ಪುತ್ತೂರು : ರಾಮಾಯಣ ಎಂಬುದು ಅಮೃತ ಇದ್ದಂತೆ, ಹೇಗೆ ಅಮೃತ ವೆಂಬುದು ಸವಿದಷ್ಟು ಮತ್ತಷ್ಟು ಸವಿಯುವ ಭಾವನೆ ಹುಟ್ಟುತ್ತದೆಯೋ ಹಾಗೆಯೇ ರಾಮಾಯಣವೂ ಎಂದಿಗೂ ಸಾಕು ಎನಿಸುವಂತಹದಲ್ಲ. ‘ರಾಮಾಯಣದ ಆದರ್ಶ ಎಲ್ಲಾ ದೇಶ ಹಾಗು ಎಲ್ಲಾ ಕಾಲಕ್ಕೂ ಅಗತ್ಯವಾದುದು’ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಗಳು ಹೇಳಿದರು.
ಮಂಗಳೂರು ಹೋಬಳಿ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ 10-3-2017 ರಂದು ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ರಾಮಪಟ್ಟಾಭಿಷೇಕ ವೈಭವದಲ್ಲಿ ನಡೆದಿದ್ದು, ಕಂಡ ಕಣ್ಣುಗಳು ಪಾಪವನ್ನು ಕಳೆದುಕೊಂಡು ಪಾವನವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಲೆ ಅತ್ಯಂತ ಸಾತ್ವಿಕ ಪರಿಣಾಮವನ್ನು, ಬದುಕಿಗೆ ಶುಭ ಮಂಗಲವನ್ನು ನೀಡುತ್ತದೆ. ರಾಮಪಟ್ಟಾಭಿಷೇಕ ಜೀವನದ ಮೇಲೆ ಗುರುತು ಮೂಡಿಸುವುದರಲ್ಲಿ ಸಂಶಯವಿಲ್ಲ. ಈ ಶುಭದ ಗುರುತು ಎಲ್ಲಾ ಪಾಪಗಳಿಂದ ಮುಕ್ತಿಗೊಳಿಸುತ್ತದೆ ಎಂದರು.
ಶ್ರೀರಾಮನ ಮಂಗಲ ಚರಿತವನ್ನು ಮನೆಯ ರಂಪಕ್ಕೆ ಹೋಲಿಸುವ ಮೂಲಕ ಸಂಸ್ಕೃತಿಯನ್ನು ನಾವೇ ಹಾಳುಗೆಡವುತ್ತಿದ್ದೇವೆ. ಪ್ರತಿಯೊಬ್ಬರ ಮನೋಭೂಮಿಕೆಯಲ್ಲಿ ರಾಮನ ಅವತರಣಿಕೆ ಆಗಬೇಕು. ಮುಗಿದು ಹೋದ ರಾಮಾಯಣದ ಪಾರಾಯಣ ಮತ್ತೆ ನವೀಕರಿಸಿ ನಮ್ಮೊಳಗೆ ರಾಮಾಯಣ ನಡೆಯುವಂತೆ ಮಾಡುತ್ತದೆ. ಪ್ರತಿಯೊಬ್ಬನ ಹೃದಯದಲ್ಲಿ ರಾಮನು ನಿತ್ಯ ಆಡಿದಾಗ ಬದುಕು ಪಾವನವಾಗುವ ಜತೆಗೆ ಜೀವನ ಹಿತವಾಗುತ್ತದೆ ಎಂದ ಶ್ರೀಗಳು ಪ್ರತಿನಿತ್ಯ ಸಾಧ್ಯವಾದಷ್ಟು ರಾಮಾಯಣದ ಪಾರಾಯಣ ಮಾಡುವಂತೆ ಕರೆ ನೀಡಿದರು.
*ಅಗಸ್ತ್ಯ ಸಂಪೂಜಿತ ಶ್ರೀರಾಮ ದೇವರಿಗೆ ಪವಿತ್ರ ನದಿಗಳ ನೀರು, ಧಾನ್ಯಗಳ, ಶುಭ ವೃಕ್ಷಗಳ ತೊಗಟೆಯ ಕಶಾಯ, ನವರತ್ನ, ರಜತ, ಸ್ವರ್ಣ, ಪಂಚಾಮೃತ ಅಭಿಷೇಕ ನೆರವೇರಿಸಿ, ಸ್ವರ್ಣ ಕಿರೀಟ ಧಾರಣೆ ಮಾಡಿಸಿ, ಅಷ್ಠಾವಧಾನ ಸೇವೆ ನಡೆಸಲಾಯಿತು.* ಕುಮಾರಸ್ವಾಮಿ ವರ್ಮುಡಿ ದಂಪತಿಗಳ ಯಜಮಾನತ್ವದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.
ಪ್ರತಿದಿನ ರಾಮಾಯಣ ಪಾರಾಯಣ
ಶ್ರೀಸಂಸ್ಥಾನದವರು ಸಂನ್ಯಾಸ ಸ್ವೀಕರಿಸಿದಂದಿನಿಂದ ಆರಂಭಿಸಿ ಪ್ರತಿದಿನವೂ ನಿತ್ಯಾನುಷ್ಠಾನಗಳ ಜೊತೆಗೆ ದಿನಕ್ಕೊಂದು ಸರ್ಗದಂತೆ ಶ್ರೀರಾಮಾಯಣದ ಪಾರಾಯಣ ಮಾಡುತ್ತಿದ್ದು, ರಾಮಾಯಣದ ಪಟ್ಟಾಭಿಷೇಕ ಸಂದರ್ಭದ ಪಾರಾಯಣದ ದಿನ ಪದ್ಧತಿಯಂತೆ ಶ್ರೀಕರಾರ್ಚಿತ ರಾಮದೇವರಿಗೆ ಪಟ್ಟಾಭಿಷೇಕ ನೆರವೇರಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.