ಧಾರವಾಡ : ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆಯಬೇಕಿದೆ. ಆ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಲು ಮುಂದಾಗಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಸಾಧನಾ ರಾಷ್ಟ್ರೀಯ ಮಹಿಳಾ ಚಿಂತನಾ ವೇದಿಕೆ, ವೈಶುದೀಪ ಫೌಂಡೇಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆರಾಧನಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಉತ್ತರಕನ್ನಡ ಇವರ ಸಹಯೋಗದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಧನಾ ಸಂಸ್ಥೆಯ ಕಾರ್ಯ ಪ್ರತಿಯೊಬ್ಬರು ಮೆಚ್ಚುವಂತಹದ್ದು, ಅದು ಇತರರಿಗೆ ಮಾದರಿಯಾಗಿದ್ದು, ನೊಂದ ಮಹಿಳೆಯರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದರು.
ಮಹಿಳಾ ದೌರ್ಜನ್ಯ ತಡೆಯುವಲ್ಲಿ ಸಮಾಜದ ಪಾತ್ರದ ಕುರಿತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾರದಾ ಕೋಲಕಾರ ಉಪನ್ಯಾಸ ನೀಡಿ, ಮಹಿಳೆ ತನಗೆ ಕೊಟ್ಟ ಕಾರ್ಯಗಳನ್ನು ಸವಾಲಾಗಿ ತೆಗೆದುಕೊಂಡು ಅದನ್ನು ನಿರ್ವಹಿಸಬೇಕು. ನಾವು ಮಾಡುವ ಕಾರ್ಯದಲ್ಲಿ ನಮಗೆ ವಿಶ್ವಾಸವಿರಬೇಕು ಎಂದರು.
ವೈಶುದೀಪ ಫೌಂಡೇಶನ ಕಾರ್ಯದರ್ಶಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಸಮಾಜದ ಉನ್ನತಿಗೆ ಮಹಿಳೆ ಎನು ಕೊಡುಗೆ ಕೊಟ್ಟರೂ ಸಹ ಅದು ಪ್ರಚಾರಕ್ಕೆ ಬರುತ್ತಿಲ್ಲ. ಲಿಂಗ ತಾರತಮ್ಯ ಇರುವರೆಗೆ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈದರೂ ಅದನ್ನು ಗುರುತಿಸಲು ಪುರುಷ ಪ್ರಧಾನ ಸಮಾಜಕ್ಕೆ ಕಷ್ಟವೆನಿಸುತ್ತದೆ. ಇದನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಅದನ್ನು ತೊಡೆದು ಹಾಕಲು ಪಣ ತೊಡಬೇಕು ಎಂದರು.
ಸಾಧಕರಿಗೆ ಪುರಸ್ಕಾರ
ಅಂಕೋಲಾದ ಸತೀಶ ನಾಯಕ ಅವರಿಗೆ ಸಾಧನಾ ರಾಷ್ಟ್ರೀಯ ನೆಲ್ಸನ್ ಮಂಡೇಲಾ ಸಮಾಜ ಸೇವಾ ಪುರಸ್ಕಾರ, ರಾಜ್ಯೋತ್ಸವ ಪುರಸ್ಕೃತ ಜಾನಪದ ಕಲಾವಿದೆ ಪಾರ್ವತೆವ್ವ ಹೊಂಗಲ್ ಅವರಿಗೆ ಕಲಾವಿದ ದಿ. ನಟರಾಜ ಏಣಗಿ ಸ್ಮರಣಾರ್ಥ ಸಾಧನಾ ರಾಷ್ಟ್ರೀಯ ಜಾನಪದ ಪುರಸ್ಕಾರ, ದಿ. ಜೋಸೆಫಿನ ಎಸ್. ಝೇವಿಯರ್ ಇವರ ಸ್ಮರಣಾರ್ಥ ಸಾರಾ ಅಬ್ರಹಾಂ ಗೌರವ ಪುರಸ್ಕಾರವನ್ನು ಕಲಘಟಗಿಯ ಲೀನಾ ದಂಡಿನ ಹಾಗೂ ಚೌರಪ್ಪ ದಂಡಿನ ದಂಪತಿಗಳಿಗೆ ಸಾಧನಾ ರಾಷ್ಟೀಯ ಪುರಸ್ಕಾರ ಹಾಗೂ ಡಿ. ಸಿ. ಪಾವಟೆ ಪುರಸ್ಕಾರ ಪಡೆದ ಕೆ.ಸಿ.ಡಿಯ ಮೊದಲ ಯುವತಿ ಕು. ನಿರ್ಮಲಾ ಬಾಳಿ ಅವರಿಗೆ ಸಾಧನಾ ರಾಷ್ಟೀಯ ಯುವ ಸಾಧಕಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶೈಲಾ ಕಾಮರೆಡ್ಡಿ, ಮುಂಡಗೋಡದ ಆರಾಧನಾ ಸಂಸ್ಥೆ ಅಧ್ಯಕ್ಷೆ ವನಜಾಕ್ಷಿ ಹುಲಿಯವರ, ಪತ್ರಕರ್ತ ನಾಗರಾಜ ಕಿರಣಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಧನಾ ಸಂಸ್ಥೆಯ ಸಂಸ್ಥಾಪಕ ಎಲ್. ಟಿ. ಪಾಟೀಲ, ಸಾಹಿತಿ ಮೋಹನ ನಾಗಮ್ಮನವರ, ಧಾರವಾಡ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಸನ್ಮಾನಿತರ ಪರವಾಗಿ ಸತೀಶ ನಾಯಕ ಮಾತನಾಡಿದರು.
ಸಾಧನಾ ಸಂಸ್ಥೆಯ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಇಸಬೆಲ್ಲಾ ರಾಷ್ಟೀಯ ಮಹಿಳಾ ಚಿಂತನ ವೇದಿಕೆ ಸಂಸ್ಥಾಪಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.