ಧಾರವಾಡ: ಜಗತ್ತು ಬಹಳ ಸುಂದರವಿದೆ. ಈ ಸುಂದರತೆ ಕೆಡಿಸುವುದೇ ಮನುಷ್ಯನ ಭಾವ. ಬದುಕಿನಲ್ಲಿ ಭಾವಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಯಾವುದೇ ವಸ್ತು ನೋಡುವುದಕ್ಕಿಂತ ಅನುಭವಿಸುವ ಭಾವ ಮುಖ್ಯ. ಜೀವನಕ್ಕೆ ಬೆಲೆ ಬರುವುದೇ ನಿಸರ್ಗ ನೀಡಿದ ಭಾವದಿಂದ. ಜೀವನ ಸೌಂದಯಕ್ಕೆ ಭಾವ ಸಾಧನೆ ಮುಖ್ಯ.
ಬದುಕು ರಸಾನುಭಾವದಿಂದ ತುಂಬಿದಾಗ ಶ್ರೀಮಂತ ಆಗುತ್ತದೆ. ಇಲ್ಲವಾದರೆ, ರಸಹೀನವಾಗುತ್ತದೆ. ಜ್ಞಾನ, ಕ್ರಿಯೆ, ಭಾವ ಇವು ಸರಿಯಾಗಿ ಕೆಲಸ ಮಾಡಬೇಕು. ನೋಡುವ ದೃಷ್ಠಿ ಮೊದಲು ಸರಿಯಾಗಿದ್ದಾಗ ಜಗತ್ತು ಸುಂದರ ಕಾಣುವುದು. ಮನಸ್ಸು ಕಲ್ಮಶದಿಂದ ಕೂಡಿದ್ದರೆ ಸುಂದರ ಕಾಣಲು ಸಾಧ್ಯವೇ?
ಜಗತ್ತು ನಿಂತಿರುವುದೇ ಈ ಭಾವದ ಮೇಲೆ. ಇದು ಪ್ರತಿಕ್ಷಣ ಬದಲಾಗುತ್ತೆ. ನಾನು-ನನ್ನದು, ಸುಖ-ದುಃಖ, ಪ್ರಿಯ-ಅಪ್ರಿಯ ಗುರುತಿಸುವುದೇ ಭಾವ. ಇವೇ ಇರದಿದ್ದರೆ ಬದುಕಿನಲ್ಲಿ ಏನು ಇಲ್ಲ. ಸಂತೋಷಕ್ಕೆ ನನ್ನದು. ಜೀವನಕ್ಕೆ ವೈಭವ ಬರಲು ಇವೆಲ್ಲ ಬೇಕೇ-ಬೇಕು. ಭಾವ ಜೀವನದ ಸೌಂದರ್ಯ ಹೆಚ್ಚಿಸುತ್ತದೆ.
ಏನು ಇಲ್ಲದ ಕಾಲದಲ್ಲಿ ಋಷಿಮುನಿಗಳು ಕೇವಲ ನದಿಗಳನ್ನು ನೋಡುತ್ತ ೧೦೦ ವರ್ಷಗಳ ಕಾಲ ಶರತ್ ಋತು ಅನುಭವಿಸಬೇಕು ಎಂದವರು. ಎಲ್ಲ ಇದ್ದ ಮನುಷ್ಯನಿಗೆ ನೆಮ್ಮದಿ ಇಲ್ಲದಾಗಿದೆ. ಈ ನೆಮ್ಮದಿ ಬರಲು ಭಾವವು ಶ್ರೀಮಂತಿಕೆಯಿಂದ ಕೂಡಿರಬೇಕು. ದ್ವೇಷ-ಅಸೂಯೆ ಅಳಿಸಿ ಹಾಕಿ, ಪ್ರೀತಿ-ಪ್ರೇಮ ಬೆಳೆಸಿಕೊಳ್ಳಬೇಕು.
ಜೀವನ ಸೌಂದರ್ಯ ಮಾಡುವುದು ಹಣ-ವಸ್ತು-ಆಸ್ತಿ-ಅಂತಸ್ತು ಅಲ್ಲ, ಭಾವ ಮಾತ್ರ. ಹೀಗಾಗಿ ಭಾವ ಕುರೂಪಿ ಇರಬಾರದು, ಸ್ವರೂಪಿ ಇರಲಿ ಎನ್ನುವ ಕಾರಣಕ್ಕೆ ಹಿರಿಯರು ಸತ್ಯಂ ಶಿವಂ ಸುಂದರಂ ಅಂತಾ ಮಾಡಿದರು. ಅದೇ ತರಹ ಪೌರಾಣಿಕ ಕಥೆಗಳನ್ನು ಲಯಬದ್ಧವಾಗಿ, ಭಾವದಿಂದ ಹೆಣೆದು ಜೋಡಿಸಿ ಕೊಟ್ಟರು.
ಆನಂದವೇ-ಸ್ವರೂಪ, ಅಸೂಯಯೇ-ಕುರುಪಿ. ಜಗತ್ತಿನ ಸುಂದರತೆಯನ್ನು ಭಾವ ಕೆಡಿಸುತ್ತದೆ. ಮಾತ್ಸರ್ಯ ಇಲ್ಲದ ಜೀವನವೇ ಸುಂದರ. ಮಕ್ಕಳಲ್ಲಿ-ದಡ್ಡರಲ್ಲಿ ಮಾತ್ಸರ್ಯ ಕಡಿಮೆ. ದೊಡ್ಡವರು, ಬುದ್ಧಿವಂತರಲ್ಲಿಯೇ ಈ ಮಾತ್ಸರ್ಯ ಹೆಚ್ಚು. ಸಣ್ಣ-ಸಣ್ಣ ಸಂಗತಿಗಳಿಗೂ ಮಾತ್ಸರ್ಯಪಟ್ಟು ಜೀವನ ಕುರೂಪಿ ಮಾಡುವುದು ಸರಿಯೇ?
ಕುರೂಪಿ ಭಾವ ಇದ್ದವರಿಗೆ ಜಗತ್ತು ಕುರೂಪಿಯೇ ಹೊರತು ಇಲ್ಲದವರಿಗಿಲ್ಲ. ಎಲ್ಲರು ಚನ್ನಾಗಿರಲಿ, ಸುಖವಾಗಿರಲಿ ಎನ್ನುವುದೇ ಭಾವ. ಕುಟುಂಬ, ಸಮಾಜ, ಜಗತ್ತು ಒಗ್ಗೂಡಿಸುವುದೇ ಭಾವ ಸೌಂದರ್ಯ. ಕೂಡಿಸೋದು ಮತ್ತ ಕಳೆಯೋದೇ ಭಾವ. ಹೀಗಾಗಿ ಪರಸ್ಪರರು ಆತ್ಮೀಯ ಭಾವ ಹೊಂದಿ ಜೀವನ ಸೌಂದರ್ಯ ಹೆಚ್ಚಿಸಿಕೊಳ್ಳಿರಿ.
ಬಸವಣ್ಣನವರು ವಿದ್ವಾಸಂರು, ಅನುಭಾವಿಗಳು, ಪರಮ ವಸ್ತುವಿನ ಭಾವ ಹೊಂದದ ಶರಣ ಚಿಂತಕರು. ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದವರು. ಬುದ್ಧ 80 ವರ್ಷ ಮಾತನಾಡಿದ್ದು ಶಾಂತಿ, ಆತನ ಸಹವಾಸದಿಂದ ಶಾಂತಿ ಶ್ರೀಮಂತಿಕೆ ಗಾಳಿ ಬೀಸಿತು. ಏನೊಂದು ಗೊತ್ತಿಲ್ಲದ ಅಂದಿನ ಜನರು ವಸುಧೈವ ಕುಟುಂಬಕಂ ಎಂದರು.
ಆದರೆ, ಸಕಲ ಸೌಕರ್ಯ ಹೊಂದಿರುವ ಆಧುನಿಕ ಮನುಷ್ಯ ಭಾವ ಉತ್ಪ್ರೇಕ್ಷೆಗೆ ಒಳಗಾಗಿಲ್ಲ. ಹೀಗಾಗಿ ಜಗತ್ತು ಆತನಿಗೆ ಸುಂದರ ಕಂಡಿಲ್ಲ. ಕ್ರಿಯಾ ಸಾಧನೆ, ಜ್ಞಾನ ಸಾಧನೆಗಿಂತ ಭಾವ ಸಾಧನೆ ಮುಖ್ಯ. ಈ ಹೃದಯದ ಶ್ರೀಮಂತಿಕೆ ಎಲ್ಲರಲ್ಲೂ ಹೂವು ಅರಳಿದಂತೆ ಅರಳಿ, ಅದರ ಪರಿಮಳ(ಸುಗಂಧ) ಎಲ್ಲೆಡೆ ಹರಡಬೇಕು.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 7 ನೇ ದಿನ 03-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.