’ನನ್ನಲ್ಲಿರುವ ಪ್ರತಿಭೆಗೆ ಯಾವುದೇ ರೀತಿಯ ಕಟ್ಟು ಪಾಡುಗಳು, ತೊಂದರೆಗಳು ಅಡ್ಡಬರಬಾರದು. ಏನನ್ನಾದರೂ ಸಾಧಿಸಲು ಅವರು ಮುಂದೆ ಬರಬೇಕು. ಕೊನೆಯ ಪಕ್ಷ ನನ್ನನ್ನು ನೋಡಿಯಾದರೂ ಧೈರ್ಯ ತಂದುಕೋಬೇಕು’
ಬುರ್ಖಾ ಧರಿಸಿದ ಹುಡುಗಿಯೊಬ್ಬಳು ಖಾಸಗಿ ವಾಹಿನಿಯೊಂದರಲ್ಲಿ ಶ್ರೀನಿವಾಸ ದೇವರ ಹಾಡು ಹಾಡಿ ನಾಡಿನ ಜನರ ಹೃದಯದ ಕದ ತಟ್ಟಿದ್ದಾಳೆ. ನಿರ್ಣಾಯಕರಿಂದ ಭೇಷ್ ಎನಿಸಿಕೊಂಡಿದ್ದಾಳೆ. ಅಪ್ಪಟ ಕೋಗಿಲೇಯೇ ಬಿಡಿ ಅವಳು. ಆದರೆ, ಸೂಕ್ಷ್ಮವಾಗಿ ಅವಲೋಕಿಸಬೇಕಿದೆ ಅವಳ ಮಾತಿನ ಹಿಂದಿನ ಆಂತರ್ಯವನ್ನು.
ಬುರ್ಖಾ ಧರಿಸಿ (ಒಟ್ಟಿನಲ್ಲಿ ಮುಸ್ಲಿಂ ಮಹಿಳೆಯರು) ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದರೆ ಅಲ್ಲಿ ಧಾರ್ಮಿಕ ಕಟ್ಟು ಪಾಡುಗಳು, ತೊಂದರೆಗಳು ಬರುವ ಸಾಧ್ಯತೆ ಹೆಚ್ಚು ಎಂಬುದು ಅವಳ ಮಾತಿನಿಂದಲೇ ಗೊತ್ತಾಗುತ್ತದೆ.
ಅವಳ ಆತಂಕಕ್ಕೆ ಪೂರಕವಾಗಿ, ಮಂಗಳೂರು ಮುಸ್ಲಿಂ ಎಂಬ ಫೇಸ್ಬುಕ್ ಖಾತೆಯಲ್ಲಿ ವಿರೋಧವೂ ವ್ಯಕ್ತವಾಗಿದ್ದು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ.
ಸುಹಾನಾಜಿ ಕ್ಯಾಬಾತ್ ಹೆ ! ಕ್ಯಾಬಾತ್ ಹೆ !!.
ಸುಹಾನ ಎಂಬ ಮುಸ್ಲಿಂ ನಾಮವನ್ನಿಟ್ಟುಕೊಂಡು ಮುಂದೊಂದು ದಿನ ಇಡೀ ಮುಸ್ಲಿಂ ಸಮುದಾಯದ ಸತ್ಯ ವಿಶ್ವಾಸಿನಿಯರ ಪಾಲಿಗೆ ಕಳಂಕಿತಳಾಗಲು ಹೊರಟ ಒಬ್ಬಳು ನಾಮಧಾರಿ ಪರ್ದಾಧಾರಿಣಿಯಾದ ಮುಸ್ಲಿಂ ಹೆಣ್ಣು, ಅಲ್ಲಾಹನು ತನ್ನ ಔದಾರ್ಯದಿಂದ ಅನುಗ್ರಹವಾಗಿ ಕೊಟ್ಟ ಶಬ್ದದಿಂದ ಅಲ್ಲಾಹನ ಮತ್ತು ಅವನ ಪ್ರವಾದಿ ಸ.ಅ. ರವರ ಕಲ್ಪನೆಯನ್ನು ಕಡೆಗಣಿಸಿ ಅನ್ಯ ಸಮುದಾಯದ ಅನ್ಯಪುರುಷರ ಮುಂದೆ ತನ್ನ ಸೌಂದರ್ಯವನ್ನು ಪ್ರದರ್ಶಿಸಿ ವೇದಿಕೆಯಲ್ಲಿ ನಿಂತು ಸಿನಿಮಾ ಹಾಡುಗಳನ್ನು ಹಾಡಿ ರಿಯಾಲಿಟಿ ಶೋವಿನ ತೀರ್ಪುಗಾರರಿಂದ ಪ್ರಶಂಶಿಸಲ್ಪಟ್ಟು ತಾನೇನೋ ಮಹಾಸಾಧನೆಯನ್ನು ಮಾಡಿದ್ದೇನೆಂದು ಭಾವಿಸಿದ್ದಾಳೆ…..ಹೀಗೇ ಸಾಗುವ ಟೀಕೆಗಳು, ಪುಟಾಣಿ ಮುಸ್ಲಿಂ ಮುಕ್ಕಳು ಸಾವಿರಗಟ್ಟಲೇ ಇರುವ ಕುರಾನ್ ಆಯತ್ಗಳನ್ನು ಕಂಠಪಾಠ ಮಾಡಿ ಹೇಳುತ್ತಾರೆ. ಅವರ ಮುಂದೆ ನಿನ್ನ ಪ್ರತಿಭೆ ಏನೂ ಅಲ್ಲ.
ನೀನು ನರಕದ ಹಾದಿ ಹಿಡಿದಿದ್ದೀಯಾ. ನೀನು ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾದರಿಯಾಗಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.ನೀನು ಹಾಕಿಕೊಂಡ ಬುರ್ಖಾ ಕಳಚಿಡು. ಅದರ ಪಾವಿತ್ರ್ಯತೆ ಹಾಳು ಮಾಡಬೇಡ. ನಿನ್ನ ಮೇಲಿರುವ ಬುರ್ಖಾ ಸಿಗರೇಟ್ ಪ್ಯಾಕಿನ ಮೇಲೆ ಬರೆದ ಆರೋಗ್ಯಕ್ಕೆ ಹಾನಿಕರ ಎಂಬ ವಾಕ್ಯದಂತೆ ಭಾಸವಾಗುತ್ತಿದೆ ಎಂದೂ ಬರೆಯಲಾಗಿದೆ.
ಇವೆಲ್ಲ ಬೆಳವಣಿಗೆ ಕಂಡಾಗ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸೌಹಾರ್ದ, ಸಂವಿಧಾನ ಎಂದೆಲ್ಲ ಬೊಬ್ಬಿಡುವ ಪ್ರಗತಿಪರರು, ಬುದ್ಧಿ ಜೀವಿಗಳು ಎಲ್ಲಿದ್ದಾರೆಂದು ಮತ್ತೆ ಹುಡುಕಬೇಕಿದೆ.
ಕಲೆಗೆ ಧರ್ಮದ ಲೇಪನವೇಕೆ? ಮುಸ್ಲಿಂ ಪ್ರತಿಭಾ ಪ್ರದರ್ಶನಕ್ಕೆ ಸ್ವಾತಂತ್ರ್ಯವಿಲ್ಲವೇ? ಅದು ಅವಳ ವೈಯಕ್ತಿಕ ಸ್ವಾತಂತ್ರ್ಯದ ಹರಣವಲ್ಲವೇ? ಅದ್ಯಾವ ಸಂವಿಧಾನದಲ್ಲಿ ಮುಸ್ಲಿಂ ಹುಡುಗಿ ಸಾರ್ವಜನಿಕ ವೇದಿಕೆಯಲ್ಲಿ ಹಾಡುವುದು ತಪ್ಪು ಎಂದು ಹೇಳಿದೆ? ಅನ್ಯ ಪುರುಷರ ಮುಂದೆ ಅವಳೇನು ಕ್ಯಾಟ್ವಾಕ್ ಮಾಡಿದ್ದಳೆ? ಅರೆ ಬರೆ ಬಟ್ಟೆ ತೊಟ್ಟಿದ್ದಳೆ? ನಿಜಕ್ಕೂ ಅವಳನ್ನು ಪ್ರಶಂಸಿಸಬೇಕು. ಯಾಕೆ ಹೇಳಿ ? ತನ್ನ ಧರ್ಮದ ದ್ಯೋತಕವಾದ ಬುರ್ಖಾ ಧರಿಸಿಯೇ ಬಂದಿದ್ದಳಲ್ಲ ಆ ಕಾರಣಕ್ಕೆ.
ಪಿಣರಾಯಿ ಸಾಹೇಬರು ಮಂಗಳೂರಿಗೆ ಬಂದಾಗ ಸೌಹಾರ್ದ ಮೆರೆದಿದ್ದ ಮಹನೀಯರು ಈಗ ಬಾಯಿ ಬಿಡಬೇಕಿದೆ. ಚಪ್ಪಲಿ ಹೇಳಿಕೆ ನೀಡಿದ ಖಾದರ್ ಸಾಹೇಬರು ಈ ಕುರಿತು ಪ್ರತಿಕ್ರಿಯಿಸಬೇಕಿದೆ. ಅದೇ ’ಸರಿಗಮಪ’ ಕಾರ್ಯಕ್ರಮದಲ್ಲಿ ಅವಳು ಮುಸ್ಲಿಂ ಎಂಬ ಕಾರಣಕ್ಕೆ ಅವಕಾಶ ಕೊಡದೇ ಹೋಗಿದ್ದರೆ (ಕಲ್ಪನೆ) ? ಸಂವಿಧಾನ ವಿರೋಧಿ ಎಂಬ ಬೊಬ್ಬೆ ಶುರುವಾಗಿಬಿಡುತ್ತಿತ್ತು. ಆದರೆ ಇಲ್ಲಿ ಅವಕಾಶ ಕಿತ್ತುಕೊಂಡಿಲ್ಲ, ಕೊಟ್ಟಿದೆ. ಸ್ವಾಗತಿಸಬೇಕು ಅಲ್ಲವೇ?
ಸೌಹಾರ್ದವೆಂಬ ಸೋಗು, ಸಂವಿಧಾನ, ಜಾತ್ಯತೀತ, ಧರ್ಮಾತೀತ ಎಂಬ ಸ್ಲೋಗನ್ಗಳು ಬಹುತೇಕ ಪ್ರಗತಿಪರರ ಕೇವಲ ಅಸ್ತ್ರಗಳಾಗಿವೆ ಅನಿಸುವುದಿಲ್ಲವೇ? ಸಂವಿಧಾನ ಧರ್ಮನಿರಪೇಕ್ಷ ಸಿದ್ಧಾಂತದ ಮೇಲೆ ನೆಲೆ ನಿಂತಿದೆ. ಅದನ್ನು ಗೌರವಿಸಬೇಕು. ಅಂದರೆ ಸುಹಾನಾ ಹಾಡಬೇಕು. ಅವಳಂಥ ಬುರ್ಖಾಧಾರಿ ಪ್ರತಿಭೆಗಳು ವೇದಿಕೆಯಲ್ಲಿ ಮಿನುಗಬೇಕು. ಯಾವ ಧರ್ಮವಾದರೇನು ಸಂಗೀತ ಪ್ರತಿಭೆಗಳು ನಾಡಿನ ಆಸ್ತಿಯಲ್ಲವೇ? ಸಂಸತ್ತಿನಲ್ಲಿ ಉಸ್ತಾದ್ ಬಿಸ್ಮಿಲ್ಲಾಖಾನ್ ಅವರ ಶಹನಾಯಿ ಮೊಳಗಲಿಲ್ಲವೇ? ತಬಲಾ ವಾದಕ ಝಾಕೀರರನ್ನು ನಮ್ಮ ದೇಶ ಮೆಚ್ಚಿಲ್ಲವೇ? ಅಸಂಖ್ಯ ಮುಸ್ಲಿಂ ಪ್ರತಿಭೆಗಳು ಬೆಳಗಿದ ಭಾರತದಲ್ಲಿ ಸುಹಾನಾಗೆ ಏಕೆ ಅಡ್ಡಿ ಆತಂಕಗಳು?
ಸುಹಾನಾ ಸಯ್ಯದ್ಳ ಹಾಡನ್ನು, ಮಾತುಗಳನ್ನು ನೀವೊಮ್ಮೆ ವೀಕ್ಷಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.