News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆ ಅರ್ಥ ಅದಲ್ಲ!

Modi5-300x225Success has got many fathers, but failure is an orphan (ಗೆಲುವಿಗೆ ಹಲವು ತಂದೆಯರು, ಸೋಲು ಮಾತ್ರ ಅನಾಥ). ಈ ಮಾತಿಗೆ ಈಗ ಕಾಂಗ್ರೆಸ್ ಸ್ಥಿತಿಯೂ ಅಪವಾದವಾಗಿಲ್ಲ. 2009 ರ ಲೋಕಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗೆದ್ದಿದ್ದು ಕೇವಲ 44 ಸ್ಥಾನಗಳನ್ನು ಮಾತ್ರ. ದೆಹಲಿ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ಗೋವಾ ರಾಜ್ಯಗಳಲ್ಲಿ ಅದು ಖಾತೆಯನ್ನೇ ತೆರೆಯಲಿಲ್ಲ. ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಅದಕ್ಕೆ ದೊರಕಿದ್ದು ಕೇವಲ 2. ಅದೂ ಕೂಡ ತಾಯಿ ಸೋನಿಯಾ ಮತ್ತು ಮಗ ರಾಹುಲ್ ಇಬ್ಬರೇ ಅಲ್ಲಿಂದ ಗೆದ್ದಿದ್ದು. ಮಹಾರಾಷ್ಟ್ರದಲ್ಲೂ ಅದು ಭರ್ಜರಿಯಾಗಿಯೇ ಸೋತಿದೆ. ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ತಮಿಳುನಾಡು ಮೊದಲಾದ ರಾಜ್ಯಗಳಲ್ಲೂ ಹೀನಾಯ ಸೋಲು.

ಕಾಂಗ್ರೆಸ್ ಈ ಬಾರಿ ಗಮನಾರ್ಹವಾಗಿ ಗೆದ್ದಿದ್ದರೆ ಅದಕ್ಕೆ ನಾವೇ ಕಾರಣ ಎಂದು ಹೇಳುವವರ ಸಂಖ್ಯೆ ಸಾಕಷ್ಟು ಇರುತ್ತಿತ್ತು. ಹೀನಾಯವಾಗಿ ಸೋತಿದ್ದರಿಂದ ಆ ಸೋಲಿಗೆ ನಾವೇ ಕಾರಣ ಎಂದು ಯಾರೂ ಹೇಳುತ್ತಿಲ್ಲ. ಪ್ರತಿಯೊಬ್ಬರೂ ಇನ್ನೊಬ್ಬರತ್ತ ಬೆರಳು ತೋರಿಸುತ್ತಿದ್ದಾರೆ. ಸೋಲಿನ ಹೊಣೆಯನ್ನು ಹೊತ್ತುಕೊಳ್ಳಲು ಯಾರೂ ಸಿದ್ಧರಿಲ್ಲ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಮಿಲಿಂದ್ ದೆವೊರಾ, ರಾಹುಲ್ ಸಲಹೆಗಾರರು ಬೇರುಮಟ್ಟದ ನಾಯಕರ ಮಾತಿಗೆ ಕಿವಿಗೊಡದಿದ್ದುದೇ ಪರಾಭವಕ್ಕೆ ಕಾರಣ ಎಂದಿದ್ದರೆ, ಗುಜರಾತಿನ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಘೇಲಾ ಅವರು, ಪಕ್ಷದ ಹೀನಾಯ ಸೋಲಿಗೆ ಬೆಂಬಲಿಗರು ಕಾರಣರಲ್ಲ, ನಾಯಕ ರಾಹುಲ್ ಗಾಂಧಿಯವರೇ ನೇರವಾಗಿ ಸೋಲಿಗೆ ಕಾರಣ ಎಂದು ಬಹಿರಂಗವಾಗಿ ಟೀಕಿಸುವ ದಿಟ್ಟತನ ತೋರಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ಶಶಿ ತರೂರ್, ಕಾಂಗ್ರೆಸ್ ಪಕ್ಷದೊಳಗೆ ಬಿಗುವಿನ ವಾತಾವರಣವಿದ್ದು ಯಾವುದೇ ನಾಯಕರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ನಿರ್ಬಂಧವಿದೆ. ನನಗೂ ಈ ಹಿಂದೆ ನಿರ್ಬಂಧ ವಿಧಿಸಲಾಗಿತ್ತು ಎಂದು ಹೇಳುವ ಮೂಲಕ ಪಕ್ಷದೊಳಗಿದ್ದ ವಾಕ್ ಸ್ವಾತಂತ್ರ್ಯದ ಇತಿಮಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇದಾದ ಬಳಿಕ ಅಮೃತಸರದಿಂದ ಆಯ್ಕೆಯಾಗಿರುವ ಸಂಸದ ಅಮರೀಂದರ್ ಸಿಂಗ್ ಅವರೂ ನಾಯಕತ್ವವನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಅತ್ತ ಯುಪಿಎ ಅಂಗ ಪಕ್ಷವಾದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಚುನಾವಣೆ ಬಗ್ಗೆ ತನ್ನ ಅಂಗ ಪಕ್ಷಗಳೊಂದಿಗೆ ನಡೆಸಬೇಕಿದ್ದ ಔಪಚಾರಿಕ ಮಾತುಕತೆಯನ್ನೂ ಕಾಂಗ್ರೆಸ್ ಸರಿಯಾಗಿ ನಡೆಸಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ರಾಹುಲ್ ಆಪ್ತನೆಂದೇ ಗುರುತಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮೋದಿ ಅಲೆ ದೇಶವನ್ನು ಸ್ವೀಪ್ ಮಾಡಲು ಬಿಟ್ಟಿದ್ದಕ್ಕೆ ಕಾಂಗ್ರೆಸ್‌ನಾಯಕರೇ ಹೊಣೆ ಎಂದು ಟೀಕಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ರಾಜೀನಾಮೆ ಸ್ವೀಕರಿಸದ ಸೋನಿಯಾ ನಿಲುವನ್ನು ಅಸ್ಸಾಂನ ಅನೇಕ ಕಾಂಗ್ರೆಸ್ ನಾಯಕರೇ ಖಂಡಿಸಿದ್ದಾರೆ.

ಹೀಗೆ ಕಾಂಗ್ರೆಸ್ ಪಕ್ಷದೊಳಗೇ ಈಗ ಭಿನ್ನಮತದ ಭುಗಿಲೆದ್ದಿದೆ. ಕರ್ನಾಟಕದಲ್ಲಂತೂ ಅದು ತಾರಕಕ್ಕೇರುವ ಸಾಧ್ಯತೆ ಇದೆ. ಹಾವೇರಿಯಲ್ಲಿ ಸಲೀಂ ಅಹಮದ್ ಸೋಲಿಗೆ ಸಚಿವ ಎಚ್.ಕೆ. ಪಾಟೀಲ್, ಶಾಸಕ ಕೆ.ಬಿ. ಕೋಳಿವಾಡ ಅವರೇ ಕಾರಣರಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಂಬಲಿಗರು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ದಾವಣಗೆರೆಯಲ್ಲಿ ತನ್ನ ಪುತ್ರ ಸೋತಿದ್ದಕ್ಕೆ ತನ್ನನ್ನು ಸಚಿವ ಸಂಪುಟದಿಂದ ತೆಗೆದು ಹಾಕುವುದಾದರೆ ಹಾಕಲಿ, ವಿಮಾನ ಹತ್ತಿ ದಾವಣಗೆರೆಗೆ ಹೋಗುತ್ತೇನೆ. ಅಲ್ಲಿ ಮಾಡಲು ಭಾಳ ಕೆಲ್ಸ ಐತಿ ಎಂದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರು ಸವಾಲು ಹಾಕಿದ್ದಾರೆ. ಮೂಡಬಿದ್ರೆಯ ಶಾಸಕ ಅಭಯಚಂದ್ರ ಕೂಡ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ತನ್ನನ್ನು ಸಚಿವ ಸ್ಥಾನದಿಂದ ಕಿತ್ತು ಹಾಕುವುದಾದರೆ ಹಾಕಲಿ ಎಂದು ಸವಾಲೆಸೆದಿದ್ದಾರೆ. ಹೀಗೆ ಕೈ ಪಾಳೆಯದಲ್ಲಿ ಭಿನ್ನಮತ ಕೊತಕೊತ ಕುದಿಯುತ್ತಿದೆ. ಸೋಲಿಗೆ ನಾವ್ಯಾರೂ ಕಾರಣರಲ್ಲ ಎಂದು ಎಲ್ಲರೂ ಜಾರಿಕೊಳ್ಳುವ ದಾರಿ ಹುಡುಕುತ್ತಿದ್ದಾರೆ. ಮೊನ್ನೆ ದೆಹಲಿಯಲ್ಲಿ ಸೋನಿಯಾ ಹಾಗೂ ರಾಹುಲ್ ಇಬ್ಬರೂ ಸೋಲಿಗೆ ಹೊಣೆ ಹೊತ್ತು ರಾಜೀನಾಮೆ ಪತ್ರ ನೀಡಿದ್ದರೂ ಅದನ್ನು ಪಕ್ಷ ಸ್ವೀಕರಿಸಲಿಲ್ಲ (ಅದೊಂದು ಕಾಟಾಚಾರದ ರಾಜೀನಾಮೆ ಪತ್ರವಾಗಿತ್ತು ಎನ್ನುವುದು ಮೊದಲೇ ತಿಳಿದಿತ್ತು). ನಿಜಕ್ಕೂ ಕಾಂಗ್ರೆಸ್ ಸೋಲಿಗೆ ಹೊಣೆ ಹೊತ್ತು ಸೋನಿಯಾ ಹಾಗೂ ರಾಹುಲ್ ಹುದ್ದೆಯಿಂದ ಕೆಳಗಿಳಿಯಬೇಕಾಗಿತ್ತು. ಆದರೆ ಅಂತಹ ನೈತಿಕತೆ ತಾಕತ್ತೇ ಅವರೊಳಗಿಲ್ಲ.

ಪ್ರಿಯಾಂಕಾ ಭಜನೆ
ಇನ್ನು ಕೆಲವರು ಕಾಂಗ್ರೆಸ್ ಮತ್ತೆ ಉದ್ಧಾರವಾಗಬೇಕಾದರೆ ಪ್ರಿಯಾಂಕಾ ಗಾಂಧಿಯನ್ನು ರಾಜಕೀಯದ ಮುನ್ನಲೆಗೆ ತರಬೇಕು ಎಂದು ಪಲ್ಲವಿ ಹಾಡ ತೊಡಗಿದ್ದಾರೆ. ರಾಹುಲ್‌ಗಿಂತ ಪ್ರಿಯಾಂಕಾ ಸಮರ್ಥೆ ಹಾಗೂ ಪ್ರಬುದ್ಧೆ. ಅವರನ್ನು ಮುಂಚೂಣಿಯಲ್ಲಿರಿಸಿ ಪ್ರಚಾರ ನಡೆಸಿದ್ದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿರುತ್ತಿತ್ತು. ಭವಿಷ್ಯದಲ್ಲೂ ಪಕ್ಷಕ್ಕೆ ಚೈತನ್ಯ ತುಂಬಲು ಅವರ ಸಹಕಾರ ಅಗತ್ಯವಿದೆ ಎಂದು ಹೇಳಿದವರು ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್. ಪ್ರಿಯಾಂಕಾ ದೊಡ್ಡ ಹೋರಾಟಗಾರ್ತಿ, ಅವರಲ್ಲಿ ಮೇಡಂ ಇಂದಿರಾ ಗಾಂಧಿಯನ್ನು ಹೋಲುವ ಅನೇಕ ಗುಣಗಳಿವೆ. ಇಂದಿರಾ ಅವರ ಹಾವಭಾವ, ವೇಷಭೂಷಣ ಎಲ್ಲವೂ ಇದೆ ಎಂಬುದು ಇನ್ನೊಬ್ಬ ಕೇಂದ್ರದ ಮಾಜಿ ಸಚಿವ ಕೆ.ವಿ. ಥಾಮಸ್ ಅವರ ಬಣ್ಣನೆ. ಇತ್ತ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರು ಯಾರಾಗಬೇಕು ಎಂಬುದರ ಬಗ್ಗೆಯೂ ಕಾಂಗ್ರೆಸ್‌ನಲ್ಲಿ ಬಿರುಸಿನ ವಾಗ್ವಾದ ನಡೆಯುತ್ತಿದೆ. 9 ಬಾರಿ ಮಧ್ಯಪ್ರದೇಶದ ಚಿಂದ್ವಾರಾದಿಂದ ಗೆದ್ದಿರುವ ಕಮಲನಾಥ್, ತಾನೇ ಆ ಸ್ಥಾನಕ್ಕೆ ಅತ್ಯಂತ ಅರ್ಹ ವ್ಯಕ್ತಿ ಎಂದು ದಾವೆ ಮಂಡಿಸಿದ್ದರೆ, ನಮ್ಮ ವೀರಪ್ಪ ಮೊಯ್ಲಿ ಹಾಗೂ ಖರ್ಗೆ ತಾವು ಕೂಡ ಹಿರಿಯ ನಾಯಕರು, ತಮ್ಮನ್ನೂ ಆ ಹುದ್ದೆಗೆ ಪರಿಗಣಿಸಬೇಕು ಎಂದು ಹಠ ಹಿಡಿದ್ದಾರೆ.

ಒಂದು ಹೀನಾಯ ಸೋಲು ಇಡೀ ಕಾಂಗ್ರೆಸ್ ಪಕ್ಷವನ್ನೇ ಹೇಗೆ ಭಯಂಕರವಾಗಿ ನಡುಗಿಸಿಬಿಟ್ಟಿದೆ ಎನ್ನುವುದಕ್ಕೆ ಇವೆಲ್ಲ ನಿದರ್ಶನಗಳು. ಮೊದಲು ಎಂತಹದೇ ಸೋಲು ಉಂಟಾಗಿದ್ದರೂ ಸೋನಿಯಾ ಹಾಗೂ ರಾಹುಲ್ ವಿರುದ್ಧ ಅಪಸ್ವರ ಎತ್ತುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಆದರೆ ಈ ಬಾರಿ ಬಹಿರಂಗವಾಗಿಯೇ ಅದು ಕಂಡು ಬಂದಿದೆ. ಒಂದು ರೀತಿಯಲ್ಲಿ ಕಾಂಗ್ರೆಸ್ ಮರಳಿ ಸರಿಯಾದ ಹಳಿಗೆ ಬರುತ್ತಿರುವ ಲಕ್ಷಣ ಇದಾಗಿರಬಹುದೇ?

‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆ…
ಮೋದಿ ಈ ಸಲದ ಚುನಾವಣಾ ಪ್ರಚಾರದುದ್ದಕ್ಕೂ ‘ಕಾಂಗ್ರೆಸ್‌ಮುಕ್ತ’ ಭಾರತ ನಿರ್ಮಾಣಕ್ಕೆ ಬೆಂಬಲಿಸಿ ಎಂದು ಮತದಾರರಿಗೆ ಕರೆ ಕೊಟ್ಟಿದ್ದರು. ಅದಕ್ಕೆ ಸರಿಯಾಗಿ ಮತದಾರರು ಮೋದಿಯವರ ಮಾತು ನಿಜಗೊಳಿಸಲೋ ಎಂಬಂತೆ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡುವಲ್ಲಿ ನೆರವಾಗಿದ್ದರು. ಆದರೆ ಕಾಂಗ್ರೆಸ್‌ಮುಕ್ತ ಭಾರತವೆಂದರೆ ಕಾಂಗ್ರೆಸ್ ನಾಯಕರೆಲ್ಲರನ್ನೂ ಮಣ್ಣು ಮುಕ್ಕಿಸಬೇಕೆಂದು ಮೋದಿಯವರ ಆ ಹೇಳಿಕೆಯ ಅರ್ಥವಾಗಿರಲಿಲ್ಲ. ಕಾಂಗ್ರೆಸ್‌ಮುಕ್ತ ಭಾರತವೆಂದರೆ, ಆ ಪಕ್ಷದೊಳಗೆ ಹೆಪ್ಪುಗಟ್ಟಿರುವ ವಂಶಾಡಳಿತ, ಅಲ್ಪಸಂಖ್ಯಾತರ ಓಲೈಕೆ, ಅಭಿವೃದ್ಧಿ ರಾಜಕೀಯಕ್ಕೆ ಅಡ್ಡಗಾಲಿಡುವ ಕುತಂತ್ರ ಇತ್ಯಾದಿ ಅಪಸವ್ಯಗಳನ್ನು ತೊಡೆದು ಹಾಕಬೇಕೆಂಬುದೇ ಮೋದಿಯವರ ಹೇಳಿಕೆಯ ಆಂತರ್ಯವಾಗಿತ್ತು. ಕಾಂಗ್ರೆಸ್ ಇಷ್ಟೊಂದು ಹೀನಾಯವಾಗಿ ಸೋತ ಈ ಸಂದರ್ಭದಲ್ಲೂ ಮತ್ತೆ ಪ್ರಿಯಾಂಕಾ ಗಾಂಧಿಗೆ ಪಟ್ಟ ಕಟ್ಟಲು ಕೆಲವರು ಹೊರಟಿದ್ದಾರೆಂದರೆ ಅದು ಸೋಲಿನಿಂದ ಏನೇನೂ ಪಾಠ ಕಲಿತಿಲ್ಲ ಎಂದೇ ಅರ್ಥ. ವಂಶಾಡಳಿತದ ಪಿಡುಗಿನಿಂದ ಹೊರಬಂದರೆ ಮಾತ್ರ ಕಾಂಗ್ರೆಸ್ ಪಕ್ಷ ಉದ್ಧಾರವಾಗಬಲ್ಲದು. ಸೋನಿಯಾ, ರಾಹುಲ್, ಪ್ರಿಯಾಂಕಾ ಬಿಟ್ಟರೆ ಕಾಂಗ್ರೆಸ್ ಸಾರಥ್ಯವಹಿಸುವ ಒಬ್ಬನೇ ಒಬ್ಬ ಸಮರ್ಥ ನಾಯಕ, ಹಾಗಿದ್ದರೆ ಆ ಪಕ್ಷದಲ್ಲಿ ಯಾರೂ ಇಲ್ಲವೆ?

ಮೊನ್ನೆ ಚುನಾವಣಾ ಫಲಿತಾಂಶ ಬಂದ ಬಳಿಕ ವಾರಾಣಸಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ ‘ಸಂಸತ್ತಿನಲ್ಲಿ ಈಗ ಪ್ರತಿಪಕ್ಷ ಎಲ್ಲಿದೆ? ಮೊದಲು ಕೇಂದ್ರದಲ್ಲಿ ಸರ್ಕಾರ ರಚಿಸಲು ಮೈತ್ರಿಕೂಟ ರಚಿಸಬೇಕಾಗಿತ್ತು. ಈಗ ಪ್ರತಿಪಕ್ಷ ಸ್ಥಾನ ಪಡೆಯಲು ಮೈತ್ರಿಕೂಟ ರಚಿಸಬೇಕಾಗಿದೆ’ ಎಂದು ಲೇವಡಿ ಮಾಡಿದ್ದರು. ಮೋದಿಯವರ ಈ ಲೇವಡಿ ಅಥವಾ ಅದಕ್ಕೂ ಮುನ್ನ ಪ್ರಚಾರ ಸಭೆಗಳಲ್ಲಿ ಅವರಾಡಿದ ‘ಕಾಂಗ್ರೆಸ್‌ಮುಕ್ತ ಭಾರತ’ ಹೇಳಿಕೆಗೆ ಕಾಂಗ್ರೆಸ್ ಪಕ್ಷವೇ ಈ ದೇಶದಲ್ಲಿ ಇರಬಾರದು ಎಂಬರ್ಥವೇನೂ ಇರಲಿಲ್ಲ. ಕಾಂಗ್ರೆಸ್ ತನ್ನ ವಂಶಾಡಳಿತ, ಅಲ್ಪಸಂಖ್ಯಾತರ ಓಲೈಕೆ, ದೇಶದ್ರೋಹಿಗಳ ಜೊತೆ ಶಾಮೀಲು, ಸ್ವಜನಪಕ್ಷಪಾತ, ಜನ ವಿರೋಧಿ ನೀತಿ, ಅಭಿವೃದ್ಧಿಗೆ ಅಡ್ಡಗಾಲು ಮೊದಲಾದ ಕೆಟ್ಟ ಸಂಸ್ಕೃತಿಯಿಂದ ಹೊರಬರಬೇಕು ಎಂಬುದು ಮೋದಿ ಮಾತಿನ ಆಂತರ್ಯ. ಕೇವಲ ಮೋದಿಯವರದಷ್ಟೇ ಅಲ್ಲ, ಈ ದೇಶದ ಮತದಾರರದ್ದೂ ಕೂಡ. ಇದನ್ನೇ ಎಲ್ಲರೂ ‘ಕಾಂಗ್ರೆಸ್ ಸಂಸ್ಕೃತಿ’ ಎಂದು ಕರೆದಿರುವುದು. ಈ ಹೀನ ಸಂಸ್ಕೃತಿಯ ಪ್ರಭಾವಳಿಯನ್ನು ಕಳಚಿಕೊಳ್ಳದೇ ಇದ್ದುದರಿಂದಲೇ ಕಳೆದ ೬ ದಶಕಗಳ ದೀರ್ಘ ಆಳ್ವಿಕೆ ನಡೆಸಿದರೂ ದೇಶದಲ್ಲಿ ಪರಿವರ್ತನೆ ತರಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ.

ಮುಸ್ಲಿಮರ ತುಟಿಗೆ ತುಪ್ಪ!
ಮುಸ್ಲಿಮರನ್ನು ಸದಾ ಕಾಲ ಓಲೈಸುತ್ತಾ ಬಂದ ಕಾಂಗ್ರೆಸ್ ಆ ಸಮುದಾಯಕ್ಕಾಗಿ ಮಾಡಿರುವುದಾದರೂ ಏನು? ಮುಸ್ಲಿಮರ ತುಟಿಗೆ ಒಂದಿಷ್ಟು ತುಪ್ಪ ಸವರಿದ್ದು ಬಿಟ್ಟರೆ ಇನ್ನೇನು ಮಾಡಿದೆ? ಸ್ವಾತಂತ್ರ್ಯ ಬಂದು 6 ದಶಕಗಳಾಗಿದ್ದರೂ ಮುಸ್ಲಿಮರು ಈಗಲೂ ಏಕೆ ಅದೇ ದಾರಿದ್ರ್ಯ ಸ್ಥಿತಿಯಲ್ಲಿ ತೊಳಲಾಡಬೇಕಾಗಿತ್ತು? ನಾವು ಈ ದೇಶದ ಅವಿಭಾಜ್ಯ ಅಂಗವೆಂಬ ಚಿಂತನೆಯ ಬೀಜವನ್ನು ಕಾಂಗ್ರೆಸ್ ಆ ಸಮುದಾಯದಲ್ಲಿ ಏಕೆ ಬಿತ್ತಲಿಲ್ಲ? ಕಾಂಗ್ರೆಸ್‌ನ ಆಸೆ ಆಮಿಷಗಳಿಗೆ ಇದುವರೆಗೆ ಮರುಳಾಗಿದ್ದ ಮುಸ್ಲಿಂ ಸಮುದಾಯ ಈಗ ಭ್ರಮೆಯಿಂದ ಹೊರಬಂದಿದೆ. ಅದಕ್ಕೇ ಈ ಬಾರಿ ಆ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಒಟ್ಟಾಗಿ ಮತ ಹಾಕಲಿಲ್ಲ. ತಮಗಿಷ್ಟವಾದ ಪಕ್ಷ ಆರಿಸಿಕೊಂಡು ಮತ ಹಾಕಿದರು. ಬಿಜೆಪಿಗೂ ಕೆಲವರು ಮತ ಹಾಕಿದರು. ಪರಿಣಾಮ ಕಾಂಗ್ರೆಸ್‌ಗೆ ಹೀನಾಯ ಸೋಲು ಉಂಟಾಯಿತು.

ಕಾಂಗ್ರೆಸ್ ಈ ಹೀನಾಯ ಸೋಲಿನಿಂದ ಈಗಲಾದರೂ ಪಾಠ ಕಲಿತುಕೊಳ್ಳಬೇಕು. ಅದು ಬಿಟ್ಟು ವಿತಂಡವಾದ, ಕ್ಷುಲ್ಲಕ ಚರ್ಚೆಯಲ್ಲೇ ಕಾಲಹರಣ ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ಉದ್ಧರಿಸಲು ಯಾವ ದೇವರೂ ಅವತರಿಸಲಾರರು. ‘ಕಾಂಗ್ರೆಸ್‌ಗೆ ಅಂತಹ ಹೀನಾಯ ಸೋಲು ಒದಗಿಲ್ಲ. ಇದೊಂದು ಐತಿಹಾಸಿಕ ಸೋಲು ಅಲ್ಲ. ಏಕೆಂದರೆ ಬಿಜೆಪಿ 1984 ರಲ್ಲಿ ಇದಕ್ಕಿಂತಲೂ ಹೀನಾಯವಾಗಿ ಸೋತು ಲೋಕಸಭೆಯಲ್ಲಿ ಕೇವಲ 2 ಸ್ಥಾನಗಳಿಗೆ ಸೀಮಿತವಾಗಿತ್ತು. ಬಿಜೆಪಿ ಈ ಬಾರಿ ಬಹುಮತ ಪಡೆದು ಅಧಿಕಾರಕ್ಕೇರಿದ್ದರೂ ಅದಕ್ಕೆ ದೊರಕಿದ್ದು ಕೇವಲ ಶೇ. 31 ಮತಗಳು. ಇನ್ನುಳಿದ ಶೇ. 69 ಮತಗಳು ಬಿಜೆಪಿಗೆ ವಿರುದ್ಧವಾಗಿವೆ. ದೇಶದ ಮತದಾರರ ಶೇ. 50 ರಷ್ಟು ಮತಗಳು ಕೂಡ ಬಿಜೆಪಿಗೆ ಬಿದ್ದಿಲ್ಲ…’ ಮುಂತಾದ ಅದೆಷ್ಟೋ ಕುತರ್ಕಗಳು ಈಗ ಕೇಳಿ ಬರುತ್ತಿವೆ. ಕಾಂಗ್ರೆಸ್ ಇಂತಹ ಕುತರ್ಕಗಳಿಗೇ ಜೋತುಬಿದ್ದು ಎಚ್ಚೆತ್ತುಕೊಳ್ಳದಿದ್ದರೆ ಅದರ ಸರ್ವನಾಶಕ್ಕೆ ಹೆಚ್ಚು ದಿನಗಳು ಬೇಕಾಗಿಲ್ಲ. ಕಾಂಗ್ರೆಸ್ ಲೋಕಸಭೆಯಲ್ಲಿ ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಎನ್‌ಡಿಎ ಮೈತ್ರಿಕೂಟ ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ಕೈಜೋಡಿಸಿ, ಎನ್‌ಡಿಎ ತಪ್ಪು ಮಾಡಿದರೆ ಅದನ್ನು ಎಚ್ಚರಿಸಿ ಸರಿ ದಾರಿಯಲ್ಲಿ ಸಾಗುವಂತೆ ಮಾಡುವ ಗುರುತರ ಹೊಣೆ ಕಾಂಗ್ರೆಸ್ ಮೇಲಿದೆ. ಒಂದು ಆಡಳಿತ ಪಕ್ಷ ದಕ್ಷ ಹಾಗೂ ಜನಪರವಾಗಿರಬೇಕಾದರೆ, ಅದರ ಪ್ರತಿಯೊಂದು ನಡೆಯನ್ನೂ ಎಚ್ಚರದಿಂದ ಗಮನಿಸುವ ಸಮರ್ಥ ಪ್ರತಿಪಕ್ಷವೂ ಇರಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿ ಸಾಗುವುದು ಆವಾಗಲೇ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top