ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ವಿರೋಧ ಪಕ್ಷಗಳ ಪಾಲಿಗೆ ದುಃಸ್ವಪ್ನವಾಗಿದ್ದರೆ, ಬಿಜೆಪಿ ಪಾಲಿಗೆ ಅವಿಸ್ಮರಣೀಯ ಹಾಗೂ ಅನಿರೀಕ್ಷಿತ. ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದ್ದಿತಾದರೂ ಈ ಪರಿಯ ಪ್ರಚಂಡ ಬಹುಮತ ದೊರಕಬಹುದೆಂದು ಅದು ನಿರೀಕ್ಷಿಸಿರಲಿಕ್ಕಿಲ್ಲ. 403 ವಿಧಾನಸಭಾ ಸ್ಥಾನಗಳ ಪೈಕಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಒಂದೇ ಪಕ್ಷ ಕೈವಶಮಾಡಿಕೊಳ್ಳುವುದೆಂದರೆ ಅದು ನಿಜಕ್ಕೂ ಅವಿಸ್ಮರಣೀಯವಲ್ಲದೆ ಮತ್ತೇನು? ಜಾತಿ, ಮತ, ಪಂಥ ಮುಂತಾದ ಲೆಕ್ಕಾಚಾರಗಳೇ ಪ್ರಾಮುಖ್ಯವಾಗಿರುವ ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷವೊಂದು ಇಂತಹದೊಂದು ಪ್ರಚಂಡ ಬಹುಮತ ಪಡೆದಿರುವುದು ಬಹುಶಃ ಇದೇ ಮೊದಲಬಾರಿಗೆ. 2012ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಬಿಜೆಪಿ, ಈಗ ವಿಧಾನಸಭಾ ಚುನಾವಣೆಯಲ್ಲೂ ಮತ್ತೆ ಅದನ್ನು ಸಾಬೀತುಪಡಿಸಿದೆ. ತನ್ಮೂಲಕ ಉ.ಪ್ರ. ಮತದಾರರ ವಿಶ್ವಾಸವನ್ನು ಹಿಡಿದಿಟ್ಟುಕೊಂಡಿದೆ.
ಹೊರನೋಟಕ್ಕೆ ಉತ್ತರಪ್ರದೇಶ ಮತ್ತು ಉತ್ತರಾಖಂಡದ ಫಲಿತಾಂಶಗಳು ಬಿಜೆಪಿ ಪಾಲಿಗೆ ಅವಿಸ್ಮರಣೀಯವೆನಿಸಿದರೂ ಅದೇನೂ ಸುಮ್ಮನೆ ಬಂದಿದ್ದಲ್ಲ ಎಂಬುದು ಕಳೆದ ಒಂದು ವರ್ಷದಿಂದ ಬಿಜೆಪಿ ಈ ಫಲಿತಾಂಶಕ್ಕಾಗಿ ಮಾಡಿದ ಪೂರ್ವಸಿದ್ಧತೆಯ ಅರಿವಿರುವವರಿಗೆ ಗೊತ್ತಾದೀತು. ಕಳೆದೊಂದು ವರ್ಷದಿಂದ ಆ ಎರಡು ರಾಜ್ಯಗಳಲ್ಲಿ ಬೂತ್ಮಟ್ಟದಲ್ಲಿ ಸದ್ದಿಲ್ಲದೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಚುನಾವಣಾ ಸಿದ್ಧತೆಯನ್ನು ಆರಂಭಿಸಿದ್ದರು. ಮನೆಮನೆಗಳನ್ನು ಸಂಪರ್ಕಿಸಿ ಬಿಜೆಪಿಯನ್ನು ಏಕೆ ಅಧಿಕಾರಕ್ಕೆ ತರಬೇಕು ಎಂಬುದನ್ನು ಮನವರಿಕೆ ಮಾಡಿದ್ದರು. ಹೀಗೆ ಬಿಜೆಪಿಯ ಕಾರ್ಯಕರ್ತರ ನಿರಂತರ ಪರಿಶ್ರಮ ಒಂದೆಡೆಯಾದರೆ, ಇನ್ನೊಂದೆಡೆ ಬಿಜೆಪಿಗೆ ವರದಾನವಾಗಿದ್ದು ಅಖಿಲೇಶ್ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿ, ನಿಷ್ಕ್ರಿಯ ಸರ್ಕಾರಿ ಯಂತ್ರ, ಸಮಾಜವಾದಿ ಪಕ್ಷದೊಳಗೆ ಭುಗಿಲೆದ್ದ ಅಪ್ಪ-ಮಗನ ಜಗಳ ಇತ್ಯಾದಿ ಅಪಸವ್ಯಗಳು. ಆ ರಾಜ್ಯದಲ್ಲಿ ಒಬ್ಬ ಯುವ ಮುಖ್ಯಮಂತ್ರಿ ಆಡಳಿತ ನಡೆಸುತ್ತಿದ್ದರೂ ಹಾಡಹಗಲೇ ದಲಿತರ ಮಹಿಳೆಯರ ಮೇಲೆ ಎಗ್ಗಿಲ್ಲದ ದೌರ್ಜನ್ಯ ನಡೆಯಿತು. ಶೌಚಕ್ಕೆಂದು ಹೊರಟ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು. ಕಾರಣವಿಲ್ಲದೆಯೇ ಹಿಂದುಗಳ ಮೇಲೆ ಹಲ್ಲೆ ನಡೆಯಿತು. ಕಾನೂನುಗಳು ಅಲ್ಲಿ ಮಕಾಡೆ ಮಲಗಿದ್ದವು. ಪೊಲೀಸರೇ ದೌರ್ಜನ್ಯವೆಸಗುವವರಿಗೆ, ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡಿದ ಪ್ರಸಂಗಗಳೂ ಜರುಗಿದ್ದವು. ಹೀಗೆ ಸರ್ಕಾರವಿದ್ದರೂ ಅರಾಜಕತೆ ತಾಂಡವವಾಡಿತ್ತು. ರಾಜ್ಯದ ಜನರು ಇದನ್ನೆಲ್ಲ ಮೌನವಾಗಿಯೇ ವೀಕ್ಷಿಸಿದ್ದರು. ತಕ್ಕ ಪಾಠಕಲಿಸಲು ಸೂಕ್ತಸಮಯಕ್ಕೆ ಕಾದಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಎಲ್ಲಾ ಅನ್ಯಾಯಗಳಿಗೆ ಓಟಿನ ಮೂಲಕ ತಕ್ಕ ಉತ್ತರನೀಡಿದರು. ಮಾಧ್ಯಮಗಳ ಯಾವ ಸಮೀಕ್ಷೆಗೂ ಬಿಜೆಪಿ ಇಷ್ಟೊಂದು ಪ್ರಚಂಡ ಬಹುಮತ ಗಳಿಸಬಹುದೆಂಬ ಅಂದಾಜಿರಲಿಲ್ಲ.
ದೇಶದ ರಾಜಕೀಯ ದೃಷ್ಟಿಯಿಂದ ಉತ್ತರಪ್ರದೇಶ ಅತ್ಯಂತ ಮಹತ್ವದ ರಾಜ್ಯ. ಆ ರಾಜ್ಯದ ಅಕಾರ ಹಿಡಿಯುವುದು ಪ್ರಮುಖಪಕ್ಷಗಳ ಹೆಗ್ಗುರಿ. ಬಿಜೆಪಿ ಅದನ್ನು ಸಾಧಿಸಿದೆ. ಅದೇನೂ ಸಾಮಾನ್ಯ ಸಾಧನೆಯಲ್ಲ. ಅದಕ್ಕಾಗಿ ಪ್ರಧಾನಿ ಮೋದಿ ಸ್ವತಃ ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲಿರುಳೆನ್ನದೆ ಊರೂರು ತಿರುಗಿದರು. ನೂರಾರು ರ್ಯಾಲಿಗಳು, ರೋಡ್ಶೋಗಳಲ್ಲಿ ಮಾತನಾಡಿದರು. ಅದೇ ಕೆಲಸವನ್ನು ಮುಖ್ಯಮಂತ್ರಿ ಅಖಿಲೇಶ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಮಾಡಿದ್ದರು. ಅವರ ರೋಡ್ಶೋಗಳಿಗೂ ಜನರು ಸೇರುತ್ತಿದ್ದರು. ಆದರೆ ಅಲ್ಲಿ ಸೇರಿದ ಜನರು ಅಂತಿಮವಾಗಿ ಮತಹಾಕಿದ್ದು ಯಾರಿಗೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಚುನಾವಣೆಗೆ ಮುನ್ನ ಕೆಲವು ಮಾಧ್ಯಮಗಳು ಅಖಿಲೇಶ್ ಮತ್ತು ರಾಹುಲ್ ಜೋಡಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವ್ಯಾಖ್ಯಾನಿಸಿದ್ದರೂ ಆಗಿದ್ದು ಮಾತ್ರ ಬೇರೆಯೇ. ಹಾಗೆ ನೋಡಿದರೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅದೇ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದವರು. ಅವರಿಬ್ಬರ ಪ್ರಭಾವ ಮತದಾರರ ಮೇಲೆ ಆಗಬೇಕಿತ್ತು. ಆದರೆ ಮತದಾರರ ಮೇಲೆ ಪ್ರಭಾವ ಬೀರಿದ್ದು ಮಾತ್ರ ಪ್ರಧಾನಿ ಮೋದಿ ಮತ್ತು ಅಮಿತ್ ಷಾ. ಮೋದಿ ಕೂಡ ಲೋಕಸಭೆಗೆ ಆಯ್ಕೆಯಾಗಿದ್ದು ವಾರಾಣಸಿ ಕ್ಷೇತ್ರದಿಂದ. ಆದರೆ ಅವರ ಪ್ರಭಾವ ವಾರಾಣಸಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿರಲಿಲ್ಲ. ಇಡೀ ಉತ್ತರಪ್ರದೇಶ, ಅಷ್ಟೇಕೆ ಉತ್ತರಾಖಂಡಕ್ಕೂ ವ್ಯಾಪಿಸಿತ್ತು ಎನ್ನುವುದು ಈಗಿನ ಪ್ರಚಂಡ ಬಹುಮತದಿಂದ ವೇದ್ಯ.
2012 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 48 ಸ್ಥಾನಗಳು. ಅದಕ್ಕೆ ಹೋಲಿಸಿದರೆ ಈಗಿನ ಗೆಲುವು ಅತ್ಯದ್ಭುತ. ಬಹುಶಃ ಬಿಜೆಪಿಯೇ ಇಷ್ಟು ದೊಡ್ಡ ಗೆಲುವನ್ನು ನಿರೀಕ್ಷಿಸಿರಲಿಕ್ಕಿಲ್ಲ. ಈ ನಡುವೆ ಕಳೆದ ನವೆಂಬರ್ನಲ್ಲಿ ಪ್ರಧಾನಿ ಮೋದಿ 500 ಹಾಗೂ 1000 ನೋಟುಗಳನ್ನು ಅಮಾನ್ಯಗೊಳಿಸಿ ಹೊಸ ನೋಟನ್ನು ಚಲಾವಣೆಗೆ ತರುವ ಅತಿದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಅದರಿಂದಾಗಿ ಸಾಮಾನ್ಯ ಜನರಿಗೆ ಒಂದಿಷ್ಟು ತೊಂದರೆಯೂ ಆಗಿತ್ತು. ಕಪ್ಪುಹಣ, ಭ್ರಷ್ಟಾಚಾರ ನಿಗ್ರಹ ದೃಷ್ಟಿಯಿಂದ ಮೋದಿ ಇಂತಹದೊಂದು ಕಠಿಣಕ್ರಮಕ್ಕೆ ಮುಂದಾಗಿದ್ದುದು ನಿಜ. ಉ.ಪ್ರ. ಚುನಾವಣೆಯಲ್ಲಿ ಮೋದಿಯವರ ಈ ಕ್ರಮ ಅವರಿಗೇ ತಿರುಗುಬಾಣವಾದೀತೆಂದು ಕೆಲವು ಚುನಾವಣಾ ವಿಶ್ಲೇಷಕರು ಭವಿಷ್ಯ ಹೇಳಿದ್ದೂ ಉಂಟು. ಆದರೆ ಹಾಗಾಗಲಿಲ್ಲ. ಮೋದಿ ಕೈಗೊಂಡ ಈ ಕಠಿಣಕ್ರಮಕ್ಕೆ, ಜನರು ಬೆಂಬಲಿಸಿರುವುದು ಉ.ಪ್ರ. ಫಲಿತಾಂಶದಿಂದ ಸ್ಪಷ್ಟ.
ಉತ್ತರಪ್ರದೇಶದ್ದು 7 ಹಂತಗಳಲ್ಲಿ ನಡೆದ ಒಂದು ಮೆಗಾ ಚುನಾವಣೆ. 2019 ರ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದೇ ಹೇಳಲಾಗಿತ್ತು. ಪ್ರಧಾನಿ ಮೋದಿಯವರ ಪಾಲಿಗಂತೂ ಉ.ಪ್ರ. ಚುನಾವಣೆ ಒಂದು ಅಗ್ನಿಪರೀಕ್ಷೆಯೇ ಆಗಿತ್ತು. ಬಿಹಾರದಲ್ಲಾದಂತೆ ಉ.ಪ್ರ. ಫಲಿತಾಂಶ ಬಿಜೆಪಿಗೆ ವಿರುದ್ಧವಾಗಿದ್ದರೆ ಮೋದಿಯವರ ಕಷ್ಟದ ದಿನಗಳು ಆರಂಭವಾಗುತ್ತಿದ್ದವು. ವಿರೋಧಪಕ್ಷಗಳಿಗೆ ಅದೊಂದು ಪ್ರಬಲ ಅಸ್ತ್ರವೇ ಆಗುತ್ತಿತ್ತು. ಮೋದಿಯವರಿಗೂ ಇದು ಗೊತ್ತಿರದ ಸಂಗತಿಯೇನಾಗಿರಲಿಲ್ಲ. ಅವರಿಗೆ ಮಾತ್ರ ಉ.ಪ್ರ. ಚುನಾವಣೆಯನ್ನು ಭರ್ಜರಿಯಾಗಿ ಗೆಲ್ಲುವ ವಿಶ್ವಾಸ ಇತ್ತೆಂದು ಕಾಣುತ್ತದೆ. ಮೋದಿ ಚುನಾವಣಾ ಪ್ರಚಾರಕ್ಕಾಗಿ ಸಣ್ಣಸಣ್ಣ ಊರುಗಳಿಗೂ ಅಡ್ಡಾಡುತ್ತಿದ್ದಾಗ ಸಮಾಜವಾದಿಪಕ್ಷ, ಬಹುಜನ ಸಮಾಜವಾದಿಪಕ್ಷ, ಕಾಂಗ್ರೆಸ್ ಮತ್ತಿತರ ಮುಖಂಡರಿಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು. ಪ್ರಧಾನಿಯಾದವರು ತಮ್ಮ ಕೆಲಸಬಿಟ್ಟು ಹೀಗೆ ಚುನಾವಣಾ ಪ್ರಚಾರಕ್ಕೆ ಇಳಿಯುವುದು ಎಷ್ಟು ಸಮಂಜಸ ಎಂದು ಟೀಕಿಸಿದ್ದರು.
ಉ.ಪ್ರ. ಫಲಿತಾಂಶದ ಇನ್ನೊಂದು ವಿಶೇಷತೆಯನ್ನು ಎಲ್ಲರೂ ಗಮನಿಸಬೇಕು. ಬಿಜೆಪಿ ಉ.ಪ್ರ.ದಂತಹ ಅತಿದೊಡ್ಡ ರಾಜ್ಯದ ಚುನಾವಣಾ ಅಖಾಡಕ್ಕೆ ಇಳಿಯುವ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಿರಲಿಲ್ಲ. ಚುನಾವಣೆ ನಂತರವೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೊಂಡಿತ್ತು. ಹಾಗಾಗಿ ಯಾರೋ ಒಬ್ಬ ವ್ಯಕ್ತಿ, ಯಾವುದೋ ಜಾತಿಗೆ ಸೇರಿದ ಒಬ್ಬ ಮುಖ್ಯಮಂತ್ರಿಯಾಗಬಹುದೆಂಬ ಹಿನ್ನೆಲೆಯಲ್ಲಿ ಜನರು ಮತದಾನ ಮಾಡಲಿಲ್ಲ. ಜನರು ಮತದಾನ ಮಾಡಿದ್ದು – ತಮಗೆ ಬೇಕಾದ ಒಂದಿಷ್ಟು ವ್ಯಕ್ತಿಗಳಿಗಾಗಿ ಅಲ್ಲ , ಬದಲಿಗೆ ರಾಜ್ಯದಲ್ಲಿ ಉತ್ತಮ ಆಡಳಿತ ಸಿಗಬೇಕು, ಅನ್ಯಾಯಗಳಿಗೆ ಕೊನೆಹಾಡಬೇಕು, ಬಡವರು, ದಲಿತರ ಬದುಕು ಹಸನಾಗಬೇಕು, ಕಾನೂನು-ಸುವ್ಯವಸ್ಥೆಗೊಂದು ಅರ್ಥ ಬರಬೇಕು ಎಂಬುದಕ್ಕಾಗಿ. ಮತದಾರರಿಗೆ ಹಾಗಾಗಿ ವ್ಯಕ್ತಿ ಮುಖ್ಯವಾಗಲೇ ಇಲ್ಲ. ಬಿಜೆಪಿಯನ್ನು ಪ್ರತಿನಿಧಿಸುವ, ಕೇಂದ್ರದಲ್ಲಿ ದಕ್ಷ ಅಧಿಕಾರ ನಿರ್ವಹಿಸುತ್ತಿರುವ ನರೇಂದ್ರ ಮೋದಿಯೇ ಅವರಿಗೆ ಹೆಚ್ಚು ಪ್ರಿಯರಾದರು. ಮೋದಿ ಪ್ರತಿನಿಧಿಸುವ ಬಿಜೆಪಿಗೆ ಎಲ್ಲರೂ ಸಾರಾಸಗಟಾಗಿ ಮತದಾನ ಮಾಡಿದ್ದು ಇದೇ ಕಾರಣಕ್ಕಾಗಿ ಇರಬಹುದು.
ಉತ್ತರಪ್ರದೇಶದ ಈ ಪ್ರಚಂಡ ಗೆಲುವು ರಾಜ್ಯಸಭೆಯಲ್ಲಿ ಬಿಜೆಪಿಯ ಬಲವರ್ಧನೆಗೆ ನಿಶ್ಚಿತವಾಗಿ ನೆರವಾಗಲಿದೆ. ಅನೇಕ ಕಾಯಿದೆಗಳನ್ನು ಜಾರಿಗೆ ತರಲು ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಸಾಕಾಗುತ್ತಿರಲಿಲ್ಲ. ಈಗ ಆ ಸಮಸ್ಯೆ ಪರಿಹಾರವಾಗಲಿದೆ. ಇನ್ನಷ್ಟು ಆರ್ಥಿಕ ಸುಧಾರಣೆಗಳನ್ನು ಈಗ ಕೈಗೊಳ್ಳುವುದಕ್ಕೂ ಈ ಫಲಿತಾಂಶ ನೆರವಾಗಲಿದೆ.
ಒಮ್ಮೆ ಅಧಿಕಾರದ ರುಚಿ ಸವಿದಿದ್ದ ಬಿಎಸ್ಪಿಯ ಮಾಯಾವತಿ ಪಾಲಿಗೆ ಈ ಚುನಾವಣಾ ಫಲಿತಾಂಶ ಅತ್ಯಂತ ಘೋರವಾಗಿರುವುದು ಸಹಜ. ಇಷ್ಟೊಂದು ಹೀನಾಯವಾಗಿ ತನ್ನ ಪಕ್ಷ ಸೋಲಬಹುದೆಂದು ಆಕೆ ನಿರೀಕ್ಷಿಸಿರಲಿಕ್ಕಿಲ್ಲ. ಹಾಗೆಂದೇ ಈಗ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಇವಿಎಂ ಓಟಿಂಗ್ ಯಂತ್ರಗಳು ಸರಿಯಾಗಿರಲಿಲ್ಲ. ಬಿಎಸ್ಪಿಯ ಗುಂಡಿ ಒತ್ತಿದರೆ ಅದು ಬಿಜೆಪಿಗೆ ಮತವಾಗಿ ಪರಿವರ್ತಿತವಾಗುತ್ತಿತ್ತು. ಹಾಗಾಗಿ ಈಗ ಈ ಫಲಿತಾಂಶವನ್ನು ರದ್ದುಗೊಳಿಸಿ, ಹಿಂದಿನಂತೆ ಮತಪತ್ರಗಳ ಮೂಲಕ ಮರುಚುನಾವಣೆ ನಡೆಸಬೇಕೆಂದು ಅಲವತ್ತುಕೊಂಡಿದ್ದಾರೆ. ಪ್ರಧಾನಿ ಮೋದಿಯನ್ನು ಹೀನಾಯವಾಗಿ ನಿಂದಿಸಿದ್ದಾರೆ. ಮಾಯಾವತಿಯ ಈ ಟೀಕೆ ನಿಜವೇ ಆಗಿದ್ದರೆ ಪಂಜಾಬಿನಲ್ಲೇಕೆ ಬಿಜೆಪಿ ಸೋಲಬೇಕಾಗಿತ್ತು? ಗೋವಾದಲ್ಲೇಕೆ ಹಿಂದಿನಷ್ಟು ಸ್ಥಾನಗಳನ್ನು ಪಡೆಯಲಾಗಲಿಲ್ಲ ? ಅಲ್ಲೆಲ್ಲ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವಂತೆ ಓಟಿಂಗ್ ಮೆಷಿನ್ಗಳನ್ನು ಅಳವಡಿಸಬಹುದಿತ್ತಲ್ಲವೆ? ಮಾಯಾವತಿಯಂತಹ ಜವಾಬ್ದಾರಿಯುತ ವ್ಯಕ್ತಿಗೆ ಇಂತಹ ಹೀನ ಟೀಕೆ ಶೋಭೆ ತರುವಂತಹುದಲ್ಲ.
ಕಾಂಗ್ರೆಸ್ ಪಾಲಿಗಂತೂ ಪಂಚರಾಜ್ಯಗಳ ಈ ಫಲಿತಾಂಶ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಪಂಜಾಬಿನ ಗೆಲುವು ಮಾತ್ರ ಸದ್ಯಕ್ಕೆ ಅದರ ಪಾಲಿಗೆ ಸಮಾಧಾನ ತರುವ ಅಂಶ. ಪಂಜಾಬಿನಲ್ಲಿ ಅಕಾಲಿದಳದ ದುರಾಡಳಿತದಿಂದಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರುವಂತಾಯಿತು. ಅಕಾಲಿದಳಕ್ಕೆ ಇದೊಂದು ಸರಿಯಾದ ಪಾಠ.
ಈ ಬಾರಿಯ ಉ.ಪ್ರ. ಚುನಾವಣೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಷ್ಟಾಗಿ ಪ್ರಚಾರದ ಪ್ರಮುಖ ಅಂಶ ಆಗಿರಲಿಲ್ಲ. ಆದರೆ ಹಿಂದೆಲ್ಲ ರಾಮಮಂದಿರ ನಿರ್ಮಾಣ ಏಕೆ ತಡವಾಗುತ್ತಿದೆ ಎಂಬ ಕಾರ್ಯಕರ್ತರ ಪ್ರಶ್ನೆಗೆ ಬಿಜೆಪಿ ಪ್ರಮುಖರು, ಕೇಂದ್ರ ಹಾಗೂ ರಾಜ್ಯಗಳಲ್ಲಿ ನಮ್ಮದೇ ಸರ್ಕಾರ ಬಂದಾಗ ಈ ಸಮಸ್ಯೆಯ ಪರಿಹಾರ ಸುಲಭಸಾಧ್ಯ ಎಂಬ ಉತ್ತರ ನೀಡಿದ್ದುಂಟು. ಈಗ ಕೇಂದ್ರದಲ್ಲಂತೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಇದೆ. ಉ.ಪ್ರ.ದಲ್ಲೂ ಈಗ ಪ್ರಚಂಡ ಬಹುಮತದ ಬಿಜೆಪಿ ಸರ್ಕಾರವೇ ಅಧಿಕಾರಕ್ಕೇರಿದೆ. ಬಿಜೆಪಿ ಪ್ರಮುಖರ ಹಿಂದಿನ ಹೇಳಿಕೆಯಂತೆ, ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯಾವ ಅಡ್ಡಿ ಆತಂಕಗಳೂ ಇರಲಾರದು. ಅಧಿಕಾರಕ್ಕೇರಿದ ಎಷ್ಟು ದಿನಗಳಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರ ಸರ್ಕಾರ ತೆಗೆದುಕೊಳ್ಳುತ್ತದೆ ಎಂಬುದಷ್ಟೇ ಈಗ ಉಳಿದಿರುವ ಕುತೂಹಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.