ಮಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್ಗಳಾದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು ಹೆಚ್ಚಿಸುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ತೀವ್ರ ಖಂಡಿಸುತ್ತದೆ.
ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೃತ್ತಿ ಶಿಕ್ಷಣ ಕೋರ್ಸ್ಗಳಾದ ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪದವಿಯ ಪ್ರವೇಶ ಶುಲ್ಕವನ್ನು ಶೇ. 30 ರಷ್ಟು ಏರಿಕೆ ಮಾಡಬೇಕೆಂಬ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಒಳಗಾಗಿ ರಾಜ್ಯದ ಸಹಸ್ರಾರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿ ಶಿಕ್ಷಣದ ಕನಸನ್ನು ನುಚ್ಚು ನೂರಾಗಿಸಲು ಪ್ರಯತ್ನಿಸುತ್ತಿರುವುದನ್ನು ಅಭಾವಿಪ ತೀವ್ರವಾಗಿ ಖಂಡಿಸುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿದ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ವಂಚನೆಯ ಭಾಗ್ಯ:
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪರವಾಗಿರಬೇಕಾಗಿದ್ದ ರಾಜ್ಯ ಸರ್ಕಾರವು ಖಾಸಗಿ ಆಡಳಿತ ಮಂಡಳಿಗೆ ಲಾಭವಾಗುವಂತೆ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಾದುದಲ್ಲ. ಕಳೆದ ಈ ಎರಡು ವರ್ಷಗಳಿಂದ ಸತತವಾಗಿ ರಾಜ್ಯ ಸರ್ಕಾರವು ಖಾಸಗಿ ಕಾಲೇಜುಗಳಿಗೆ ಅನುಕೂಲಕರವಾಗುವಂತೆ ಶುಲ್ಕವನ್ನು ವಿದ್ಯಾರ್ಥಿ ಹಾಗೂ ಪಾಲಕರ ವಿರೋಧದ ನಡುವೆಯೂ ಹೆಚ್ಚಿಸಿದ್ದರು. ಈ ವರ್ಷವೂ ಶುಲ್ಕವನ್ನು 30% ರಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಶೋಚನೀಯವಾಗಿದೆ. ಅಲ್ಲದೇ ಅನೇಕ ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿದು ಸರ್ಕಾರಗಳು ಸರ್ಕಾರದ ಶೇ.೧೦೦ರಷ್ಟು ಇದ್ದ ಸೀಟುಗಳ ಅನುಪಾತ ಇಂದು ಖಾಸಗಿ ಸೀಟುಗಳ ಪಾಲು ಹೆಚ್ಚಾಗಿದೆ. ಸರ್ಕಾರಿ ಖೋಟಾದಡಿ ಸಿಗುತ್ತಿರುವ ಅಲ್ಪಸ್ವಲ್ಪ ಸೀಟುಗಳ ಮೇಲೂ ಕೂಡ ವಕ್ರದೃಷ್ಟಿಯಿಟ್ಟಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮೂಲಕ ರಾಜ್ಯ ಸರ್ಕಾರವನ್ನು ಮಣಿಸಿ ಕುಟಿಲತನದಿಂದ ತನ್ನ ಸೀಟುಗಳ ಸಂಖ್ಯೆ ಮತ್ತು ಶುಲ್ಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅಷ್ಟೇ ಅಲ್ಲದೇ ವೃತ್ತಿ ಶಿಕ್ಷಣ ಶುಲ್ಕನೀತಿ ಮತ್ತು ಪ್ರವೇಶ ನೀತಿಗಳ ಕುರಿತು ಸೂಕ್ತ ಕಾಯಿದೆ, ಕಾನೂನು ರಚನೆಗೆ ಖಾಸಗೀ ಆಡಳಿತ ಮಂಡಳಿಗಳು ಬಲವಾದ ವಿರೋಧವನ್ನು ಕಳೆದ ಅನೇಕ ವರ್ಷಗಳಿಂದ ವ್ಯಕ್ತಪಡಿಸುತ್ತಾ ಬರುತ್ತಿವೆ. ಪ್ರತಿ ವರ್ಷವೂ ಶುಲ್ಕ ಹೆಚ್ಚಳವಾಗಬೇಕು ಹಾಗೂ ಮಂಡಳಿಯ ಪೇಮೆಂಟ್ ಸೀಟುಗಳು ಹೆಚ್ಚಾಗಬೇಕೆಂಬ ಅಜೆಂಡಾ ಹೊಂದಿವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅಸ್ಥಿತ್ವದಲ್ಲಿರಬೇಕಾದ ಶುಲ್ಕ ಮತ್ತು ಸೀಟು ಹಂಚಿಕೆಯ ಮೇಲುಸ್ತುವಾರಿ ಸಮಿತಿಗಳು ಇರಬಾರದು, ನಮ್ಮದೇ ಆದ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಪ್ರಶ್ನಿಸಬಾರದು ಹೀಗೆ ಅನೇಕ ಷರತ್ತುಗಳನ್ನು ಹಾಕುತ್ತಾ, ರಾಜ್ಯ ಸರ್ಕಾರವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಂತ್ರಿಸುತ್ತಿರುವುದು ದುರ್ದೈವದ ಸಂಗತಿ.
ರಾಜ್ಯ ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಗನಕುಸುಮವಾದ ವೃತ್ತಿ ಶಿಕ್ಷಣ:
ಪ್ರತಿ ವರ್ಷವು ರಾಜ್ಯ ಸರ್ಕಾರವು ಖಾಸಗಿ ಆಡಳಿತ ಮಂಡಳಿಯ ಲಾಭಿಗೆ ಮಣಿಯುತ್ತಿದ್ದು, ಶುಲ್ಕ ಮತ್ತು ಸೀಟು ಹಂಚಿಕೆಯ ಸಂದರ್ಭದಲ್ಲಿ ಕೇವಲ ಖಾಸಗಿ ಆಡಳಿತ ಮಂಡಳಿಯೊಂದಿಗೆ ಮಾತ್ರ ಮಾತುಕತೆ ನಡೆಸುತ್ತಿದೆ. ರಾಜ್ಯದ ಶೈಕ್ಷಣಿಕ ತಜ್ಞರ ವಿದ್ಯಾರ್ಥಿ ಸಂಘಟನೆಗಳ, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿಟ್ಟು ಸರ್ಕಾರ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳು ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಅಣಕಿಸುವಂತಿದೆ.
ವರ್ಷದಿಂದ ವರ್ಷಕ್ಕೆ ಸರ್ಕಾರಿ ಸೀಟುಗಳನ್ನು ಕಡಿಮೆ ಮಾಡಲು ಯತ್ನಿಸುತ್ತಾ ಪದೇ ಪದೇ ಶುಲ್ಕವನ್ನು ಹೆಚ್ಚಳ ಮಾಡುತ್ತಿರುವ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಾಭ ಮಾಡಿಕೊಡುತ್ತಿದೆ. ಸರ್ಕಾರದ ಈ ತಪ್ಪು ನಿರ್ಧಾರದಿಂದಾಗಿ ರಾಜ್ಯದ ಸಹಸ್ರಾರು ಬಡ, ದಲಿತ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣವೆಂಬುದು ಗಗನ ಕುಸುಮವಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಈ ಅವೈಜ್ಞಾನಿಕ ಶುಲ್ಕ ಹೆಚ್ಚಳ ನಿರ್ದಾರವನ್ನು ಕೈಗೊಳ್ಳಬಾರದೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ಬೇಡಿಕೆಗಳು
- ವೃತ್ತಿ ಶಿಕ್ಷಣ ಪದವಿಗಳ ಶುಲ್ಕವನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವು ಹೆಚ್ಚಿಸಬಾರದು.
- ಈಗಾಗಲೆ ಇರುವಂತಹ ಪ್ರವೇಶ ಶುಲ್ಕ ಮತ್ತು ಸೀಟು ಹಂಚಿಕೆ ಅವೈಜ್ಞಾನಿಕವಾಗಿದ್ದು ಅದರ ಬಗ್ಗೆ ಪುನಃ ಚಿಂತನೆ ನಡೆಸಿ ಶುಲ್ಕವನ್ನು ಕಡಿಮೆಮಾಡಲು ಮತ್ತು ಸರ್ಕಾರಿ ಸೀಟು ಹೆಚ್ಚಿಸಲು ಪ್ರಯತ್ನಿಸಬೇಕು.
- ಪ್ರವೇಶ ನೀತಿ ಮತ್ತು ಶುಲ್ಕ ನೀತಿ ರಚಿಸಲು ಹಾಗೂ ನಿಯಂತ್ರಿಸಲು ಸುಪ್ರಿಂಕೋರ್ಟ್ನ ನಿರ್ದೇಶನದಂತೆ ಪ್ರತ್ಯೇಕ ಮೇಲುಸ್ತುವಾರಿ ಸಮಿತಿ ರಚಿಸಬೇಕು.
- ಪ್ರವೇಶ ನೀತಿ ಮತ್ತು ಶೂಲ್ಕ ನೀತಿಯ ಬಗ್ಗೆ ಚರ್ಚಿಸಬೇಕಾದ ಸಂದರ್ಭದಲ್ಲಿ ಕೇವಲ ಖಾಸಗಿ ಸಂಸ್ಥೆಗಳಿಗೆ ಮಣೆಹಾಕದೆ ರಾಜ್ಯದ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಮತ್ತು ಪೋಷಕರುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
- ಅನೇಕ ಒತ್ತಡಗಳಿಗೆ ಮಣಿದು ರಾಜ್ಯ ಸರ್ಕಾರ ಸಿಇಟಿ 2006 ಕಾಯ್ದೆ ಜಾರಿಗೆ ತರುವ ಪ್ರಯತ್ನವನ್ನು ಕೈ ಬಿಡಬೇಕು.
- ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಏಕಗವಾಕ್ಷಿ ಪ್ರವೇಶ ವ್ಯವಸ್ಥೆ ರೂಪಿಸುವ ಮೂಲಕ ಅನೇಕ ಗೊಂದಲಗಳಿಗೆ ಇತಿಶ್ರೀ ಹಾಡಬೇಕೆಂದು ಅಭಾವಿಪವು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.
ಅಭಾವಿಪ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.