‘ದಯವಿಟ್ಟು ಮೇಲೆ ಹತ್ತಿ ಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ”, ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ನನ್ನು ಎನ್.ಎಸ್.ಜಿ. ಅಧಿಕಾರಿಗಳು ನೆನೆಯುತ್ತಾರೆ.
ಈ ವೀರ ಜನಿಸಿದ್ದು 1977ರ ಮಾರ್ಚ್ 15 ರಂದು. ತಂದೆ ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ. ಬೆಂಗಳೂರಿನ ಯಲಹಂಕ ನಿವಾಸಿಯಾಗಿದ್ದರು.
ಉನ್ನಿಕೃಷ್ಣನ್ ಹಾಗೂ ಧನಲಕ್ಷೀ ಅವರ ಏಕಮಾತ್ರ ಪುತ್ರನೇ ಸಂದೀಪ್ ಉನ್ನಿಕೃಷ್ಣನ್. ಫ್ರಾಂಕ್ ಆಂತೋನಿ ಪಬ್ಲಿಕ್ ಸ್ಕೂಲ್ ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, 1995ರಲ್ಲಿ ಡಿಗ್ರಿ ಬಳಿಕ ನೇರವಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ! 18 ವರ್ಷ ಪ್ರಾಯದ ಸಂದೀಪ್ ಎಂಬ ವೀರನ ಪಯಣ ಪುಣೆಯಲ್ಲಿ ಎನ್.ಡಿ.ಎ. ಗೆ ಸೇರುವುದರೊಂದಿಗೆ ಆರಂಭ. 1999 ಜುಲೈ-12 ರಂದು ಲೆಫ್ಟಿನೆಂಟ್ ಸಂದೀಪ್ ಉನ್ನಿಕೃಷ್ಣನ್ ಆಗಿ 7ನೇ ಬೆಟಾಲಿಯನ್ ಬಿಹಾರ್ ರೆಜಿಮೆಂಟ್ಗೆ ಆಯ್ಕೆ. ಬಾಲ್ಯದಿಂದಲೇ ತನ್ನ ಕನಸಾಗಿದ್ದ ಸೈನ್ಯದ ಒಳಹೊಕ್ಕಿದ್ದ ಸಂದೀಪ್, 2007 ಜನವರಿಯಲ್ಲಿ ಎನ್.ಎಸ್.ಜಿ. (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್) ಪಡೆಗೆ ನಿಯೋಜಿತರಾದರು. ಅಲ್ಲಿ 51-SAG ತಂಡದ ಸದಸ್ಯರಾಗುತ್ತಾರೆ ಸಂದೀಪ್.
ಎನ್.ಎಸ್.ಜಿ. ಕಮಾಂಡೋದ ವಿಶೇಷ ತಂಡವೇ 51-SAG, ಉಗ್ರರ ದಾಳಿಯ ಪ್ರತಿದಾಳಿಗೆಂದೇ ತರಬೇತಿ ಪಡೆದ ನಿಪುಣ ಹುಲಿಗಳು! ಬೆಳಗಾವಿಯಲ್ಲಿ ನಡೆದ ಸೈನ್ಯದ ಅತ್ಯಂತ ಕ್ಲಿಷ್ಟಕರ ತರಬೇತಿಯಲ್ಲಿ (Ghatak Course) ಪಳಗಿದ ಪರಿಣತ ಕಮಾಂಡರ್ಗಳಲ್ಲಿ ಸಂದೀಪ್ ಮೊದಲಿಗನಾಗಿ “Instructor Grading” ಹುದ್ದೆಯನ್ನೂ ಪಡೆಯುತ್ತಾರೆ.
2008 ರ ನವೆಂಬರ್ 26 ರಂದು ಪಾಕಿಸ್ಥಾನದ 10 ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಮುಂಬೈನಲ್ಲಿ ನುಸುಳಿ 166 ಜನ ಅಮಾಯಕರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಪಾರು ಮಾಡಲು ಮುಂದಾಗಿದಾಗಿದ್ದ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಸಂದೀಪ್ ಹೋರಾಡುತ್ತಲೇ ಮಡಿದಿದ್ದರು.
ಸಂದೀಪ್ ಉನ್ನಿಕೃಷ್ಣನ್ ಅವರು 2008ರ ನವೆಂಬರ್ 27 ರಂದು 100 ವರ್ಷಗಳಷ್ಟು ಹಳೆಯ ತಾಜ್ಮಹಲ್ ಹೋಟೆಲ್ನ ಮೇಲ್ಮಹಡಿಯಲ್ಲಿ ಹೆಲಿಕ್ಯಾಪ್ಟರ್ ನಿಂದ ಇಳಿದು ನಿಂತಿದ್ದಾರೆ. ಹೋಟೆಲ್ನ ಒಳಗಡೆ ಹಳೆಯ ವೈರಿ ಪಾಕಿಸ್ಥಾನದ ಭಯೋತ್ಪಾದಕರು. ಹಿಂದೆ ಕಾರ್ಗಿಲ್ ಕಾಳಗದ ಸಮಯದಲ್ಲಿ, ಪಾಕಿಸ್ಥಾನದ ನಿರಂತರ ದಾಳಿಯ ನಡುವೆ ತಮ್ಮೊಂದಿಗಿದ್ದ 6 ಸೈನಿಕರನ್ನು ಪಾಕಿಸ್ಥಾನದ ಪಡೆಯಿಂದ ಕೇವಲ 200 ಮೀಟರ್ ದೂರದ ತನಕ ನುಗ್ಗಿಸಿ ವೈರಿಗಳನ್ನು ಗೆದ್ದಿರುತ್ತಾರೆ. ಅಷ್ಟು ಹತ್ತಿರ ಬರುತ್ತಿರುವುದನ್ನು ನೋಡಿಯೂ ಏನೂ ಮಾಡಲಿಕ್ಕಾಗದೇ ಪಾಕಿಸ್ಥಾನದವರು ಕಂಗಾಲಾಗಿ ಕಕ್ಕಾಬಿಕ್ಕಿಯಾಗಿ ಇವರ ರಣನೀತಿಯನ್ನು ತಿಳಿಯಲು ವಿಫಲರಾಗಿ ಸೋತು ಸತ್ತ ನೆನೆಪು ಬಂದಿತ್ತೇನೋ. ಅದೇ ರೀತಿಯಲ್ಲಿ ಇಲ್ಲಿ ಮತ್ತೆ ದಾಳಿ. 6 ಮಹಡಿ ಕೆಳಗಿಳಿಯುತ್ತಾರೆ. ತಮ್ಮೊಂದಿಗಿದ್ದ 10 ಕಮಾಂಡೋಗಳನ್ನೂ ಇಳಿಸುತ್ತಾರೆ. 3ನೇ ಮಹಡಿಯಲ್ಲಿ ಭಯೋತ್ಪಾಕರು ಇರುವ ಗುಮಾನಿ. ಭಯೋತ್ಪಾದಕರು 3ನೇ ಮಹಡಿಯ ಒಂದು ಕೋಣೆಯಲ್ಲಿ ಕೆಲವು ಹೆಂಗಸರನ್ನು ಒತ್ತೆಯಾಳಾಗಿಟ್ಟುಕೊಂಡು ಒಳಗಿಂದ ಬಾಗಿಲ ಚಿಲಕ ಹಾಕಿಕೊಂಡಿರುತ್ತಾರೆ. ಸಂದೀಪ್ ಅವರ ನೇತೃತ್ವದಲ್ಲಿ ಆ ಬಾಗಿಲನ್ನು ಮುರಿದು ಕಮಾಂಡೋಗಳು ಒಳನುಗ್ಗುತ್ತಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಕಮಾಂಡೋ ಸುನಿಲ್ ಯಾದವ್ ಅವರನ್ನು ಹಾಗೂ ಅಲ್ಲಿ ಬಂಧಿಯಾಗಿದ್ದವರನ್ನು ಹೊರಗೆ ಹೋಗುವಂತೆ ಮಾಡುತ್ತಾರೆ. ತಮ್ಮೊಡನೆ ಇದ್ದ ಕಮಾಂಡೋಗಳಿಗೆ ಒತ್ತೆಯಾಳುಗಳನ್ನೂ ಹಾಗೂ ಸುನಿಲ್ ಯಾದವ್ ಅವರನ್ನು ಬಿಡುಗಡೆ ಮಾಡುವ ಆಜ್ಞೆ ಕೊಡುತ್ತಾರೆ. ಅಷ್ಟರಲ್ಲಿ ಭಯೋತ್ಪಾದಕರು ಮುಂದಿನ ಮಹಡಿಗೆ ತಪ್ಪಿಸಿಕೊಳ್ಳುವುದನ್ನು ಗಮನಿಸುತ್ತಾರೆ. ಭಯೋತ್ಪಾದಕರ ದಾಳಿಯಿಂದ ತಮ್ಮವರನ್ನು ರಕ್ಷಿಸಲು ಸಂದೀಪ್ ತಾವೊಬ್ಬರೇ ಭಯೋತ್ಪಾದಕರನ್ನು ಹಿಂಬಾಲಿಸಿಕೊಂಡು ಅವರ ಹಿಂದೆ ಹೋಗುತ್ತಾರೆ. ಹೀಗೆ ಮಾಡುವಾಗ ಅವರು ತಮ್ಮ ವೈಯಕ್ತಿಕ ಸುರಕ್ಷತೆ ಮರೆತುಬಿಡುತ್ತಾರೆ. ನಿರಂತರವಾಗಿ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ಮಾಡುತ್ತಲೇ ಇರುತ್ತಾರೆ. 3ನೇ ಮಹಡಿಯಿಂದ 4ನೇ ಮಹಡಿಯತ್ತ ಹೋಗಿದ್ದ ಅವರನ್ನು 5ನೇ ಮಹಡಿಯ ತನಕ ಓಡಿಸುತ್ತಾರೆ. ಭಯಾನಕವಾದ ಗುಂಡಿನ ಸುರಿಮಳೆಯೇ ನಡೆಯುತ್ತದೆ. ಅಷ್ಟರಲ್ಲಿ ಒಬ್ಬ ಹೇಡಿ ಭಯೋತ್ಪಾದಕ, ಹಿಂದಿನಿಂದ ಸಂದೀಪ್ ಅವರ ಬೆನ್ನಿನ ಮೇಲೆ ಗುಂಡು ಹಾರಿಸುತ್ತಾನೆ. ತೀವ್ರವಾಗಿ ಗಾಯಗೊಂಡ ಸಂದೀಪ್, ಹಿಂತಿರುಗಿ ಅವನನ್ನು ಕೊಂದು ತಾವೂ ಅಸುನೀಗುತ್ತಾರೆ. ಆಗ ಅವರ ವಯಸ್ಸು ಕೇವಲ 31.
2009 ರ ಜನವರಿ 26ರಂದು ಮೇಜರ್ ಸಂದೀಪ್ ಉನ್ನಿಕೃಷ್ಣನ್ರಿಗೆ ‘ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ’, ನೀಡಿ ಗೌರವಿಸಲಾಯಿತು.
2008ರ ಮುಂಬಯಿ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ವೀರಮರಣವನ್ನಪ್ಪಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅಪ್ರತಿಮ ದೇಶಭಕ್ತ ಮಾತ್ರವಲ್ಲ ಕೊಡುಗೈ ದಾನಿಯಾಗಿದ್ದರು. ಸೇನೆಯಲ್ಲಿ 9 ವರ್ಷ ಉನ್ನತ ಹುದ್ದೆ ಅಲಂಕರಿಸಿದ್ದರೂ ಬಂದ ಸಂಬಳವನ್ನೆಲ್ಲ ದೀನ ದಲಿತರಿಗೆ ಹಂಚಿಬಿಡುತ್ತಿದ್ದ ಎಂದು ಸಂದೀಪ್ ಕುಟುಂಬದ ಮೂಲಗಳು ಹೇಳಿದೆ.
ಸಂದೀಪ್ ಅವರನ್ನು ಭಾರತ ಭೂಮಿಯ ಸೇವೆಗೆಂದೇ ಹೆತ್ತ ಉನ್ನಿಕೃಷ್ಣನ್ ಹಾಗೂ ಧನಲಕ್ಷ್ಮೀ ದಂಪತಿಗಳೇ ಧನ್ಯರು. ಅಂತಹ ವೀರ ಯೋಧನನ್ನು ನಾಡಿಗೆ ಕೊಟ್ಟ ಕೀರ್ತಿ ಕರುನಾಡಿನದ್ದು. ಅವರನ್ನು ನೆನಪಿಸಿಕೊಳ್ಳುವ ಹೊಣೆ ನಮ್ಮದು. ಇಂಥವರ ಕೀರ್ತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಹೇಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಇಂದು ಈ ವೀರ ಯೋಧನ ಜನ್ಮ ದಿನ. ಬನ್ನಿ ಅವರ ವೀರ ಗಾಥೆ ಕೇಳೋಣ. ಭಾರತಾಂಬೆಗೆ ತನ್ನ ಪ್ರಾಣವನ್ನೇ ನಿವೇದನೆ ಮಾಡಿದ ಆ ಅಪ್ರತಿಮ ವೀರನನ್ನು ಸ್ಮರಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.