ಪಾಲ್ತಾಡಿ: ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸವಣೂರು ಗ್ರಾ.ಪಂ. ತಾಲೂಕಿನಲ್ಲಿ ಮಾದರಿ ಗ್ರಾ.ಪಂ.ಆಗಿದೆ. ಇಲ್ಲಿನ ಆಡಳಿತ ಪಾರದರ್ಶಕತೆಯ ಆಡಳಿತ ನಡೆಸಿದೆ. ಅಲ್ಲದೆ ಪಂಚಾಯತ್ನ ಹೊಸ ಕಟ್ಟಡ ರಚನೆ ಈ ಅವಧಿಯ ಗ್ರಾ.ಪಂ. ಸದಸ್ಯರಿಗೆ ಸಲ್ಲುವ ಗೌರವ ಎಂದು ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ಹೇಳಿದರು.
ಅವರು ಸವಣೂರು ಗ್ರಾ.ಪಂ.ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನತೆ ತಮ್ಮ ಸಮಸ್ಯೆಗಳನ್ನು ತಳಮಟ್ಟದ ಸರಕಾರ, ಹಳ್ಳಿಯ ವಿಧಾನ ಸಭೆ ಎಂದೇ ಹೆಸರು ಮಾಡಿರುವ ಗ್ರಾ.ಪಂ.ಗೆ ಮನವರಿಕೆ ಮಾಡುತ್ತಾರೆ. ಇವರ ಸಮಸ್ಯೆಗಳ ಪ್ರತಿಸ್ಪಂದನೆ ಅಲ್ಲಿನ ಆಡಳಿತದ ರೀತಿಯನ್ನು ತೋರಿಸುತ್ತದೆ. ಈ ನಿಟ್ಟಿನಲ್ಲಿ ಸವಣೂರು ಗ್ರಾ.ಪಂ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಆಡಳಿತ ನೀಡಿದೆ ಎಂದರು.
ಕಟ್ಟಡದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಜಿ.ಪಂ.ಸದಸ್ಯೆ ಪುಷ್ಪಾವತಿ ಗೌಡ ಕಳುವಾಜೆ, ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವವಿರುವ ಗ್ರಾ.ಪಂ.ನಿಂದ ದೇಶದ ಬೆಳವಣಿಗೆ ಪೂರಕ. ಹೆಚ್ಚಿನ ಗ್ರಾ.ಪಂ.ನಲ್ಲಿ ರಾಜಕೀಯ ಪ್ರತಿಷ್ಠೆಯ ಅಖಾಡವಾದರೆ ಸವಣೂರು ಗ್ರಾ.ಪಂ. ಈ ನಿಟ್ಟಿನಲ್ಲಿ ರಾಜಕೀಯ ರಹಿತ ಅಭಿವೃದ್ಧಿ ಕಾರ್ಯಗಳಿಂದ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಇದು ಶ್ಲಾಘನೀಯ ಎಂದರು.
ಗ್ರಾ.ಪಂ.ಸದಸ್ಯ ಸುದರ್ಶನ್ ಕಂಪ ಮಾತನಾಡಿ, ಸವಣೂರು ಗ್ರಾ.ಪಂ.ನಲ್ಲಿ ನಾಲ್ಕು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿದ್ದರೂ, ಆಡಳಿತದಲ್ಲಿ ಯಾವುದನ್ನೂ ಎಳೆದು ತಂದಿಲ್ಲ. ಇಲ್ಲಿ ಆಡಳಿತ, ವಿರೋಧ ಪಕ್ಷಗಳು ಎಂಬುದೇ ಅಪ್ರಸ್ತುತವಾಗಿತ್ತು. ಒಟ್ಟಿನಲ್ಲಿ ಗ್ರಾ.ಪಂ ಸದಸ್ಯರಿಗೆ ಉತ್ತಮ ಆಡಳಿತ ನೀಡಿದ ತೃಪ್ತಿ ಇದೆ. ಸವಣೂರು ಗ್ರಾ.ಪಂ.ನಲ್ಲಿ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದ್ದೇವೆ ಎಂದರು.
ಸದಸ್ಯ ಗಿರಿಶಂಕರ್ ಸುಲಾಯ ಮಾತನಾಡಿ, ಗ್ರಾ.ಪಂ.ನ ಸಭೆಗಳಲ್ಲಿ ನಾವು ಗ್ರಾಮೀಣ ಭಾಗದ ಜನತೆಯ ಸಮಸ್ಯೆಯ ಕುರಿತಂತೆ ಚರ್ಚೆ ಮಾಡಿದ್ದೇವೆ. ಇದರಲ್ಲಿ ರಾಜಕೀಯ ನುಸುಳದೇ ಇರುವುದು ನಮಗೆ ಹೆಮ್ಮೆ ತಂದಿದೆ. ಈ ಗ್ರಾ.ಪಂ.ನ ಎಲ್ಲಾ ಸದಸ್ಯರು ಜನರ ಕೈಗಳಿಗೆ ಸಿಗುವ, ಸಮಸ್ಯೆಗೆ ಸ್ಪಂದಿಸುವ ಮನೋಭಾವವಿರುವ ಸದಸ್ಯರೇ ಇದ್ದುದರಿಂದ ಜನರಿಗೆ ಉತ್ತಮ ಆಡಳಿತ ನೀಡಿವುದು ಸಾಧ್ಯವಾಗಿದೆ. ಅಲ್ಲದೆ ಬೆರೆ ಕಾರಣಗಳಿಂದ ತನ್ನ ಮೇಲೆ ಮೂರು ಕೇಸುಗಳು ದಾಖಲಾಗಿದೆ. ಇದು ಬೇಸರ ತರಿಸಿದೆ. ಪಂಚಾಯತ್ನಲ್ಲೂ ಆನ್ಲೈನ್ ಸೇವೆ ಲಭ್ಯವಾದರೆ ಜನತೆಯ ಸಮಸ್ಯೆ, ವಿವಿಧ ಯೋಜನೆಯ ಮಾಹಿತಿ ನೀಡಲು ಸಹಕಾರಿಯಾಗಲಿದೆ. ಇದು ಅನುಷ್ಠಾನಗೊಳ್ಳುವಂತಾಗಲಿ ಎಂದರು.
ಸದಸ್ಯ ಕಿಟ್ಟಣ್ಣ ರೈ ಮಾತನಾಡಿ, ಜನರ ಸಮಸ್ಯೆಗೆ ರಾಜಕೀಯ ರಹಿತವಾಗಿ ಸ್ಪಂದಿಸಿದ ತೃಪ್ತಿ ನನಗಿದೆ. ಸದಸ್ಯನಾಗಿ ಹತ್ತು ವರ್ಷಗಳಾದರೂ ಈ ಸಲದ ಅವಕಾಶ ಮರೆಯಲಾಗದ್ದು. ಅಧಿಕಾರಿಗಳ, ಅಧ್ಯಕ್ಷ, ಉಪಾಧ್ಯಕ್ಷರ, ಸದಸ್ಯರ ಸಹನಾಭೂತಿ, ಸಹಕಾರ ನೆನಪಿಡುವಂತಹದ್ದು. ಮುಂದಿನ ಬಾರಿಯೂ ಇದೇ ರೀತಿಯ ಆಡಳಿತ ದೊರೆಯಲಿ ಎಂದರು. ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸುಧಾ ಎಸ್. ರೈ ಮಾತನಾಡಿ, ಸವಣೂರು ಗ್ರಾ.ಪಂ.ನ್ನು ಮಾದರಿ ಗ್ರಾ.ಪಂ ಆಗಿ ಮಾಡಬೇಕೆನ್ನುವ ನಿಟ್ಟಿನಲ್ಲಿ ನಾವು ರಾಜಕೀಯ ರಹಿತ ಆಡಳಿತ ನೀಡಿದ ಸಂತಸ ನಮಗಿದೆ ಎಂದರು.
ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ರಾಜಕೀಯ ರಹಿತವಾಗಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ, ಸ್ವಚ್ಛತ ಕಾರ್ಯಕ್ರಮವನ್ನು ಮಾದರಿಯಾಗಿ ನಡೆಸಿ ಜಿಲ್ಲೆಯಲ್ಲೇ ಗುರುತಿಸಿದ್ದು, ಸವಣೂರು ಗ್ರಾ.ಪಂ.ನ ಹೆಮ್ಮೆ ಇದು ನಿರಂತರವಾಗಿ ನಡೆಯಲಿ. ತಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಗ್ರಾಮಸ್ಥ ಎಂ.ಎ.ರಫೀಕ್ ಮಾತನಾಡಿ, ಸವಣೂರು ಗ್ರಾ.ಪಂ.ನೂತನ ಕಟ್ಟಡ ರಚನೆ ಮಾಡುವ ಮೂಲಕ ದೊಡ್ಡ ಕೊರತೆಯೊಂದು ನೀಗಿದಂತಾಗಿದೆ. ಅಭಿವೃದ್ಧಿಗಾಗಿ ನಾವು ನೀಡುತ್ತಿದ್ದ ಸಲಹೆ, ಮನವಿಗೆ ಪೂರಕ ಸ್ಪಂದನೆ ದೊರಕಿದೆ. ಬೇರೆ ಗ್ರಾ.ಪಂ.ನ್ನು ಗಣನೆಗೆ ತೆಗೆದುಕೊಂಡಾಗ ಸವಣೂರು ಕಾರ್ಯವೈಖರಿಯಲ್ಲಿ ಮಾದರಿ ಗ್ರಾ.ಪಂ. ಆಗಿ ಗುರುತಿಸಿದೆ.
ಗ್ರಾ.ಪಂ.ಅಧ್ಯಕ್ಷ ವಸಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಝೌರಾಭಿ, ಸದಸ್ಯರಾದ ಅಬ್ದುಲ್ ರಝಾಕ್, ಬಾಬು ಅಟ್ಟೋಳೆ, ಗೀತಾ, ಸುಧೀರ್ ಕುಮಾರ್ ರೈ ಕುಂಜಾಡಿ, ಸುಧಾಮ ಮಣಿಯಾಣಿ ಕಾಪುತಕಾಡು, ಸಿಬ್ಬಂದಿ ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ. ಉಪಸ್ಥಿರಿದ್ದರು.
ಪಂ.ಅಭಿವೃದ್ಧಿ ಅಧಿಕಾರಿ ಸುಭಾಶ್ಚಂದ್ರ ಮಲ್ಲಣ್ಣನವರ್ ಸ್ವಾಗತಿಸಿ, ಪ್ರಮೋದ್ ಕುಮಾರ್ ರೈ ವಂದಿಸಿದರು. ರಾಕೇಶ್ ರೈ. ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.