ನವಲಗುಂದ: ಕಾಮಣ್ಣನನ್ನು ಕೂಡಿಸಿ, ಹೋಳಿ ಆಡಿ ಸಂಭ್ರಮಿಸುವುದು ಸಹಜ. ಆದರೆ ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮಾತ್ರ ಕಾಮಣ್ಣ ವಿಶಿಷ್ಟ ಖ್ಯಾತಿ ಹೊಂದಿದ್ದಾನೆ. ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಬಲವಾದ ನಂಬಿಕೆ.
ಪಟ್ಟಣದ ಚಾವಡಿ, ಸಿದ್ಧಾಪೂರ ಓಣಿ, ಮಾದರ ಓಣಿ, ತೆಗ್ಗಿನಕೇರಿ, ಹಳ್ಳದ ಒಣಿ, ಗೌಡರ ಓಣಿ,ಮಚ್ಚಿಗರ ಓಣಿ, ಅಕ್ಕಿಯವರ ಓಣಿ, ರಾಮಲಿಂಗ ಓಣಿ ಮುಂತಾದ ಕಡೆಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಇವುಗಳಲ್ಲಿ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣ ವಿಶೇಷ.
ಸಂತಾನ ಭಾಗ್ಯಕ್ಕಾಗಿ ಅನೇಕರು ಬೆಳ್ಳಿಯ ತೊಟ್ಟಿಲನ್ನು, ಮದುವೆ ಆಗಲು ಬೆಳ್ಳಿಯ ಬಾಸಿಂಗವನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ಈ ಹಿಂದೆ ನಾರು ಬೇನೆ ವ್ಯಾಪಕವಾಗಿದ್ದಾಗ ಅದರ ನಿವಾರಣೆಗಾಗಿ ಬೆಳ್ಳಿಯ ನಾರನ್ನು ನೀಡಿದ್ದುಂಟು. ಅನೇಕರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಈಗಲೂ ಹರಕೆ ಹೊರುವುದು ಸಾಮಾನ್ಯ.
ತಯಾರಿಸಿದ ಬಗೆ:
ಕಾಮಣ್ಣನಿಗೆ ಜೀವಕಳೆ ತುಂಬಬೇಕೆಂದು ಒಬ್ಬ ಶಿಲ್ಪಿ ಒಂದೊಂದು ಬಿಂದು ನಕ್ಷತ್ರದಲ್ಲಿ ಒಂದೊಂದು ಬಗೆಯ ಕಟ್ಟಿಗೆಯಿಂದ ನಿರ್ಮಿಸತೊಡಗಿದ. ಕೊನೆಗೆ ಮೂರ್ತಿಯ ತಲೆಯ ಹಿಂಭಾಗದಲ್ಲಿ ಎರಡು ರಂಧ್ರಗಳು ಉಳಿದವು. ಅವನ್ನು ವಿಶಿಷ್ಟ ಕಟ್ಟಿಗೆಯಿಂದ ಪೂರ್ಣಗೊಳಿಸುವುದರೊಳಗೆ ಶಿಲ್ಪಿ ಕಾಲವಾದನು. ಈ ರಂಧ್ರ ಹಾಗೆ ಉಳಿದವು. ಈ ರಂಧ್ರಗಳನ್ನು ಮುಚ್ಚಲು ಯಾವ ನಕ್ಷತ್ರ ಮತ್ತು ಯಾವ ಕಟ್ಟಿಗೆ ಬೇಕೆಂಬುದು ನಿಗೂಢವಾಗಿಯೇ ಉಳಿಯಿತು. ಆದರೂ ಈ ಕಾಮಣ್ಣನ ಮುಖಚರ್ಯೆ ಅತ್ಯಂತ ಸುಂದರವಾಗಿದೆ. ಗಂಭೀರ ಮೀಸೆಯುಳ್ಳ ಹಸನ್ಮುಖದಿಂದ ಅತ್ಯಂತ ಸ್ಪೂರದ್ರೂಪಿಯಾಗಿ ಜೀವಂತ ಎದ್ದು ಬರುವಂತೆ ಗೋಚರಿಸುತ್ತದೆ. ಚೆಲುವ ಗಂಡು ಮಕ್ಕಳಿಗೆ ರಾಮಲಿಂಗ ಕಾಮಣ್ಣನಂತೆ ಚೆಲುವ ಎಂದು ಹೇಳುವ ವಾಡಿಕೆಯಿದೆ.
ಪ್ರತಿಷ್ಠಾಪನೆ:
ಶತಮಾನಗಳ ಇತಿಹಾಸ ಹೊಂದಿದ ಕಾಮಣ್ಣನನ್ನು ರಾಮಲಿಂಗ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ಹೋಳಿ ಹುಣ್ಣಿಮೆಗೂ ಮುನ್ನ ಬರುವ ಏಕಾದಶಿ ರಾತ್ರಿ, ನಿಂತ ಭಂಗಿಯಲ್ಲಿರುವುದನ್ನು ಪ್ರತಿಷ್ಠಾಪಿಸುತ್ತಾರೆ. ದ್ವಾದಶಿಯಂದು ಬೆಳಗ್ಗೆಯಿಂದ ದರ್ಶನಕ್ಕೆ ಕಾಮಣ್ಣ ಲಭ್ಯ.
ಹುಣ್ಣೆಮೆ ದಿನ ಲಕ್ಷಾಂತರ ಭಕ್ತರು ಕಾಮಣ್ಣನ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ. ಭಕ್ತರು ತೆಂಗಿನ ಕಾಯಿಯೊಂದಿಗೆ ಬಾಸಿಂಗ ಅರ್ಪಿಸಿ ಧನ್ಯರಾಗುತ್ತಾರೆ. ರಾಜ್ಯದ ನಾನಾ ಭಾಗದಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹುಣ್ಣಿಮೆ ಮರುದಿನ ಬಣ್ಣದ ಓಕುಳಿ ಆಡುತ್ತಾರೆ. ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಜೆ ನಡೆಯುತ್ತದೆ. ಮರುಹುಟ್ಟು:
ಯುಗಾದಿಯ ಪ್ರತಿಪದೆಯಂದು ರಾಮಲಿಂಗ ಕಾಮಣ್ಣ ಮರುಹುಟ್ಟು ಪಡೆಯುತ್ತಾನೆ ಎಂಬ ಪ್ರತೀತಿ. ಆದ್ದರಿಂದ ಕುಳಿತ ಭಂಗಿಯಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸುತ್ತಾರೆ. ಎಲ್ಲೆಡೆ ಕಾಮಣ್ಣ ಬಣ್ಣದೋಕುಳಿ, ಸಂಭ್ರಮದ ಸಂಕೇತವಾಗಿದ್ದರೆ, ನವಲಗುಂದದಲ್ಲಿ ಬೇಡಿದ ವರ ನೀಡುವ ಕಾಮಧೇನುವಾಗಿ ಎಲ್ಲರ ಗಮನ ಸೆಳೆದಿದ್ದಾನೆ.
– ಸಿದ್ದು ಬಸಾಪುರ, ನವಲಗುಂದ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.