ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಈಗ ಸಾಕಷ್ಟು ಸವಕಲಾಗಿ ಹೋಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಮಾತು ಕೂಡ ಅಷ್ಟೇ ಕ್ಲೀಷೆಯಾಗಿದೆ. ಈ ಗಾದೆಯ ಜಾಗದಲ್ಲಿ ಹೊಸ ಗಾದೆ ಸೃಷ್ಟಿಸಬೇಕಾಗಿದೆ. ಉಪ್ಪು ತಿಂದವರು ನೀರು ಕುಡಿಯಬೇಕಿಲ್ಲ, ಹಾಲನ್ನೋ ಅಥವಾ ಆಲ್ಕೋಹಾಲನ್ನೋ ಕುಡಿಯಬಹುದು. ಅದೇರೀತಿ ತಪ್ಪು ಮಾಡಿದರೆ ಶಿಕ್ಷೆಯಿಂದ ನುಣುಚಿಕೊಳ್ಳಲೂಬಹುದು!
ಬಾಲಿವುಡ್ ನಟ ಸಲ್ಮಾನ್ಖಾನ್ ವಿಷಯದಲ್ಲಿ ಇಂತಹ ಅಭಿಪ್ರಾಯ ವ್ಯಕ್ತವಾಗಿದ್ದರೆ ಅದು ಉತ್ಪ್ರೇಕ್ಷೆಯಲ್ಲ. 13 ವರ್ಷಗಳ ಹಿಂದೆ ಒಂದು ರಾತ್ರಿ ಕಂಠಮುಟ್ಟ ಕುಡಿದು, ಅತಿ ವೇಗವಾಗಿ, ನಿರ್ಲಕ್ಷ್ಯದಿಂದ ವಿಲಾಸಿ ಕಾರನ್ನು ಫುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿಸಿ, ಒಬ್ಬನನ್ನು ಕೊಂದು ನಾಲ್ವರನ್ನು ತೀವ್ರವಾಗಿ ಗಾಯಗೊಳಿಸಿದ ಕ್ರಿಮಿನಲ್ ಅಪರಾಧಕ್ಕೆ ಮುಂಬೈ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದು 5 ವರ್ಷಗಳ ಶಿಕ್ಷೆಯನ್ನು. ಆದರೆ ಶಿಕ್ಷೆ ಪ್ರಕಟವಾದ ಕೇವಲ 4 ಗಂಟೆಯೊಳಗೆ 48 ಗಂಟೆಗಳ ಮಧ್ಯಂತರ ಜಾಮೀನು ದೊರಕಿತು. ಅದಾದ ಮರುದಿನವೇ ಮುಂಬೈ ಹೈಕೋರ್ಟ್ ಆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಸಲ್ಮಾನ್ಗೆ ಜಾಮೀನು ನೀಡಿದ್ದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ವಿದ್ಯಮಾನ.
ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಹೇಳಿಕೆ ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ ಸಲ್ಮಾನ್ಗೆ ೫ ವರ್ಷಗಳ ಶಿಕ್ಷೆಯನ್ನು ಸೆಷನ್ಸ್ ಕೋರ್ಟ್ ಘೋಷಿಸಿದ ಕೂಡಲೇ ಅವರನ್ನೇಕೆ ಬಂಧಿಸಲಿಲ್ಲ? ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಂದ ಅಪರಾಧಿಗೆ ಹೈಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯುವ ಬದಲು ಜಾಮೀನಿನ ಜಾಮೂನನ್ನು ಏಕೆ ಬಾಯಿಗಿಟ್ಟಿತು?
ನಿಜ, ನ್ಯಾಯಾಂಗದ ತೀರ್ಪುಗಳನ್ನು ವಿಮರ್ಶೆ ಮಾಡುವಾಗ, ನ್ಯಾಯಾಲಯಕ್ಕೆ, ನ್ಯಾಯಾಧೀಶರಿಗೆ ಇರುವ ಅಧಿಕಾರವನ್ನು ಪ್ರಶ್ನಿಸುವಂತಿಲ್ಲ. ನ್ಯಾಯಾಲಯದ ತೀರ್ಪು ಏನಿದ್ದರೂ ಅದು ನ್ಯಾಯಾಧೀಶರ ವಿವೇಚನೆಗೆ ಸೇರಿದ್ದು. ಮುಂಬೈ ಹೈಕೋರ್ಟ್ ಸೆಷನ್ಸ್ ಕೋರ್ಟಿನ ತೀರ್ಪನ್ನು ತಳ್ಳಿ ಹಾಕಿಲ್ಲ, ಆದರೆ ಅದನ್ನು ಅಮಾನತ್ತಿನಲ್ಲಿಟ್ಟಿದೆ.
ಸದ್ಯಕ್ಕೆ ಅದನ್ನು ಜಾರಿಗೊಳಿಸದಂತೆ ಆದೇಶ ನೀಡಿದೆ. ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸುವ ಅಧಿಕಾರ, ಅವಕಾಶ ಎಲ್ಲರಿಗೂ ಇದೆ. ಆ ಹಕ್ಕನ್ನೇ ಸಲ್ಮಾನ್ಖಾನ್ ಈಗ ಚಲಾಯಿಸಿ, ನಿರಾಳವಾಗಿರುವುದು.
ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ ಇಷ್ಟು ತ್ವರಿತಗತಿಯಲ್ಲಿ ಸಲ್ಮಾನ್ಗೆ ಜಾಮೀನು ದೊರೆತಿರುವುದು ಹೇಗೆ? ವಿವಿಧ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಲಾಲೂಪ್ರಸಾದ್ ಯಾದವ್, ಜಯಲಲಿತಾ, ಭಜನ್ಲಾಲ್ರಂತಹ ಅತಿರಥರಿಗೂ ಸಿಗದ ತ್ವರಿತಗತಿಯ ಜಾಮೀನು ಸಲ್ಮಾನ್ಗೆ ಸಿಕ್ಕಿದ್ದು ಹೇಗೆ? ಕೋರ್ಟಿನ ರಜೆ ಆರಂಭವಾಗುವ ಮೊದಲು ಜಾಮೀನು ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ ತ್ವರಿತವಾಗಿ ಜಾಮೀನು ನೀಡಲಾಗಿದೆ. ಗಣ್ಯಾತಿಗಣ್ಯರಿಗೆ ಮಾತ್ರ ಸಿಗುವ ಸೌಲಭ್ಯ ಇದು!
ಆದರೆ ಇಂತಹದೇ ತ್ವರಿತಗತಿಯ ಜಾಮೀನು ಸಾಮಾನ್ಯ ಅಪರಾಧಿಗಳಿಗೂ ಏಕೆ ಸಿಗುವುದಿಲ್ಲ ಎಂಬುದು ಪ್ರಜ್ಞಾವಂತರ ಪ್ರಶ್ನೆ. `ಹಿಟ್ ಅಂಡ್ ರನ್’ ಪ್ರಕರಣ ಸಂಬಂಧ ಬಾಲಿವುಡ್ ನಟ ಸಲ್ಮಾನ್ಖಾನ್ಗೆ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ೫ ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಡುವ ಕುರಿತು ಆದೇಶ ಹೊರಡಿಸುವಾಗ `ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿರುವವರು (ಸಲ್ಮಾನ್) ಓಡಿಹೋಗುತ್ತಾರೆ ಎಂಬ ಪ್ರಕರಣ ಇದಲ್ಲ… ಒಬ್ಬ ವ್ಯಕ್ತಿಯ ಹಕ್ಕುಗಳು ನಿರ್ಧಾರವಾಗುವಾಗ ಆ ವ್ಯಕ್ತಿಯನ್ನು ಜೈಲಿನಲ್ಲಿಟ್ಟು ನಾವು ಆನಂದ ಪಡೆಯಲು ಆಗದು’ ಎಂದು ಹೈಕೋರ್ಟ್ ಹೇಳಿದೆ. ಅದೇನೋ ಸರಿ. ಆದರೆ ಇದೇ ವಿವೇಚನಾ ನೀತಿ ಉಳಿದ ಅಪರಾಧಿಗಳಿಗೆ ಏಕೆ ಅನ್ವಯಿಸುವುದಿಲ್ಲ? ಸದ್ಯ ದೇಶದ ವಿವಿಧ ಜೈಲುಗಳಲ್ಲಿ 2.8 ಲಕ್ಷದಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. ಈ ಪೈಕಿ 3 ಸಾವಿರ ಮಂದಿ 5 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಆದರೆ ಅವರೆಲ್ಲರ ವಿಚಾರದಲ್ಲಿ ಹೈಕೋರ್ಟ್ ಹೇಳುತ್ತಿರುವ ನ್ಯಾಯಪಾಲನೆಯೇ ಆಗಿಲ್ಲ. ಅವರನ್ನು ವಿನಾಕಾರಣ ಜೈಲಿನಲ್ಲಿಟ್ಟು, ಅವರ ನೆಮ್ಮದಿಯ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದು ಏನನ್ನು ಸೂಚಿಸುತ್ತದೆ? ವಿವಿಐಪಿಗಳಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ಬೇರೆಯೇ ನ್ಯಾಯ ಎಂಬ ಸಂದೇಶವಲ್ಲದೆ ಮತ್ತೇನು?
ಕಳೆದ 7 ವರ್ಷಗಳಿಂದ ವಿನಾಕಾರಣ ಜೈಲಿನಲ್ಲಿ ಕೊಳೆಯಬೇಕಾಗಿ ಬಂದ ಸಾಧ್ವಿ ಪ್ರಜ್ಞಾಸಿಂಗ್ ಅವರ ಪ್ರಕರಣವನ್ನೇ ತೆಗೆದುಕೊಳ್ಳೋಣ. ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಾಧ್ವಿಯವರನ್ನು 2008 ರಲ್ಲಿ ಬಂಧಿಸಲಾಗಿತ್ತು. ಆದರೆ ಇದುವರೆಗೆ ಅವರ ಮೇಲೆ ಆರೋಪ ಪಟ್ಟಿಯನ್ನು ಕೂಡ ಸಲ್ಲಿಸಲು ಸಾಧ್ಯವಾಗಿಲ್ಲ. ಅವರು ಆರೋಪಿ ಎಂಬುದಕ್ಕೆ ಯಾವ ಸಾಕ್ಷಾಧಾರಗಳೂ ಪೊಲೀಸರಿಗೆ ದೊರಕಿಲ್ಲ. ಹೀಗಿದ್ದರೂ ಸಾಧ್ವಿಯನ್ನು ಬಂಧಿಸಿಡಲಾಗಿದೆ. ಜಾಮೀನು ಕೂಡ ನೀಡಲಿಲ್ಲ. ಬಂಧನದ ಬಳಿಕ ಸಾಧ್ವಿಯ ಆರೋಗ್ಯ ತೀರಾ ಹದಗೆಟ್ಟಿತ್ತು. ಜೊತೆಗೆ ಅವರನ್ನು ಮಾಲೆಗಾಂವ್ ಪ್ರಕರಣದಲ್ಲಿ ಹೇಗಾದರೂ ಸಿಲುಕಿಸಬೇಕೆಂದು ಶಾರೀರಿಕ ಹಾಗೂ ಮಾನಸಿಕ ಹಿಂಸೆ ನೀಡಲಾಯಿತು. ಇದರಿಂದಾಗಿ ಆರೋಗ್ಯ ಇನ್ನಷ್ಟು ಕುಸಿದು, ಇದೀಗ ಕ್ಯಾನ್ಸರ್ ಪೀಡಿತರಾಗಿ ಜೀವಚ್ಛವವಾಗಿದ್ದಾರೆ. ಗಾಲಿ ಕುರ್ಚಿಯಲ್ಲಿ ಕುಳಿತು ಓಡಾಡಬೇಕಾದ ದುಸ್ಥಿತಿ. ಅವರಿಗೆ ಜಾಮೀನು ನೀಡುವ ವಿಷಯದಲ್ಲಿ ಟ್ರಯಲ್ ಕೋರ್ಟ್ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಲೇಖನ ಬರೆಯುವ ಮುನ್ನ ಸಾಧ್ವಿಯವರ ವಕೀಲರಾದ ಜಗದೀಶ್ ರಾಣಾ (09414281077) ಅವರನ್ನು ಸಂಪರ್ಕಿಸಿ, ಸಾಧ್ವಿಯ ಬಿಡುಗಡೆ ಯಾವಾಗ? ಎಂದು ಕೇಳಿದ್ದೆ. ಅವರು `It is left to the court’ ಎಂದು ಹೇಳಿದ್ದರು. ಸಾಧ್ವಿ ಯಾರನ್ನೂ ಕೊಲ್ಲಲಿಲ್ಲ. ಮಾಲೆಗಾಂವ್ ಪ್ರಕರಣದಲ್ಲಿ ಆರೋಪಿ ಎಂಬುದಕ್ಕೆ ಯಾವ ಸಾಕ್ಷಾಧಾರವೂ ಇಲ್ಲ. ಅಷ್ಟಕ್ಕೂ ಅವರ ಮೇಲೆ ಆರೋಪ ಪಟ್ಟಿಯನ್ನೇ ಇದುವರೆಗೆ ಹಾಕಲಾಗಿಲ್ಲ. ಹೀಗಿದ್ದರೂ 5 ವರ್ಷಗಳ ದೀರ್ಘಕಾಲ ಜೈಲಿನ ಬಂಧನ; ಜಾಮೀನಿಗೆ ನಿರಾಕರಣೆ. ಇದಾವ ನ್ಯಾಯ?
ಸಲ್ಮಾನ್ ಕುಡಿದು ವೇಗವಾಗಿ ಕಾರು ಚಲಾಯಿಸಿ ಫುಟ್ಪಾತ್ ಮೇಲೆ ಮಲಗಿದ ಅಮಾಯಕ ವ್ಯಕ್ತಿಯೊಬ್ಬನನ್ನು ಕೊಂದು, ಉಳಿದ ನಾಲ್ವರನ್ನು ಗಾಯಗೊಳಿಸಿದ್ದು ಸಂಶಯಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಕಾರನ್ನು ಚಲಾಯಿಸಿದ್ದು ತಾನಲ್ಲ, ತನ್ನ ಡ್ರೈವರ್ ಎಂಬ ಸುಳ್ಳು ಹೇಳಿಕೆಯನ್ನು ಸೆಷನ್ಸ್ ಕೋರ್ಟ್ ನಂಬಲಿಲ್ಲ. ಕಾರಿನ ಟಯರ್ ಸ್ಫೋಟಿಸಿ ಅಪಘಾತ ಸಂಭವಿಸಿತು. ಜಖಂಗೊಂಡ ಕಾರನ್ನು ಕ್ರೇನ್ ಮೂಲಕ ಮೇಲೆತ್ತುವಾಗ ಕ್ರೇನ್ ತುಂಡಾಗಿದ್ದರಿಂದ ಕಾರು ಕೆಳಗೆ ಬಿದ್ದು, ಆ ವ್ಯಕ್ತಿ ಸತ್ತ ಎಂಬ ಸುಳ್ಳು ಹೇಳಿಕೆಯನ್ನೂ ಕೋರ್ಟ್ ನಂಬಲಿಲ್ಲ. ಸಲ್ಮಾನ್ ಹೇಳಿದ್ದು ಸುಳ್ಳಿನ ಕಂತೆ ಎಂದು ಸಾಬೀತಾಗಿ ನ್ಯಾಯಾಲಯದಿಂದ ೫ ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದರೂ ಸಲ್ಮಾನ್ ಒಂದು ರಾತ್ರಿಯೂ ಜೈಲಿನಲ್ಲಿರಲಿಲ್ಲ. ಕಾನೂನು, ನ್ಯಾಯ ಎಲ್ಲರಿಗೂ ಒಂದೇ ಎನ್ನುವ ಘೋಷಣೆ ಕೇಳುವುದಕ್ಕೆ ಬಲು ಸೊಗಸು. ಆದರೆ ವಾಸ್ತವದಲ್ಲಿ ನಡೆಯುವುದು ಬೇರೆಯೇ! ಇದಕ್ಕೆ ಸಲ್ಮಾನ್ಖಾನ್ ಪ್ರಕರಣ ದಿವ್ಯ ನಿದರ್ಶನ.
ಸಲ್ಮಾನ್ಗೆ ಆತ ಮಾಡಿದ ಅಪರಾಧಕ್ಕೆ ಶಿಕ್ಷೆಯಾಗಿದ್ದಕ್ಕಾಗಿ ನೊಂದುಕೊಂಡವರ ಸಂಖ್ಯೆಗೇನೂ ಕೊರತೆಯಿಲ್ಲ. ಆತನೊಬ್ಬ ಅತ್ಯದ್ಭುತ ಮಾನವೀಯ ಗುಣವುಳ್ಳ ವ್ಯಕ್ತಿ. ಎಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಹೇಳಿದ್ದರೆ, ಫರಾಹ್ಖಾನ್ ಎಂಬ ಚಿತ್ರನಟಿ `ಸಲ್ಮಾನ್ಖಾನ್ದೇನೂ ತಪ್ಪಿಲ್ಲ. ಫುಟ್ಪಾತ್ ಮೇಲೆ ಮಲಗಿದ್ದ ಜನರz ತಪ್ಪು. ಫುಟ್ಪಾತ್ ಮೇಲೆ ಮಲಗದಂತೆ ಜನರಿಗೆ ಸರ್ಕಾರ ಮನೆ ಕಟ್ಟಿಸಿ ಕೊಡಬೇಕಾಗಿತ್ತು’ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಅಭಿಜಿತ್ ಭಟ್ಟಾಚಾರ್ಯ ಎಂಬ ಇನ್ನೊಬ್ಬ ಗಾಯಕನಂತೂ ಸಲ್ಮಾನ್ನನ್ನು ಸಮರ್ಥಿಸುವ ಭರದಲ್ಲಿ ರಸ್ತೆಯಲ್ಲಿ ಮಲಗುವವರನ್ನು ನಾಯಿಗಳಿಗೆ ಹೋಲಿಸಿ ಅವಮಾನಿಸಿದ್ದಾರೆ. ಬಿಜೆಪಿ ಸಂಸದೆ, ಚಿತ್ರನಟಿ ಹೇಮಮಾಲಿನಿಗೂ ತುಂಬಾ ದುಃಖವಾಗಿದೆಯಂತೆ! `ಸಲ್ಮಾನ್ಗೆ ಆದಷ್ಟು ಕಡಿಮೆ ಶಿಕ್ಷೆ ಸಿಗಲಿ ಎಂದು ಪ್ರಾರ್ಥಿಸೋಣ’ ಎಂದವರು ಹಾರೈಸಿದ್ದಾರೆ. ಇನ್ನೊಬ್ಬ ನಟ ಶಕ್ತಿಕಪೂರ್ ಸಲ್ಮಾನ್ ಕುಟುಂಬದವರು ಎಂದಿಗೂ ಕಾನೂನು ಪಾಲಿಸುವವರು. ಅವರೀಗಾಗಲೇ 13 ವರ್ಷಗಳ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಸಲ್ಮಾನ್ ಬಡವರಿಗೆ ಮಾಡಿರುವ ಸಹಾಯ ಎಷ್ಟೆಂದು ಎಲ್ಲರಿಗೂ ಗೊತ್ತು’ ಎಂದು ಅನುಕಂಪ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ನ `ಮಾನವೀಯ ಗುಣ’ಗಳ ಬಗ್ಗೆ ಹೀಗೆ ಇನ್ನೂ ಅದೆಷ್ಟೋ ಗಣ್ಯರು ಹಾಡಿಹೊಗಳಿದ್ದಾರೆ!
ಇಷ್ಟೆಲ್ಲಾ `ಅರ್ಹತೆ’ ಇರುವ ವ್ಯಕ್ತಿಯೊಬ್ಬ ಜೈಲುಪಾಲಾಗುವುದುಂಟೇ? ಶ್ರೀಮಂತ ವರ್ಗದವರು, ಬಣ್ಣದ ಬದುಕಿನ ಗಣ್ಯರು ಒಂದಾಗಿ ಸಲ್ಮಾನ್ ಅಪರಾಧಿಯೇ ಅಲ್ಲ ಎಂಬ ವಾತಾವರಣ ಸೃಷ್ಟಿಸಿಬಿಟ್ಟರು. ಇದರ ಪರಿಣಾಮ ನ್ಯಾಯಾಲಯದ ಮೇಲೂ ಉಂಟಾಯಿತೇ ಎಂಬ ಸಂಶಯ ದೇಶದ ಜನರದ್ದು. ಸಲ್ಮಾನ್ಖಾನ್ ಎಂಬ ಜನಪ್ರಿಯ ನಟನ ಜಾಗದಲ್ಲಿ ಬೇರೊಬ್ಬ ಸಾಮಾನ್ಯ ವ್ಯಕ್ತಿ ಇರುತ್ತಿದ್ದರೆ ಇಂತಹ ಅನುಕಂಪದ ಹೇಳಿಕೆಗಳು ವ್ಯಕ್ತವಾಗುತ್ತಿತ್ತೇ? ಜೈಲಿಗೆ ಹೋಗುವ ಮುನ್ನವೇ ನ್ಯಾಯಾಲಯದಿಂದ ಜಾಮೀನು ಸಿಗುತ್ತಿತ್ತೇ? ಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ದೊರೆಯುತ್ತಿತ್ತೇ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವರಾರು?
ಸಲ್ಮಾನ್ ಎಸಗಿದ್ದು ಇದೊಂದೇ ಅಪರಾಧವಲ್ಲ. ಆತನ ಕುಖ್ಯಾತಿಗೆ ಕಾರಣವಾಗುವ ಅನೇಕ ಪ್ರಸಂಗಗಳಿವೆ. ಆತನಿಗೂ ಭೂಗತ ಜಗತ್ತಿನ ಜೊತೆ ನಂಟಿತ್ತು ಎನ್ನುವ ವದಂತಿ ಇದೆ. ಜನಪ್ರಿಯ ನಟಿ ಐಶ್ವರ್ಯ ರೈ ಜೊತೆ ಸಂಬಂಧ ಮುರಿದು ಬೀಳಲು ಸಲ್ಮಾನ್ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದೇ ಕಾರಣ ಎಂಬ ಮಾತುಗಳು ಈಗಲೂ ಹರಿದಾಡುತ್ತಿವೆ. ಒಂದು ಸಂಬಂಧ ಮುರಿದಂತೆ ಮತ್ತೊಂದು ಸಂಬಂಧ ಚಿಗುರಿಸಿ ಅದನ್ನೂ ಮುರಿಯುವ ಹಂತಕ್ಕೆ ಒಯ್ಯುತ್ತಿದ್ದ ಕಿಲಾಡಿ ಮಿಯಾ ಇವನು! ರಾಜಸ್ಥಾನದಲ್ಲಿ ಈತ ಕೃಷ್ಣಮೃಗವನ್ನು ಬೇಟೆಯಾಡಿ ಸಿಕ್ಕಿಬಿದ್ದು ವಿಚಾರಣೆ ನಡೆಯುತ್ತಿದೆ. ತೀರ್ಪು ಏನಾಗುತ್ತದೋ ಗೊತ್ತಿಲ್ಲ.
ಸಲ್ಮಾನ್ 5 ವರ್ಷ ಜೈಲಿಗೆ ಹೋದರೆ ನಿರ್ಮಾಪಕರಿಗೆ ಕೋಟಿಗಟ್ಟಲೆ ಹಣ ನಷ್ಟವಾಗಲಿದೆಯಂತೆ. ಆತ ನಿರ್ಲಕ್ಷ್ಯದಿಂದ ಕಾರು ಹರಿಸಿ, ಅಮಾಯಕ ವ್ಯಕ್ತಿಯೊಬ್ಬನನ್ನು ಕೊಂದುಹಾಕಿದ. ಆ ವ್ಯಕ್ತಿಯ ಕುಟುಂಬ ಈಗಲೂ ಬೀದಿಗೆ ಬಿದ್ದು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಆ ಕುಟುಂಬದ ಆರ್ತನಾದ ಹಾಗಿದ್ದರೆ ಗೌಣವೇ? ಆ ನೋವಿಗೆ ಯಾವ ಬೆಲೆಯೂ ಇಲ್ಲವೇ? ಈ ಶ್ರೀಮಂತ ನಟನನ್ನು ಉಳಿಸುವ ಭರದಲ್ಲಿ, ಅಪಘಾತದಲ್ಲಿ ಸತ್ತ ವ್ಯಕ್ತಿಯ ಕುಟುಂಬದವರ ಸಂಕಷ್ಟ ಯಾರ ನೆನಪಿಗೂ ಬರಲಿಲ್ಲ. ಮನೆ ಇಲ್ಲದೇ ರಸ್ತೆಯಲ್ಲಿ ಮಲಗುತ್ತಿದ್ದ ಈ ಜನ ದುಡಿಯುವ ಗಂಡಸನ್ನು ಕಳೆದುಕೊಂಡು ಎಂಥ ಯಾತನೆ ಅನುಭವಿಸುತ್ತಿರಬಹುದೆಂದು ಯಾವ ಮಾಧ್ಯಮವೂ ವರದಿ ಮಾಡಲಿಲ್ಲ. ಈ ಮಂದಿಯ ನೋವಿಗೆ ಹಾಗಿದ್ದರೆ ಕಿಂಚಿತ್ತೂ ಬೆಲೆಯಿಲ್ಲವೇ?
ಕಾನೂನು ಎಲ್ಲರಿಗೂ ಒಂದೇ ಎಂಬ ನಮ್ಮ ಸಂವಿಧಾನದ ಘನವಾಕ್ಯಕ್ಕೆ ಚ್ಯುತಿ ಬರದಿರಲಿ ಎಂದಷ್ಟೇ ಈಗ ನಾವೆಲ್ಲಾ ಆಶಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.