಡಿ ಇದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.