ಹುಬ್ಬಳ್ಳಿ: ವಿವಿಧ ಪಕ್ಷ, ಜಾತಿ, ಧರ್ಮದವರು ಇಲ್ಲಿ ಸೇರಿದ್ದಾರೆ. ಎಲ್ಲರನ್ನೂ ಒಂದುಗೂಡಿಸುವ ತಾಕತ್ತು ಇರುವುದು ಹಲಗಿಗೆ ಮಾತ್ರ. ಆದ್ದರಿಂದ ಹಲಗಿ ಹಬ್ಬ ಒಗ್ಗಟ್ಟಿನ ಸಂಕೇತ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಹೋಳಿ ಹುಣ್ಣಿಮೆ ನಿಮಿತ್ತ ನಗರದ ಮೂರು ಸಾವಿರ ಮಠದ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಹುಬ್ಬಳ್ಳಿ ಹಲಗಿ ಹಬ್ಬ-2017 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾನಪದ ಸಂಸ್ಕೃತಿಯ ಉನ್ನತಿಗೆ ಈ ಹಲಗಿ ಹಬ್ಬ ಸಹಕಾರಿ. ಇದರಲ್ಲಿ ಉತ್ತರ ಕರ್ನಾಟಕದ ಅನೇಕ ಜಾನಪದ ತಂಡಗಳು ಭಾಗವಹಿಸಿದ್ದು ವಿಶೇಷ. ಪೆನ್ನು, ಫೈಲು ಹಿಡಿಯಬೇಕಾದ ಸಂದರ್ಭದಲ್ಲಿ ಗನ್, ರೈಫಲ್ಲು ಹಿಡಿಯುವುದು ಹೆಚ್ಚಾಗಿದೆ. ಇದು ಬದಲಾಗಬೇಕು, ನವ ಪೀಳಿಗೆಗೆ ನಮ್ಮ ಜಾನಪದ ಸಿರಿಯ ಜವಾಬಾರಿಯ ಅರಿವು ಮೂಡಿಸಬೇಕು ಎಂದು ಹಾವೇರಿ ಹುಕ್ಕೇರಿ ಮಠದ ಶ್ರೀಗಳು ಹೇಳಿದರು.
ಶ್ರೀಗಳಾದಿಯಾಗಿ ಅನೇಕ ಗಣ್ಯರು ಹಾಗೂ ಜೈ ಹನುಮಾನ್ ಜಗ್ಗಲಿಗೆ ತಂಡದ ಹನುಮಂತ ಎಂಬುವರು ಹಲಗಿ ಬಾರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಜಗ್ಗಲಿಗೆ, ಕರಡಿ ಮಜಲು, ಹಲಗಿ ಮೇಳ, ಡೊಳ್ಳು ಬಾರಿಸುವ ತಂಡ ಹೀಗೇ ವಿಭಿನ್ನ ಜಾನಪದ ಕಲಾ ಮೇಳಗಳು ಹಲಗಿ ಹಬ್ಬದ ಸಂಭ್ರಮ ಹೆಚ್ಚಿಸಿದ್ದವು.
ಗಂಗಾವತಿ, ಭೋಗೇನಾಗರಕೊಪ್ಪ, ಪಾಳೆ, ಸೂರಶೆಟ್ಟಿಕೊಪ್ಪ, ಗೋಪನಕೊಪ್ಪ, ಚನ್ನಪೇಟ, ಚೋಳಿನವರ ಓಣಿ ಮುಂತಾದೆಡೆಯ ಜಗ್ಗಲಿಗೆ ತಂಡಗಳು ರಂಗುರಂಗಿನ ಪೋಷಾಕು ತೊಟ್ಟು, ಜಗ್ಗಲಿಗೆ ಬಡಿಯುತ್ತಿದ್ದರೆ ಅದರ ನಾದಕ್ಕೆ ಹೆಜ್ಜೆ ಹಾಕದವರೇ ಇಲ್ಲ.
ವಿವಿಧ ಓಣಿಯಲ್ಲಿ ಸಾಗಿದ ರಂಗಿನ ಹಲಗಿ ಹಬ್ಬ 8 ಗಂಟೆ ವೇಳಗೆ ನಗರದ ಹಳೇಹುಬ್ಬಳ್ಳಿಯ ದುರ್ಗದಬೈಲ್ಲ್ಲಿ ಸಮಾಪನಗೊಂಡಿತು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಪ್ರದೀಪ್ ಶೆಟ್ಟರ್, ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಮಹೇಶ ಟೆಂಗಿನಕಾಯಿ, ಸದಾನಂದ ಡಂಗನವರ, ಮೇಯರ್ ಡಿ.ಕೆ.ಚವ್ಹಾಣ, ಉಪ ಮೇಯರ್ ಲಕ್ಷ್ಮೀಬಾಯಿ ಬಿಜವಾಡ, ಶಿವು ಮೆಣಸಿನಕಾಯಿ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.